ಕರೋನೋತ್ತರ ಸಂಕ್ರಮಣ

ಕರೋನೋತ್ತರ ಸಂಕ್ರಮಣ

                ವರ್ಷ 2020ರ ಸಂಕ್ರಾಂತಿ ಪುರುಷನಾಗಿ  ಬಂದವನು ಈ ಕರೋನಾ.  ಸಾಮಾನ್ಯತಃ  ಪಂಚಾಂಗಗಳಲ್ಲಿ  ಈತನ ವರ್ಣನೆ ಇರುತ್ತಾದರೂ, ಈ ಕಣ್ಣಿಗೆ ಕಾಣದ ವೈರಸ್, ಕರೋನಾದ ಸ್ವರೂಪವನ್ನು  ಕಣ್ಣಿಗೆ ಕಟ್ಟುವಂತೆ  ಹಾಗೂ ಮನಸ್ಸಿನಲ್ಲಿ ಖಾಯಂ ಆಗಿ ಇರುವಂತೆ  ಅಚ್ಚೊತ್ತಿವೆ,  ನಮ್ಮ  ದೃಶ್ಯ ಮಾಧ್ಯಮಗಳು. ಸಾಮಾಜಿಕ ಜಾಲತಾಣಗಳನ್ನೇ  ಬಸವಣ್ಣರ ಕಾಲದ ‘ಅನುಭವ ಮಂಟಪಗಳೆಂದು  ತಿಳಿದ ಈ ಕಾಲದಲ್ಲಿ, ಈ ತಾಣಗಳಲ್ಲಿ  ಕರೋನಾದಿಂದ  ಏನೇನೂ ಹಾನಿಯಾಗದು ಅನ್ನುವ ಚರ್ಚೆಯಿಂದ  ಹಿಡಿದು, ಈ ಕರೋನಾ ಭೀಭತ್ಸ ಹಾಗೂ ಮಾರಣಾಂತಿಕವೆನ್ನುವ ಚರ್ಚೆಯವರೆಗೂ ನಡೆಯುತ್ತದೆ.  ಇದಕ್ಕೆ ಪೂರಕ ವಾಗಿ, ನಮ್ಮ ದೃಶ್ಯ ಮಾಧ್ಯಮಗಳಿಂದ `ಕರೋನಾದಿಂದ  ಸದ್ಯದಲ್ಲಿಯೇ  ಮನುಕುಲ ನಾಶ' ವೆನ್ನುವ ಶುಭ(!) ಸಂದೇಶ ಬೇರೆ!  ಇದರಿಂದ ನಮ್ಮಲ್ಲಿ ಕೆಲವರು, ನಿರ್ಭೀತರಾಗಿ,  ಸಾಮಾಜಿಕ ಅಂತರಕ್ಕೆ ಎಳ್ಳು ನೀರು ಬಿಟ್ಟು, ಕರೋನಾ  ಸಂವಹನಕ್ಕೆ  ಕಾರಣೀಭೂತರಾಗಿ, ಸಾಕಷ್ಟು ಜನಕ್ಕೆ ಎಳ್ಳು ನೀರು ಬಿಡಬೇಕಾಗಿ ಬಂದಿದೆ. ಮತ್ತೊಂದಿಷ್ಟು ಜನ, ಭಯಭೀತರಾಗಿ ಹೃದಯಾಘಾತದಿಂದ ಸಾಯುತ್ತಿದ್ದಾರೆ.  ಹಾಗಾದಲ್ಲಿ ಕರೋನಾ ಬಗೆಗಿನ ಸತ್ಯ ಏನು? ಯಾರಿಗೂ ತಿಳಿದಿಲ್ಲ.  ವಿಜ್ಞಾನಿಗಳಿಗೇ ತಿಳಿದಿಲ್ಲವೆಂದ ಮೇಲೆ ನಮ್ಮಂಥ  ಪಾಮರರ ಗತಿಯೇನು?

                ಅಜ್ಞಾತ ಶತ್ರುವಿನ ಕಥೆಯೇ ಹೀಗೆ. ಜ್ಞಾತ ಶತ್ರುವಿನ ಬಲಾಬಲಗಳ ಪರಿಚಯವಿರುತ್ತೆಯಾದ್ದರಿಂದ, ಅದರ ಆಧಾರದ ಮೇಲೆ ತಂತ್ರಗಳನ್ನು ಹೆಣೆಯಬಹುದು.  ಆದರೆ ಗೊತ್ತಿರದ  ಅಂದಾಜಿನ ಮೇಲೆ ಹೇಗೆ ಸೆಣಸೋಣ?  ಉದಾ: ಪಾಕಿಸ್ತಾನದ ಬಲದ ಪರಿಚಯವಿರುವುದರಿಂದ  ಭಾರತಕ್ಕೆ ಜಯ ದುರ್ಲಭವಲ್ಲ.  ಆದರೆ, ಇತಿಹಾಸದ  ಪುಟ ತಿರುವಿದಲ್ಲಿ, ವಿಯಟ್ನಾಂ  ಬಲದ ಅಂದಾಜಿರದ  ಅಮೇರಿಕಾ, ವಿಯಟ್ನಾಂಗೆ  ಸೋತಿದ್ದು ಇದೇ ಕಾರಣಕ್ಕಾಗಿ.  ಈ ಕರೋನಾ  ವೈರಸ್ಸಿನ ನಾಗಾಲೋಟ ಮುಂದುವರೆಯುತ್ತಿರುವುದಕ್ಕೂ  ಇದೇ ಕಾರಣ.  ಈ ಹಿಂದೆ ಸಾರ್ಸ್ ಎಂಬ ವೈರಾಣುವಿನ ದಾಳಿಯಾದಾಗ,  ಅದರ ಬಲವನ್ನು ಬೇಗನೇ ಅರಿತು ಪ್ರತ್ಯೌಷಧ ತಯಾರಾದದ್ದರಿಂದಲೇ  ಅದು ತುಂಬಾ  ಹಾನಿಯನ್ನು ಮಾಡಲಾಗಲಿಲ್ಲ.  ಆದರೆ, ಕರೋನಾ ವೈರಸ್ಸಿನ `ನಿಜಸ್ವರೂಪ' ನಮಗೆ ಈವರೆಗೂ  ತಿಳಿಯದಾಗಿರುವುದರಿಂದ, ಅದರ ಆರ್ಭಟ ಇನ್ನೂ ಜೋರಾಗಿಯೇ ಇದೆ.  ಮಾಧ್ಯಮಗಳ ಮಾತಲ್ಲೇ ಹೇಳುವುದಾದರೆ, ಅದರ ರಣಕೇಕೆ ಇಂದಿಗೂ ಮುಂದುವರೆದಿದೆ.  ಜನ ಸಾಮಾನ್ಯರ  ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ನಮ್ಮೀ ಕಾಲವನ್ನು AC, BC ಅಂತ  ಪ್ರತ್ಯೇಕಿಸಬಹುದು! After Corona, Before Corona ಅಂತ! ಕರೋನಾ ಪೂರ್ವಕಾಲ, ಕರೋನೋತ್ತರ ಕಾಲ ಅಂತ!

                ಕರೋನೋತ್ತರದ ಈ ಸಂಕ್ರಮಣ  ಕಾಲದಲ್ಲಿ ನಾವು ನಮ್ಮ ಆರ್ಥಿಕತೆಯಲ್ಲಿ ಹಾಗೂ ಜನ ಜೀವನದಲ್ಲಿ  ಮಹತ್ತರ ಬದಲಾವಣೆಗಳನ್ನು ಗುರ್ತಿಸಬಹುದು.  ಜನರ ಜೀವನ ಮಟ್ಟ, ಜೀವನ ಶೈಲಿ, ಆರ್ಥಿಕತೆ ಮತ್ತು ಅನೇಕ ಮಜಲುಗಳಲ್ಲಿ ಅವುಗಳ  ಓಫದ ದಿಕ್ಕು ಬದಲಾಗುತ್ತಿರುವುದನ್ನು ಗಮನಿಸಬಹುದು.   ಅಂಥ ಕೆಲ ಮಜಲುಗಳ ಜಿಜ್ಞಾಸೆಯೇ ಈ ಲೇಖನದ ಮುಖ್ಯ ಉದ್ದೇಶ.

                ಕರೋನೋತ್ತರ ಕಾಲದ ಬಹು ಮುಖ್ಯ ಬದಲಾವಣೆಯೆಂದರೆ, ಜನರ ಜೀವನ ಶೈಲಿ. ಬಡವನಿರಲಿ,  ಶ್ರೀಮಂತನಿರಲಿ, ಇಷ್ಟ ಇರಲಿ, ಇಲ್ಲದಿರಲಿ, ಎಲ್ಲರ ಜೀವನ ಶೈಲಿಯಂತೂ ಬದಲಾಗಿದೆ.  ಮಧ್ಯಮ ವರ್ಗದವರನ್ನು ಗಮನಿಸೋದಾದರೆ, ಅವರಿಗೆ ತಮ್ಮ `ನಿಜವಾದ ಅವಶ್ಯಕತೆ'ಗಳೇನು ಎಂಬುದರ ಅರಿವಾಗಿದೆ. ಸಾಮಾಜಿಕವಾಗಿ ಮೇಲ್ಸ್ತರದಲ್ಲಿ ಗುರ್ತಿಸಿಕೊಳ್ಳಬೇಕೆಂಬ ಹಂಬಲದಲ್ಲಿ  ಮಾಡುತ್ತಿದ್ದ ಶೋಕಿಗಳಿಗೆಲ್ಲ ಕಡಿವಾಣ ಬಿದ್ದಿದೆ.  ಅವರ ಖರ್ಚುಗಳಲ್ಲಿ ಅರ್ಧದಷ್ಟು ಇಳಿಕೆಯಾಗಿರುವುದನ್ನು ಅವರು ಒಪ್ಪುತ್ತಾರೆಂದು ಭಾವಿಸುತ್ತೇನೆ.  ಇನ್ನು ಜಂಕ್‍ಫುಡ್, ಬೀದಿ ಬದಿ ಫುಡ್‍ಗಳಿಗೆ  ಕಡಿವಾಣ ಬಿದ್ದದ್ದು, ಜೇಬಿಗೆ ಹಾಯೆನಿಸುವುದಷ್ಟೇ ಅಲ್ಲ, ಆರೋಗ್ಯ  ಭಾಗ್ಯದಿಂದ  ದೀರ್ಘಕಾಲಿಕವಾಗಿಯೂ ಜೇಬಿಗೆ ಕತ್ತರಿ ಬೀಳುವುದು ತಪ್ಪುತ್ತದೆ. 

ಇನ್ನು ಸಿರಿವಂತರ ಸುಖಲೋಲುಪತೆಗೆ ಭಂಗ ಬಂದಿದೆ.  ಪಾರ್ಟಿ, ಜಿಮ್, ಮಾಲ್‍ಗಳಲ್ಲಿ ಸುತ್ತಾಟ,  ವಿದೇಶಗಳಲ್ಲಿ  ಹಾರಾಟ ಮುಂತಾದವೆಲ್ಲದಕ್ಕೂ ಕರೋನಾ ಸರಿಯಾಗಿಯೇ ಬ್ರೇಕ್ ಹಾಕಿದೆ.  ಬಡವನಿರಲಿ, ಶ್ರೀಮಂತನಿರಲಿ, ಜಾತಿ-ಮುಖ-ಮೂತಿ ನೋಡದೇ  ಎಲ್ಲರನ್ನೂ ಸ್ವಾಹಾ ಎಂದು ಆಪೋಶನ ತೆಗೆದುಕೊಳ್ಳುತ್ತಿರುವುದರಿಂದ, ಶ್ರೀಮಂತರನ್ನು-- ದುಡ್ಡಿರುವುದರಿಂದ ತಾವು ಏನು ಬೇಕಾದರೂ ಮಾಡಬಲ್ಲೆವು-- ಅನ್ನುವ ಅಹಂಕಾರದಿಂದೀಚೆಗೆ ಎಳೆದು ಹಾಕಿದೆ, ಕರೋನಾ.

                ಜಗತ್ತಿನಲ್ಲಿ  ಏನೇ ಸಂಭವಿಸಿದರೂ, ಅದರ ಮೊದಲ ಪೆಟ್ಟು ಬಡವನ ಮೇಲೆ  ಎಂದಂತೆ, ಈ ಕರೋನಾದಿಂದ ಬಡವರ ಜೀವನ ಹರಿದು ಚಿಂದಿಯಾಗಿ, ಮೂರಾಬಟ್ಟೆ ಆಗಿರುವುದಂತೂ ನಿಜ.  ಸರ್ಕಾರದ ಲಾಕ್‍ಡೌನ್‍ನಂತಹ ಕ್ರಮಗಳಿಂದ  ಇವರಿಗೆ ಒಪ್ಪಿತ್ತಿನ ಕೂಳಿಗೂ  ತತ್ವಾರವಾಯ್ತು.  ಕೆಲ ಸಂಘ ಸಂಸ್ಥೆಗಳಿಂದ ಇವರಿಗೆ ಉಚಿತ ಊಟದ ವ್ಯವಸ್ಥೆಯಾದರೂ, ಆ ವ್ಯವಸ್ಥೆ  ಎಲ್ಲರನ್ನೂ ತಲುಪಲಿಲ್ಲ/ತಲುಪಲಾಗದು ಎಂಬುದೂ ಕಟು ಸತ್ಯ.  ಇದರಿಂದ ನಗರಗಳಲ್ಲಿ  ತಮ್ಮ ಬದುಕನ್ನು ಹುಡುಕ ಬಂದಿದ್ದ ಜನರು, ಮರಳಿ ತಮ್ಮೂರಿಗೇ ತೆರಳುವಂತೆ ಪ್ರೇರೇಪಿಸಿತು.  `ಕೆಟ್ಟು ಪಟ್ಟಣ ಸೇರು' ಅನ್ನುವುದು ಇದಕ್ಕೇ ಇರಬೇಕು.  ಕರೋನಾದಿಂದ  ಬಡವರು ಗ್ರಾಮಕ್ಕೆ ಮರು ವಲಸೆಯಾಗುವಂತಾಗಿದೆ. 

ಆಹಾರದ ಆಯ್ಕೆ ಇರುವ ಜನಗಳಲ್ಲಿ, ಕರೋನಾದಿಂದ ಆಹಾರ ಶೈಲಿ ಬದಲಾಗುತ್ತಿರುವುದಂತೂ ದಿಟ.  (ಇಲ್ಲಿ, ಬಡವರ  ಬಗ್ಗೆ ಬರೆಯಲಾರೆ – ಆಹಾರದ ಲಭ್ಯತೆಯೇ ಮುಖ್ಯವಾಗಿರುವಾಗ, ಅವರಿಗೆ ಆಯ್ಕೆ ಎಲ್ಲಿದ್ದೀತು)   ಕರೋನಾ ಭಯ ಅವರಲ್ಲಿ ಆರೋಗ್ಯ ಪ್ರಜ್ಞೆಯನ್ನು  ಬಡಿದೆಬ್ಬಿಸಿದೆ.  ಜಂಕ್‍ಫುಡ್‍ನಿಂದ ಕ್ರಮೇಣ ದೂರ ಸರಿಯುತ್ತಿದ್ದಾರೆ. ಅವರಿಗೆ  ರೋಗ ನಿರೋಧ ಕ ಶಕ್ತಿಯ ಅವಶ್ಯಕತೆಯ ಪರಿಚಯವುಂಟಾಗಿದೆ.  ಆರೋಗ್ಯಯುತ ಪೌಷ್ಠಿಕ ಆಹಾರದೆಡೆಗೆ ಎಲ್ಲರ ಗಮನ ನೆಟ್ಟಿದೆ.

                ವೀಕೆಂಡ್ ಜೀವನದ ಸಾಫ್ಟ್‍ವೇರ್ ಮಂದಿಯ  ವೀಕೆಂಡ್ ಜೀವನ ಶೈಲಿಯೂ ಒರೆಗೆ ಹಚ್ಚಲ್ಪಟ್ಟಿದೆ.  ದುಂಬಿಗಳಂತೆ  ಗುಂಪು ಪ್ರಯಾಣ ಮಾಡಿ ಹೋಂ ಸ್ಟೇದುಂಬಿ ಮನದಣಿಯ ವಿಹರಿಸುತ್ತಿದ್ದವರಿಗೂ ಕಡಿವಾಣ ಬಿದ್ದಿದೆ.  ತನ್ಮೂಲಕ  ಅನಧಿಕೃತ ಹೋಂ ಸ್ಟೇಗಳಿಗೂ ಕಡಿವಾಣ ಬಿದ್ದಿದೆ.  ಕಳೆದ ಎರಡು ವರ್ಷಗಳಲ್ಲಿ ನಮ್ಮ  ರಾಜ್ಯದ ಮುಖ್ಯ ಪ್ರವಾಸಿ ತಾಣವಾದ ಮಡಿಕೇರಿ, ಭಾರೀ ವರ್ಷಧಾರೆಯಿಂದ ಅಕ್ಷರಶಃ ಕುಸಿದು ಬಿದ್ದಿತು.  ವನ್ಯರಾಶಿಯನ್ನು ಕತ್ತರಿಸಿ, ಹೋಂ ಸ್ಟೇಗಳನ್ನು ಜಾಸ್ತಿ ಮಾಡಿದ್ದೇ ಅದಕ್ಕೆ ಕಾರಣವೆಂದು ನಂತರ ತಿಳಿಯಿತು.  ಹಾಗಾಗಿ, ಕರೋನಾದಿಂದ ಹೋಂ ಸ್ಟೇ ಇತ್ಯಾದಿಗಳಿಗೆ ಕಡಿವಾಣ ಬಿದ್ದಲ್ಲಿ, ಪರಿಸರ ರಕ್ಷಣೆಯೂ ಆದೀತು.

                ಕರೋನಾದಿಂದ ನಮ್ಮ ಆರ್ಥಿಕತೆಯೇ ಬುಡಮೇಲು ಆಗಿದೆಯೆಂಬ ಹುಯಿಲು  ಎಲ್ಲೆಡೆ ಕೇಳಿ ಬರುತ್ತಿದೆ.  ನಿರುದ್ಯೋಗ ಜಾಸ್ತಿಯಾಗುತ್ತಿದೆ ಹಾಗೂ ಆದಾಯ ಮೂಲಗಳಿಗೆ ಕತ್ತರಿ ಬಿದ್ದಿದೆಯೆಂಬುದು  ನಿಜವಾದರೂ, ಆರ್ಥಿಕತೆಗೆ  ಬೆಂಕಿ ಬಿದ್ದಿದೆಯೆಂಬ  ಹೇಳಿಕೆಗೆ ನನ್ನ ಸಹಮತವಿಲ್ಲ.  `ಆರ್ಥಿಕತೆ'ಯ ವ್ಯಾಖ್ಯಾನ ಯಾವ  ಆಧಾರದಲ್ಲಿ ಆಗಿದೆ ಎಂಬುದರ ಮೇಲೆ, ಅದು ಕುಸಿದಿದೆಯೋ ಇಲ್ಲವೋ ಅನ್ನುವುದು ನಿಂತಿದೆ.  Consumerism ಆಧಾರದಲ್ಲಿ ವ್ಯಾಖ್ಯಾನಿತವಾದ ನವ-ಆರ್ಥಿಕತೆಯಾದಲ್ಲಿ, ಹೌದು,  ಆರ್ಥಿಕತೆ ಕುಸಿದಿರುವುದು ಸುಸ್ಪಷ್ಟ.  ಆದರೆ, ಗಾಂಧೀ ಪ್ರಣೀತ, ಗ್ರಾಮ ಕೇಂದ್ರಿತ ಹಾಗೂ ಸ್ವಾವಲಂಬನೆ ಆಧಾರಿತವಾದ ವ್ಯಾಖ್ಯಾನದಲ್ಲಿ, ಆರ್ಥಿಕ ಕುಸಿತ ಇಲ್ಲ.  ಬದಲಿಗೆ, ನಮ್ಮ ದೇಶ ನವ-ಆರ್ಥಿಕತೆಯಿಂದ ಈ ಸ್ವಾವಲಂಬೀ ಆರ್ಥಿಕತೆಯತ್ತ ಮುಖ ಮಾಡಲು  ಕಾಲ ಪರಿಪಕ್ವವಾಗಿದೆ.  ಕರೋನಾ ಕಾರಣದಿಂದ ಸ್ವಗ್ರಾಮಗಳಿಗೆ ಜನ ಮರಳಿರುವುದರಿಂದ,  ಗ್ರಾಮೋದ್ಯೋಗಕ್ಕೆ  ಹೇರಳವಾದ ಅವಕಾಶವಾಗುತ್ತದೆ.  ನಿರುದ್ಯೋಗವೂ  ಬಹಳ ಮಟ್ಟಿಗೆ  ತಪ್ಪುತ್ತದೆ.  ಗ್ರಾಮೋದ್ಯಮಕ್ಕೆ ಕುಶಲ ಕಾರ್ಮಿಕರ  ಅಗತ್ಯತೆ ಬಹಳವಿಲ್ಲದಿರುವುದೂ ಈ  ಸಂಕ್ರಮಣಕ್ಕೆ ನೀರೆರೆಯಲಿದೆ.  ಈ ಬದಲಾವಣೆಗೆ ಸರ್ಕಾರದ  ಇಚ್ಛಾಶಕ್ತಿ ಬೇಕಷ್ಟೇ.

                ಹಿಂದಿದ್ದ  ನಮ್ಮ ಆರ್ಥಿಕತೆಯಲ್ಲಿ, ಅವಶ್ಯಕತೆಗೆ ತಕ್ಕಷ್ಟು ಉತ್ಪಾದನೆಯಿರುತ್ತದೆ.  ಆದರೆ Consumerism ಆಧಾರಿತ ನವ-ಆರ್ಥಿಕತೆಯಲ್ಲಿ, ಉತ್ಪಾದನೆಯಾದಷ್ಟನ್ನು  ನಮ್ಮ ಅವಶ್ಯಕತೆ  ಎಂದು ಬಿಂಬಿಸಿ  ಬಿಕರಿ ಮಾಡಲಾಗುತ್ತೆ.  ತನ್ಮೂಲಕ  ಆರ್ಥಿಕತೆಯ ಅಭಿವೃದ್ಧಿಯ ಕುಸಿತವನ್ನು ಅಳೆಯಲಾಗುತ್ತದೆ. ಗ್ರಾಮ ಕೇಂದ್ರಿತ ಆರ್ಥಿಕತೆಯಲ್ಲಿ, ಅವಶ್ಯಕತೆಗೆ ತಕ್ಕಷ್ಟು  ಉತ್ಪಾದನೆಯಾಗದಿದ್ದಾಗ ಕುಸಿತ ಎಂದೆಣಿಸಲ್ಪಡುತ್ತದೆ.  ಆ ಲೆಕ್ಕದಲ್ಲಿ, ನಮ್ಮ  ದೇಶದಲ್ಲಿ ಅವಶ್ಯಕತೆಗೆ ತಕ್ಕಷ್ಟು  ಉತ್ಪಾದನೆ ಇದೆ.  ಈಗ ಹೇಳಿ,  ನಮ್ಮ ಆರ್ಥಿಕತೆ ಕುಸಿದಿದೆಯೆನ್ನುವುದು ಸುಖಾ ಸುಮ್ಮನೆ  ಸುಳ್ಳು ಹುಯಿಲು ಎಂದು ನಾನಂದಿದ್ದು  ದಿಟ ತಾನೇ?

                ಗ್ರಾಮ ಕೇಂದ್ರಿತ  ಆರ್ಥಿಕತೆಗೆ ಬುನಾದಿ, ಸನಾತನ ಕಾಲದಿಂದ ನಮ್ಮಲ್ಲಿರುವ ನಮ್ಮ ತತ್ತ್ವಶಾಸ್ತ್ರ  ಚಿಂತನೆಗಳು-  `ಹಾಸಿಗೆ ಇದ್ದಷ್ಟು ಕಾಲು ಚಾಚು' ‘ಮನಸಿ ತು ಪರಿತುಷ್ಟೇ ಕೋs ರ್ಥವಾನ್ ಕೋ ದರಿದ್ರಃ'  ಎಂಬ ಸುಭಾಷಿತಗಳ ತಳಹದಿ.  ತೃಪ್ತಿಗೂ  ಮೀರಿದ ಮಾರುಕಟ್ಟೆ ಸೃಷ್ಟಿ, Consumerism ಆಧಾರ ಸ್ತಂಭ. ಕರೋನಾ, ಮಾರುಕಟ್ಟೆ-ಕೇಂದ್ರಿತ  ಚಿಂತನೆಯಿಂದ ಜನರನ್ನು ಆವಶ್ಯಕತೆ-ಕೇಂದ್ರಿತ  ಚಿಂತನೆಯತ್ತ ಹೊರಳಿಸಿರುವುದು ನನ್ನ ಪಾಲಿಗಂತೂ ಸ್ತುತ್ಯರ್ಹ.

                ಜಗತ್ತಿನ  ಆರ್ಥಿಕತೆಯ ಚಕ್ರವನ್ನು ಪಂಕ್ಚರ್ ಮಾಡಿದ್ದು ಈ ಕರೋನಾ ವೈರಸ್.  ಈ ವೈರಸ್ಸಿನ  ಜನಕನಾಗಿದ್ದರಿಂದಲೇ ಚೀನಾ ಎಲ್ಲ ದೇಶಗಳ ವೈರತ್ವವನ್ನು ಕಟ್ಟಿಕೊಳ್ಳಬೇಕಾಯ್ತು.  ಜಗತ್ತಿನ  ಗಮನವನ್ನು  ಇದರಿಂದ ಬೇರೆಡೆ ಸೆಳೆಯಲು, ಚೈನಾ ನಮ್ಮೊಂದಿಗೆ ಕಾಲು ಕೆರೆದು ಯುದ್ಧೋನ್ಮಾದ ಸ್ಥಿತಿಯಲ್ಲಿ ಬಂದಿದೆ.  ಈ ಎರಡೂ  ಕಾರಣಗಳಿಂದ ನಾವು ಚೀನಾ  ಮೇಲಿನ  ಅವಲಂಬನೆಯನ್ನು  ಒಟ್ಟಾರೆ ನಿಲ್ಲಿಸಬೇಕಿದೆ.  ಕಡಿಮೆ ಬೆಲೆಯಲ್ಲಿ ದೊರಕುತ್ತದೆಯೆಂಬ ಕಾರಣದಿಂದಾಗಿ,  ನಮ್ಮ ಒಟ್ಟಾರೆ  ಆಮದಿನಲ್ಲಿ  ಚೀನಾ ಪಾಲು ಬಹಳಷ್ಟಿದ್ದು, ಚೀನಾ ಮೇಲಿನ  ನಮ್ಮ ದೇಶದ ಅವಲಂಬನೆ ಜಾಸ್ತಿ ಆಗಿದ್ದಿತು.  ಇಲ್ಲವಾದಲ್ಲಿ, ಭಾರತದಲ್ಲಿ  ಗಲ್ಲಿಗಲ್ಲಿಗಳಲ್ಲಿಯೂ `ಏನೇ ಖರೀದಿಸಿದರೂ ರೂ.20/-' ಅನ್ನೋ ಚೀನಾಬಜಾರ್‍ಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿದ್ದವೇ? ಕರೋನೋತ್ತರದ ಈ ಕಾಲದಲ್ಲಿ, ನಮಗೀಗ ಚೀನಾ ಮೇಲಣ ಅವಲಂಬನೆಯನ್ನು ಕಿತ್ತೊಗೆಯುವ ಸದವಕಾಶ ಕೂಡಿ ಬಂದಿದೆ.   ಜನರ ಹಾಗೂ ಸರ್ಕಾರದ  ಇಚ್ಛಾಶಕ್ತಿಯಿದ್ದಲ್ಲಿ ಇದು ಕೈಗೂಡುವುದು ಅಸಾಧ್ಯವೇನಲ್ಲ.  ಒಂದಿಷ್ಟು ಚೀನಾ ಆ್ಯಪ್‍ಗಳನ್ನು ಹಾಗೂ  ಜಾಗತಿಕ ಟೆಂಡರ್‍ಗಳಲ್ಲಿ  ಚೀನಾ ಕಂಪನಿಗಳನ್ನು ದೂರೀಕರಿಸಿ, ಸರ್ಕಾರವಂತೂ ತನ್ನ ದಿಟ್ಟತನ ಪ್ರದರ್ಶಿಸಿದೆ.

                ಇನ್ನು ಉಳಿದಿರುವುದು ಜನರ ಇಚ್ಛಾಶಕ್ತಿ ಮಾತ್ರ.  ಕಡಿಮೆ ಬೆಲೆಯೆಂಬ ಏಕೈಕ ಕಾರಣಕ್ಕಾಗಿ ನಾವು ಚೀನಾ ಉತ್ಪನ್ನಗಳನ್ನು ಖರೀದಿಸುವುದರಿಂದ, ಸಣ್ಣ ಆಟಿಕೆಗಳಿಂದ ಹಿಡಿದು, ಸ್ಮಾರ್ಟ್‍ಫೋನ್‍ಗಳ  ತನಕ, ನಮ್ಮ ದೇಶದಲ್ಲಿ ಚೀನಾ ಕಂಪನಿಗಳದ್ದೇ ಮೈಲುಗೈ.  ಇದಕ್ಕೆ ಕಡಿವಾಣ ಬಿದ್ದಲ್ಲಿ, ನಮ್ಮ ದೇಶದ ಹೆಮ್ಮೆಯ  Make In India ಯೋಜನೆಗೂ  ಆನೆ ಬಲ ಬರುತ್ತದೆ.  ನಮ್ಮ ದೇಶ ಸ್ವಾವಲಂಬನೆಯತ್ತ ಸರಿಯದೊಡಗುತ್ತದೆ.  ಸ್ವಾವಲಂಬನೆಯತ್ತ  ನಮ್ಮ ಚಿತ್ತಕ್ಕೆ ಯಃಕಶ್ಚಿತ್  ಕರೋನಾ ಕಾರಣವಾಗಬೇಕಾಯ್ತೇ?!

                ತೆರಿಗೆ ಭಯದಿಂದ ತಮ್ಮ ಆದಾಯದ ಬಗ್ಗೆ ಸರ್ಕಾರದ  ಕಣ್ಣಿಗೆ  ಮುಂಚಿಂದಲೂ ಧೂಳು ಎರಚುತ್ತಲೇ ಬಂದಿರುವ, ನಮ್ಮ ದೇಶದ ಜನತೆಗೆ, ಈ ಕಾರಣಕ್ಕಾಗಿಯೆ ನಗದು  ವ್ಯವಹಾರದಲ್ಲೇ  ಮೋಹ ಜಾಸ್ತಿ.  ಸರ್ಕಾರ `ನೋಟು ಅಮಾನ್ಯೀಕರಣ'ದಂತಹ ಕ್ರಮ ಕೈಗೊಂಡಾಗಲೂ, ಸ್ವಲ್ಪ  ಮಟ್ಟಿನ ನಗದು ವ್ಯವಹಾರದಲ್ಲಿ ವ್ಯತ್ಯಯ  ಉಂಟಾಯಿತೇ ಶಿವಾಯಿ,  ಮತ್ತೆ ನಾಯಿ ಬಾಲ ಡೊಂಕು ಎನ್ನುವಂತೆ, ನಗದು ವ್ಯವಹಾರಗಳಲ್ಲಿ  ಏರಿಕೆ ಉಂಟಾಯ್ತು.  ಆದರೀಗ,  ಕರೋನೋತ್ತರ ಕಾಲದಲ್ಲಿ, ನಗದು-ನೋಟುಗಳಿಂದಲೂ ವೈರಸ್ ಹರಡಬಹುದೆಂಬ ಭಯ ಜನರಲ್ಲಿ  ಬಂದಿರುವುದರಿಂದ, ಸಾಕಷ್ಟು ಜನ ನಗದಿನಿಂದ ಡಿಜಿಟಲ್  ವ್ಯವಹಾರಗಳಿಗೆ ತೆರೆದುಕೊಂಡಿದ್ದಾರೆ.  ಇದೂ ಕರೋನಾದಿಂದಾದ ಲಾಭವೇ! ಜನರ ಈ ಡಿಜಿಟಲ್ ಅಭ್ಯಾಸ  ತಾತ್ಕಾಲಿಕವಾಗಿರದೇ, ಖಾಯಂ ಆದಲ್ಲಿ, ದೀರ್ಘಕಾಲದಲ್ಲಿ ದೇಶಕ್ಕೆ ಬಹಳ ಪ್ರಯೋಜನಕಾರಿ ಆಗಲಿದೆ.

                ಕರೋನೋತ್ತರ ಕಾಲದಲ್ಲಿ, ಶಿಕ್ಷಣ ಬಡವರಿಗೆ ಮತ್ತಷ್ಟು ಗಗನ ಕುಸುಮವಾಗಿದೆ.  ಆನ್‍ಲೈನ್ ತರಗತಿಗಳು Digital Divide ಅನ್ನು ಉಂಟು ಮಾಡಿದೆ – ಉಳ್ಳವರು ಹಾಗೂ ಇಲ್ಲದವರ ನಡುವಣ ಕಂದರವನ್ನು ಮತ್ತಷ್ಟು ಹಿರಿದಾಗಿ ಹಿಗ್ಗಿಸಿದೆ.  ಕರೋನಾ  ಸೋಂಕಿನ ಭಯದಿಂದಾಗಿ,  ಆನ್‍ಲೈನ್ ತರಗತಿಗಳನ್ನು ಹೊರತುಪಡಿಸಿ, ಬೇರೆ ವಿಕಲ್ಪಗಳಿರದ ಈ ಹೊತ್ತಿನಲ್ಲಿ, ಸ್ಮಾರ್ಟ್‍ಫೋನ್ ಹೊಂದದಿರುವುದರಿಂದ, ಹೆಚ್ಚಿನ ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೆಲ ಉತ್ಸಾಹೀ ಶಿಕ್ಷಕರು ಬಡ ಮಕ್ಕಳ ಮನೆಗೇ ತೆರಳಿ ಪಾಠ ಹೇಳುತ್ತಿರುವುದು ಖುಷಿ ಹಾಗೂ ಹೆಮ್ಮೆಯ ವಿಚಾರವಾದರೂ, ಈ ಸಂಖ್ಯೆ ಬಹಳ ಕಡಿಮೆಯೆನ್ನುವುದು  ಕಟುಸತ್ಯ ಯಾ ಕಹಿ ಸತ್ಯ.

                ಶಿಕ್ಷಣಕ್ಕೆ ಗ್ರಹಣ ಬಡಿದಿರುವುದಕ್ಕೆ, ಉಳ್ಳವರ ಹಾಗೂ ಇಲ್ಲದವರ ನಡುವಿನ ಕಂದರ  ಒಂದು ಕಾರಣವಾದರೆ, ಮತ್ತೊಂದೆಡೆ, ನಗರ ಹಾಗೂ ಗ್ರಾಮಗಳ ನಡುವಿನ  ಕಂದರ. ಅಂತರ್ಜಾಲ ವ್ಯವಸ್ಥೆ ನಗರದಲ್ಲಿರುವಷ್ಟು  ಉತ್ತಮವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇಲ್ಲ.  ಹಲವೆಡೆ ಇಲ್ಲವೇ ಇಲ್ಲ.  signalಗಾಗಿ ಮರ ಏರಿ ಕುಳಿತ ಶಿಕ್ಷಕರು ಯಾ ವಿದ್ಯಾರ್ಥಿಗಳ ಬಗೆಗಿನ ಸುದ್ದಿಗಳನ್ನು ನಾವು ಕೇಳಬೇಕಾದ್ದು ಇದೇ ಕಾರಣಕ್ಕೆ. ಮುಂಚೆಯೇ ಹಿರಿದಾಗಿದ್ದ ಈ ನಗರ-ಗ್ರಾಮಗಳ ನಡುವಿನ ಕಂದಕ, ಕರೋನಾದಿಂದಾಗಿ  ಮತ್ತಷ್ಟು ದೊಡ್ಡದಾಗಿದೆ.  ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತಷ್ಟು ದೂರವಾಗಿದೆ!

                ಕರೋನೋತ್ತರದಲ್ಲಿ, ನಗರಗಳಲ್ಲಿ  ಜನರ ದುಡಿಮೆಯ ಶೈಲಿ -  ಮುಖ್ಯವಾಗಿ software ಕಂಪನಿಗಳಲ್ಲಿ, ತಂತ್ರಜ್ಞಾನಾಧಾರಿತ  ಉದ್ದಿಮೆಗಳಲ್ಲಿ - ಬದಲಾಗಿದೆ.  Work From Home culture – ‘ಮನೆಯಿಂದಲೇ ದುಡಿಮೆ’ ಜಾರಿಗೆ ಬಂದಿದೆ.  Workflow ನಿಯಂತ್ರಣ ಈ ವ್ಯವಸ್ಥೆಯಲ್ಲಿ ಸ್ವಲ್ಪ ಕಷ್ಟ ಅನ್ನೋದನ್ನ ಬಿಟ್ಟರೆ, ಕಂಪನಿಗಳು ಈ ಹೊಸ ವ್ಯವಸ್ಥೆಯಿಂದ, ಸಾಕಷ್ಟು ವೆಚ್ಚಗಳಿಗೆ ಕಡಿವಾಣ ಹಾಕಿ ಲಾಭಗಳಿಸುತ್ತಿವೆ.  ಉದ್ಯೋಗಿಗಳ ಓಡಾಟಕ್ಕಾಗಿ ಸಾರಿಗೆ ವ್ಯವಸ್ಥೆ, ಕ್ಯಾಂಟೀನ್ ವ್ಯವಸ್ಥೆ ಮತ್ತಿತರ ಸೌಲಭ್ಯಗಳನ್ನು ಕಂಪನಿಗಳು ಉಳಿಸುತ್ತಿವೆ, ಮತ್ತು ತನ್ಮೂಲಕ  ಲಾಭ ಎಣಿಸುತ್ತಿವೆ.  ಇದರಿಂದಾಗಿ, ಬೆಂಗಳೂರು ನಗರದಲ್ಲಂತೂ traffic jam  ಹೆಚ್ಚಿನ ಅಂಶದಲ್ಲಿ ನಿಯಂತ್ರಣಕ್ಕೆ  ಬಂತೆಂಬುದಂತೂ ನಿಜ!

                ಕರೋನೋತ್ತರ ಕಾಲದ ಮತ್ತೊಂದು ಮಹತ್ವದ ಬದಲಾವಣೆಯೆಂದರೆ, ಜನರು ನಮ್ಮ ದೇಶೀಯವಾದ ಆಯುರ್ವೇದದತ್ತ  ಮುಖ ಮಾಡಿರುವುದು.  ಈ ಹಿಂದೆ, ಇದೇ ಜನರು  ಆಯುರ್ವೇದವನ್ನು `ಹಿತ್ತಲಗಿಡ ಮದ್ದಲ್ಲ' ಎಂದು ಬದಿಗೆ ಸರಿಸಿ ಅಲೋಪತಿಯನ್ನು ಗಟ್ಟಿಯಾಗಿ ತಬ್ಬಿದ್ದರು.  ಈಗ, ಅವರಿಗೆ ಕರೋನಾದಿಂದ ರೋಗ ನಿರೋಧಕ ಶಕ್ತಿಯ ಬಗ್ಗೆ ಅರಿವುಂಟಾಗಿದೆ.  Prevention is better than Cure ಅಂತ ಜನಗಳಿಗೆ  ತಿಳಿದಿದೆ.  (Cure  ಅಂತೂ ಇದುವರೆಗೆ ಸಿಕ್ಕಿಯೇ ಇಲ್ವೇ!) ಕಷಾಯ, ಇತ್ಯಾದಿ ಮನೆ ಮದ್ದಿನ  ಬಗ್ಗೆ ಜನರು  ಈಗ ಅವಲಂಬಿತರಾಗತೊಡಗಿದ್ದಾರೆ. ಒಟ್ಟಿನಲ್ಲಿ ಸಂಪೂರ್ಣ ಸ್ವದೇಶಿಯಾಗುವ ಸುವರ್ಣಾವಕಾಶವೊಂದನ್ನು ಕರೋನಾ ನಮ್ಮ ಮುಂದಿಟ್ಟಿದೆ.  ಎಷ್ಟರ ಮಟ್ಟಿಗೆ  ನಾವು ಅದರ ಸದುಪಯೋಗ ಪಡಿಸಿಕೊಳ್ಳುತ್ತೇವೆಂಬುದನ್ನು ಕಾಲವೇ ನಿರ್ಧರಿಸಬೇಕು.

                ನಾವು ಆಯುರ್ವೇದದತ್ತ ಮುಖ ಮಾಡಿರುವ ಒಳ್ಳೆಯ ಬೆಳವಣಿಗೆಯ ನಡುವೆಯೇ, whattsapp ವೈದ್ಯವೆಂಬ `ಮಹಾಮಾರಿ' ನಮ್ಮ ಹೆಗಲೇರಿದೆ.  ಈ ವಾಟ್ಸಾಪಿನಲ್ಲಂತೂ ಇರೋ ಬರೋರೆಲ್ಲ ಆಯುರ್ವೇದ ವೈದ್ಯರೇ! ಪ್ರತಿಯೊಬ್ಬರೂ ಇದು ತಮ್ಮ ಸ್ನೇಹಿತನಿಂದ ಬಂದಿದ್ದರಿಂದ `ಸಂಪೂರ್ಣ ಸತ್ಯ'ವೆನ್ನುವ ನಂಬಿಕೆ ಮತ್ತು ಅದೇ ನಂಬಿಕೆಯಿಂದ ಉಳಿದ ಸ್ನೇಹಿತರಿಗೂ ಅವರ `ಒಳಿತಿ'ಗಾಗಿ  ಮೆಸೇಜ್ forward ಮಾಡುತ್ತಾರೆ! ಈ ಬೇತಾಳವನ್ನು ಸರಿಸದಿದ್ದಲ್ಲಿ ನಮ್ಮ ತಲೆ, ವಿಕ್ರಮನ ತಲೆಯಂತೆ, ಸಹಸ್ರ ಚೂರುಗಳಾಗುವುದರಲ್ಲಿ ಸಂಶಯವಿಲ್ಲ!

                ಒಟ್ಟಾರೆ, ಕೊರೋನೋತ್ತರ ಕಾಲದಲ್ಲಿ, ನಮ್ಮ ದೇಶದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ.  ಕೆಲವು ಒಳ್ಳೆಯವು, ಕೆಲವು ಕೆಟ್ಟವು ಮತ್ತು ಕೆಲವು ಒಳ್ಳೆಯ ಅವಕಾಶಗಳು. ಸರಿಯಾದ ನಡೆಯ ಆಯ್ಕೆ ನಮ್ಮಲ್ಲೇ ಇದೆ – ಮನಸ್ಸು ಮಾಡಬೇಕಷ್ಟೇ.

                ಕರೋನಾಕ್ಕೆ ಮದ್ದಿನ್ನೂ ಸಿಕ್ಕಿಲ್ಲವಾದ್ದರಿಂದ,  ನಮ್ಮ ಜೀವನ ಶೈಲಿಯಲ್ಲಿ SMS ಅನ್ನಂತೂ ಕಡ್ಡಾಯವಾಗಿ ಪಾಲಿಸಬೇಕಾದ ಅನಿವಾರ್ಯತೆ ನಮಗಿದೆ.  SMS ಭಾಷೆಯಲ್ಲಿ SMS ಅಂದರೆ, Sanitizer, Mask, Social distancing.  ಕರೋನೋತ್ತರ ಕಾಲದಲ್ಲಿ ನಾವೆಷ್ಟು  ಬದಲಾಗಿದ್ದೀವೆಂದು ಈಗಲಾದರೂ  ತಿಳಿಯಿತಲ್ಲ!

--------------