ಕರುಳು ಕೇಳಲಿಲ್ಲ..!

ಕರುಳು ಕೇಳಲಿಲ್ಲ..!

78 ರ ಹರೆಯದ ಮುತ್ತಣ್ಣ ಪಾದರಸದಂತೆ ಇದ್ದವರು. ಅಂದು ಮಾಮೂಲಿ ವಾಕಿಂಗ್ ಕಟ್ಟೆಯ ಮೇಲೆ ಚಿಂತಾಕ್ರಾಂತರಾಗಿ ಕುಳಿತಿದ್ದರು. ಅವರನ್ನು ಹಾಗೆ ಕಂಡ ನನಗೆ ಆಶ್ಚರ್ಯವಾಯಿತು. ಹತ್ತಿರ ಹೋಗಿ ಮಾತಿಗೆಳೆದೆ

"ಏನ್ ಸಾರ್ ದಿನಾಲೂ ಸಂಜೆ ನನ್ನ ತಕ್ಷಣ ಗುಡ್ ಇವನಿಂಗ್ ಸಾರ್ ಅಂತಿದ್ದವರು, ಇಂದೇನು ಕಂಡು ಕಾಣದವರಂತೆ ಚಿಂತೆಯಲ್ಲಿ ಮುಳುಗಿದ್ದೀರಿ" ಎಂದೆ.

ಒಂದು ಹಳೆಯ ಚಿತ್ರಗೀತೆ ನೆನಪಾಯಿತು, "ಸವಿ ನೆನಪುಗಳಿರ ಬೇಕು ಸವಿಯಲೀ ಬದುಕು" ಆದರೆ ನನಗೆ ಸವಿ ನೆನಪುಗಳೇ ಇಲ್ಲ ಬರೀ ಕಹಿ ನೆನಪೇ ನನ್ನ ಆಸ್ತಿ " ಎಂದು ನಿಟ್ಟುಸಿರು ಬಿಟ್ಟರು.

“ಮತ್ತೆ ಏನು ನೆನಪು ಮಾಡಿ ಕೊಂಡ್ರಿ ಸರ್?”

"ಅದೇ..ಸರ್. ನಾನು ಜನ್ಮ ಕೊಟ್ಟು ಸುಮಾರು 48 ವರ್ಷಗಳ ಕಾಲ ಸಾಕಿ ಸಲಹಿ, ಸಾಲ ಸೋಲ ಮಾಡಿ ಮದುವೆ ಮಾಡಿದ ನಂತರ, ನನ್ನನ್ನು ಧಿಕ್ಕರಿಸಿ ಹೋದ ನನ್ನ ಏಕೈಕ ಮಗನ ನೆನಪಾಯಿತು" ಎಂದು ಮುತ್ತಣ್ಣ ಕಣ್ಣೊರೆಸಿಕೊಂಡು ಮಾತು ಮುಂದುವರೆಸಿದರು.

"ಸರ್, ನನ್ನ ಮಗನ್ನ ನಾನು ತುಂಬಾ ಪ್ರೀತಿಸ್ತಾ ಇದ್ದೆ. ಅವನಿಷ್ಟ ಪಟ್ಟವಳೊಂದಿಗೆ ಮದುವೆ ಮಾಡಿದೆ. ಸರ್ಕಾರಿ ಶಾಲಾ ಶಿಕ್ಷಕನಾಗಿ ನೇಮಕಾತಿಯೂ ಆಯ್ತು. ಒಂದು ಸಣ್ಣ ವಿಷಯಕ್ಕೆ, ಹೆಂಡತಿ ಮಾತು ಕೇಳಿ ನನ್ನನ್ನು ಧಿಕ್ಕರಿಸಿ ಮನೆ ಬಿಟ್ಟು ಹೋಗಿ ಬಿಟ್ಟ" ಎಂದು ಮತ್ತೊಮ್ಮೆ ಕಣ್ಣೊರೆಸಿಕೊಂಡರು.

ನಾನು ಬಾಯಿದ್ದೂ ಮೂಕನಂತಾಗಿದ್ದೆ!

ಮತ್ತೆ ಅವರೇ ಮಾತನಾಡುತ್ತ "ಸರ್, ಅವನು ಮನೆ ಬಿಟ್ಟು ಹೋಗುವಾಗ ನಾನು ಅಂಗಲಾಚಿ ಬೇಡಿಕೊಂಡೆ, ಬೇಡ ಕಣೋ ರಘು, ಮನೆ ಬಿಟ್ಟು ಹೋಗಬೇಡ. ಸಿಟ್ಟಿನಲ್ಲಿ ನನ್ನಿಂದೇನಾದರೂ ತಪ್ಪು ಮಾತು ಬಂದಿದ್ದರೆ ಅದನ್ನೆಲ್ಲ ಮರೆತು ಬಿಡು ಕಂದಾ " ಎಂದೆ.

"ನಿನ್ನಿಂದ ನಮ್ಮ ಮನೆತನ ಒಡೆದು ಹೋಗ್ತಾ ಇದೆ ಅಪ್ಪ.ಇನ್ನು ಮೇಲೆ ಒಂದು ಕ್ಷಣಾನೂ ನಾನೀ ಮನೆಯಲ್ಲಿ ಇರೋಲ್ಲ " ಎಂದು ಹೊರಟೇ ಬಿಟ್ಟ!

"ಸರ್, ಅವನ ಮನೆ ದೂರವೇನಿಲ್ಲ, ಇಲ್ಲೇ ಕೂಗಳತೆಯ ದೂರದಲ್ಲಿದೆ" ಎಂದರು ಮುತ್ತಣ್ಣ.

ನಾನು ಕುತೂಹಲದಿಂದ ಕೇಳಿದೆ

"ಮುತ್ತಣ್ಣ. ನೀವು ಎಂದಾದರೂ ಸೋತು ಅವರ ಮನೆ ಕಡೆ ಹೋಗಿದ್ರಾ?" "ಕರುಳು ಕೇಳಲಿಲ್ಲ ಸರ್, ಒಂದೆರಡು ಬಾರಿ ಹೋಗಿದ್ದೆ, ಆತ ತಂದೆ ಎನ್ನುವ ಗೌರವವನ್ನೂ ಕೊಡದೇ, ಬರಬೇಡ ಎಂದು ಬಿಟ್ಟ" ಎಂದು ಆಕಾಶದತ್ತ ಮುಖ ಮಾಡಿ ನೋವು ನುಂಗಲು ಪ್ರಯತ್ನಿಸಿದರಾದರೂ, ಕನ್ನಡಕದ ಸಂಧಿಯಿಂದ ಕಣ್ಣೀರು ಉದುರುತ್ತಿದ್ದವು!

ನನ್ನದು ಮತ್ತದೇ ನೀರವ ಮೌನ. ದೂರದಲ್ಲಿ "ಎಲ್ಲಿಗೆ ಪಯಣ...ಯಾವುದೋ ದಾರಿ..ಏಕಾಂಗಿ ಸಂಚಾರಿ..." ಎಂಬ ಹಾಡೊಂದು ಕೇಳಿ ಬರುತ್ತಲಿತ್ತು!

-ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ

ಚಿತ್ರ ಕೃಪೆ: ಇಂಟರ್ನೆಟ್ ತಾಣ