ಕರುವ್ಗಲ್ಲು

ಕರುವ್ಗಲ್ಲು

ಪುಸ್ತಕದ ಲೇಖಕ/ಕವಿಯ ಹೆಸರು
ಮಾರುತಿ ಎನ್ ಎನ್
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ.೧೩೦.೦೦, ಮುದ್ರಣ: ೨೦೨೨

ಎಲ್ಲೋ ಬಿದ್ದಿದ್ದ ಕಲ್ಲು ದೇವರಾಗುವುದೂ ಕಥೆಯೇ! ಹಾಗೆಯೇ ಎಂಥ ಕಷ್ಟದಲ್ಲಿಯೂ ಕಲ್ಲಾಗಿಯೇ ಇದ್ದುಬಿಡುವ ದೇವರದೂ ಕಥೆಯೇ. ಹುಣ್ಣಿಮೆಯಂದು ಕಡಲು ಅಬ್ಬರಿಸುವುದೂ ಕಥೆಯೇ, ಚಂಡಮಾರುತದಲ್ಲಿಯೂ ಗುಂಡುಕಲ್ಲಾಗಿ ನಿಂತೇ ಇರುವ ಬೆಟ್ಟದ ಕೆಟ್ಟ ಹಠವೂ ಕಥೆಯೇ. ದಿನವೂ ಎದುರಾಗುವ ಪಕ್ಕದ ಬೀದಿಯ ವ್ಯಕ್ತಿ ಖುಷಿಯಿಂದ ನೋಡಿದರೂ ಕಥೆಯೇ, ಕಣ್ಣು ಕೂಡಿಸದೆ ನೆಲ ನೋಡಿಕೊಂಡು ಹೋಗಿಬಿಟ್ಟರೂ ಕಥೆಯೇ! ಎನ್ನುತ್ತಾರೆ ಕತೆಗಾರ್ತಿ ಪೂರ್ಣಿಮಾ ಮಾಳಗಿಮನಿ. ಅವರು ಲೇಖಕ ಮಾರುತಿ ಎನ್ ಎನ್ ಅವರ ‘ಕರುವ್ಗಲ್ಲು’ ಕಥಾ ಸಂಕಲನದಲ್ಲಿ ಬರೆದ ಮುನ್ನುಡಿ ನಿಮ್ಮ ಓದಿಗಾಗಿ..

“ಸಣ್ಣ ಕಥೆಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಜನಪ್ರಿಯವಾಗಿವೆ. ಇದಕ್ಕೆ ಮುಖ್ಯ ಕಾರಣ ಒಂದು ಸಣ್ಣ ಎಳೆಯನ್ನು ಎತ್ತಿಕೊಂಡು, ಒಂದೋ ಎರಡೋ ಮುಖ್ಯ ಪಾತ್ರಗಳನ್ನು ಬೆಳೆಸಿ, ಕಡಿಮೆ ಅವಧಿಯಲ್ಲಿ ಓದಲು ಸಾಧ್ಯವಾಗುವಂತೆ ಮಾಡಿ ಓದುಗರಿಗೆ ಕಾಡುವ ಕಥೆಯನ್ನು ಕಟ್ಟಿ ಕೊಡುವ ಲೇಖಕರ ಸಾಮರ್ಥ್ಯವೇ ಆಗಿದೆ. ಮಹಾನಗರಗಳ ಆಧುನಿಕ ಜೀವನಶೈಲಿಯಲ್ಲಿ ಕಳೆದುಹೋಗುತ್ತಿರುವ ಸಾಹಿತ್ಯ ಪ್ರೇಮಿಗಳಿಗೆ ಸಿಕ್ಕ ಅಲ್ಪ ಸಮಯದಲ್ಲೇ ಒಂದು ಪರಿಣಾಮಕಾರಿ ಕಥೆಯನ್ನೋದಿದ, ಕಥಾಲೋಕಕ್ಕೆ ಬೆಸೆದುಕೊಂಡೇ ಇರುವ ಸಂತೃಪ್ತಿ ನೀಡುವುದು ಸಣ್ಣಕಥೆಗಳಿಂದ ಸಾಧ್ಯವಾಗುತ್ತದೆ. ಹೊಸ ಓದುಗರಿಗಷ್ಟೇ ಅಲ್ಲ, ಹೊಸ ಬರಹಗಾರರಿಗೂ ಬರಹದಲ್ಲಿರುವ ತಮ್ಮ ಆಸಕ್ತಿಯನ್ನು ಪೋಷಿಸಿ ಬೆಳೆಸಿಕೊಳ್ಳಲು, ಸೂಕ್ತವಾದ ಪ್ರಕಾರ ಅನಿಸುತ್ತದೆ. ಒಂದು ಸಮಯಕ್ಕೆ ಒಂದೇ ಭಾವನೆಯನ್ನು, ಒಂದೇ ಮನಸ್ಥಿತಿಯನ್ನು ಕೆರಳಿಸುವ ಕೆಲಸ ಮಾಡುವ ಸಣ್ಣ ಕಥೆಗಳು, ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ನಾವು ಪಂಚೇಂದ್ರಿಯಗಳಿಂದ ಗ್ರಹಿಸುವಂತೆ ಮಾಡುತ್ತದೆ. ಹಾಗೆ ನೋಡಿದರೆ ಸಾಹಿತ್ಯ ಎನ್ನುವುದು ಶಾಸ್ತ್ರೀಯ ರೂಪವನ್ನು ಪಡೆಯುವ ಮೊದಲೇ ಸಣ್ಣಕಥೆಗಳು ಹುಟ್ಟಿದ್ದವು ಎಂದರೆ ತಪ್ಪಾಗಲಾರದು. ಸಾಮಾಜಿಕ ಜೀವಿಯಾದ ಮನುಷ್ಯ ತಾನು ಕಂಡು ಕೇಳಿದ ಸಣ್ಣ ಸಣ್ಣ ಸಂಗತಿಯನ್ನೂ ಜೊತೆಗಾರರೊಂದಿಗೆ ಹಂಚಿಕೊಂಡಿದ್ದೆಲ್ಲಾ ಕಥೆಗಳೇ ಎಂದರೆ ಉತ್ಪ್ರೇಕ್ಷೆಯಾಗಲಾರದು.

ಎಲ್ಲೋ ಬಿದ್ದಿದ್ದ ಕಲ್ಲು ದೇವರಾಗುವುದೂ ಕಥೆಯೇ! ಹಾಗೆಯೇ ಎಂಥ ಕಷ್ಟದಲ್ಲಿಯೂ ಕಲ್ಲಾಗಿಯೇ ಇದ್ದುಬಿಡುವ ದೇವರದೂ ಕಥೆಯೇ. ಹುಣ್ಣಿಮೆಯಂದು ಕಡಲು ಅಬ್ಬರಿಸುವುದೂ ಕಥೆಯೇ, ಚಂಡಮಾರುತದಲ್ಲಿಯೂ ಗುಂಡುಕಲ್ಲಾಗಿ ನಿಂತೇ ಇರುವ ಬೆಟ್ಟದ ಕೆಟ್ಟ ಹಠವೂ ಕಥೆಯೇ. ದಿನವೂ ಎದುರಾಗುವ ಪಕ್ಕದ ಬೀದಿಯ ವ್ಯಕ್ತಿ ಖುಷಿಯಿಂದ ನೋಡಿದರೂ ಕಥೆಯೇ, ಕಣ್ಣು ಕೂಡಿಸದೆ ನೆಲ ನೋಡಿಕೊಂಡು ಹೋಗಿಬಿಟ್ಟರೂ ಕಥೆಯೇ!

ದಂತ ಕಥೆ, ಉಪಾಖ್ಯಾನ, ಪೌರಾಣಿಕ, ಐತಿಹಾಸಿಕ, ಕಾಲ್ಪನಿಕ, ನೀಳ್ಗತೆ, ಕಟ್ಟುಕಥೆ ಎಲ್ಲವೂ ಮನುಷ್ಯ ಮಾತು ಕಲಿತಾಗಿನಿಂದಲೂ ಇದ್ದೇ ಇವೆ. ಒಂದು ಪ್ರಾದೇಶಿಕ ನಾಗರೀಕತೆ, ಸಂಸ್ಕೃತಿ, ಭಾಷೆಯ ಸೊಗಡು, ಉಡುಗೆ ತೊಡುಗೆ, ಖಾದ್ಯ ಪದ್ಧತಿ, ಹೀಗೆ ಹತ್ತು ಹಲವು ವಿಚಾರಗಳಲ್ಲಿ ಹೊಸ ಹೊಳಹುಗಳನ್ನು, ತುಣುಕುಗಳನ್ನು ಓದುಗರಿಗೆ ದಾಟಿಸುವ ಕೆಲಸವನ್ನು ಕಾದಂಬರಿಯಷ್ಟೇ ಪರಿಣಾಮಕಾರಿಯಾಗಿ ಮಾಡಿ ಸಣ್ಣ ಕಥೆಗಳನ್ನು ಬರೆದ ಲೇಖಕರಿದ್ದಾರೆ. ಪದಮಿತಿಯಿಂದ ಹೆಚ್ಚು ವಿಸ್ತರಿಸಿಕೊಳ್ಳಲು ಬಿಡದ ಸಣ್ಣಕಥೆಯನ್ನು ಬರೆಯುವುದು ಸುಲಭವೇನಲ್ಲ. ಇನ್ಸ್ಟಂಟ್ ಗ್ರಾಟಿಫಿಕೇಷನ್ ಬಯಸುವ ಇಂದಿನ ತಲೆಮಾರಿನವರಿಗೆ ಚಕಚಕನೆ ಓದಿಸಿಕೊಂಡು ಹೋಗುವ, ಹೆಚ್ಚು ಸಮಯ ಬೇಡದ, ಸುಲಭವಾಗಿ ಅರ್ಥವಾಗಿಯೂ ಓದುಗನ ಜಾಣ್ಮೆಯನ್ನು ಒರೆಹಚ್ಚುವ, ಅವನ ಗ್ರಹಿಕೆಗೆ ಸವಾಲೊಡ್ಡುವ ಕಥೆಗಳೇ ಬೇಕು. ಕಥೆ ಬರೆಯುವ ಇಂತಹ ಒಂದು ದರ್ದು, ಒಂದು ಹುಕಿ, ಒಂದು ಸಾಹಸದ ಸೆಳೆತಕ್ಕೆ ಬಲಿಯಾಗಿ ಬರೆಯಲು ಶುರುಮಾಡಿರುವ ಮಾರುತಿಯವರ ಪರಿಶ್ರಮ ಮತ್ತು ಶ್ರದ್ಧೆ ಅವರ ಬರಹದಲ್ಲಿ ಕಾಣುತ್ತದೆ.

ಒಟ್ಟು ಒಂಭತ್ತು ಕಥೆಗಳಿರುವ ಈ ಸಂಕಲನದಲ್ಲಿ ಹೆಚ್ಚಾಗಿ ಜನಪ್ರಿಯ ಕಥಾ ವಸ್ತುಗಳಿವೆ. ಬಹು ಚರ್ಚಿತ ವಸ್ತುಗಳನ್ನೇ ಆಯ್ದುಕೊಂಡರೂ ಮಾರುತಿಯವರು ತಮ್ಮ ಜೀವನಾನುಭವ ಮತ್ತು ತಮಗೆ ತೆರೆದುಕೊಂಡ ಭಿನ್ನವಾದ ಪ್ರಪಂಚದ ಚಿತ್ರಣದೊಂದಿಗೆ ಅನುಸಂಧಾನ ಮಾಡಿಕೊಂಡು ಕಥೆಗಳನ್ನು ಹೆಣೆದಿದ್ದಾರೆ. ಕೆಮಿಸ್ಟ್ರಿ ಮತ್ತು ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದು, ಡಾಕ್ಟರೇಟ್ ಕೂಡ ಪಡೆದಿರುವ ಮಾರುತಿ ಅವರು ಸಿಕ್ಕಾಪಟ್ಟೆ ಓದಿಕೊಂಡವರು. 15 ವರ್ಷಗಳಿಂದ ಬಿ.ಇಡಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ, ಪ್ರಸ್ತುತ ತುಮಕೂರಿನ ಶ್ರೀ ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿಯೂ ಕಥೆ, ಸಿನಿಮಾ ನಟನೆ ಜೊತೆಗೆ ಸಾಮಾಜಿಕ ಸ್ವಯಂ ಸೇವಕ ಕೂಡ ಆಗಿದ್ದಾರೆ ಎಂದರೆ ಅಚ್ಚರಿಯಾಗುತ್ತದೆ. ಅವರಲ್ಲಿ ನನಗೆ ಇಷ್ಟವಾಗುವ ಒಂದು ಗುಣವೆಂದರೆ ಸಾಹಿತ್ಯಿಕ ಕಾರ್ಯಕ್ರಮಗಳು ಎಲ್ಲೇ ಇದ್ದರೂ ತುಮಕೂರಿನಿಂದ ಕಾರು ಓಡಿಸಿಕೊಂಡು, ಹೆಂಡತಿ ಮಗಳೊಂದಿಗೆ ಹೋಗಿ ಭಾಗವಹಿಸುತ್ತಾರೆ. ಈ ಸಾಹಿತ್ಯಾಸಕ್ತಿ ಮತ್ತು ಉತ್ಸಾಹವೇ ಇಷ್ಟೆಲ್ಲಾ ಕೆಲಸಗಳ ನಡುವೆಯೂ ಅವರನ್ನು ಎರಡನೇ ಕಥಾ ಸಂಕಲನವನ್ನು ಪ್ರಕಟಿಸುವಂತೆ ಪೊರೆದಿದೆ.

ಸಾಹಿತ್ಯವನ್ನೇ ಅಧ್ಯಯನ ಮಾಡಿ ಕೊಂಡವರಿಗಿಂತ ಇತರೆ ವಿಷಯಗಳನ್ನು ಓದಿಕೊಂಡವರೇ ಫಿಕ್ಷನ್ ಬರೆಯುವತ್ತ ಆಸಕ್ತಿ ತಳೆಯುವುದು ಹೆಚ್ಚುತ್ತಿರುವ ಈ ದಿನಗಳಲ್ಲಿ ಕರುವ್ಗಲ್ಲು ಒಂದು ವಿಭಿನ್ನ ಪ್ರಯತ್ನ. ಈ ಕಥೆಗಳನ್ನು ಕೈಗೆತ್ತಿಕೊಳ್ಳುವಾಗ ಓದುಗರು ಗಮನಿಸಬೇಕಾದ ವಿಷಯವೆಂದರೆ ಇವು ಜೀವನಾನುಭವ ಮತ್ತು ಜೀವನ ಪ್ರೀತಿಯಿಂದ, ಸಾಮಾಜಿಕ ಕಳಕಳಿಯಿಂದ ಹುಟ್ಟಿದ ಕಥೆಗಳು. ಇಲ್ಲಿ ಭಾಷಾ ಪಾಂಡಿತ್ಯ, ದಕ್ಕಿಸಿಕೊಳ್ಳಲಾಗದ ತತ್ವಜ್ಞಾನ, ಸಂಕೀರ್ಣ ಕಥಾ ಹಂದರ ಇತರೆ ನಿರೀಕ್ಷೆಗಳನ್ನಿಟ್ಟುಕೊಂಡು ಓದಿದರೆ ನಿರಾಸೆಯಾಗಬಹುದು. ಇವು ಕಟ್ಟಿದ ಕಥೆಗಳಲ್ಲ, ಹುಟ್ಟಿದ ಕಥೆಗಳು. ಹಾಗಾಗಿ ಇವು ಮೇಲೆ ಹೇಳಿದ ಶಾಸ್ತ್ರೀಯ ಚೌಕಟ್ಟುಗಳಿಂದ ಮುಕ್ತವಾಗಿ, ಮುಗ್ಧವಾಗಿ ರೂಪ ತಳೆದಿವೆ. ಇಲ್ಲಿನ ಸಾಮಾಜಿಕ ಕಳಕಳಿ ಬಲವಂತಾಗಿ ತುರುಕಿದಂತೆ ಕಾಣುವುದಿಲ್ಲ. ಎಲ್ಲ ಸಾಮಾಜಿಕ ಸ್ತರಗಳಲ್ಲಿಯೂ ಕಾಣಸಿಗುವ ಪಾತ್ರಗಳ ನೈಜ ಚಿತ್ರಣ, ತಲೆಮಾರುಗಳಿಂದ ನಡೆದುಕೊಂಡು ಬಂದ ಅನಿಷ್ಟ ಪದ್ದತಿಗಳ ವಿರುದ್ಧ ಮೌನವಾಗಿಯೇ ಎದ್ದ ಬಂಡಾಯ, ಸಹಜೀವಿಗಳ ಬಗೆಗಿನ ಕಾಳಜಿ, ಜಾಗೃತಿ ಮೂಡಿಸುವ ಪ್ರಾಮಾಣಿಕವಾದ ಪ್ರಯತ್ನ, ಜೀವನ್ಮುಖಿ ಆಶಯಗಳು ಇಲ್ಲಿವೆ.

'ಕರುವ್ಗಲ್ಲು' ಎನ್ನುವ ಶೀರ್ಷಿಕೆಯ ಕಥೆ, ಅಕಸ್ಮಾತ್ ಆಗಿ ಒಂದು ಕೊಲೆಯ ಸಾಕ್ಷಿಯಾಗಿ ಬಿಟ್ಟ ವೆಂಕಟೇಶ್ ಎನ್ನುವ ಚೂಟಿ ಹುಡುಗ ಗುಟ್ಟು ರಟ್ಟಾಗದಂತೆ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆಯಿಂದ ಬುದ್ದಿಮಾಂದ್ಯನಾಗುವುದನ್ನು ಬಹಳ ಹೃದಯ ವಿದ್ರಾವಕವಾಗಿ ಚಿತ್ರಿಸಿದೆ. ಮಕ್ಕಳು ದೇವರು ಎನ್ನುತ್ತಾರೆ, ಆದರೆ ದೇವರ ಭಕ್ತರೇ ಮಕ್ಕಳನ್ನು ಶೋಷಿಸುವುದು ಮನುಷ್ಯನ ಪರಮಸ್ವಾರ್ಥಕ್ಕೆ ಹಿಡಿದ ಕನ್ನಡಿಯಾಗಿದೆ.

'ದ್ಯಾಮವ್ವನ ಮಗ' ದೇವರ ಹೆಸರಿನಲ್ಲಿ ಶೋಷಣೆ ಮಾಡುವ, ಊರಿನ ಹಸಿದ ತೋಳಗಳ ದುರಾಸೆ, ದೌರ್ಜನ್ಯಕ್ಕೊಳಗಾಗಿ, ಮುತ್ತು ಕಟ್ಟಿಸಿಕೊಳ್ಳುವ ಸಂಪ್ರದಾಯಕ್ಕೆ ಬಲಿಯಾಗುವ ದ್ಯಾಮವ್ವನ ನತದೃಷ್ಟ ಮಗನ ಕಥೆಯಾಗಿದೆ. ಜೀವನದ ಎಲ್ಲ ಖುಷಿಗಳನ್ನು ಕೊನೆಗೂ ತಂದೆಯ ಹೆಸರು ಎನ್ನುವುದು ಅಡ್ಡ ಬಂದು ನುಂಗಿ ಹಾಕುವ, ಎಲ್ಲಿಯೂ ನಿಲ್ಲಗೊಡದೆ ಊರೂರು ಅಲೆಸುವ ನೆಮ್ಮದಿಯ ಜೀವನದ ಹುಡುಕಾಟವೇ ಈ ಕಥೆಯ ತಿರುಳಾಗಿದೆ.

'ಹೊಸ ಶಿಕಾರಿ' ಕಥೆಯು ದಾಯಾದಿ ಮತ್ಸರದ ಹಲವು ಆಯಾಮಗಳನ್ನು ತೆರೆದಿಡುತ್ತದೆ. ಅಧಿಕಾರಕ್ಕಾಗಿ, ಆಸ್ತಿಗಾಗಿ ಯಾವ ಮಟ್ಟಕೆ ಬೇಕಾದ್ರೂ ಇಳಿಯಬಹುದೆನ್ನುವ ಕಟು ಸತ್ಯದ ಅನಾವರಣ ಇದಾಗಿದೆ.

'ಚಿನ್ನ ತಂದವರು' ರೇಲ್ವೆ ಹಳಿಯ ಪಕ್ಕ ಸ್ಲಮ್ ನಲ್ಲಿ ವಾಸಿಸುವ ತಮಿಳು ನಾಡಿನಿಂದ ವಲಸೆ ಬಂದ ಕಾರ್ಮಿಕರ ಹೃದಯಸ್ಪರ್ಶಿ ಕಥೆಯಾಗಿದೆ. ಕಳ್ಳ ಪೋಲೀಸರ ನಡುವೆ ಸಿಕ್ಕು ಒದ್ದಾಡಿ, ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ಪೊನ್ಮಣಿ, ಅವಳ ಸಾವಿಗೆ ನ್ಯಾಯ ಒದಗಿಸಲು ಅವಳ ಗಂಡ ಮತ್ತು ಜೊತೆಯವರು ಹೇಗೆಲ್ಲಾ ಒದ್ದಾಡುತ್ತಾರೆ ಎನ್ನುವುದೇ ಕಥೆಯಾಗಿದೆ. ಬಡವರ ಜೀವಕ್ಕೆ ಬೆಲೆಯೇ ಇಲ್ಲವೆನ್ನುವುದು ಈ ಕಥೆಯ ಡಿಟೆಲಿಂಗ್ ನಲ್ಲಿ ವ್ಯಕ್ತವಾಗಿದೆ. ಕೊನೆಗೆ ನ್ಯಾಯ ಸಿಕ್ಕಿತೇ?

'ಅನಂತ್ಯ' ಕಥೆಯು ಡ್ರೈನೇಜ್ ಶುಚಿ ಮಾಡುವ ಕಾರ್ಮಿಕನ ಧಾರುಣ ಕಥೆಯಾಗಿದೆ. ಇದನ್ನು ಕಟ್ಟಿರುವ ಪರಿಸರ, ಸನ್ನಿವೇಶಗಳು ಎಷ್ಟು ಸಹಜವಾಗಿವೆಯೆಂದರೆ ಇಂದಿಗೂ ಇಂಥ ಜನರಿದ್ದಾರಾ ಎಂದು ನೋವಿನಿಂದ ಉದ್ಗರಿಸುವಂತೆ ಮಾಡುತ್ತದೆ. ಇದು ಬಹಳ ಕಾಡುವ ಕಥೆ.

'ಮೂರು ಅನುಮಾನ' ಎನ್ನುವ ಕಥೆ ಹುಟ್ಟಿದ ಪರಿ ಸ್ವಾರಸ್ಯಕರವಾಗಿದೆ. ನಿದ್ರಾಹೀನತೆಯಿಂದ ಬಳಲುತ್ತಿರುವ ವ್ಯಕ್ತಿಯ ಬಗ್ಗೆ ಕಥೆ ಬರೆಯಲು ಕೊಟ್ಟ ಒಂದು ಎಳೆಯನ್ನು ಆಧರಿಸಿ ಬರೆದಿರುವ ಕಥೆ ಇದಾಗಿದೆ. ಒಂದು ದೇಹ ಬಿದ್ದಿದೆ. ಅದು ಕೊಲೆಯೋ, ಆಕಸ್ಮಿಕ ಸಾವೋ, ಯಾಕೆ, ಹೇಗೆ, ಎಲ್ಲಿ, ಯಾವಾಗ ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಥೆಯನ್ನು ಓದುವುದೇ!

'ಹಳೇ ಪಾತ್ರೆ ರಾಮ್ಯಾ' ಕಥೆ ಸೈಕಲ್ ಮೇಲೆ ಪಾತ್ರೆಗಳ ಬುಟ್ಟಿಯನ್ನಿಟ್ಟುಕೊಂಡು ಊರೂರು ತಿರುಗುತ್ತ ಜೀವನ ಸಾಗಿಸುವ ನಿರುಪದ್ರವಿ ಲಂಬಾಣಿ ಜನ ರಾಮ್ಯಾ ತನ್ನ ಅಣ್ಣ ಮತ್ತು ಅತ್ತಿಗೆಯರಿಗಾಗಿ ಪಡುವ ಕಷ್ಟ, ಮಾಡುವ ತ್ಯಾಗ, ಒಂಟಿಯಾಗೇ ಇರುತ್ತೇನೆಂದರೂ ಬಿಡದ ಬಂಧು ಬಳಗದ ಒತ್ತಾಯಕ್ಕೆ ಮಣಿದು ಮದುವೆಯಾಗುವುದು, ಅದರ ನಂತರ ಮತ್ತೆ ಹೇಗೆ ಜೀವನ ಜಟಿಲವಾಗುತ್ತಲೇ ಹೋಗುತ್ತದೆ ಎನ್ನುವುದನ್ನು ಸರಳವಾಗಿ ಹೇಳುತ್ತದೆ.

'ಒರಗು ಕಂಬದಲ್ಲೇ ಉಳಿದ ನಿಟ್ಟುಸಿರು' ದಾಯಾದಿಗಳ ಮತ್ಸರ, ಬಂಧು, ಬಳಗದವರಿಂದಲೇ ತಾತ್ಸಾರಕ್ಕೊಳಗಾಗುವ ಸೂರಪ್ಪನ ಕಥೆ. ಆರತಿ ಹೊತ್ತಾಗ 'ಹೆಣ್ಣು ದೇವರ ಆರತಿ ಹೆಣ್ಣು ಮಕ್ಕಳು ಹೊರಬೇಕು, ನೀನ್ಯಾಕೆ ಹೊತ್ತಿದೀಯ ಸಂಗ' ಎಂದು ಊರವರು ಚುಡಾಯಿಸುವುದರಿಂದ ನೊಂದು ಕೊಳ್ಳುತ್ತಿದ್ದ ಸೂರಣ್ಣ ತೃತೀಯ ಲಿಂಗಿಯಾಗಿ ತೆರೆದುಕೊಳ್ಳುವುದು ಮತ್ತು ಕೈ ಊನವಾದ್ದರಿಂದ ಮದುವೆಯಾಗದೇ ತವರಿನಲ್ಲೇ ಉಳಿದುಬಿಟ್ಟ ಅವನ ತಂಗಿಯೇ ಆದ ಸೌಭಾಗ್ಯಳ ತೊಳಲಾಟಗಳನ್ನು ಹೇಳುತ್ತದೆ. ಮಾನವೀಯ ಮೌಲ್ಯಗಳ ಕುಸಿತ, ವಾಸ್ತವವನ್ನು ಒಪ್ಪಿಕೊಳ್ಳದೆ ತಿರಸ್ಕರಿಸಿ, ಜೀವನವನ್ನು ನರಕ ಮಾಡುವ ಸುತ್ತ ಮುತ್ತಲಿನ ಜನರ ವರ್ತನೆಯ ಸೂಕ್ಶ್ಮತೆಯನ್ನು ಇಲ್ಲಿ ಕಾಣಬಹುದಾಗಿದೆ.

ಯಾವಾಗಲೂ ಸುಂದರ ಜೀವನದ ಚಿತ್ರಣಗಳನ್ನೇ ಬಯಸುವ ನಾವು ಆಗಾಗ ಇಂಥ ಕಥೆಗಳನ್ನು ಓದಿದರೆ ವಾಸ್ತವದ ಅರಿವಾಗಬಹುದು. ಶೋಷಣೆ, ದೌರ್ಜನ್ಯದ ಕಥೆಗಳು ಇಂದಿಗೂ ಪ್ರಸ್ತುತವಾಗಿಯೇ ಉಳಿದಿರುವುದು ಅತ್ಯಂತ ವಿಷಾದಕರ ಸಂಗತಿಯಾಗಿದೆ.”