ಕರ್ನಾಟಕದಲ್ಲಿ ಕನ್ನಡ ಭಾಷೆಯ ಸಾರ್ವಭೌಮತ್ವಕ್ಕೆ ಇರುವ ತೊಡಕುಗಳೇನು?

ಕರ್ನಾಟಕದಲ್ಲಿ ಕನ್ನಡ ಭಾಷೆಯ ಸಾರ್ವಭೌಮತ್ವಕ್ಕೆ ಇರುವ ತೊಡಕುಗಳೇನು?

ಬರಹ

ಕನ್ನಡ ನಾಡು, ನುಡಿಯ ಬಗ್ಗೆ ಕಾಳಜಿಯ ಲೇಖನವೊಂದನ್ನು ಬರೆಯದೆ ತುಂಬಾನೇ ದಿನಗಳಾಗಿ ಹೋದವಲ್ಲ ಎನ್ನುವ ಸಂಗತಿಯು ಮನವನ್ನು ಹಗಲಿರುಳು ಕಾಡುತ್ತಲೇ ಇತ್ತು. ಅದನ್ನು ಅರಿತು ನನ್ನ ಮನದಲ್ಲೇ ಕ್ರೋಢೀಕರಿಸಿದ್ದ ಅಭಿಪ್ರಾಯದ ನುಡಿಗಳನ್ನು ಬಿತ್ತರಿಸುವ ಸಲುವಾಗಿ ಈ ಲೇಖನವನ್ನು ಬರೆದಿರುವೆನು. ಕರ್ನಾಟಕದಲ್ಲಿ ಕನ್ನಡ ಭಾಷೆಯ ಸಾರ್ವಭೌಮತ್ವಕ್ಕೆ ಇರುವ ತೊಡಕುಗಳೇನು? ಎಂಬ ವಿಚಾರವನ್ನು ಈ ಲೇಖನದಲ್ಲಿ ಪ್ರಸ್ತಾಪಿಸಿರುವೆನು.

ಕನ್ನಡ ಭಾಷೆ, ನನ್ನ ಕನ್ನಡ ಭಾಷೆ, ನಿಮ್ಮ ಕನ್ನಡ ಭಾಷೆ, ನಮ್ಮೆಲ್ಲರ ಮಾತೃ ಭಾಷೆ. ಆಹಾ! ಎಂತಹ ಸರಳ, ಸುಂದರ ಭಾಷೆಯಿದು? ನಮ್ಮ ಕನ್ನಡ ಭಾಷೆಯನ್ನು ಪೋಷಿಸಿದ ವೈಯಾಕರಣಿ, ಕವಿವರ್ಯರು ಎಂತಹ ಅಪ್ರತಿಮ ಮೇಧಾವಿಗಳು?ಎಂತಹ ವಿಚಾರಶೀಲರು?ಎಂತಹ ಅಲೋಚನ ಲಹರಿ ಅವರದ್ದು? ಅವರೆಲ್ಲ ವ್ಯಾಕರಣಿಕವಾಗಿ, ಸಾಹಿತಿಕವಾಗಿ ಕನ್ನಡವನ್ನು ಒಂದು “ಮಹೋನ್ನತ” ಭಾಷೆಯನ್ನಾಗಿಸಿರುವರು. ನಮ್ಮ ಕನ್ನಡ ಭಾಷೆಯಲ್ಲಿ ಬರೆಯದ ಕಥೆಗಳಿಲ್ಲ, ರಚಿಸದ ಕಾವ್ಯಮಾಲೆಗಳಿಲ್ಲ, ಪ್ರಸ್ತಾಪಿಸದ ವೈಜ್ಞಾನಿಕ ಸಿದ್ದಾಂತಗಳಿಲ್ಲ. ಸುಲಲಿತ ಪದಗಳ ಮೂಲಕ ಅಗಣಿತ ವಿಚಾರಧಾರೆ ಹರಿದಿರುವುದು ಇಲ್ಲಿ. ಕನ್ನಡ ಕೇಳುವ ಕಿವಿ, ಆಡುವ ಬಾಯಿ, ಓದುವ ಕಣ್ಣು ಎಂತಹ ಅದೃಷ್ಟ ಅವುಗಳದ್ದು?

ಅಮ್ಮ ಎಲ್ಲಿಲ್ಲದ ಅಕ್ಕರೆಯಿಂದ ಕಲಿಸಿಕೊಟ್ಟ ಈ ನಮ್ಮ ಕನ್ನಡ ಭಾಷೆಯನ್ನು ಕುರಿತು ಏನಾದರೊಂದು ಕಾಳಜಿಯ ವಿಚಾರ ಬರೆಯ ಹೋದರೆ, ಮೈಯಲ್ಲಿನ ರೋಮ ರೋಮವೂ ನಿನ್ನ ಲೇಖನದಲಿ ನಾನೊಂದು ಪದವಾಗಲೇ..ನಾನೊಂದು ಪದವಾಗಲೇ ಎಂದು ವಿಧ ವಿಧ ಪರಿಯಲ್ಲಿ ಬೇಡಿಕೊಳ್ಳುವುದು. ನೆತ್ತರ ಕಣ ಕಣವೂ ನಿನ್ನ ಲೇಖನಿಯೊಡಲ ನಾ ಬಂದು ಸೇರಲೇ..ನಾ ಬಂದು ಸೇರಲೇ ಎಂದು ತುಂಬು ಅಭಿಮಾನದಿಂದ ಅಂಗಲಾಚುವುದು.

ಹೌದು ಇಷ್ಟೆಲ್ಲ ಇದ್ದರೂ “ನಮ್ಮ ಕನ್ನಡ ಭಾಷೆ ಉಳಿಸಿ, ನಮ್ಮ ಕನ್ನಡ ಭಾಷೆ ಬೆಳಸಿ” ಎಂದು ನಾವುಗಳು ಆಗಾಗ ಹೋರಾಟ ಮಾಡುತ್ತಲೇ ಇರುತ್ತಿವಿ. ಯಾಕೆ? ಏನಾಗಿದೆ ನಮ್ಮ ಕನ್ನಡ ಭಾಷೆಗೆ? ನೆರೆಹೊರೆ ರಾಜ್ಯದವರೆಲ್ಲ ಕನ್ನಡ ಅಂದ್ರೆ ಯಾಕೆ ಅಷ್ಟು ಅಸಡ್ಡೆ ಮಾಡ್ತಾರೆ? ಕನ್ನಡ ಭಾಷೆಯಲ್ಲಿ ಏನಾದ್ರೂ ಲೋಪ ದೋಷಗಳು ಇವೆಯೇ? ಕನ್ನಡ ಭಾಷೆಯ ವ್ಯಾಕರಣ ಸರಿಯಾಗಿ ಇಲ್ಲವೇ? ಹೋಗ್ರಿ ನಮ್ಮ ಕನ್ನಡ ಭಾಷೆಯಂತಹ ಅಪ್ಪಟ ವ್ಯಾಕರಣ ಸಹಿತವಾದ ಭಾಷೆ ಜಗದಲ್ಲಿ ಬೇರೊಂದಿಲ್ಲ ಅಂತ ಹೇಳಲೂಬಹುದು ತಪ್ಪೇನಿಲ್ಲ.

ಹಾಗಾದರೆ ನಮ್ಮ ಕನ್ನಡ ಭಾಷೆ ಎಡವುತ್ತಿರುವುದು ಎಲ್ಲಿ? ಶಿಕ್ಷಣದಲಿ ಒಂದು ಮಾಧ್ಯಮಿಕ ಭಾಷೆಯಾಗಿ, ದೈನಂದಿನ ಚಟುವಟಿಕೆಗಳಲ್ಲಿ ಒಂದು ವ್ಯವಹಾರಿಕ ಭಾಷೆಯಾಗಿ, ಸರಕಾರಿ ಕಛೇರಿಗಳಲ್ಲಿ ಒಂದು ಆಡಳಿತ ಭಾಷೆಯಾಗಿ, ಪರಿಪೂರ್ಣವಾಗಿ ಬೆಳೆಯದಿರುವುದೇ ಅದರ ಈಗಿನ ದಯನೀಯ ಸ್ಥಿತಿಗೆ ಕಾರಣ. ಅದರ ಜೊತೆಗೆ ಬಹುಪಾಲು ಕನ್ನಡಿಗರಲ್ಲಿ ಮಾತೃಭಾಷಾ ಪ್ರೇಮ, ಅಭಿಮಾನ, ಸೂಕ್ಷ್ಮದರ್ಶಕದಲ್ಲಿ ನೋಡುವಷ್ಟು ಕಿರಿದಾಗಿರುವುದು ಇನ್ನೊಂದು ಕಾರಣ. ಇವುಗಳ ಜೊತೆಗೆ ನಮ್ಮ ಕರ್ನಾಟಕವೂ ಒಂದು ರಾಜ್ಯವಾಗಿ ಉದಯವಾದಗಿನಿಂದಲೂ, ಒಂದು ಆಡಳಿತ ಭಾಷೆಯಾಗಿ, ಒಂದು ಪ್ರದೇಶದ ಭಾಷೆಯಾಗಿ ಕನ್ನಡವನ್ನು ಉತ್ತಮೋತ್ತಮ ರೀತಿಯಲ್ಲಿ ಬೆಳಸಲು ಮುನ್ನಗ್ಗಿ ಬಾರದಿರುವ ರಾಜ್ಯ ಸರಕಾರವೂ ಆನೆಗಾತ್ರದಷ್ಷು ಕಾರಣ.

ಮೇಲೆ ವ್ಯಾಕ್ಯಾನಿಸಿದ ವಿಷಯಗಳನ್ನು ವಿವರವಾಗಿ ಹೇಳಬೇಕೆಂದರೆ, ಶಿಕ್ಷಣದಲ್ಲಿ ಕನ್ನಡ ಎನ್ನುವ ವಿಚಾರವನ್ನು ಚರ್ಚಿಸಲು ಕೈಗೆತ್ತಿಕೊಂಡ್ರೆ, ಈಗಿನ ಆಗುಹೋಗುಗಳಿಗೆ ಯಾರು ಕಾರಣರು? ಯಾರದು ಸರಿ? ಯಾರದು ತಪ್ಪು? ಎಂದು ಹೇಳೋದು ಬಲುಕಷ್ಟ. ನಾವೆಲ್ಲ ಕನ್ನಡ ಮಾಧ್ಯಮದಲ್ಲೇ ಓದಿದ್ವಿ. ಆದರೆ ಈಗಿನ ಪೀಳಿಗೆಯ ತಂದೆತಾಯಿಯಂದಿರು ತಮ್ಮ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಲು ಒಪ್ಪುತ್ತಾರೆಯೇ? ಖಂಡಿತಾ ಇಲ್ಲ. ಪಟ್ಟಣ ಪ್ರದೇಶಗಳನ್ನು ಬಿಟ್ಟುಹಾಕಿ ಆಧುನಿಕ ಮೋಹಕತೆಯಿಂದ ದೂರವಿರುವ ಹಳ್ಳಿ ಪ್ರದೇಶಗಳಲ್ಲೇ ಜನ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸುವುದು ಗಣನೀಯವಾಗಿ ಕಡಿಮೆಯಾಗುತ್ತಾ ಬರುತ್ತಿದೆ. ಅಲ್ಲೂ ಇಂಟರ್‌ನ್ಯಾಷನಲ್ ಕಾನ್ವೆಂಟ್‌ಗಳು ಪ್ರಾರಂಭವಾಗುತ್ತಿವೆ. ಅದೆಷ್ಟೇ ಕಷ್ಟವಾಗಲಿ ತಮ್ಮ ಮಕ್ಕಳನ್ನು ಅಲ್ಲೇ ಓದಿಸಬೇಕೆಂದು ಜನ ಹಾತೊರೆಯುತ್ತಿದ್ದಾರೆ. ಇದಕ್ಕೆ ಅತ್ಯಂತ ಸೂಕ್ತವಾದ ಕಾರಣವೂ ಇದೆ...

ಒಬ್ಬ ಹಳ್ಳಿಯ ಬಡರೈತ ತನ್ನ ಜೀವಮಾನವೆಲ್ಲ ದುಡಿಯಲು ಆಗದಷ್ಟು ಹಣವನ್ನು ಬೆಂಗಳೂರಿನಲ್ಲಿ ಸಾಪ್ಟ್‌ವೇರ್ ಇಂಜಿನಿಯರ್ ಆಗಿರುವ ಆತನ ಮಗ ಒಂದೇ ವರುಷದಲ್ಲಿ ಗಳಿಸುತ್ತಾನೆ. ಆ ರೈತನು ಒಂದು ಸೈಕಲ್ ಅನ್ನು ತಗೆದುಕೊಳ್ಳಲು ಪಟ್ಟಷ್ಟು ಕಷ್ಟವನ್ನು ಆತನ ಮಗ ಒಂದು ಲಕ್ಸುರಿ ಕಾರನ್ನು ತೆಗೆದುಕೊಳ್ಳಲು ಪಟ್ಟಿರಲಾರ! ತನ್ನ ಹೊಲ, ಗದ್ದೆ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದ ಆ ರೈತನೆಲ್ಲಿ? ಈ ಮಾಯಾನಗರಿಯಲ್ಲೇ ೪೦x೩೦ ಸೈಟ್ ಖರೀದಿಸಿರುವ ಆತನ ಮಗನೆಲ್ಲಿ? ಇಂತಹ ಅನೇಕ ನಿದರ್ಶನಗಳನ್ನು ಕಂಡ ಹಳ್ಳಿಯ ಜನರು ತಮ್ಮ ಮಕ್ಕಳಿಗೆ ಕನ್ನಡವೇಕೆ ಬೇಕು? ಇಂಗ್ಲೀಷೊಂದು ಕಲಿತರೆ ಸಾಕು ಅನ್ನುವ ಮನೋಭಾವ ಅವರಲ್ಲಿ ದಟ್ಟವಾಗಿದೆ. ಇದರಲ್ಲಿ ಪಾಪ ಹಳ್ಳಿಯ ಜನರದ್ದು ಎಳ್ಳೊಷ್ಟೂ ತಪ್ಪಿಲ್ಲ. ಕನ್ನಡ ಮಾಧ್ಯಮದಲ್ಲಿ ಎಂ.ಎ, ಪಿಹೆಚ್‌ಡಿ ಮಾಡಿರುವವರಲ್ಲಿ ಕೆಲವರು ಮೂರ್ನಾಲ್ಕು ಸಾವಿರಕ್ಕೆ ಕೆಲಸ ಮಾಡುತ್ತಿರುವ ಎಷ್ಟೋ ಉದಾಹರಣೆಗಳಿವೆ. ಇನ್ನೂ ಕೆಲವರು ಸರಕಾರಿ ಕೆಲಸವೇ ಸಿಗದೆ ಖಾಸಗಿ ಕೆಲಸಗಳನ್ನು ಸೇರಿ ತಮ್ಮಲ್ಲಿರೋ ಜ್ಞಾನ, ಬುದ್ದಿವಂತಿಕೆ ಎಷ್ಟು ಉಪಯೋಗಿಸಿದರೂ ಹಣವೆಂಬ ಮಾಯಾನಿಧಿಯನ್ನು ಗಳಿಸಲಾಗದೆ ನಿತ್ಯ ಜೀವನ ಸಾಗಿಸಲು ಪಡಬಾರದ ಕಷ್ಷವನ್ನು ಪಡುತ್ತಿದ್ದಾರೆ. ಈಗ ಹೇಳಿ ಹಣವನ್ನು ತಂದು ಕೊಡದ ಕನ್ನಡ ಯಾರಿಗೆ ಬೇಕು? ಅದನ್ನು ಕಲಿತರೆ ಏನು ಉಪಯೋಗ??

ಇದಕ್ಕೆಲ್ಲ ಉತ್ತರಿಸಬೇಕಾದವರು ಯಾರು? ಜನಸಾಮಾನ್ಯರೇ? ಅವರಂತೂ ಖಂಡಿತಾ ಅಲ್ಲ ಮತ್ತೆ ಇನ್ಯಾರು ಉತ್ತರಿಸಬೇಕು? ಜನ ಪ್ರತಿನಿಧಿಗಳಾಗಿ ಆಯ್ಕೆಯಾಗಿ, ಸರಕಾರದ ಗದ್ದುಗೆ ಏರುವ ಮಹನೀಯರುಗಳು ಇದಕ್ಕೆಲ್ಲ ಉತ್ತರಿಸಬೇಕು. ಕನ್ನಡ ಭಾಷೆ ಕರ್ನಾಟಕದಲ್ಲಿ ಸಾರ್ವಭೌಮತ್ವ ಪಡೆದುಕೊಳ್ಳಲು ನಾವೇನೇ ಪ್ರಯತ್ನಪಟ್ಟರೂ ಆಗುವುದಿಲ್ಲ. ಅದೇ ಆ ಮಹನೀಯರುಗಳು ಕಿರುಬೆರಳಷ್ಷು ಪ್ರಯತ್ನಿಸಿದರೂ ನಮ್ಮ ಕನ್ನಡ ಭಾಷೆಯ ಗತಿಯನ್ನೇ ಬದಲಿಸಬಹುದು.

ಸರಕಾರವೂ ಜಾರಿಗೆ ತರುವ ಕಾನೂನುಗಳು ಒಂದು ನಾಡಿನ, ಒಂದು ಭಾಷೆಯ, ಒಂದು ಸಂಸ್ಕೃತಿಯ, ಆ ನಾಡಿನ ಜನ ಸಮೂಹದ ಏಳಿಗೆಗೆ ಪೂರಕವಾಗಿರಬೇಕೇ ಹೊರತು ಮಾರಕವಾಗಿರಬಾರದು.

ಕನ್ನಡ ಜನತೆಯಲ್ಲಿ ನನ್ನದೊಂದು ಚಿಕ್ಕ ವಿನಮ್ರ ವಿನಂತಿ..ಈಚಿನ ದಿನಗಳಲ್ಲಿ ಕನ್ನಡದಲ್ಲಿ ಒಳ್ಳೊಳ್ಳೆ ಸಾಹಿತ್ಯ, ಕಥೆ ಹಾಗು ದೃಶ್ಯಾವಳಿಗಳುಳ್ಳ ಚಲನಚಿತ್ರಗಳು ತೆರೆ ಕಾಣುತ್ತಿವೆ. ದಯಾಮಾಡಿ ತಾವುಗಳು ಹಿಂದಿ, ತೆಲುಗು, ತಮಿಳು ಸಿನಿಮಾಗಳನ್ನು ನೋಡುವುದನ್ನು ಕಡಿಮೆ ಮಾಡಿ ಕನ್ನಡ ಚಲಚಿತ್ರಗಳ ಬಗ್ಗೆ ಅದಷ್ಟೂ ಗಮನ ಹರಿಸಿ. ಯಾಕೆಂದರೆ ನಮ್ಮ ಕನ್ನಡ ಸಿನಿಮಾಗಳನ್ನು ನಾವು ನೋಡದೆ ಪರಭಾಶೆಯವರು ನೋಡುತ್ತಾರೆಯೇ??

ಕನ್ನಡ ಜನತೆಯಲ್ಲಿ ನನ್ನದೊಂದು ಚಿಕ್ಕ ವಿನಮ್ರ ವಿನಂತಿ..ಈಚಿನ ದಿನಗಳಲ್ಲಿ ಕನ್ನಡದಲ್ಲಿಯೂ ಸಹ ಒಳ್ಳೊಳ್ಳೆ ಸಾಹಿತ್ಯ, ಕಥೆ ಹಾಗು ದೃಶ್ಯಾವಳಿಗಳುಳ್ಳ ಚಲನಚಿತ್ರಗಳು ತೆರೆ ಕಾಣುತ್ತಿವೆ. ದಯಾಮಾಡಿ ತಾವುಗಳು ಹಿಂದಿ, ತೆಲುಗು, ತಮಿಳು ಸಿನಿಮಾಗಳನ್ನು ನೋಡುವುದನ್ನು ಕಡಿಮೆ ಮಾಡಿ ಕನ್ನಡ ಚಲಚಿತ್ರಗಳ ಬಗ್ಗೆ ಅದಷ್ಟೂ ಗಮನ ಹರಿಸಿ. ಯಾಕೆಂದರೆ ನಮ್ಮ ಕನ್ನಡ ಸಿನಿಮಾಗಳನ್ನು ನಾವು ನೋಡದೆ ಪರಭಾಶೆಯವರು ನೋಡುತ್ತಾರೆಯೇ??
ತಮಿಳನ್ನಲ್ಲಿ ಬರುತ್ತಿದ್ದ Creativity ಈಗ ಕನ್ನದಲ್ಲೂ ಬರುತ್ತಿದೆ, ತಮಿಳನಲ್ಲಿ ಬರುತ್ತಿದ್ದ Love Story ಫಿಲ್ಮ್ಗಳು ಈಗ ಕನ್ನಡದಲ್ಲೂ ಬರುತ್ತಿವೆ..ನೀವುಗಳು ನೋಡುವ ಪ್ರಯತ್ನ ಮಾಡಬೇಕಷ್ಟೆ.

ಸರಕಾರದವರೇ, ಈ ಕೆಳಗಿನ ಅಂಶಗಳನ್ನು ಇಡಿ ಕರುನಾಡಿನ ಜನತೆ ನಿಮಗೆ ಹೇಳುತ್ತಿದೆಯೆಂದು ಭಾವಿಸಿ, ಅವುಗಳು ಸರಿಯೆನ್ನಿಸದರೆ ಜಾರಿಗೆ ತರಲು ಸಾಧ್ಯವಾದಷ್ಟೂ ಪ್ರಮಾಣಿಕ ಪ್ರಯತ್ನ ಮಾಡುತ್ತಿರಾ?

೧.ಕನ್ನಡ ಮಾಧ್ಯಮದಲ್ಲಿ ಓದಿರುವ ಪ್ರತಿಭಾವಂತ ಯುವಕರಿಗೆ ಉನ್ನತ ವಿದ್ಯಾಭ್ಯಾಸಗಳಲ್ಲಿ, ಸರಕಾರಿ ಕೆಲಸಗಳಲ್ಲಿ ಸ್ವಲ್ಪ ಹೆಚ್ಚಾಗಿಯೇ ಸ್ಥಾನಗಳನ್ನು ಮೀಸಲಿಡಿ ಸ್ವಾಮಿ.

೨.ಇಂಗ್ಲೀಷ್ ಮಾಧ್ಯಮದಲ್ಲೂ ಕನ್ನಡವನ್ನು ಇಂತಿಷ್ಷು ಅಂತ ಕಲಿಯಲೇ ಬೇಕೆಂದು ತಾಕೀತು ಮಾಡ್ರಿ.

೩.ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಅಂಗಸಂಸ್ಥೆಯನ್ನು ಈ ಮಾಯಾನಗರಿಯಲ್ಲಿ ತೆರೆಯಲು ಅನುಮತಿ ಕೋರಿ ನಿಮ್ಮ ಬಳಿಗೆ ಬಂದಾಗ, ನಿಮ್ಮ ಒಡಲನ್ನು ತುಂಬಿಸಿಕೊಳ್ಳಲು ಅವರಿಂದ ತೆಗೆದುಕೊಳ್ಳುವ ಹಣದಲ್ಲಿ ಒಂದು ೫% ಹಣವನ್ನು ಕಡಿಮೆ ತೆಗೆದುಕೊಂಡು ಆ ಕಂಪನಿಯು ನೌಕರರನ್ನು ಆಯ್ಕೆಮಾಡಿಕೊಳ್ಳುವಾಗ ವಿದ್ಯೆಯಲ್ಲಿ ಸಾಕಷ್ಟು ಆರ್ಹತೆಯುಳ್ಳ ಕನ್ನಡಿಗರಿಗೆಂದೇ, ಕನ್ನಡ ಮಾಧ್ಯಮದಲ್ಲಿ ಓದಿರೋರಿಗೆಂದೇ ಒಂದು ಸ್ವಲ್ಪ ವೀಶೆಷ ಮೀಸಲಾತಿ ಇಡಲು ಅಪ್ಪಣೆ ಹೊರಡಿಸಿ ಮಹಾಸ್ವಾಮಿಯವರೇ.

೪.ಕನ್ನಡ ಮಾಧ್ಯಮದಲ್ಲೂ ಇಂಗ್ಲೀಷ್ ವಿಷಯಗಳನ್ನು ಸ್ವಲ್ಪ ಹೆಚ್ಚಾಗಿಯೇ ಕಲಿಸಲು ನಿಯಮಗಳನ್ನು ಜಾರಿಗೆ ತನ್ನಿ. ಏಕೆಂದರೆ ಇಂಗ್ಲೀಷ್ ಭಾಷೆಯನ್ನೂ ಸಹ ಯಾವತ್ತೂ ಕಡೆಗಣಿಸಬಾರದು. ಕನ್ನಡದ ಜೊತೆಗೆ ಇನ್ನೂ ಎರಡು-ಮೂರು ಭಾಷೆ ಕಲಿತರೆ ಒಳ್ಳೆಯದೆ. ಕನ್ನಡವನ್ನು ಪೂಜಿಸುವ, ಅನ್ಯಭಾಷೆಗಳನ್ನು ಪ್ರೀತಿಸುವ ನಮ್ಮ ಮನೋಧರ್ಮವನ್ನು ಎಂದೂ ಬದಲಾಯಿಸದಿದ್ದರೆ ಒಳ್ಳೆಯದಲ್ಲವೇ? ಆದರೆ ಕನ್ನಡಕ್ಕೆ ಯಾವಾಗಲೂ ಮೊದಲ ಆದ್ಯತೆ ಇರಲಿ.

೫. ಸಾಹಿತಿಗಳು, ಪತ್ರಕರ್ತರು, ಲೇಖಕರು ಹಾಗೂ ಕನ್ನಡ ಭಾಷೆಗಾಗಿ ಶ್ರಮಿಸುವವರಿಗೆ ಆದಷ್ಟೂ
ಪ್ರೋತ್ಸಾಹ ನೀಡಿ ಸ್ವಾಮಿ. ಪ್ರೋತ್ಸಾಹ ಅಂದ್ರೆ ಬರಿ ಹಿತ್ತಾಳೆದೋ ಇಲ್ಲವೇ ತಾಮ್ರದ್ದೋ ಪದಕ-ಗಿದಕ ಕೊಟ್ಟು ನಮ್ಮ ಕೆಲಸ ಮುಗಿಯಿತೆಂದು ಸುಮ್ಮನಾಗ ಬೇಡಿ ಸ್ವಾಮಿ. ಅವರಿಗೂ ಒಂದು ಸುಂದರವಾದ ಜೀವನ ನೆಡೆಸಲು ಅನುವು ಮಾಡಿಕೊಡಿ. ಆಗ ನೋಡಿ ಕನ್ನಡ ಭಾಷೆ ಯಾಕೆ ಬೆಳೆಯುವುದಿಲ್ಲ?

ಒಂದು ವ್ಯವಹಾರಿಕ ಭಾಷೆಯಾಗಿ ಕನ್ನಡ ಇನ್ನೂ ಸಂಪೂರ್ಣವಾಗಿ ಅದರ ಲಯವನ್ನು ಕಂಡುಕೊಂಡಿಲ್ಲ! ಇದಕ್ಕೆ ಉದಾಹರಣೆಯಾಗಿ ತಿಳಿಸುವುದಾದರೆ ಬೆಂಗಳೂರಿನಲ್ಲಿ ಇರುವ ಬಹುಪಾಲು ಅಂಗಡಿ-ಮಳಿಗೆ, ಮಹಲ್, ಬಹುರಾಷ್ಟ್ರೀಯ ಕಂಪನಿಗಳು ಇನ್ನೂ ಅನೇಕಾನೇಕ ಕಡೆಗಳಲ್ಲಿ ಕನ್ನಡದ ನಾಮಫಲಕಗಳನ್ನು ಬಳಸೇ ಇಲ್ಲ. ಅಲ್ಲದೆ ಇಂತಹ ಕಡೆ ಶಾಪಿಂಗ್‌ಗೆಂದು ಬಂದರೆ ಬೇರೆ ಯಾವುದೋ ರಾಜ್ಯಕ್ಕೋ ಇಲ್ಲವೆ ಯಾವುದೋ ದೇಶಕ್ಕೋ ಬಂದಂತಹ ಅನುಭವ ನಮಗೆ ಆಗುತ್ತದೆ. ಅಲ್ಲಿ ಕನ್ನಡ ಮಾತಾನಡುವವರು ಸಿಗುವುದೇ ಇಲ್ಲ, ಸಿಕ್ಕರೂ ಅವರುಗಳಲ್ಲಿ ಕನ್ನಡ ಮಾತನಾಡುವ ಆಸಕ್ತಿ ಇರುವುದಿಲ್ಲ! ಇದರ ಬಗ್ಗೆ ಎಚ್ಚೆತ್ತುಕೊಂಡು ಸೂಕ್ತವಾದ ನೀತಿ, ನಿಯಮಗಳನ್ನು ಜಾರಿಗೆ ತರಲು ಸರಕಾರದಿಂದ ನಿರ್ಮಿತವಾದ ಸಮಿತಿಯೊಂದು ಬಹಳ ವರುಷಗಳಿಂದ ಹೋರಾಟ ಮಾಡುತ್ತಲೇ ಬಂದಿದೆ. ಆ ಸಮಿತಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದನ್ನು ಆ ಸಮಿತಿಯ ಸದಸ್ಯರುಗಳನ್ನು ಕೇಳಿಯೇ ತಿಳಿದು ಕೊಳ್ಳಬೇಕು.

ಇನ್ನೂ ಕನ್ನಡ ಭಾಷೆಯ ಪ್ರತೀಕವಾಗಿ ಇರಬೇಕಾದ ವಿಧಾನಸೌಧದಲ್ಲೇ ಒಬ್ಬ ಸದಸ್ಯ ನಾನು ಇಂಗ್ಲೀಷ್‌ನಲ್ಲೇ ಮಾತಾಡೋದು ಅಂತಾನೇ..ಇನ್ನೊಬ್ಬ ಹಿಂದಿ ನಮ್ಮ ರಾಷ್ಟ್ರಭಾಷೆ ಅದರಲ್ಲಿ ನಾನು ಮಾತಾಡ್ತಿನಿ ಅಂತಾನೇ. ಬೇಲೀನೇ ಎದ್ದು ಹೊಲ ಮೇಯ್ದರೆ ಏನ್ಮಾಡೋಕ್ಕೆ ಆಗುತ್ತೆ ನೀವೇ ಹೇಳಿ?

ಕರುನಾಡೇ ನಮ್ಮಯ ಜೀವಕ್ಕೆ ಒಲಿದ ನೆಲೆ|
ಕನ್ನಡವೇ ನಮ್ಮ ಉಸಿರಿಗೆ ಸ್ಫೂರ್ತಿಯ ಸೆಲೆ|
ಏಕತೆಯೇ ಜನ್ಮಾರಭ್ಯ ನಮಗೆ ತಿಳಿದಿರುವ ಕಲೆ|
ದೇಶ, ಭಾಷೆ, ವೇಷ ಯಾವುದಾದರೇನು
ಎಲ್ಲರಿಗೂ ನಾವು ಕೊಡುವೆವು ಬೆಲೆ|
ತಾಯ ಹಿತರಕ್ಷಣೆಯಲಿ|
ಸಹೋದರ, ಸಹೋದರಿಯರ ಹಿತಚಿಂತನೆಯಲಿ|
ಎಂದೆಂದೂ ಮುಡುಪಾಗಿಟ್ಟಿರುವೆವು ನಮ್ಮಯ ತಲೆ|

ಕನ್ನಡ ಭಾಷೆಯ ಏಳಿಗೆಗೆ ತೊಡಕಾಗಿರುವ ವ್ಯವಸ್ಥೆಯನ್ನು ತಿಳಿಸಲು ಬರೆದಿರುವ ಲೇಖನವಿದು. ವೈಕ್ತಿಕವಾಗಿ ಯಾರನ್ನೂ ಖಂಡಿಸಲು ಬರೆದ ಲೇಖನವಿದಲ್ಲ.

(ಪದಗಳ ಅರ್ಥ,
ಜನ್ಮಾರಭ್ಯ= ಹುಟ್ಟಿದಾಗಿನಿಂದ)
- ನಿಮ್ಮ ಸುನಿಲ್ ಮಲ್ಲೇನಹಳ್ಳಿ
http://mallenahallipages.blogspot.com/