ಕರೆಯದೆ ಬಂದ ಅತಿಥಿಗಳು

ಕರೆಯದೆ ಬಂದ ಅತಿಥಿಗಳು

ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಯಲ್ಲಿ ಅಜ್ಜಿಯೊಬ್ಬಳು ವಾಸ ಮಾಡುತ್ತಿದ್ದಳು. ಅವಳು ಕರುಣಾಮಯಿ. ಹಾಗಾಗಿ ಹಳ್ಳಿಯ ಮಕ್ಕಳಿಗೆಲ್ಲ ಅಜ್ಜಿಯೆಂದರೆ ಅಚ್ಚುಮೆಚ್ಚು.

ಅದೊಂದು ದಿನ, ಸೂರ್ಯ ದಿಗಂತದಲ್ಲಿ ಕಣ್ಮರೆಯಾದೊಡನೆ ಅವಳು ದೀಪ ಹಚ್ಚಿ ಅದನ್ನು ಕಿಟಕಿಯ ಪಕ್ಕ ಇಟ್ಟಳು. ಅನಂತರ ತನ್ನ ಮುಖವನ್ನು ಶಾಲಿನಿಂದ ಮುಚ್ಚಿಕೊಂಡು, ತಾಜಾ ಗಾಳಿ ಸೇವನೆಗಾಗಿ ಮತ್ತು ಅಕ್ಕಪಕ್ಕದ ಮನೆಯವರೊಂದಿಗೆ ಮಾತನಾಡಲಿಕ್ಕಾಗಿ ಅವಳು ಮನೆಯಿಂದ ಹೊರಬಂದಳು.

ಕೆಲವು ಮಕ್ಕಳೊಂದಿಗೆ ಅಜ್ಜಿ ಮಾತನಾಡುತ್ತಿದ್ದಾಗ ಸಣ್ಣಗೆ ಮಳೆ ಹನಿಯಲು ಶುರುವಾಯಿತು. ಮಳೆ ಹನಿಗಳಿಂದ ಒದ್ದೆಯಾದ ಮನೆಗಳ ಮಣ್ಣಿನ ಗೋಡೆಗಳ ಹಿತವಾದ ವಾಸನೆ ಅಲ್ಲೆಲ್ಲ ತುಂಬಿಕೊಂಡಿತು.

ಅಜ್ಜಿ ತನ್ನ ಪುಟ್ಟ ಮನೆಯೊಳಗೆ ಬಂದಳು. ಆಗ ಮಳೆ ಜೋರಾಯಿತು. ಅಜ್ಜಿಗೆ ಚಳಿಯಾಯಿತು. ಅವಳು ನೆಲದಲ್ಲಿ ತನ್ನ ಹಾಸಿಗೆ ಹಾಸಬೇಕೆಂದು ಯೋಚಿಸುತ್ತಿರುವಾಗಲೇ ಮನೆಯ ಬಾಗಿಲು ಬಡಿಯುವ ಸದ್ದಾಯಿತು. ಟಕ್, ಟಕ್, ಟಕ್.

“ಈ ಹೊತ್ತಿನಲ್ಲಿ ಅದ್ಯಾರು ಬಂದಿರಬಹುದು?” ಎಂದು ಯೋಚಿಸುತ್ತಾ ಅಜ್ಜಿ ಶಾಲನ್ನು ಚಳಿಯಾಗದಂತೆ ಮೈಗೆ ಸುತ್ತಿಕೊಳ್ಳುತ್ತಾ ಕೇಳಿದಳು, “ಅದ್ಯಾರು ಬಾಗಿಲು ಬಡಿಯುತ್ತಿರುವುದು?”

"ನಾನು, ಗುಬ್ಬಿ, ಮಳೆಯಲ್ಲಿ ಒದ್ದೆಯಾಗುತ್ತಿದ್ದೇನೆ. ದಯವಿಟ್ಟು ಬಾಗಿಲು ತೆಗಿ ಅಜ್ಜಿ” ಎಂಬ ಉತ್ತರ ತೇಲಿ ಬಂತು. ಅಜ್ಜಿ ಮನೆಯ ಬಾಗಿಲು ತೆಗೆದು, "ಬಾ ಬಾ, ಒಳಗೆ ಬಾ" ಎಂದು ಗುಬ್ಬಿಯನ್ನು ಕರೆದಳು.

ಮನೆಯೊಳಗೆ ಬಂದ ಗುಬ್ಬಿ ಪ್ಲಾಪ್, ಪ್ಲಾಪ್, ಪ್ಲಾಪ್ ಎಂದು ರೆಕ್ಕೆ ಬಡಿಯಿತು. ಗುಬ್ಬಿಯನ್ನು ಅಜ್ಜಿ ಕೋಣೆಯೊಳಗೆ ಕರೆದೊಯ್ದು, ಅದರ ಒದ್ದೆಯಾದ ರೆಕ್ಕೆಗಳ ಮೇಲೆ ಬಟ್ಟೆಯೊಂದನ್ನು ಹರವಿದಳು.

ಗುಬ್ಬಿ ಕೊಕ್ಕಿನಿಂದ ತನ್ನ ರೆಕ್ಕೆಗಳನ್ನು ಉಜ್ಜುತ್ತಿರುವಾಗ, ಪುನಃ ಮನೆಯ ಬಾಗಿಲು ಬಡಿಯುವ ಸದ್ದಾಯಿತು. ಟಕ್, ಟಕ್, ಟಕ್. ಬಾಗಿಲಿನ ಬಳಿಗೆ ಹೋಗಿ ಅಜ್ಜಿ ಪುನಃ ಕೇಳಿದಳು, “ಅದ್ಯಾರು ಬಾಗಿಲು ಬಡಿಯುತ್ತಿರುವುದು?”

"ನಾನು, ಪುಟ್ಟ ಕಾಲಿನ ಕೋಳಿ. ಮಳೆಯಲ್ಲಿ ನೆನೆಯುತ್ತಿದ್ದೇನೆ. ದಯವಿಟ್ಟು ಬಾಗಿಲು ತೆಗಿ ಅಜ್ಜಿ” ಎಂಬ ಉತ್ತರ ಕೇಳಿ ಬಂತು. ಅಜ್ಜಿ ಬಾಗಿಲು ತೆಗೆದು, “ಆಗಲಿ, ಆಗಲಿ, ನೀನೂ ಒಳಗೆ ಬಾ" ಎಂದಳು.

ಕೋಳಿಯ ರೆಕ್ಕೆಗಳೆಲ್ಲ ಮಳೆಗೆ ಒದ್ದೆಯಾಗಿ ಒಂದಕ್ಕೊಂದು ಅಂಟಿಕೊಂಡಿದ್ದವು ಮತ್ತು ಕಣ್ಣುಗಳು ದಣಿದಿದ್ದವು. ಕೋಳಿಯ ಬೆನ್ನಿನ ಮೇಲೆ ಬಟ್ಟೆಯೊಂದನ್ನು ಹರವಿದಳು ಅಜ್ಜಿ. ಕೋಳಿ ಕೋಣೆಯ ಒಂದು ಬದಿಗೆ ಹೋಗಿ, ಮಳೆನೀರನ್ನು ಜಾಡಿಸಲಿಕ್ಕಾಗಿ ಮೈಯನ್ನು ಜೋರಾಗಿ ಅಲುಗಾಡಿಸಿತು.

ಅಜ್ಜಿ ತನ್ನ ಒದ್ದೆ  ಶಾಲನ್ನು ತೆಗೆಯುತ್ತಿರುವಾಗ, ಪುನಃ ಮನೆಯ ಬಾಗಿಲು ಬಡಿಯುವ ಸದ್ದಾಯಿತು. ಟಕ್, ಟಕ್, ಟಕ್. ಮತ್ತೊಮ್ಮೆ ಬಾಗಿಲಿನ ಹತ್ತಿರ ಹೋಗಿ ಅಜ್ಜಿ ಕೇಳಿದಳು, “ಅದ್ಯಾರು ಬಾಗಿಲು ಬಡಿಯುತ್ತಿರುವುದು?”

"ನಾನು, ಕಾಗೆ. ಮಳೆಯಲ್ಲಿ ಒದ್ದೆಯಾಗುತ್ತಿದ್ದೇನೆ. ದಯವಿಟ್ಟು ಬಾಗಿಲು ತೆಗಿ ಅಜ್ಜಿ” ಎಂಬ ಉತ್ತರ ತೂರಿ ಬಂತು. ಅಜ್ಜಿ ಬಾಗಿಲು ತೆಗೆದು, "ಸರಿ, ಸರಿ. ನೀನೂ ಮನೆಯೊಳಗೆ ಬಾ" ಎಂದಳು.

ಅಷ್ಟರಲ್ಲಿ ಮತ್ತೆ ಮನೆಯ ಬಾಗಿಲು ಬಡಿಯುವ ಸದ್ದಾಯಿತು. ಈ ಬಾರಿ ಒಂದು ಬೆಕ್ಕು ಮನೆಯೊಳಗೆ ಬಂತು. ಬೆಕ್ಕನ್ನು ನೋಡಿದೊಡನೆ, ಗುಬ್ಬಿ, ಕೋಳಿ ಮತ್ತು ಕಾಗೆ ಭಯದಿಂದ ಒಬ್ಬರಿಗೊಬ್ಬರು ತಗಲಿಕೊಂಡು ನಿಂತರು.
ಆಗ ಬೆಕ್ಕು ನಗುತ್ತಾ ಹೇಳಿತು, “ಹೆದರಬೇಡಿ. ಇಲ್ಲಿ ನಾವೆಲ್ಲರೂ ಅತಿಥಿಗಳು ಮತ್ತು ನಾವು ಒಬ್ಬರಿಗೊಬ್ಬರು ಹೊಂದಿಕೊಂಡು ಇರಬೇಕು." ಅದನ್ನು ಕೇಳಿ ಅವರಿಗೆಲ್ಲ ಸಮಾಧಾನವಾಯಿತು. ಸ್ವಲ್ಪ ಹೊತ್ತಿನಲ್ಲೇ ಅವರೆಲ್ಲರೂ ತೂಕಡಿಸ ತೊಡಗಿದರು.

ಬೆಕ್ಕಿನ ಬೆನ್ನಿನ ಮೇಲೆಯೂ ಅಜ್ಜಿ ಬಟ್ಟೆಯೊಂದನ್ನು ಹರವಿದಳು. ಕೋಣೆಯ ಒಂದು ಮೂಲೆಗೆ ಹೋದ ಬೆಕ್ಕು, ಕಣ್ಣುಗಳನ್ನು ಮುಚ್ಚಿಕೊಂಡು, ತನ್ನ ಮುಖವನ್ನೂ ಉಗುರುಗಳನ್ನೂ ನೆಕ್ಕತೊಡಗಿತು.

ಆಗ, ಪುನಃ ಮನೆಯ ಬಾಗಿಲು ಬಡಿಯುವ ಸದ್ದಾಯಿತು. "ಅದ್ಯಾರದು ಬಾಗಿಲು ಬಡಿಯುತ್ತಿರುವುದು?” ಎಂದು ಅಜ್ಜಿ ಕೇಳಿದಾಗ, "ನಾನು, ನಾಯಿ. ಮಳೆಯಲ್ಲಿ ನೆನೆಯುತ್ತಿದ್ದೇನೆ. ದಯವಿಟ್ಟು ಬಾಗಿಲು ತೆಗಿ ಅಜ್ಜಿ” ಎಂಬ ಉತ್ತರ ಕೇಳಿ ಬಂತು.

ಅಜ್ಜಿ ಬಾಗಿಲು ತೆಗೆದು, “ನೀನೂ ಒಳಗೆ ಬಾ" ಎಂದು ಕರೆದಳು. ಒಳಗೆ ಬಂದ ನಾಯಿ ಚಳಿಯಿಂದ ಹಲ್ಲು ಕಡಿಯುತ್ತಿತ್ತು: ಕಟ, ಕಟ, ಕಟ. ನಾಯಿಯ ಕುತ್ತಿಗೆಗೆ ಅಜ್ಜಿ ಒಂದು ಸ್ಕಾರ್ಫ್ ಕಟ್ಟಿ, ಹೋಗಿ ಮಲಗಿಕೋ ಎಂದಳು.

ಪುನಃ ಬಾಗಿಲು ಬಡಿಯುವ ಸದ್ದು ಕೇಳಿಸಿತು. ಟಕ್, ಟಕ್, ಟಕ್. ಬಾಗಿಲ ಬಳಿ ಹೋಗಿ ಅಜ್ಜಿ ಕೇಳಿದಳು, “ಅದ್ಯಾರು ಬಾಗಿಲು ಬಡಿಯುತ್ತಿರುವುದು?” "ನಾನು, ಕಪ್ಪು ಹೋರಿ. ಮಳೆಯಲ್ಲಿ ಒದ್ದೆಯಾಗುತ್ತಿದ್ದೇನೆ. ದಯವಿಟ್ಟು ಬಾಗಿಲು ತೆಗಿ ಅಜ್ಜಿ”

ಅಜ್ಜಿ ಬಾಗಿಲು ತೆಗೆದು, “ಓ, ನೀನೂ ಬಂದಿಯಾ? ಒಳಗೆ ಬಾ" ಎಂದಳು. ಹೋರಿ ತಲೆ ಬಗ್ಗಿಸಿ, ಜೋಪಾನವಾಗಿ ಮನೆಯೊಳಗೆ ಬಂತು. ಆಗ ಬೇರೆಯವರೆಲ್ಲ ಒತ್ತರಿಸಿಕೊಂಡು ಹೋರಿಗೆ ಜಾಗ ಮಾಡಿ ಕೊಟ್ಟರು. ಇದೆಲ್ಲವನ್ನು ನೋಡಿ ಗುಬ್ಬಿ ನಗುತ್ತಿತ್ತು.

ಕೋಣೆಯ ಒಂದು ಮೂಲೆಗೆ ಹೋಗಿ ಕಾಲೂರಿ ಮಲಗಿತು ಹೋರಿ. ಒಂದು ಚಾದರವನ್ನು ತಂದು ಹೋರಿಯ ಮೈಮೇಲೆ ಹರವಿದಳು ಅಜ್ಜಿ. ಈಗ ಅಜ್ಜಿ ಎಲ್ಲ ಅತಿಥಿಗಳಿಗೆ ಕೇಳುವಂತೆ ಹೇಳಿದಳು, “ಒಳ್ಳೆಯದು, ನೀವೆಲ್ಲರೂ ಆರಾಮವಾಗಿ ಮಲಗಿಕೊಳ್ಳಿ. ನಾಳೆ ಬೆಳಗ್ಗೆ ಎದ್ದು ನಿಮ್ಮನಿಮ್ಮ ಮನೆಗಳಿಗೆ ಹೋಗಿ.”

ಗುಬ್ಬಿ, ಕೋಳಿ ಮತ್ತು ಕಾಗೆ ಕಿಟಕಿಯ ಪಟ್ಟಿಯ ಮೇಲೆ ಹಾರಿ ಕುಳಿತು ಮಲಗಿದವು. ಬೆಕ್ಕು, ನಾಯಿ ಮತ್ತು ಗೋರಿ ನೆಲದಲ್ಲಿ ಮಲಗಿದವು. ಅಜ್ಜಿಗೆ ದಣಿವಾಗಿತ್ತು. ತನ್ನ ಚಾದರವನ್ನು ಎಳೆದುಕೊಂಡು ಅಜ್ಜಿ ನಿದ್ದೆ ಹೋದಳು.

ಮರುದಿನ ಬೆಳಗಾಯಿತು. ಅಜ್ಜಿ ನಿಧಾನವಾಗಿ ನಿದ್ದೆಯಿಂದ ಎದ್ದು ನೋಡಿದಾಗ ಎಲ್ಲರೂ ಚುರುಕಿನಿಂದ ಕೆಲಸ ಮಾಡುತ್ತಿದ್ದರು. ಕಾಗೆ ಪಾತ್ರೆಯಲ್ಲಿ ನೀರು ಬಿಸಿ ಮಾಡುತ್ತಿತ್ತು. ಬೆಕ್ಕು ಟೀ ಮಾಡುತ್ತಿತ್ತು. ನಾಯಿ ನೆಲ ಗುಡಿಸುತ್ತಿತ್ತು. ಹೋರಿ ಮನೆಯನ್ನು ಶುಚಿ ಮಾಡುತ್ತಿತ್ತು ಮತ್ತು ಕೋಳಿ ಅದಕ್ಕೆ ಸಹಾಯ ಮಾಡುತ್ತಿತ್ತು.

ಇದನ್ನೆಲ್ಲ ನೋಡಿ ಅಜ್ಜಿಗೆ ಸಂತೋಷವಾಯಿತು. ಅವಳು ಶಾಲು ಹೊದ್ದುಕೊಂಡು ಮನೆಯಿಂದ ಹೊರ ಹೋಗಿ ಬ್ರೆಡ್ ತಂದಳು. ಎಲ್ಲರೂ ಟೀ ಪಾತ್ರೆಯ ಸುತ್ತ ಕುಳಿತುಕೊಂಡು, ಬ್ರೆಡ್ ತಿಂದು, ಟೀ ಕುಡಿದರು. ಅಷ್ಟರಲ್ಲಿ ಹೋರಿ ಹೇಳಿತು, “ನಿನ್ನೆ ರಾತ್ರಿ ನಾವು ಎಲ್ಲಿಗೂ ಹೋಗುವಂತಿರಲಿಲ್ಲ. ಈಗ ನಾವು ನಮ್ಮನಮ್ಮ ಮನೆಗೆ ಹೋಗಬೇಕು."

ಅಜ್ಜಿಯ ಕರುಣೆಯನ್ನು ಕಂಡಿದ್ದ ಎಲ್ಲ ಅತಿಥಿಗಳಿಗೂ ಅಜ್ಜಿಯ ಮನೆಯಿಂದ ಹೊರಡುವ ಹೊತ್ತಿನಲ್ಲಿ ಮನಸ್ಸು ಭಾರವಾಯಿತು. ಅಜ್ಜಿ ಹೀಗೆಂದಳು, “ನೀವೆಲ್ಲರೂ ನನ್ನ ಮನೆಯಲ್ಲಿಯೇ ಇರಬಹುದು, ಆದರೆ ನನ್ನ ಮನೆ ಬಹಳ ಸಣ್ಣದು. ಹಾಗಾಗಿ ಗುಬ್ಬಿ ಮಾತ್ರ ಇಲ್ಲಿರಬಹುದು, ಉಳಿದವರೆಲ್ಲ ಈಗ ಹೊರಟು ಬಿಡಬೇಕು.” ಅಲ್ಲೇ ಯೋಚಿಸುತ್ತಾ ಕುಳಿತುಕೊಂಡ ಹೋರಿ ಹೇಳಿತು, “ಅಜ್ಜಿ, ನಾನು ನಿನಗೆ ಗೋಧಿ ತೆನೆ ಬಡಿದು ಕೊಡಬಲ್ಲೆ. ನಾನು ಇಲ್ಲಿಂದ ಹೋಗಬೇಕೇನು?” ಹೋರಿಗೆ ಬೇಸರವಾಗಿದೆ ಎಂದು ಅಜ್ಜಿಗೆ ತಿಳಿಯಿತು. ಹಾಗಾಗಿ ಅಜ್ಜಿ ಹೇಳಿದಳು, "ಮನೆಯಲ್ಲಿ ಹೆಚ್ಚೇನೂ ಜಾಗವಿಲ್ಲ. ಆದ್ರೂ ನೀನು ಇಲ್ಲಿರಬಹುದು.”

ಗುಬ್ಬಿ, ಬೆಕ್ಕು, ಕಾಗೆ, ಕೋಳಿ, ನಾಯಿ ಎಲ್ಲವೂ ಅಜ್ಜಿಗೆ ಒಂದಿಲ್ಲೊಂದು ಸಹಾಯ ಮಾಡುತ್ತೇವೆಂದು ಭರವಸೆ ನೀಡಿದವು. ಕೊನೆಗೆ ಅಜ್ಜಿ ಅವರೆಲ್ಲರನ್ನೂ ಉದ್ದೇಶಿಸಿ ಹೇಳಿದಳು, “ನೀವೆಲ್ಲರೂ ನನ್ನ ಜೊತೆ ಇರಬೇಕೆಂದು ಬಯಸಿದ್ದೀರಿ. ಆಗಲಿ. ಆದರೆ ನೀವೆಲ್ಲರೂ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಸಂತೋಷದಿಂದ ಇಲ್ಲಿರಬೇಕು.” ಅನಂತರ ಕರೆಯದೆ ಬಂದ ಅತಿಥಿಗಳೆಲ್ಲರೂ ಅಜ್ಜಿಯ ಮನೆಯಲ್ಲಿ ಸುಖಸಂತೋಷದಿಂದ ಹಲವಾರು ವರುಷ ಬಾಳಿದರು.

ಚಿತ್ರ ಕೃಪೆ: ನ್ಯಾಷನಲ್ ಬುಕ್ ಟಸ್ಟ್ ಪುಸ್ತಕ: ರೀಡ್ ಮಿ ಎ ಸ್ಟೋರಿ    

ಚಿತ್ರಕಾರ: ಅಮಿರ್ ಅಲಿ ಬರೂಟಿಯನ್