ಕರ್ನಲ್ ನಿಗೆ ಯಾರೂ ಬರೆಯುವುದೇ ಇಲ್ಲ

ಕರ್ನಲ್ ನಿಗೆ ಯಾರೂ ಬರೆಯುವುದೇ ಇಲ್ಲ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಕನ್ನಡಕ್ಕೆ: ಶ್ರೀನಿವಾಸ ವೈದ್ಯ
ಪ್ರಕಾಶಕರು
ಮನೋಹರ ಗ್ರಂಥಮಾಲಾ, ಧಾರವಾಡ
ಪುಸ್ತಕದ ಬೆಲೆ
ರೂ.೬೦.೦೦ ಮುದ್ರಣ: ೨೦೧೩

ನೊಬೆಲ್ ಬಹುಮಾನ ಪುರಸ್ಕೃತ ಆಂಗ್ಲ, ಸ್ಪಾನಿಷ್ ಲೇಖಕರಾದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಇವರ ‘No one writes to the Colonel’ ಎಂಬ ಕಾದಂಬರಿಯನ್ನು ಕನ್ನಡಕ್ಕೆ ತಂದವರು ಶ್ರೀನಿವಾಸ ವೈದ್ಯ ಇವರು. ಶ್ರೀನಿವಾಸ ವೈದ್ಯ ಇವರು ಸೃಜನ ಶೀಲ ಸಾಹಿತ್ಯದಲ್ಲಿ ಅಪಾರ ಹೆಸರು ಗಳಿಸಿದ್ದಾರೆ. ಬರೆದದ್ದು ಕಡಿಮೆಯಾದರೂ ಬರೆದುದನ್ನು ಗಮನಿಸಲೇ ಬೇಕಾದ ಬರಹಗಳು ಇವರು ರಚಿಸಿದ್ದಾರೆ. ಈ ಮೇಲಿನ ಆಂಗ್ಲ ಭಾಷೆಯ ಕಿರು ಕಾದಂಬರಿಯನ್ನು ಕನ್ನಡಕ್ಕೆ ತರಬೇಕೆಂಬ ತುಡಿತದಿಂದಲೇ ಸೊಗಸಾಗಿ ಅನುವಾದ ಮಾಡಿದ್ದಾರೆ. ಈ ಕೃತಿಯ ಮೂಲ ಸ್ಪಾನಿಷ್ ಆದರೂ ಅದನ್ನು ಜೆ.ಎನ್. ಬರ್ನ್ ಸ್ಟಿನ್ ಎಂಬವರು ಆಂಗ್ಲಕ್ಕೆ ಭಾಷಾಂತರಿಸಿದ್ದಾರೆ. ಈ ಕೃತಿಯಲ್ಲಿ ಸ್ಪಾನಿಷ್ ಜನರ ಜೀವನ ಕ್ರಮ, ನಡೆ-ನುಡಿ, ನಂಬುಗೆ ಆಚರಣೆಗಳ ಬಗ್ಗೆಯೂ ಲೇಖಕರು ಗಮನಿಸಿದ್ದಾರೆ. 

ಬೆನ್ನುಡಿ ಬರೆದ ಕಾದಂಬರಿಕಾರ ವಿವೇಕ್ ಶಾನಭಾಗ ಪ್ರಕಾರ ‘ವೃದ್ಧ ದಂಪತಿಗಳ ಹತಾಶ ಜೀವನವನ್ನು ಬಿಡಿಸಿ ಇಡುವ ಈ ಕಾದಂಬರಿ ಮಾರ್ಕ್ವೆಜ್ ರ ಪ್ರಸಿದ್ಧ ಕೃತಿಗಳಲ್ಲಿ ಒಂದು. ಯುದ್ಧಾನಂತರದಲ್ಲಿ ಬದುಕನ್ನು ಮತ್ತೆ ಕಟ್ಟಲು ಸೆಣೆಸುತ್ತಿರುವ ಭಗ್ನ ಸಮಾಜ, ನಿವೃತ್ತಿ ವೇತನಕ್ಕಾಗಿ ಕಾಯುತ್ತಿರುವ ಕರ್ನಲ್, ಮತ್ತವನ ರೋಗಿ ಹೆಂಡತಿಯ ಸುತ್ತ ಕಟ್ಟಿದ ಕಥಾನಕದಲ್ಲಿ ಮನುಷ್ಯನ ಜೀವನವನ್ನು ಹಲವು ಹತ್ತು ಕಡೆಗಳಿಂದ ಕಾಡುವ ಭ್ರಷ್ಟತೆಯ ಕರಾಳ ಚಿತ್ರವಿದೆ. ಕರ್ನಲ್ ಜೋಡಿಯ ದಾಂಪತ್ಯ, ಪುತ್ರ ವಿಯೋಗದ ದುಃಖ, ದೈನಂದಿನ ಜೀವನ ಸಾಗಿಸಲು ಪಡುವ ಕಷ್ಟ, ಕರ್ನಲ್ ನ ಕಾಯುವಿಕೆಯಲ್ಲಿಯ ವ್ಯರ್ಥತೆ ಇವೆಲ್ಲಾ ನೆಲೆಗಳಲ್ಲಿ ಈ ಕಾದಂಬರಿಯು ರೂಪುಗೊಂಡಿದೆ'

ಇನ್ನೊರ್ವ ಬೆನ್ನುಡಿ ಬರೆದ ಲೇಖಕ ವಸುಧೇಂದ್ರರ ಪ್ರಕಾರ ‘ಬಡತನದ ಸಂಕಷ್ಟವನ್ನು ಓದುಗರ ಅನುಕಂಪಕ್ಕೆ ತಂದೊಡ್ಡುವ ಸರಳ ಕಥಾನಕದ ದಾರಿಯನ್ನು ಬಿಟ್ಟು, ಆ ಬದುಕಿನ ತಲ್ಲಣ, ಕ್ರೌರ್ಯ, ಅಂತಃಶಕ್ತಿ, ಉತ್ಸಾಹ, ಪ್ರೀತಿ, ಘನತೆ ಎಲ್ಲವನ್ನೂ ಚೊಕ್ಕಟವಾಗಿ ನಿರೂಪಿಸುವ ಶಕ್ತಿ ಮಾರ್ಕ್ವೆಜ್ ನಂತಹ ಮೇರು ಸಾಹಿತಿಗಳಿಗೆ ಮಾತ್ರ ಸಾಧ್ಯವಾಗುವಂಥದ್ದು.’ ಈ ಕಥಾನಕ ನಮ್ಮ ದೇಶದ ಯಾವುದೇ ಯುದ್ಧ ಪೀಡಿತ, ವೃದ್ಧ ದಂಪತಿಗಳ ಮನೆ ಮನೆಗಳಲ್ಲಿ ನಡೆಯುವ ನೈಜ ಘಟನೆಗಳೇ ಆಗಿವೆ. ಶ್ರೀನಿವಾಸ ವೈದ್ಯರು ತಮ್ಮದೇ ನುಡಿಗಳಲ್ಲಿ ಕನ್ನಡ ಮನಸ್ಸುಗಳಿಗೆ ಮೋಡಿ ಮಾಡುವಂಥ ಕಿರು ಕಾದಂಬರಿಯನ್ನು (೬೪ ಪುಟಗಳು) ಅನುವಾದಿಸಿ ನಮ್ಮ ಮಡಿಲಿಗೆ ಹಾಕಿದ್ದಾರೆ.

ಓ.ಎಲ್. ನಾಗಭೂಷಣ ಸ್ವಾಮಿಗಳು ಈ ಕಾದಂಬರಿಗೆ ಪ್ರಸ್ತಾವನೆ ಬರೆದಿದ್ದಾರೆ. ಕರ್ನಲ್ ದಂಪತಿಗಳ ಬಗ್ಗೆ ಅವರ ಸಂಕಷ್ಟಗಳ ಬಗ್ಗೆ ಓದುತ್ತಾ ಓದುತ್ತಾ ನಾವು ಅವರ ಜೀವನದಲ್ಲಿ ಒಬ್ಬರಾಗಿ ಬಿಡುತ್ತೇವೆ. ಕಾದಂಬರಿಯ ಕೊನೆಗೆ ನಮ್ಮಲ್ಲೂ ಒಂದು ರೀತಿಯ ವಿಷಾದ ಭಾವ ಮೂಡುವುದರಲ್ಲಿ ಎಳ್ಳಷ್ಟೂ ಸಂಶಯ ಉಳಿದಿರುವುದಿಲ್ಲ.