ಕರುಳಬಳ್ಳಿ ಸಂಬಂಧ ಗಟ್ಟಿಗೊಳಿಸುವ ರಕ್ಷಾಬಂಧನ

ಕರುಳಬಳ್ಳಿ ಸಂಬಂಧ ಗಟ್ಟಿಗೊಳಿಸುವ ರಕ್ಷಾಬಂಧನ

ಹಬ್ಬ-ಹರಿದಿನಗಳು ನಮ್ಮ ದೇಶದ ಸಾಂಸ್ಕೃತಿಕ ಬೇರುಗಳಿದ್ದಂತೆ, ತರಗೆಲೆಗಳು ಉದುರಿ ಒಣಗಿಹೋದ ಮರದ ರೆಂಬೆ-ಕೊಂಬೆಗಳಲ್ಲಿ ವಸಂತಕಾಲ ಮತ್ತೆ ಹೊಸ ಚಿಗುರನ್ನು ಮೂಡಿಸುವಂತೆ ಹಬ್ಬಗಳು ಬದುಕಿನಲ್ಲಿ ಹೊಸ ಉತ್ಸಾಹ, ಭರವಸೆ, ಚೈತನ್ಯ, ಸುಖ, ಸಂತೋಷ, ಸಮವೃದ್ಧಿಯ ಜೊತೆಗೆ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ. ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಸಾರುವ ಹಬ್ಬಗಳಲ್ಲಿ ಮಹತ್ವದ ಹಬ್ಬರಕ್ಷಾ ಬಂಧನವಾಗಿದೆ.

ಭವ್ಯ ಭಾರತ ದೇಶ ಹಬ್ಬಗಳ ಆಚರಣೆಯಲ್ಲಿ ಮೊದಲನೇ ಸ್ಥಾನ ಪಡೆದಿದೆ. ಹಬ್ಬವೆಂಬುದು ಸಂತಸ, ಸಂಭ್ರಮದ ದಿನ. ಹಬ್ಬದ ದಿನವು ಉಳಿದ ದಿನಕ್ಕಿಂತ ವಿಶೇಷದಾಗಿರುತ್ತದೆ. ಕಾಲಗರ್ಭದ ಕದವ ತೆರೆದು ಮೂಡಣದಿ ಬೆಳಕು ಹರಿದು ಬರುವ ಮೊದಲೇ ಎದ್ದು ಮಂಗಳ ಸ್ನಾನದೊಂದಿಗೆ ನವವಸ್ತ್ರ ಧರಿಸಿ ಪೂಜಾ ವಿದಿ-ವಿಧಾನಗಳನ್ನು ಶ್ರದ್ಧಾ ಭಕ್ತಿಯಿಂದ ಮುಗಿಸಿ, ಬಗೆ ಬಗೆಯ ಸಿಹಿ ತಿಂಡಿ ತಿನಿಸುಗಳನ್ನು ತಯಾರಿಸಿ ಕುಟುಂಬದ ಎಲ್ಲ ಸದಸ್ಯರು ಜೊತೆಗೂಡಿ ಉಂಡು ನಕ್ಕು-ನಲಿಯುವ ದಿನವೇ ಹಬ್ಬವಾಗಿದೆ. ಹೀಗೆ ಆಚರಣೆ ಮಾಡುತ್ತ ಬಂದಿರುವ ಹಬ್ಬಗಳಲ್ಲಿ ಅತ್ಯಂತ ಸಡಗರದಿಂದ ಆಚರಿಸುವ ರಕ್ಷಾ ಬಂಧನ ಹಬ್ಬವು ಬಹು ಮಹತ್ವದ ಅರ್ಥ ಪಡೆದುಕೊಂಡಿದೆ.

ರಕ್ಷಾ ಬಂಧನದ ಸಮಯವನ್ನು ಪುಣ್ಯಪ್ರದಾಯಕ ಪರ್ವ ಹಾಗೂ ವಿಷ ನಿವಾರಕ ಪರ್ವ ಎನ್ನುವರು. ಇದರಿಂದ ರಕ್ಷಾ ಬಂಧನದ ಭಾವಾರ್ಥ ಸ್ಪಷ್ಟವಾಗುವುದು. ವಿಷಯ ವಿಕಾರಗಳಿಂದ ಬಿಡುಗಡೆ ಹೊಂದುವುದರ ಮುಖಾಂತರ ಪವಿತ್ರಾತ್ಮರಾಗಬೇಕು. ನಮ್ಮಲ್ಲಿರುವ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಗಳಿಂದ ಆತ್ಮವನ್ನು ರಕ್ಷಿಸಲಿಕ್ಕಾಗಿ ಪಾವಿತ್ರ್ಯವನ್ನು ಧರ್ಮದಲ್ಲಿ ಸ್ಥಿರವಾಗಿಸಿ ಕಾಮವೆಂಬ ವಿಷವನ್ನು ತೊಡೆದು ಹಾಕಲು ಮಾಡಿದ ಪಾವಿತ್ರ್ಯದ ಸಂಕೇತವೇ ರಕ್ಷಾ ಬಂಧನ. ಈ ಹಬ್ಬವನ್ನು ದೇಶದ ತುಂಬೆಲ್ಲಾ ವಿಶಿಷ್ಟತೆಯೊಂದಿಗೆ ಆಚರಿಸುತ್ತಾರೆ. ಇದು ಇತರ ಎಷ್ಟೋ ಹಬ್ಬಗಳಂತೆ ಯಾಂತ್ರಿಕ ಆಚರಣೆಯಾಗದೇ ಸಂಬಂಧಗಳ ಉಳುವಿಗೆ ನಾಂದಿಯಾಗುತ್ತದೆ. ಭವಿಷ್ಯದ ರಕ್ತ ಸಂಬಂಧಗಳ ಜೀವಕ್ಕೆ ಭದ್ರ ಬುನಾದಿ ಹಾಕುತ್ತದೆ.

ಭಾರತೀಯ ಸಂಸ್ಕೃತಿಯಲ್ಲಿ ಸಂಬಂಧಗಳಿಗೆ ಸ್ಪಷ್ಟವಾದ ಅರ್ಥ ಕಲ್ಪಿಸಲಾಗಿದೆ. ಅವುಗಳಲ್ಲಿ ಸಹೋದರ- ಸಹೋದರಿಯರ ಸಂಬಂಧ ತುಂಬ ಪಾವಿತ್ರ್ಯದಿಂದ ಕೂಡಿದೆ. ಅಂತೆಯೇ ನಮ್ಮ ಜನಪದ ಹೆಣ್ಣುಮಗಳು ಹಾಡಿಕೊಂಡಾಡಿರುವುದು-

ಹೆಣ್ಣಿನ ಜನುಮಕ ಅಣ್ಣ-ತಮ್ಮರು ಬೇಕ
ಬೆನ್ನು ತಟ್ಟುವರು ಸಭೆಯೊಳಗ/ಸಾವಿರ
ಹೊನ್ನು ಕಟ್ಟುವರು ಉಡಿಯೊಳಗ||

ಮನೆಯಲ್ಲಿ ಹೆಣ್ಣು ಮಗಳು ತನ್ನ ಒಡನಾಡಿ ಅಣ್ಣ-ತಮ್ಮರ ಜೊತೆಗೆ ಬೆಳೆಯುವುದರೊಂದಿಗೆ ಭಾವನಾತ್ಮಕ ಸಂಬಂಧವೂ ಬೆಳೆದಿರುತ್ತದೆ. ಕೇವಲ ಒಡಹುಟ್ಟಿದ್ದರಿಂದ ಮಾತ್ರ ಪೂರ್ಣ ಪ್ರಮಾಣದ ಸಹೋದರರಾಗಲು ಸಾಧ್ಯವಿಲ್ಲ. ಸಹೋದರಿಯ ರಕ್ಷಣೆಯ ಹೊಣೆ ಅವರದಾಗಿರುತ್ತದೆ. ಎಲ್ಲಾ ಸಮಯದಲ್ಲಿ ಸ್ವಂತ ಅಣ್ಣ- ತಮ್ಮರು ರಕ್ಷಣೆ ಮಾಡುತ್ತಾರೆಂದೇನಿಲ್ಲ. ಹೀಗಾಗಿ ಸಮಯ ಸಂದರ್ಭಕ್ಕೆ ಆಸರೆ ಆದವರು ಸಹ ಸಹೋದರರಾಗುತ್ತಾರೆ. ಆದ್ದರಿಂದ ನಮ್ಮ ಸಮಾಜದಲ್ಲಿ ಎಷ್ಟೋ ಸಂಬಂಧಗಳು ಸಹೋದರರ ಪಾತ್ರ ನಿರ್ವಹಿಸುವುದನ್ನು ಗಮನಿಸಿರುವ ಹೆಣ್ಣು ಮಗಳು ಹೀಗೆ ಹಾಡಿ ಹೇಳಿದ್ದಾಳೆ.

ಎನಗ ಯಾರಿಲ್ಲಂತ ಮನದಾಗ ಮರುಗಿದರ
ಪರನಾಡಲೊಬ್ಬ ಪ್ರತಿ ಸೂರ್ಯ/ನನ್ನಣ್ಣ
ಬೀದಿಗೆ ಚಂದ್ರಾಮ ಉದಿಯಾದ||

ಎನ್ನುವಲ್ಲಿ ಹೆಣ್ಣುಮಗಳು ತಾನು ಕಂಡುಕೊಳ್ಳುವ ಭಾವನೆಗಳ ಸಂಬಂಧ ದೊಡ್ಡದು. ಭಾವನೆಗಳನ್ನು ಅರಿತು ಬದುಕಿದರೆ ಬದುಕು ಬಂಗಾರವಾಗುತ್ತದೆ. ಇದಕ್ಕೆ ಪ್ರಸ್ತುತ ರಕ್ಷಾ ಬಂಧನ ಹಬ್ಬವೇ ಸಾಕ್ಷಿಯಾಗಿದೆ.

ಅಕ್ಕ- ತಂಗೇರು ಮೇಲ ಮುತ್ತು ಮಾಣಿಕ ಮೇಲ
ಉತ್ತುರಿ- ಸ್ವಾತಿ ಮಳಿ ಮೇಲ/ನನ ತಮ್ಮ
ನೀ ಮೇಲ ನನ್ನ ಬಳಗಾಕ||

ಎಂದು ಅಣ್ಣ-ತಮ್ಮರ ಮಹತ್ವವನ್ನು ಸಹೋದರಿಯರು ಹಾಡಿ ಸಂಭ್ರಮಿಸಿದ್ದಾರೆ. ಸಹಜವಾಗಿ ಪರಿಸರದಲ್ಲಿನ ಯಾವ ಮನುಷ್ಯನೂ ಬಂಧನವನ್ನು ಬಯಸಲಾರ. ಅದರಿಂದ ಮುಕ್ತನಾಗಲು ಪ್ರಯತ್ಮಿಸುತ್ತಾನೆ. ಆದರೆ ರಕ್ಷಾ ಬಂಧನ ಮಾತ್ರ ಅಂತಹ ಬಂಧನವಲ್ಲ. ಈ ಬಂಧನವು ಸಹೋದರಿ-ಸಹೋದರರ ಹಿರಿದಾದ ಹಬ್ಬವೆಂದು ಸರ್ವರೂ ಜಾತಿ-ಮತ-ಧರ್ಮ ಭೇದ ಮರೆತು ಸಂತಸದಿಂದ ಆಚರಿಸುವರು.

ರಕ್ಷಾ ಬಂಧನ ಕೇವಲ ಮಾರುಕಟ್ಟೆಯಲ್ಲಿ ಸುಂದರ ರೇಶ್ಮೆಯ ಹಾಗೂ ನೈಲಾನಯುಕ್ತ ಬಣ್ಣ-ಬಣ್ಣದ ಡೋರುಗಳನ್ನು ಮಣ ಕಟ್ಟಿನಲ್ಲಿ ಕಟ್ಟುವ ಭೌತಿಕ ವಸ್ತುವಲ್ಲ. ಅದರ ಮಹತ್ವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದರ ಭಾವ ಶ್ರೇಷ್ಠ ಅದರಲ್ಲಿ ಅಡಗಿದ ಆದರ್ಶ ಪವಿತ್ರತೆ ಅಮೂಲ್ಯವಾದುದ್ದು. ಈ ಅರ್ಥ ತಿಳಿದು ಧಾರಣೆ ಮಾಡಲು ಪ್ರೇರಕವಾದುದೇ ರಕ್ಷಾ ಬಂಧನ. ಇಂದು ನಮ್ಮ ಬದುಕಿಗೆ ಬೇಕಾಗಿರುವ ಪ್ರೀತಿ, ಸ್ನೇಹ-ಬಂಧುತ್ವಗಳನ್ನು ನಾವೆಲ್ಲರೂ ಪರಸ್ಪರ ವಿನಿಮಯ ಮಾಡಿಕೊಂಡು ಬಂಧುಗಳಾಗಿ ಸಮಾನತೆಯಿಂದ ಬದುಕುವಂತಾಗಬೇಕು. ಜಾಗತೀಕರಣದ ಭರಾಟೆಯಲ್ಲಿ ಮನುಷ್ಯ-ಮನುಷ್ಯರ ನಡುವಿನ ಮಧುರ ಸಂಬಂಧಗಳು ಮಾಯವಾಗುತ್ತಿರುವ ಈ ಸಮಯದಲ್ಲಿ ರಕ್ಷಾ ಬಂಧನ ಹಬ್ಬವು ಮನೆ- ಮನಗಳಲ್ಲಿ ರಕ್ತ ಸಂಬಂಧಗಳನ್ನು ಮತ್ತಷ್ಟುಗಟ್ಟಿಗೊಳಿಸುತ್ತ ಬದುಕಿನಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ನೀಡಲಿ.

- ಸಿ.ಎಸ್.ಆನಂದ, ಕಲಬುರಗಿ