ಕರೆಂಟ್ ಕಟಕಿಗಳು
ಬರಹ
ಸಾಲವನು ಕೊಂಬಾಗ ಹಾಲೋಗರುಂಡಂತೆ
(ಸರ್ವಜ್ಞ)
ವಿದ್ಯುತ್ತು ಇದ್ದಾಗ ಗೆದ್ದೆತ್ತು ಸಿಕ್ಕಂತೆ
ವಿದ್ಯುತ್ತು ಕೈಯ ಕೊಟ್ಟಾಗ ಆ ಎತ್ತು
ಗುದ್ದಿ ಹೋದಂತೆ ಕರ್ಮಜ್ಞ
ಕಣ್ಣಾಮುಚ್ಚೇ ಕಾಡೇಗೂಡೇ
(ಅನಾಮಿಕ)
ಕಣ್ಣಾಮುಚ್ಚೇ ಕತ್ತಲ ಗೂಡೇ
ವಿದ್ಯುತ್ ಮತ್ತೆ ಹೊರಟೇಹೋಯ್ತು
ನಾನದರಾಸೆ ಬಿಟ್ಟೇಬಿಟ್ಟೆ
ನೀವೂ ಕ್ಯಾಂಡಲ್ ಹಚ್ಚಿಟ್ಕೊಳ್ಳಿ
ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ
(ಬಸವೇಶ್ವರ ವಚನ)
ಬಿಎಸ್‌ವೈಗೆ ಕುರ್ಚಿಯನ್ನು ಉಳಿಸಿಕೊಳುವ ಚಿಂತೆ
ಅಧಿಕಾರಿಗಳಿಗೆ ದುಡ್ಡು ಗಳಿಸಿಕೊಳುವ ಚಿಂತೆ
ವಿರೋಧ ಪಕ್ಷಕ್ಕೆ ಕುರ್ಚಿ ಕೈತಪ್ಪಿದ ಚಿಂತೆ
ಎಮಗೆ ನಿತ್ಯ ಕರೆಂಟೆಂಬ ಮಾಯಾವಿಯ ಚಿಂತೆ
ಕುಲ ಕುಲ ಕುಲವೆಂದು ಹೊಡೆದಾಡದಿರಿ
(ಕನಕದಾಸರು)
ಕರೆಂಟ್ ಕರೆಂಟ್ ಕರೆಂಟೆಂದು ಒದ್ದಾಡದಿರಿ, ನಮ್ಮ
ಸರ್ಕಾರದ ಅನಾಡಳಿತ ಬಲ್ಲಿರಾ ಬಲ್ಲಿರಾ?
ಏನು ಮಾಡಿದರೇನು ಭವ ಹಿಂಗದು
(ಪುರಂದರ ದಾಸರು)
ಏನು ಹೇಳಿದರೇನು ಕರೆಂಟ್ ಬರದು
ಮಾನವಿಲ್ಲದ ’ಗೌರ್‍ಮೆಂಟ್’ ಸರಿಹೋಗದನಕ