ಕರ್ನಲ್‌ನಿಗೆ ಯಾರೂ ಬರೆಯುವುದೇ ಇಲ್ಲ
ನೊಬೆಲ್ ಪ್ರಶಸ್ತಿ ಪುರಸ್ಕೃತ ಮಾರ್ಕ್ವೆಜ್‌ನ ಕಾದಂಬರಿಗಳಲ್ಲೊಂದಾದ ಇದನ್ನು ಕನ್ನಡಕ್ಕೆ ತಂದವರು ಹೆಸರಾಂತ ಸಾಹಿತಿ ಶ್ರೀನಿವಾಸ ವೈದ್ಯ. ಅವರು “ಓದುಗರೊಡನೆ" ಹಂಚಿಕೊಂಡ ಕೆಲವು ಮಾತುಗಳು: “ಇದು ನಾನು ತುಂಬ ಮೆಚ್ಚಿದ ಕೃತಿ. ಈ ಕೃತಿಯನ್ನು ಕನ್ನಡಿಗರಿಗೆ ತಲುಪಿಸಬೇಕೆನ್ನುವ ಹುಮ್ಮಸ್ಸಿಗೆ ಬಿದ್ದು ಇದನ್ನು ಅನುವಾದಿಸುವ ಹುಚ್ಚು ಸಾಹಸಕ್ಕೆ ಕೈಹಾಕಿದ್ದೇನೆ. ಇಂತಹ ಸಾಹಸಕ್ಕೆ ತೊಡಗುವ ಮುನ್ನ ಎಷ್ಟೊಂದು ಕಠಿಣ ಸವಾಲುಗಳನ್ನು ಎದುರಿಸಬೇಕಾದೀತೆಂಬ ಕಿಂಚಿತ್ ಕಲ್ಪನೆಯೂ ನನಗಿರಲಿಲ್ಲ…. ಮೂಲ ಸ್ಪ್ಯಾನಿಶ್ ಭಾಷೆಯಲ್ಲಿದ್ದ ಈ ಕಾದಂಬರಿಯನ್ನು ಜೆ. ಎನ್. ಬರ್ನ್‌ಸ್ಟಿನ್ ಎಂಬವರು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ನಾನು ಕನ್ನಡೀಕರಿಸಲು ಅವಲಂಬಿಸಿದ್ದು ಈ ಇಂಗ್ಲಿಷ್ ಅನುವಾದವನ್ನು. …. ಸ್ಪ್ಯಾನಿಶ್ ಜನರ ಜೀವನ ಕ್ರಮ, ನಡೆ-ನುಡಿ, ನಂಬುಗೆ ಆಚರಣೆಗಳ ಬಗ್ಗೆ, ನುಡಿಗಟ್ಟುಗಳ ಬಗ್ಗೆ ತಿಳಿಯದೇ ಇದ್ದಾಗ, ಅವುಗಳ ಯಥಾರ್ಥ ರೂಪಗಳು ನಮ್ಮಲ್ಲಿ ಇರದೇ ಇದ್ದಾಗ ಅನುವಾದಕ ಅಷ್ಟಿಷ್ಟು ಸ್ವಾತಂತ್ರ್ಯ ವಹಿಸಬೇಕಾಗುತ್ತದೆ. …"
ಇಪ್ಪತ್ತನೆಯ ಶತಮಾನದ ಮಹಾನ್ ಲೇಖಕರಲ್ಲಿ ಒಬ್ಬನಾದ ಕಾದಂಬರಿಕಾರ, ಕತೆಗಾರ ಹಾಗು ಪತ್ರಕರ್ತ ಕೊಲಂಬಿಯಾದ ಮಾರ್ಕ್ವೆಜ್ ಜನಿಸಿದ್ದು 6 ಮಾರ್ಚ್ 1927ರಂದು. ಇಡೀ ಲ್ಯಾಟಿನ್ ಅಮೇರಿಕದಲ್ಲಿ ಈತ ಗಾಬೋ ಎಂದೇ ಪರಿಚಿತ.
ಮಾರ್ಕ್ವೆಜ್ 1956-57ರಲ್ಲಿ ಬರೆದ, ಇಂಗ್ಲಿಷಿನಲ್ಲಿ 1968ರಲ್ಲಿ ಪ್ರಕಟವಾದ ಇದರ ಬಗ್ಗೆ "ಪ್ರಸ್ತಾವನೆ"ಯಲ್ಲಿ ಓ. ಎಲ್. ನಾಗಭೂಷಣಸ್ವಾಮಿ ಹೀಗೆ ಬರೆಯುತ್ತಾರೆ, “.... ಹೆಸರಿಲ್ಲದ ಊರಿನ ಹೆಸರಿಲ್ಲದ ವ್ಯಕ್ತಿಯ, ಅಂದರೆ ಮನುಷ್ಯನ ಕಥೆ ಎಂದು ಓದುತ್ತಿರುವಾಗಲೇ ಇದು ರಚಿತವಾದದ್ದು 1948-58ರ ಅವಧಿಯಲ್ಲಿ ಕೊಲಂಬಿಯಾದಲ್ಲಿ ನಡೆದ, “ಲವಯಲೆನ್ಸಿಯಾ" ಎಂದೇ ಪ್ರಸಿದ್ಧವಾದ, ಅಂತರ್ಯುದ್ಧದ ಹಿಂಸೆಗಳ ಕರಿನೆರಳಲ್ಲಿ ನಡೆಯುವ ಕಥೆ ಅನ್ನುವುದು ಕೂಡ ಗಮನಕ್ಕೆ ಬರುತ್ತದೆ. ಕೊಲಂಬಿಯನ್ ಕನ್ಸರ್ವೆಟಿವ್ ಪಕ್ಷ ಮತ್ತು ಕೊಲಂಬಿಯನ್ ಲಿಬರಲ್ ಪಕ್ಷಗಳ ನಡುವೆ ನಡೆದ ಸಂಘರ್ಷ ಹಳ್ಳಿಗಳಿಗೆ ಹಬ್ಬಿ ಸುಮಾರು ಎರಡು ಲಕ್ಷ ಜನ ಪ್ರಾಣ ತೆತ್ತದ್ದು ಇತಿಹಾಸ. ಅದು ಈ ಕಾದಂಬರಿಯಲ್ಲಿ ಸೆನ್ಸಾರ್-ಶಿಪ್ ಆಗಿ, ಕರ್ಫ್ಯೂ ಆಗಿ, ಭೂಗತ ಪತ್ರಿಕೆಗಳಾಗಿ, ಮಗನ ಸಾವಿನ ಕಾರಣವಾಗಿ, ಹೆಸರಿಲ್ಲದ ಕರ್ನಲ್‌ನ ಬದುಕಿನ ವಾಸ್ತವದಲ್ಲಿ ಹೆಣಿಗೆಗೊಂಡ ನೂಲುಗಳಾಗಿ ಕಾಣಿಸಿಕೊಳ್ಳುತ್ತವೆ; ಕರ್ನಲ್‌ನ ಬದುಕಿನ ದಾರುಣತೆಯ ಮೂಲಬೇರು ಅನ್ನಿಸಿಬಿಡುತ್ತದೆ. ಇದು ಸಾರ್ವಕಾಲಿಕ ಕಥೆ ಆಗಿರುವುದಕ್ಕೆ ಸ್ಥಳೀಯ ಚಾರಿತ್ರಿಕ ವಾಸ್ತವದಲ್ಲಿ ಬೇರು ಬಿಟ್ಟಿರುವುದೇ ಕಾರಣ. ….
…. ಈ ನೀಳ್ಗತೆಯ “ಕಥೆ" ಒಂದು ವಾಕ್ಯದಲ್ಲಿ ಹೇಳಬಹುದಾದದ್ದು. ಮಾರ್ಷಲ್ ಲಾ ಹೇರಿರುವ ಪುಟ್ಟ ಹಳ್ಳಿಯೊಂದರಲ್ಲಿ, ಮಗನನ್ನು ಕಳೆದುಕೊಂಡ ಇಳಿವಯಸ್ಸಿನ ಯುದ್ಧವೀರ ಕರ್ನಲ್ (ಮತ್ತು ಅವನ ಅಸ್ತಮಾ ಪೀಡಿತ ಹೆಂಡತಿ) ಸರ್ಕಾರದಿಂದ ಬರಬೇಕಾದ ಪಿಂಚಣಿಯ ಹಣಕ್ಕಾಗಿ ಅರುವತ್ತು ವರ್ಷಗಳಿಂದ ಕಾಯುತ್ತ ಇದ್ದು, ಮುಂದೆ ದಾರಿ ಕಾಣದ ಕ್ಷಣದಲ್ಲಿ ಬೈಗುಳ ಮಾತು ಹೇಳುವುದರೊಂದಿಗೆ ಮುಗಿಯುತ್ತದೆ.
… ಕರ್ನಲ್‌ನ ಬದುಕಿನ ಮೂರು ತಿಂಗಳ ಅವಧಿಯನ್ನು ಚಿತ್ರಿಸುವ ಕಥನ ಅನ್ಯಾಯ ತುಂಬಿದ ಅಸಂಗತ ಲೋಕದಲ್ಲಿ ಮನುಷ್ಯ ಮನಸ್ಸು ಹೇಗೆ ಇರುತ್ತದೆ ಅನ್ನುವುದನ್ನು ಚಿತ್ರಿಸುತ್ತದೆ; ಇಪ್ಪತ್ತನೆಯ ಶತಮಾನದ ಲ್ಯಾಟಿನ್ ಅಮೆರಿಕದ ಚರಿತ್ರೆಯ ಮೇಲಿನ ವ್ಯಾಖ್ಯಾನವಾಗುತ್ತದೆ; ಒಳ್ಳೆಯ ಮನುಷ್ಯನೊಬ್ಬ ಪಾಡು ಪಡುತ್ತ ಬದುಕುವಂತಾಗುವುದು ಯಾಕೆ, ಭ್ರಷ್ಟರು ಸುಖವಾಗಿರುವುದು ಯಾಕೆ ಅನ್ನುವ ಚಿರಂತನ ಪ್ರಶ್ನೆಯನ್ನು ಎತ್ತುತ್ತದೆ; ಬದುಕನ್ನು ಕುರಿತು ಬಗೆಬಗೆಯ ದೃಷ್ಟಿಗಳನ್ನು ಮಂಡಿಸುತ್ತ ತಾತ್ವಿಕವೂ ಆಗುತ್ತದೆ. ವಾಸ್ತವ ವರ್ಣನೆ, ಹಿನ್ನೋಟದ ನಿರೂಪಣೆ, ಸಮೃದ್ಧ ಸಾಂಕೇತಿಕತೆಗಳು ಬೆರೆತುಕೊಂಡು, ಕಾವ್ಯದ ತಂತ್ರಗಳನ್ನು ಬಳಸಿಕೊಳ್ಳುತ್ತ “ಕಥೆ"ಗೆ ಹಲವು ಪದರುಗಳು ಮೂಡುತ್ತವೆ…."
“ಸಾವಿರ ದಿನಗಳ ಯುದ್ಧ"ದಲ್ಲಿ ಭಾಗವಹಿಸಿದ್ದ ತನ್ನ ತಾತ ನಿಕೊಲಸ್ ಮಾರ್ಕ್ವೆಜ್ ಮೆಜಿಯಾನ ಅನುಭವಗಳೇ ನೀಳ್ಗತೆಯ ಕರ್ನಲ್‌ನ ಪಾತ್ರಕ್ಕೆ ಪ್ರೇರಣೆ" ಎಂದು ಮಾರ್ಕ್ವೆಜ್ ಅನೇಕ ಬಾರಿ ಹೇಳಿಕೊಂಡಿದ್ದಾನೆ. 1999ರಲ್ಲಿ ಈ ನೀಳ್ಗತೆ ಆರ್ಟುರೋ ರಿಪ್‌ಸ್ಟೀನ್‌ನ ನಿರ್ದೇಶನದಲ್ಲಿ ಚಲನಚಿತ್ರವಾಗಿದೆ.
ಬೆನ್ನುಡಿಯಲ್ಲಿ ವಿವೇಕ ಶಾನಭಾಗರು ಇದನ್ನು ಪರಿಚಯಿಸಿದ ಪರಿ: "ಸತ್ತೆಯ ನಿರಂತರ ಕ್ರೌರ್ಯದ ಹಿನ್ನೆಲೆಯಲ್ಲಿ ವೃದ್ಧ ದಂಪತಿಗಳ ಹತಾಶ ಜೀವನವನ್ನು ಹಲವು ಎಳೆಗಳಲ್ಲಿ ಬಿಚ್ಚಿಡುವ ಈ ಕಾದಂಬರಿ ಮಾರ್ಕ್ವೆಜ್‌ನ ಪ್ರಸಿದ್ಧ ಕೃತಿಗಳಲ್ಲೊಂದು. ಇಲ್ಲಿರುವುದು ಯುದ್ದಾನಂತರದಲ್ಲಿ ಬದುಕನ್ನು ಪುನಃ ಕಟ್ಟಲು ಸೆಣಸುತ್ತಿರುವ ಭಗ್ನ ಸಮಾಜ. ನಿವೃತ್ತಿವೇತನಕ್ಕಾಗಿ ಕಾಯುತ್ತಿರುವ ಕರ್ನಲ್, ಮತ್ತವನ ರೋಗಿ ಹೆಂಡತಿಯ ಸುತ್ತ ಕಟ್ಟಿದ ಕಥಾನಕದಲ್ಲಿ ಮನುಷ್ಯನ ಜೀವನವನ್ನು ಹಲವು ಹತ್ತು ಕಡೆಗಳಿಂದ ಕಾಡುವ ಭ್ರಷ್ಟತೆಯ ಕರಾಳ ಚಿತ್ರಣವಿದೆ. ಕರ್ನಲ್ ಜೋಡಿಯ ದಾಂಪತ್ಯ, ಪುತ್ರವಿಯೋಗದ ದುಃಖ, ದೈನಿಕವನ್ನು ಸಾಗಿಸಲು ಪಡಬೇಕಾದ ಕಷ್ಟಗಳ ಜೊತೆಯಲ್ಲಿ ಅವರು ಭರಿಸಬೇಕಾದ ಅಧಿಕಾರಶಾಹಿಯ ಉಪೇಕ್ಷೆ, ಕರ್ನಲ್‌ನ ಕಾಯುವಿಕೆಯಲ್ಲಿರುವ ವ್ಯರ್ಥತೆ - ಹೀಗೆ ಹಲವು ನೆಲೆಗಳಲ್ಲಿ ಒಂದು ದುಃಸ್ವಪ್ನದಂತಿರುವ ಈ ರಚನೆಯು ಹರಡಿಕೊಂಡಿದೆ.”