ಕರೋನಾ ಸಮಯದಲ್ಲೊಂದು ಮದುವೆ !

ಕರೋನಾ ಸಮಯದಲ್ಲೊಂದು ಮದುವೆ !

ಪದ್ದೀ...ಪದ್ದೀ.....ಲೇ ಪದ್ದಿ"

"ಏನ್ರೀ ಯಾಕೆ ಹಾಗೆ ಕೂಗ್ತಾ ಇದೀರಾ"?

ಅದೇ ಕಣೇ" ನಮ್ಮ  ಮಗಳು ಸಿಂಚನಾಗೆ ಒಂದು ಒಳ್ಳೆಯ ಸಂಬಂಧ ಬಂದಿದೆ"

"ಹೌದೇ ? ಯಾರದು ? ಯಾವ ಊರಿನವನು ? "ಎಂದು ಪ್ರಶ್ನೆಯ ಸುರಿಮಳೆ ಸುರಿಸಿದರು ಪದ್ಮಾ

ಹುಡುಗ ತೀರ್ಥಹಳ್ಳಿ ಕಡೆಯವನಂತೆ, ಅಡಿಕೆ ತೋಟ ಇದೆಯಂತೆ, ಮನೆಯ ಸುತ್ತ ಮುತ್ತ ಗಿಡಮರಗಳು ಇವೆಯಂತೆ , ನಮ್ಮ ಮಗಳಿಗೆ ಆಕ್ಸಿಜನ್ ಗೆ ಯಾವುದೇ ತೊಂದರೆ ಆಗೋಲ್ಲ ಬಿಡು ಸಾಲದ್ದಕ್ಕೆ ಸ್ಯಾನಿಟೈಸರ್ ಫ್ಯಾಕ್ಟರಿ ನಡೆಸ್ತಾ ಇದ್ದಾನಂತೆ, ಇಷ್ಟು ಸಾಕಲ್ಲವೇ ಬದುಕೋದಿಕ್ಕೆ "? ಎಂದರು ಶ್ರೀಪಾದರಾಯರು.

"ಅದೇನೋ ನಿಜಾರಿ ಮಗಳು ಸಾಫ್ಟವೇರ್ ಇಂಜಿನಿಯರ್ ಹುಡುಗನೇ ಬೇಕು ಅಂತ ಕೂತಿದ್ದಾಳಲ್ವಾ?, ಅವಳು ಒಪ್ತಾಳೆಯೇ ?"ಎಂದರು ಪದ್ಮಾ,

ಅದು ಆಗಿನ ಮಾತು ಬಿಡು, ಇವಾಗ ಆದಾಯಕ್ಕಿಂತ ಆರೋಗ್ಯನೇ ಮುಖ್ಯ ಕಣೇ, ಹಳ್ಳಿಯಲ್ಲಿ ಒಳ್ಳೆ ಗಾಳಿ ಸೇವಿಸಿಕೊಂಡು ಆರಾಮವಾಗಿ ಇರಬಹುದು"

"ಸರೀರಿ ನಾಳೆನೆ ಹುಡುಗನ ಮನೆಯವರನ್ನ ಕರೆಸಿ ಬಿಡಿ ಹಾಗಿದ್ರೆ, ಅಂದ ಹಾಗೆ ಜಾತಕ ನೋಡಿಸುವುದು ಬೇಡ್ವೇ ?

"ಜಾತಕ  ಏನು ಬೇಡ ಕಣೇ ಕೊರೋನಾ ನೆಗೆಟಿವ್ ಇದ್ರೆ ಆಯ್ತು ಎನ್ನುತ್ತಾ ಶ್ರೀಪಾದರಾಯ ಫೋನ್ ಎತ್ತಿಕೊಂಡರು,

ಮರುದಿನ ವರನ ಕಡೆಯವರು ಬಂದಾಗ ಬಿಸಿ ಬಿಸಿ ಕಷಾಯ ಕೊಟ್ಟು ಉಪಚರಿಸಿದರು ಪದ್ಮಾ, ಗಂಡು ಮತ್ತು ಹೆಣ್ಣಿನ ಮನೆಯವರಿಗೆ ಯಾರಿಗೂ ಕೊರೋನಾ ಲಕ್ಷಣಗಳಿಲ್ಲದ ಕಾರಣ ಎರಡೂ ಮನೆಯವರು ಮದುವೆಗೆ ಸಮ್ಮತಿಸಿದರು, ವರನ ತಂದೆ "ನಿಮ್ಮ ಮಗಳಿಗೆ ಅಡುಗೆ ಬರುವುದೇ ?ಎಂದು ವಿಚಾರಿಸಿದರು,

"ಹೌದೌದು ನಮ್ಮ ಮಗಳು ತುಂಬಾ ಚೆನ್ನಾಗಿ ಕಷಾಯ ಮಾಡ್ತಾಳೆ ಬಾಯ್ಲಿಂಗ್ ವಾಟರ್ ಮಾಡೋಕೆ ಬರುತ್ತೆ ಜೊತೆಗೆ ಮಾಸ್ಕ್ ಹೊಲಿಯೋದಕ್ಕೂ ಕಲ್ತಿದಾಳೆ "ಎಂದರು ಹೆತ್ತವರು.

"ತುಂಬಾ ಸಂತೋಷ ಆಯ್ತು ರಾಯರೆ, ಈಗಿನ ಕಾಲದಲ್ಲಿ ಇಷ್ಟು ಬಂದರೆ ಬೇಕಾದಷ್ಟು ಆಯ್ತು , ಎಂದು ಮದುವೆ ದಿನಾಂಕವನ್ನು ನಿಗದಿಪಡಿಸಿದರು,

ಮದುವೆಯ ದಿನ ಕೈಗಳಿಗೆ ಮದರಂಗಿ ಹಚ್ಚಿ ರೇಷ್ಮೆ ಸೀರೆಯನ್ನುಟ್ಟು ಮೊಗ್ಗಿನ ಜಡೆ ಹಾಕಿಕೊಂಡು ಅಲಂಕೃತವಾಗಬೇಕಿದ್ದ ವಧು ಸ್ಯಾನಿಟೈಸರ್ ಸಿಂಪಡಿಸಿಕೊಂಡು ಪಿಪಿ ಕಿಟ್ ನೊಂದಿಗೆ ಸಿಧ್ಧಳಾದಳು, ರೇಷ್ಮೆ ಪಂಚೆಯನ್ನುಟ್ಟು ಬಾಸಿಂಗದೊಂದಿಗೆ ಸಿಧ್ಧನಾಗಬೇಕಿದ್ದ ವರನೂ ಪಿಪಿ ಕಿಟ್ ನೊಂದಿಗೆ ಸಿಧ್ಧನಾದನು.

ನೂರಾರು ಜನರು ಸೇರಿ ಸಂಭ್ರಮಿಸಬೇಕಾಗಿದ್ದ ಸಭಾಂಗಣದಲ್ಲಿ ಹತ್ತು ಜನ ಹಿರಿಯರು ಆಸೀನರಾಗಿದ್ದರು, ಪನ್ನೀರು ಸಿಂಪಡಿಸುವ ಬದಲು ಸ್ಯಾನಿಟೈಸರ್ ಸಿಂಪಡಿಸಿ, ವಿಟಮಿನ್ ಮಾತ್ರೆಗಳನ್ನು ವಿತರಿಸಲಾಯಿತು, ತಾಳಿ ಕಟ್ಟುವ ಬದಲು ಮಾಸ್ಕನ್ನು ಕಟ್ಟಿ ಸಪ್ತಪದಿ ತುಳಿದರು, ಸ್ಯಾನಿಟೈಸರ್ ಹಾಕಿಕೊಳ್ಳದೆ ‘ನಿನ್ನನೆಂದಿಗೂ ಮುಟ್ಟೆನು’ ಎನ್ನುತಾ ಮೊದಲ ಹೆಜ್ಜೆಯನ್ನಿರಿಸಿದನು.

ದಿನದಲ್ಲೆರಡು ಬಾರಿ ತೋಟವನ್ನು ಸುತ್ತಾಡಿಸುವೆನೆಂದು ಎರಡನೆಯ ಹೆಜ್ಜೆಯನ್ನಿರಿಸಿದನು

ಆಕ್ಸಿಜನ್ ಪ್ಲಾಂಟ್ ಗಳನ್ನೇ ನೆಡುವೆನೆನುತ ಮೂರನೆಯ ಹೆಜ್ಜೆಯನಿರಿಸಿದನು,

ಇಮ್ಯೂನಿಟಿ ಹೆಚ್ಚಾಗುವ ಆಹಾರವನ್ನೇ ಕೊಟ್ಟು ಜೋಪಾನ ಮಾಡುವೆನೆನುತ ನಾಲ್ಕನೇ ಹೆಜ್ಜೆಯನ್ನಿರಿಸಿದನು,

ಮಾಸ್ಕ್ ಹಾಕಿಕೊಂಡೇ ಹೊರಗೆ ಸುತ್ತಾಡಿಸುವೆನೆಂದು ಐದನೇ ಹೆಜ್ಜೆಯನಿರಿಸಿದನು

ಆಕ್ಸಿಜನ್ ಲೆವೆಲ್ ಎಂದೂ ಕಡಿಮೆಯಾಗದಂತೆ ನೋಡಿಕೊಳ್ಳುವೆ ಎಂದು ಆರನೇ ಹೆಜ್ಜೆಯನಿರಿಸಿದನು

ಕೊರೋನಾ ಮುಗಿಯುವವರೆಗೂ ಅಂತರ ಕಾಪಾಡಿಕೊಳ್ಳುವೆ ಎನುತಾ ಏಳನೇ ಹೆಜ್ಜೆಯನಿರಿಸಿದನು. ಹೀಗೆ

ವಿಜೃಂಭಣೆಯಿಂದ ನಡೆದ ಈ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ ಹಿರಿಯರು "ಕೊರೋನಾ ಮುಗಿಯುವವರೆಗೂ ಅಂತರ ಕಾಪಾಡಿಕೊಳ್ಳಿ ಆ ಭಗವಂತ ನಿಮಗೆ ಆರತಿಗೊಂದು ಮಗ ಕೀರ್ತಿಗೊಂದು ಮಗಳನ್ನು ಕರುಣಿಸಲಿ ಎಂದು ಆಶೀರ್ವದಿಸಿದರು.

ಮದುವೆಗೆ ಬಂದಿದ್ದ ವರನ ಸಂಬಂಧಿಯೊಬ್ಬರು "ಹುಡುಗಿಯ ಮನೆಯವರು ತುಂಬಾ ಶ್ರೀಮಂತರೇ ಇರಬೇಕು, ಎಷ್ಟು ದೊಡ್ಡ ಆಕ್ಸಿಜನ್ ಸಿಲಿಂಡರ್ ಕೊಟ್ಟಿದ್ದಾರೆ ಎಂದು ತಮ್ಮ ಪಕ್ಕದ ಮನೆಯವರಿಗೆ ಹೇಳುವುದನ್ನು ಮಾತ್ರ ಮರೆಯಲಿಲ್ಲ

(ವಾಟ್ಸಾಪ್ ಸಂಗ್ರಹಿತ ಹಾಸ್ಯ ಬರಹ)

ಚಿತ್ರ ಕೃಪೆ: ಇಂಟರ್ನೆಟ್ ತಾಣ