ಕರ್ನಾಟಕದ ಕಣ್ಮಣಿ ರಾಹುಲ್ ದ್ರಾವಿಡ್

ಕರ್ನಾಟಕದ ಕಣ್ಮಣಿ ರಾಹುಲ್ ದ್ರಾವಿಡ್

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ವೇದಂ ಜೈಶಂಕರ್, ಕನ್ನಡಕ್ಕೆ : ಚಂದ್ರಮೌಳಿ ಕಣವಿ
ಪ್ರಕಾಶಕರು
ನಾಗಶ್ರೀ ಬುಕ್ ಹೌಸ್, ಜಯನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ: ೧೨೦.೦೦, ಮುದ್ರಣ: ೨೦೦೪

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಕುರಿತಾದ ಪುಸ್ತಕವಿದು. ಪುಸ್ತಕದ ಬೆನ್ನುಡಿಯಲ್ಲಿ “ಭಾರತೀಯ ಕ್ರಿಕೆಟ್ ರಂಗದ ‘ಬೃಹತ್ ಗೋಡೆ' ಎಂದು ಎಲ್ಲರಿಂದಲೂ ಮೆಚ್ಚುಗೆ ಪಡೆದಿರುವ ರಾಹುಲ್ ದ್ರಾವಿಡ್ ಕ್ರಿಕೆಟ್ ಪ್ರೇಮಿಗಳಿಗೆ ಅರ್ಹ ಮಾದರಿಯಾಗಿದ್ದಾರೆ. ಕ್ರಿಕೆಟ್ ಆಟವನ್ನು ಅದ್ಭುತ ಸ್ಥೈರ್ಯದಿಂದ ಹಾಗೂ ಬದ್ಧತೆಯಿಂದ ಆಡಿ ದೇಶದ ಯುವ ಪೀಳಿಗೆಯ ಆರಾಧ್ಯ ಧೈವವಾಗಿದ್ದಾರೆ. ಎರಡು ವಿಶ್ವಕಪ್ ಪಂದ್ಯಾವಳಿಗಳಲ್ಲಿ ವಿಕೆಟ್ ಕೀಪಿಂಗ್ ಮಾಡಿರುವ ರಾಹುಲ್ ಕೆಲಬಾರಿ ಪ್ರಾರಂಭಿಕ ಬ್ಯಾಟಿಂಗ್ ಮಾಡಿದ್ದಲ್ಲದೆ ನಾಯಕತ್ವದ ಹೊಣೆಯನ್ನೂ ನಿರ್ವಹಿಸಿದ್ದಾರೆ. ಆಡುತ್ತಿರುವಾಗಲೇ ದಂತಕತೆಯಾಗಿರುವ ಮಹಾನ್ ಆಟಗಾರನ ಚರಿತ್ರಾತ್ಮಕ ಕೃತಿ ಇದು.

ತೀರ ಚಿಕ್ಕವರಾಗಿದ್ದಾಗಿನಿಂದ ಇಲ್ಲಿಯವರೆಗಿನ ರಾಹುಲ್ ರ ಕ್ರಿಕೆಟ್ ಜೀವನದ ಸಂಶೋಧನೆಯ ರೋಚಕ ಫಲ ಇಲ್ಲಿದೆ. ಅವರ ಆಟದ ದೋಷರಹಿತ ತಂತ್ರಜ್ಞಾನದ ವೈಶಿಷ್ಟ್ಯ ಹಾಗೂ ನೋವು-ನಲಿವುಗಳನ್ನೊಳಗೊಂಡ ಉನ್ನತ ಯಶಸ್ಸಿನ ಮಹತ್ವದ ವಿವರಗಳನ್ನು ಮೊದಲ ಬಾರಿಗೆ ಪುಸ್ತಕ ರೂಪದಲ್ಲಿ ತರಲಾಗಿದೆಯಲ್ಲದೆ ಇನ್ನೂ ಹಲವು ಕಾರಣಗಳಿಗಾಗಿ ಈ ಕೃತಿಯನ್ನು ಕ್ರಿಕೆಟ್ ಪ್ರೇಮಿಗಳು ಆಸ್ಥೆಯಿಂದ ಓದಬಹುದಾಗಿದೆ.

ವೇದಂ ಜೈಶಂಕರ್ ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಪತ್ರಕರ್ತರಾಗಿದ್ದು ದೇಶವಿದೇಶಗಳಲ್ಲಿ ಪ್ರವಾಸ ಮಾಡಿ ವಿಶ್ವದ ಆರು ಖಂಡಗಳಲ್ಲಿ ನಡೆದ ಕ್ರಿಕೆಟ್ ಆಟಗಳ ವರದಿ ಮಾಡಿದವರಾಗಿದ್ದಾರೆ. ಕ್ರಿಕೆಟ್ ಅವರಿಗೆ ಅತ್ಯಂತ ಪ್ರಿಯ ವಿಷಯವಾಗಿದ್ದು ಶಾಲೆ, ಕಾಲೇಜು ಹಾಗೂ ಕ್ಲಬ್ ನ ಕ್ರಿಕೆಟ್ ಆಟಗಳಲ್ಲಿ ಅನೇಕ ಪ್ರಸಿದ್ಧ ಆಟಗಾರರೊಡನೆ ಆಡಿದ ಅನುಭವವೂ ಅವರಿಗಿದೆ. ಅವರು ಡೆಕ್ಕನ್ ಹೆರಾಲ್ಡ್ ನಲ್ಲಿ ಕೆಲ ವರ್ಷ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಅನುವಾದ ಮಾಡಿದ ಚಂದ್ರಮೌಳಿ ಕಣವಿ ಕಳೆದ ಮೂರು ದಶಕಗಳಿಂದ ಕ್ರಿಕೆಟ್ ನಲ್ಲಿ ಮುಳುಗಿರುವುದಲ್ಲದೇ ವಿಶ್ವವಿದ್ಯಾಲಯ ಹಾಗೂ ರಾಜ್ಯ ಕಿರಿಯರ ತಂಡದ ಪರವಾಗಿ ಆಡಿರುವ ಅನುಭವ ಇದೆ.” ಎಂದು ಬರೆದಿದ್ದಾರೆ.

ಮಾಜಿ ಕ್ರಿಕೆಟಿಗರಾದ ಬ್ರಿಜೇಶ್ ಪಟೇಲ್ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಅವರ ಅಭಿಪ್ರಾಯದಲ್ಲಿ “ಯಾವುದೇ ವಿಷಯದಲ್ಲಿ ಅತ್ಯಂತ ಹೆಚ್ಚು ಗಮನ ಕೇಂದ್ರೀಕರಿಸುವ ಶಕ್ತಿ ಹೊಂದಿರುವ ರಾಹುಲ್, ಬೌದ್ಧಿಕ ವಿಷಯಗಳಲ್ಲಿ ಸಮತೋಲ ಮನಸ್ಥಿತಿ ಹೊಂದಿರುವವ. ಇವರು ಹೀಗೆ ಕ್ರಮಬದ್ಧವಾಗಿ ಉನ್ನತ ಶ್ರೇಣಿಯನ್ನು ತಲುಪಿದ್ದು, ಚಿಕ್ಕಂದಿನಿಂದ ಇವನನ್ನು ಬಲ್ಲ ನನಗೆ ಆಶ್ಚರ್ಯದ ವಿಷಯವೇನೂ ಅಲ್ಲ. ಆಟದ ಉತ್ಸುಕ ವಿದ್ಯಾರ್ಥಿಯಾಗಿರುವ ರಾಹುಲ್ ಯಾವಾಗಲೂ ಹೊಸತನ್ನು ಕಲಿತು ಅರಗಿಸಿಕೊಳ್ಳುವ ಹವಣಿಕೆಯಲ್ಲೇ ಇರುತ್ತಾನೆ. ಈ ಗುಣಗಳಿಂದಲೇ ರಾಹುಲ್ ತನ್ನ ಇತರ ಜೊತೆಗಾರರಿಗಿಂತ ಭಿನ್ನವಾಗಿದ್ದಾನೆ. ಬೆಂಗಳೂರಿನಲ್ಲಿದ್ದು ಸಮಯ ಸಿಕ್ಕಾಗಲೆಲ್ಲಾ ಎಲ್ಲಾ ಮಟ್ಟದ ಕಿರಿಯರಿಗೆ ಕಿವಿ ಮಾತು ನೀಡಲು ಸಿದ್ಧನಿರುವ ರಾಹುಲ್, ಈ ಪೀಳಿಗೆಗೆ ಆರಾಧ್ಯ ಮೂರ್ತಿಯಾಗಿರುವುದರಲ್ಲಿ ಆಶ್ಚರ್ಯವಿಲ್ಲ. 

ರಾಹುಲ್, ಒಬ್ಬ ಸಾಂಪ್ರದಾಯಿಕ ಹಳೆಯ ಕಾಲದ ಕ್ರಿಕೆಟ್ ಮನೋಭಾವವುಳ್ಳವನಾಗಿದ್ದಾನೆ. ಸ್ಪರ್ಧಾತ್ಮಕ ಮನೋಭಾವವಿಲ್ಲದಿದ್ದರೂ, ಕ್ರೀಡಾ ಮನೋಭಾವವನ್ನು ಎತ್ತಿ ಹಿಡಿಯುವ ರಾಹುಲ್ ಯಾವ ದೇಶದಲ್ಲೇ ಆಡಲಿ, ಭಾರತದ ರಾಯಭಾರಿಯಂತೆ ವರ್ತಿಸಿದ್ದಾನೆ. ಕಾಲು ಶತಮಾನದ ಹಿಂದೆ, ಈ ಗುಣಗಳು ಇರಲೇ ಬೇಕಾದುವುಗಳೆಂದು ಭಾವಿಸಲಾಗಿತ್ತು. ರಾಹುಲ್ ಬಗ್ಗೆ ವೇದಂ ಜೈಶಂಕರ್ ರಷ್ಟು ಆಳವಾಗಿ ತಿಳಿದುಕೊಂಡವರು ಬೇರೊಬ್ಬರಿದ್ದಾರೆಂದು ನನಗೆ ಅನ್ನಿಸುವುದಿಲ್ಲ. ರಾಹುಲ್ ನಂತೆಯೇ ಅವರೂ ತಮ್ಮ ಕ್ಷೇತ್ರದಲ್ಲಿ ವಿಶಿಷ್ಟರಾದವರು.” ಎಂದಿದ್ದಾರೆ.

ರಾಹುಲ್ ದ್ರಾವಿಡ್ ಅವರ ಜೀವನ ಚರಿತ್ರೆ ಎಂದೇ ಬಿಂಬಿತವಾಗಿರುವ ಈ ಪುಸ್ತಕದಲ್ಲಿ ದ್ರಾವಿಡ್ ಅವರ ಬಾಲ್ಯದ ಹಾಗೂ ಕ್ರಿಕೆಟ್ ಜೀವನದ ಛಾಯಾಚಿತ್ರಗಳಿವೆ. ಚಿತ್ರಗಳನ್ನು ವರ್ಣರಂಜಿತವಾದ ಪುಟಗಳಲ್ಲಿ ನೀಡಿದ್ದಾರೆ. ಪುಸ್ತಕದ ಕೊನೆಯ ಭಾಗದಲ್ಲಿ ಅಂಕಿ ಅಂಶಗಳ ಪರಿಣಿತರಾದ ಕೆ.ಆರ್. ಗುರುರಾಜ ರಾವ್ ಅವರು ಬಹಳ ಸೊಗಸಾಗಿ ದ್ರಾವಿಡ್ ಅವರ ಕ್ರೀಡಾ ಜೀವನದ ಅಂಕಿ ಅಂಶಗಳನ್ನು ಸಂಗ್ರಹಿಸಿ ನೀಡಿದ್ದಾರೆ. ಇದೊಂದು ಉತ್ತಮ ದಾಖಲೆಯಾಗಿ ಉಳಿಯಲಿದೆ. ಸುಮಾರು ೧೯೦ ಪುಟಗಳ ಈ ಪುಸ್ತಕವನ್ನು ಲೇಖಕರು ತನ್ನ ತಾಯಿಗೆ ಮತ್ತು ತನ್ನ ಪ್ರೀತಿಯ ಹೆಂಡತಿ ದೇವಿಕಾಳಿಗೆ ಅರ್ಪಿಸಿದ್ದಾರೆ.