ಕರೋನಾ: ಕಠಿಣ ನಿಯಮ ಅಗತ್ಯ
ಯಾವುದೇ ಕಾರಣಕ್ಕೂ ಹಿಂದಿನಂತೆ ನಾವು ಮೈಮರೆತು ಬದುಕುತ್ತೇವೆ ಎನ್ನುವಂತಿಲ್ಲ, ಕರೋನಾ ನಮಗೆ ಕಲಿಸಿದ ಎಚ್ಚರಿಕೆಯ ಪಾಠವಿದು. ಆದರೂ ನಾವದನ್ನು ಮರೆತಿದ್ದೇವೆ. ಪರಿಣಾಮ ಕೆಲವು ತಿಂಗಳವರೆಗೆ ಸೈಲೆಂಟ್ ಆಗಿದ್ದ ಕೊರೋನಾ ಮತ್ತೆ ತನ್ನ ಆರ್ಭಟ ಶುರು ಮಾಡಿದೆ. ಸೋಂಕು ಸಂಪೂರ್ಣ ಹೋಗಿಬಿಟ್ಟಿತೆಂದು ನಿಟ್ಟುಸಿರು ಬಿಡುತ್ತಿರುವಾಗಲೇ ದೇಶದಲ್ಲಿ ನಿಧಾನಕ್ಕೆ ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದ್ದು, ವೇಗವೂ ಹೆಚ್ಚಿದೆ. ಸರಕಾರಿ ಅಂಕಿ ಅಂಶಗಳ ಪ್ರಕಾರವೇ ಭಾರತದಲ್ಲಿ ಪ್ರಕರಣಗಳು ಕಳೆದೊಂದು ವಾರದಲ್ಲಿ ಶೇ.೪೦ರಷ್ಟು ಹೆಚ್ಚಾಗಿದೆ. ೯೩ ದಿನಗಳ ಬಳಿಕ ಮೊದಲ ಬಾರಿಗೆ ಸೋಂಕು ಪ್ರಕರಣಗಳ ಸಂಖ್ಯೆ ೫ ಸಾವಿರ ದಾಟಿದೆ. ಇದು ಕೊರೋನಾ ನಾಲ್ಕನೇ ಅಲೆಯ ಭೀತಿಯನ್ನು ಸಹಜವಾಗಿ ಹೆಚ್ಚಿಸಿದೆ. ಜತೆಗೆ ಒಮೈಕ್ರಾನ್ ನ ರೂಪಾಂತರಿಗಳೂ ಆಗಾಗ ಪತ್ತೆಯಾಗುತ್ತಲೇ ಇದ್ದು, ಯಾವುದೇ ಕಾರಣಕ್ಕೂ ಅದನ್ನು ನಿರ್ಲಕ್ಷಿಸುವಂತೆಯೇ ಇಲ್ಲ. ಒಂದೊಮ್ಮೆ ಸೋಂಕು ಹೆಚ್ಚಳಗೊಂಡು ಮತ್ತೆ ಹಿಂದಿನಂತೆ ಸನ್ನಿವೇಶ ಸೃಷ್ಟಿಯಾದರೆ ಅದಕ್ಕೆ ನೇರ ಹೊಣೆ ನಾವೇ ಆಗಿರುತ್ತೇವೆ. ಏಕೆಂದರೆ, ಸೋಂಕು ತುಸು ನಿಯಂತ್ರಣಕ್ಕೆ ಬರುತ್ತಿದೆ ಎನ್ನುವಷ್ಟರಲ್ಲಿ ಮೈ ಮರೆಯುತ್ತೇವೆ. ಬೇಕಾಬಿಟ್ಟಿ ಓಡಾಡುವುದರ ಜೊತೆಗೆ ಮಾಸ್ಕ್, ಸ್ಯಾನಿಟೈಸರ್ ಇತ್ಯಾದಿ ವೈಯಕ್ತಿತ ಸ್ವಚ್ಛತೆಯನ್ನು ಬಹುತೇಕ ಮರೆತೇಬಿಟ್ಟಿದ್ದೇವೆ. ಸಾಮಾಜಿಕ ಅಂತರದ ಮಾತಂತೂ ದೂರವೇ ಉಳಿಯಿತು. ಮಾರುಕಟ್ಟೆ ಸ್ಥಳಗಳಲ್ಲಿ ಹಿಂದಿಗಿಂತಲೂ ಹೆಚ್ಚಿನ ಜನಜಂಗುಳಿ ನಿರ್ಮಾಣವಾಗುತ್ತಿದೆ. ಹಬ್ಬ , ಜಾತ್ರೆ, ಸಭೆ-ಸಮಾರಂಭಗಳ ಪ್ರಮಾಣವೂ ಹೆಚ್ಚಿದೆ. ಯಾವ ಮುನ್ನೆಚ್ಚರಿಕೆಯನ್ನೂ ಸಾರ್ವಜನಿಕರು ವಹಿಸುತ್ತಿಲ್ಲ. ಎಲ್ಲೆಂದರಲ್ಲಿ ಉಗಿಯುವುದು, ಮೈಮರೆತು ಹಾದಿ ಬೀದಿಗಳಲ್ಲಿ ತಿನ್ನುವುದು ಇತ್ಯಾದಿ ಎಗ್ಗಿಲ್ಲದೇ ನಡೆಯುತ್ತಿದೆ. ಸರಕಾರವೂ ಕೊರೋನಾ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಾಕ್ಷಣ ತಜ್ಞರ ಸಭೆ ನಡೆಸಿ, ಮಾರ್ಗಸೂಚಿ ನಿಗದಿಯ ಕಣ್ಕಟ್ಟು ಕ್ರಮಕ್ಕೆ ಮುಂದಾಗುತ್ತದೆ. ಮತ್ತೆ ಯಥಾ ಪ್ರಕಾರ ಎಲ್ಲವೂ ಕಲಸು ಮೇಲೋಗರ. ಜಪಾನ್ ನಂಥ ದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ ನಿಯಮವನ್ನು ವರ್ಷಗಳವರೆಗೆ ಕಡ್ಡಾಯಗೊಳಿಸಲಾಗಿದೆ. ಇದನ್ನು ನಮ್ಮಲ್ಲೂ ಅನುಸರಿಸುವುದರಿಂದ ನಷ್ಟವೇನೂ ಇಲ್ಲ. ಜನ ಗುಂಪುಗೂಡುವುದನ್ನೂ ನಿರ್ಬಂಧಿಸಬೇಕು. ಕಾನೂನು ಮಾಡದೇ ಯಾವುದೂ ನಮ್ಮಲ್ಲಿ ಆಗದು.
ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೧೦-೦೬-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ