ಕರುಳು ಮಿಡಿಯದ ಜೀವ ನಿರ್ಜೀವ...ನಮಗಾಗಿಯಲ್ಲ ಅದು ಇತರರಿಗಾಗಿ…!
ಹೆಳವರಿಗೆ ಜೀವ ವಿಮೆ, ಆರೋಗ್ಯ ವಿಮೆ ಮತ್ತು ಮಾಸಾಶನ ಕಡ್ಡಾಯ ಮಾಡಬೇಕು. ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಪಕ್ಷದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿ ಅದರ ಮೊದಲ ಕೆಲಸ ಹುಟ್ಟಿನಿಂದ ಅಥವಾ ಅಪಘಾತದಿಂದ ಹೆಳವರಿಗೆ ಮತ್ತು ತೀವ್ರ ಸ್ವರೂಪದ ಅಂಗವೈಕಲ್ಯಕ್ಕೆ ಒಳಗಾದವರಿಗೆ ಜೀವ ವಿಮೆ, ಆರೋಗ್ಯ ವಿಮೆ ಮತ್ತು ಮಾಸಾಶನ ಕಡ್ಡಾಯ ಮಾಡುವಂತೆ ಎಲ್ಲರೂ ಒತ್ತಾಯಿಸಬೇಕು.
ಸಾಮಾನ್ಯವಾಗಿ ಬದುಕಿನ ಭಾಗಗಳಾಗಿರುವ ಬಹುತೇಕ ಅಂಶಗಳಿಗೆ ವಿಮೆ ಇಂದು ವ್ಯಾಪಿಸಿದೆ. ಅದು ವಸ್ತುಗಳು ಮತ್ತು ಜೀವ - ಆರೋಗ್ಯಕ್ಕೆ ಸಂಬಂಧಿಸಿದೆ. ಅದರಿಂದಾಗಿ ವಿಮಾ ಕಂಪನಿಗಳು ಸಾಕಷ್ಟು ಲಾಭ ಮಾಡಿಕೊಳ್ಳುತ್ತಿವೆ. ಜೊತೆಗೆ ಒಳಗೆ ಅಡಗಿಸಲಾದ ( ಹಿಡನ್ ಪಾಯಿಂಟ್ಸ್ ) ನಿಯಮಗಳನ್ನು ಸರಿಯಾಗಿ ವಿವರಿಸದೆ ಅದರಿಂದಲೂ ಗ್ರಾಹಕರನ್ನು ಪರೋಕ್ಷವಾಗಿ ಶೋಷಿಸಿ ಸಾಕಷ್ಟು ಹಣ ಮಾಡುತ್ತಿವೆ. ಆದರೆ ಈಗಿನ ಮುಖ್ಯ ವಿಷಯವೆಂದರೆ, ಈಗ ಪ್ರಸ್ತಾಪಿಸಿರುವ ವಿಮೆ ಒಂದು ಸಾಮಾಜಿಕ ಮತ್ತು ಮಾನವೀಯ ಕರ್ತವ್ಯ.
ಏಕೆಂದರೆ ಸಾಮಾನ್ಯವಾಗಿ ಅವಿಭಕ್ತ ಕುಟುಂಬಗಳೆಂದರೆ ತಂದೆ, ತಾಯಿ, ಮಕ್ಕಳು, ಅಜ್ಜ, ಅಜ್ಜಿ, ಮೊಮ್ಮಕ್ಕಳು, ಅತ್ತೆ, ಸೊಸೆ, ಮಾವ, ಅಳಿಯಂದಿರು ಜೊತೆಗೆ ಮತ್ತೊಂದಿಷ್ಟು ಸಂಬಂಧಗಳು ಒಟ್ಟಿಗೆ ಇರುತ್ತವೆ. ಚಿಕ್ಕ ಕುಟುಂಬಗಳೆಂದರೆ ಗಂಡ ಹೆಂಡತಿ ಮಕ್ಕಳು. ಹೇಗೋ ತಮ್ಮ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಜೀವನ ರೂಪಿಸಿಕೊಂಡಿರುತ್ತಾರೆ. ಇಲ್ಲಿ ಮುಖ್ಯವಾಗಿ ಜೀವನದ ಪರಮೋಚ್ಚ ಉದ್ದೇಶ ಎಂಬಂತೆ ಸಾಕಷ್ಟು ಆಸೆ ಕನಸು ನಿರೀಕ್ಷೆಗಳೊಂದಿಗೆ ಮದುವೆಯಾಗುತ್ತಾರೆ. ವಂಶಾಭಿವೃದ್ಧಿ ಇಲ್ಲಿ ಅತಿಮುಖ್ಯವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಕೆಲವು ಅಪರೂಪದ ಪ್ರಕರಣಗಳಲ್ಲಿ ಮಾನಸಿಕ ಮತ್ತು ದೈಹಿಕ ನ್ಯೂನತೆಗಳನ್ನು ಹೊಂದಿರುವ ಮಗು ಜನಿಸುತ್ತದೆ. ಬದುಕಿನ ನಿಜವಾದ ಸವಾಲು ಇಲ್ಲಿಂದ ಪ್ರಾರಂಭವಾಗುತ್ತದೆ.
ಒಂದು ಸುಂದರ ಭರವಸೆಯ ನಮ್ಮದೇ ದೇಹದ ಮುಂದುವರಿದ ಭಾಗವಾಗಿ ನಮ್ಮದೇ ರೂಪದ ಮಗುವಿನ ನಿರೀಕ್ಷೆಯಲ್ಲಿರುವಾಗ ಕಾರಣವೇನೇ ಇರಲಿ ಈ ರೀತಿಯ ಅಸಹಜ ಮಗು ಜನಸಿದಾಗ ಯಾರಿಗೇ ಆಗಲಿ ನಿರಾಸೆ ದುಃಖ ಆತಂಕ ಎಲ್ಲವೂ ಒಟ್ಟಿಗೆ ಆಗುತ್ತದೆ. ಅದರ ಭವಿಷ್ಯದ ಚಿಂತೆ ಕಾಡಲಾರಂಭಿಸುತ್ತದೆ. ಜೊತೆಗೆ ಸಮಾಜದ ಸುತ್ತಮುತ್ತಲಿನ ವ್ಯಂಗ್ಯ ಮತ್ತು ಕುಹುಕದ ಮಾತುಗಳು ನೆನಪಾಗಿ ಮತ್ತಷ್ಟು ಆಳವಾದ ನೋವು ಉಂಟಾಗುತ್ತದೆ. ಇದು ಮಾನಸಿಕ ತಳಮಳ. ಇದನ್ನು ಮೀರಿ ವಾಸ್ತವತೆ ಮತ್ತಷ್ಟು ಘೋರವೆನಿಸುತ್ತದೆ.
ಆದರೂ ಮಗು ನಮ್ಮ ಸ್ವಂತದ್ದಾದ್ದರಿಂದ ನಾವು ಅದನ್ನು ಪ್ರೀತಿಯಿಂದಲೇ ಸಾಕಿ ಸಲುಹಲು ತಂದೆ ತಾಯಿಯ ಕರುಳು ಮಿಡಿಯುತ್ತದೆ. ಅದಕ್ಕಾಗಿ ವಿಶೇಷ ಜವಾಬ್ದಾರಿ ಹೆಗಲೇರುತ್ತದೆ. ಆ ಮನೆಯ ಆ ಸಂಬಂಧದ ಆ ಬೀದಿಯ ಆ ಊರಿನ ಆ ಸಮಾಜದ ಆ ಸರ್ಕಾರದ ವರ್ತನೆ ಅಥವಾ ಪ್ರತಿಕ್ರಿಯೆ ಇಲ್ಲಿ ಬಹುಮುಖ್ಯವಾಗುತ್ತದೆ. ಬೇರೆಯವರ ಮಗು ವಿಚಿತ್ರವಾಗಿ ಬೆಳೆಯುತ್ತಿದ್ದರೆ ಅದನ್ನು ತಿರಸ್ಕರಾದಿಂದ ನೋಡುವವರೇ ಹೆಚ್ಚು. ಅದರಲ್ಲೂ ಹೆಳವರನ್ನು ಮತ್ತೂ ಹೆಚ್ಚು ನಿರ್ಲಕ್ಷಿಸುತ್ತಾರೆ. ಇದರ ಜೊತೆಗೆ ಆರ್ಥಿಕ ಹೊಡೆತವೂ ಸೇರುತ್ತದೆ. ಈ ರೀತಿಯ ಮಕ್ಕಳನ್ನು ನೋಡಿಕೊಳ್ಳಲು ಹೆಚ್ಚು ಹಣ ಮತ್ತು ಸಮಯದ ಅವಶ್ಯಕತೆ ಇರುತ್ತದೆ.
ಇಂತಹವರ ಮತ್ತು ಇಂತಹ ಪರಿಸ್ಥಿತಿ ನಿಭಾಯಿಸಲು ವಿಮಾ ಸೌಲಭ್ಯಗಳ ಅನಿವಾರ್ಯತೆ ಇರುತ್ತದೆ. ಅದು ಖಾಸಗಿಯೋ ಅಥವಾ ಸರ್ಕಾರವೋ ಒಟ್ಟಿನಲ್ಲಿ ಹುಟ್ಟುವ ಮಕ್ಕಳಿಗೆ ಈ ವಿಮೆಯನ್ನು ಕಡ್ಡಾಯಗಳಿಸಬೇಕು. ಕೇವಲ ಲಾಭದ ದೃಷ್ಟಿಯಿಂದ ಮಾತ್ರ ಇದನ್ನು ನೋಡಬಾರದು. ನಮಗೆ ಯಾವುದೇ ತೊಂದರೆ ಇಲ್ಲ, ನಾವು ಯಾವುದೇ ಹೋರಾಟ ಮಾಡುವುದಿಲ್ಲ ಎಂದು ಸುಮ್ಮನಿರದೆ ಈ ಬಗ್ಗೆ ಎಲ್ಲರೂ ತಮ್ಮ ತಮ್ಮ ಮಟ್ಟದಲ್ಲಿ ಸರ್ಕಾರದ ಮೇಲೆ ಒತ್ತಡ ತರುವ ಕೆಲಸವನ್ನು ಮಾಡೋಣ.
ಎಲ್ಲರಿಗೂ ತಿಳಿದಿರುವಂತೆ ಹೆಳವ ಮಗುವನ್ನು ಅದರ ಸ್ವಂತ ತಂದೆ ತಾಯಿ ಹೊರತುಪಡಿಸಿ ಇತರರು ಇಷ್ಟಪಡುವ ಸಾಧ್ಯತೆ ಕಡಿಮೆ ಇರುವುದರಿಂದ ಅದರ ಇಡೀ ಬದುಕು ಮತ್ತಷ್ಟು ನರಕಯಾತನೆಗೆ ಗುರಿಯಾಗಬಾರದು. ಕನಿಷ್ಠ ಆರ್ಥಿಕ ಭದ್ರತೆ ಒದಗಿಸಿದರೆ ಯಾರಾದರೂ ನೋಡಿಕೊಳ್ಳಬಹುದು ಅಥವಾ ಯಾವುದಾದರೂ ಆಶ್ರಮಕ್ಕೆ ಸೇರಿಸಬಹುದು. ಆಡಳಿತ ಎಂದರೆ ಸಮಾಜದ ನ್ಯೂನ್ಯತೆಗಳನ್ನು ಸರಿಪಡಿಸುವುದೇ ಹೊರತು ಜನಪ್ರತಿನಿಧಿಗಳು ತಮ್ಮ ಮನೆ ಮಕ್ಕಳನ್ನು ಉದ್ದಾರ ಮಾಡುತ್ತಾ ಮೋಜು ಮಾಡುವುದಲ್ಲ.
ಗೆಳೆಯರೊಬ್ಬರು ಬಹಳ ದಿನದಿಂದ ಹೇಳುತ್ತಿದ್ದಾರೆ ಮತ್ತು ಇದಕ್ಕಾಗಿ ಸಾಕಷ್ಟು ಹೋರಾಟ ಮಾಡುತ್ತಿದ್ದಾರೆ. ಸರ್ಕಾರದ ಮಟ್ಟದಲ್ಲಿ ಅಥವಾ ನ್ಯಾಯಾಲಯದಲ್ಲಿ ಏನಾದರೂ ಪ್ರಯತ್ನ ಪಟ್ಟು ಹುಟ್ಟುವ ಮಗುವಿಗೆ ವಿಮೆ ಮಾಡಿಸಿ ಒಂದು ವೇಳೆ ಅದು ಹೆಳವ ಅಥವಾ ಅಂಗವಿಕಲ ಆಗಿದ್ದರೆ ಅದಕ್ಕೆ ಜೀವನ ಪರ್ಯಂತ ಆರ್ಥಿಕ ಭದ್ರತೆ ಒದಗಿಸುವ ಕಾನೂನು ಜಾರಿಯಾಗಬೇಕು.
ಡಿಸೆಂಬರ್ 3 ವಿಶ್ವ ಅಂಗವಿಕಲರ ದಿನದ ಪ್ರಯುಕ್ತ ನಿನ್ನೆ ಅದರ ಬಗ್ಗೆ ಲೇಖನ ಬರೆದಾಗ ಆದ ಸಾಕಷ್ಟು ಚರ್ಚೆಗಳ ಫಲಿತಾಂಶ ಈ ಒಂದು ಸಲಹಾ ರೂಪದ ಬೇಡಿಕೆ. ಆದ್ದರಿಂದ ದಯವಿಟ್ಟು ಎಲ್ಲರೂ ಸೇರಿ ಈ ಬಗ್ಗೆ ಅಭಿಯಾನ ರೂಪಿಸುವ ಬಗ್ಗೆ ಚಿಂತಿಸೋಣ. ಅದರಲ್ಲೂ ಸ್ವತಃ ಅಂಗವಿಕಲತೆಗೆ ಒಳಗಾದವರು ಮತ್ತು ಹೆಳವ ಮಕ್ಕಳ ಪೋಷಕರು ಹೆಚ್ಚು ಆಸಕ್ತಿ ವಹಿಸಿದರೆ ಇದು ಯಶಸ್ವಿಯಾಗಬಹುದು.
ಅರ್ಥವಿಲ್ಲದ ಜಾತಿ ಧರ್ಮಗಳ ಹೋರಾಟಕ್ಕಿಂತ ಇದು ಹೆಚ್ಚು ಮಾನವೀಯ ಎನಿಸುವುದಿಲ್ಲವೇ? ದಯೆ ಇಲ್ಲದ ಧರ್ಮ ಅದಾವುದಯ್ಯ.. ನೊಂದವರ ನೋವ ನೋಯದವರೆತ್ತ ಬಲ್ಲರೋ ಎಂಬುದು ಬದಲಾಗಿ " ನೊಂದವರ ನೋವ ನೋಯದವರೂ ಬಲ್ಲರು " ಎಂದಾಗಲಿ ಎಂದು ಆಶಿಸುತ್ತಾ...
-ವಿವೇಕಾನಂದ ಹೆಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ