ಕರ್ನಾಟಕದಲ್ಲೇ ಎಳ್ಳು-ಬೆಲ್ಲಕ್ಕೆ ಎಳ್ಳು-ನೀರು?
ಆತ್ಮೀಯ ಸಂಪದಿಗರೇ,
ನಿನ್ನೆ ತಾನೇ ಒಂದು ಆಘಾತಕಾರೀ ಸುದ್ದಿ ಓದಿದೆ. ನಮ್ಮ ಕನ್ನಡನಾಡಿನಲ್ಲಿ ಸಂಕ್ರಾಂತಿ ಒಂದು ಪ್ರಮುಖ ಹಬ್ಬ. ಅದಕ್ಕೆ ನಮ್ಮ ನೆಲದ ಸೊಗಡು ಮತ್ತು ಇತಿಹಾಸ ಎರಡೂ ಇವೆ. ಇಂತಹ ಸಂಕ್ರಾಂತಿಗೆ, ನಮ್ಮ ರಾಜಧಾನಿ ಬೆಂಗಳೂರಿನಲ್ಲೇ, ನಮ್ಮದೇ ನೆಲದ ಕಂಪನಿಯೊಂದು, ರಜೆ ಘೋಷಿಸಿಲ್ಲವಂತೆ. ಪೂರ್ತಿ ಸುದ್ದಿ ಓದಿ ನೋಡಿ: ಎಳ್ಳು-ಬೆಲ್ಲಕ್ಕೆ ಎಳ್ಳು-ನೀರು! ಅದಕ್ಕೆ ಬದಲಾಗಿ ಓಣಂ ಹಬ್ಬಕ್ಕೆ ರಜೆಯಂತೆ.
ನನಗೆ ವೈಯಕ್ತಿಕವಾಗಿ ಯಾವ ಕಂಪೆನಿಯ ಬಗೆಗೂ ವಿರೋಧವೂ ಇಲ್ಲ, ಪೂರ್ವಾಗ್ರಹವೂ ಇಲ್ಲ ಮತ್ತು ಯಾರನ್ನೊ ನೋಯಿಸುವುದು ನನ್ನ ಉದ್ದೇಶವಲ್ಲ ಅಂತ ಎಲ್ಲಕ್ಕಿಂತ ಮೊದಲು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ನನ್ನ ವಿರೋಧವಿರುವುದು ಇಂತಹ ಕನ್ನಡ ವಿರೋಧೀ ನಿಲುವುಗಳ ಬಗ್ಗೆ; ಅದು ಯಾವ ಸಂಸ್ಥೆಯಲ್ಲಿ ಬೇಕಾದರೂ ನಡೆಯಲಿ! ಯಾವುದೇ ಸೋದರ ಭಾಷೆಯ ಬಗೆಗಾಗಲೀ, ಅವರ ಹಬ್ಬಗಳ ಬಗೆಗಾಗಲೀ ವಿರೋಧ ಸರಿಯಲ್ಲ. ಅವರವರ ನೆಲದಲ್ಲಿ ಅವರ ಹಬ್ಬಗಳಿಗೆ ರಜ ಕೊಡಲಿ, ಆಚರಿಸಲಿ. ಸಂಪೂರ್ಣ ಸಹಮತವಿದೆ. ಆದರೆ ನಮ್ಮ ನೆಲದಲ್ಲಿ ನಮ್ಮದೇ ಸೊಗಡಿನ, ಸಾಂಸ್ಕೃತಿಕ ಹಿನ್ನೆಲೆಯ ಹಬ್ಬಗಳಿಗೆ ರಜೆಯಿಲ್ಲ, ಇನ್ನೊಬ್ಬರ ಹಬ್ಬ ಆಚರಿಸು ಅಂದ್ರೆ ಅದ್ಯಾವ ನ್ಯಾಯ ಸ್ವಾಮೀ? ಇದೊಂಥರಾ "ಮನೆಗೆ ಮಾರಿ, ಪರರಿಗೆ ಉಪಕಾರೆ" ನೀತಿ ಆಗಲಿಲ್ಲವೇ?
ಈ ಬಗ್ಗೆ ನೀವು ಏನಂತೀರಾ? ಇವತ್ತು ಒಂದು ಸಂಸ್ಥೆ ಈ ರೀತಿ ಮಾಡಿರಬಹುದು. ಇಷ್ಟಕ್ಕೇ ಬಿಟ್ಟಲ್ಲಿ, ನಾಳೆ ಇದೊಂದು ಪಿಡುಗಿನ ರೀತಿ ಹಬ್ಬಿ, ಎಲ್ಲ ಸಂಸ್ಥೆಗಳೂ ಈ ಧೋರಣೆ ಅನುಸರಿಸಿದರೆ ಏನು ಮಾಡೋದು, ಹೇಳಿ? ನಿಮ್ಮ ಅನಿಸಿಕೆಗಳಿಗೆ, ಚರ್ಚೆಗೆ ಸ್ವಾಗತ.
- ಶ್ಯಾಮ್ ಕಿಶೋರ್