ಕರ್ನಾಟಕದ ಮೊದಲ ಮಹಿಳಾ ಇಂಜಿನಿಯರ್ -ರಾಜೇಶ್ವರಿ ಚಟರ್ಜಿ
ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ನಾವು ಕನ್ನಡದ ಮೊದಲ ಮಹಿಳಾ ಇಂಜಿನಿಯರ್ ಬಗ್ಗೆ ತಿಳಿದುಕೊಳ್ಳುವ. ಕರ್ನಾಟಕದ ಮೊದಲ ಮಹಿಳಾ ಇಂಜಿನಿಯರಿಂಗ್ ಪದವಿ ಪಡೆದವರು ರಾಜೇಶ್ವರಿ ಚಟರ್ಜಿ ಇವರು. ರಾಜೇಶ್ವರಿ ಇವರು ಅಪ್ಪಟ ಕನ್ನಡಿಗರು. ಬಂಗಾಳಿ ಹುಡುಗನನ್ನು ಮದುವೆಯಾದ ಬಳಿಕ ಚಟರ್ಜಿ ಆದರು. ಇವರು ಓರ್ವ ಉತ್ತಮ ವಿಜ್ಞಾನಿಯೂ ಹಾಗೂ ಶಿಕ್ಷಣ ತಜ್ಞೆಯೂ ಆಗಿದ್ದರು. ಭಾರತೀಯ ವಿಜ್ಞಾನ ಸಂಸ್ಥೆ (Indian Institute of Science) ಗೆ ನೇಮಕವಾದ ಮೊದಲ ಮಹಿಳಾ ಇಂಜಿನಿಯರ್ ಕೂಡಾ ಆಗಿದ್ದರು.
ರಾಜೇಶ್ವರಿಯವರ ಜನನ ಮೈಸೂರಿನ ಬಳಿಯ ನಂಜನಗೂಡು ಎಂಬ ಊರಿನಲ್ಲಿ ಜನವರಿ ೨೪, ೧೯೨೨ರಂದು ಆಯಿತು. ಇವರ ತಂದೆ ಬಿ.ಎಂ.ಶಿವರಾಮಯ್ಯನವರು ಖ್ಯಾತ ವಕೀಲರಾಗಿದ್ದವರು. ರಾಜೇಶ್ವರಿ ಇವರು ಉತ್ತಮ ವಿದ್ಯಾವಂತ ಕುಟುಂಬದಿಂದ ಬಂದವರು. ಇವರ ಅಜ್ಜಿ ಕಮಲಮ್ಮ ದಾಸಪ್ಪ ಅಂದಿನ ಮೈಸೂರು ರಾಜ್ಯದ ಮೊದಲ ಮಹಿಳಾ ಪದವೀಧರೆ. ಈ ಕಾರಣದಿಂದಾಗಿ ಬಾಲ್ಯದಿಂದಲೇ ಶೈಕ್ಷಣಿಕ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ರಾಜೇಶ್ವರಿಯವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಅಜ್ಜಿ ಕಮಲಮ್ಮ ದಾಸಪ್ಪನವರೇ ಸ್ಥಾಪಿಸಿದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರೈಸಿದರು. ಖ್ಯಾತ ಕವಿ ‘ಕನ್ನಡದ ಕಣ್ವ’ ಎಂದು ಹೆಸರಾದ ಬಿ.ಎಂ.ಶ್ರೀಕಂಠಯ್ಯ ಇವರು ರಾಜೇಶ್ವರಿಯವರ ದೊಡ್ದಪ್ಪ (ತಂದೆಯ ಅಣ್ಣ) ರಾಗಿದ್ದರು. ಪ್ರಾಥಮಿಕ ಶಿಕ್ಷಣ ಮುಗಿಸಿದ ಬಳಿಕ ರಾಜೇಶ್ವರಿಯವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ನಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಅಲ್ಲಿ ಅವರು ಬಿ.ಎಸ್ಸಿ. (ಆನರ್ಸ್) ಮತ್ತು ಎಂ.ಎಸ್ಸಿ (ಗಣಿತ ಹಾಗೂ ಭೌತಶಾಸ್ತ್ರ) ಪದವಿಗಳನ್ನು ಪ್ರಥಮ ದರ್ಜೆಯಲ್ಲಿ ಪಡೆದುಕೊಂಡರು. ಈ ಕಾರಣಕ್ಕಾಗಿ ಅವರಿಗೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಪಾರಿತೋಷಕ ಹಾಗೂ ಎಂ.ಟಿ.ನಾರಾಯಣ ಅಯ್ಯಂಗಾರ್ ಬಹುಮಾನಗಳು ದೊರಕಿದವು.
ರಾಜೇಶ್ವರಿಯರು ಈ ಸಾಧನೆಗಳನ್ನು ಮಾಡಿದ ಸಮಯದಲ್ಲಿ ಆಗಿನ ಮಹಿಳೆಯರು ಯಾರೂ ಶಾಲೆಯ ಮೆಟ್ಟಲೇ ಹತ್ತುತ್ತಿರಲಿಲ್ಲ. ಆ ಕಾರಣದಿಂದ ರಾಜೇಶ್ವರಿಯವರ ಸಾಧನೆ ಮಹಿಳಾ ಶಿಕ್ಷಣ ಕ್ಷೇತ್ರದಲ್ಲಿ ಒಂದು ಕ್ರಾಂತಿಕಾರಕ ಹೆಜ್ಜೆ ಎಂದು ಹೇಳಬಹುದಾಗಿದೆ. ಇವರ ಕುಟುಂಬದ ಸದಸ್ಯರ ಪ್ರೋತ್ಸಾಹವೇ ಇದಕ್ಕೆ ಮುಖ್ಯ ಕಾರಣ ಎನ್ನಬಹುದು.
ರಾಜೇಶ್ವರಿಯವರು ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪಡೆದ ನಂತರ ೧೯೪೨ರಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಲು ಭಾರತೀಯ ವಿಜ್ಞಾನ ಸಂಸ್ಥೆಗೆ ಅರ್ಜಿಯನ್ನು ಸಲ್ಲಿಸಿದರು. ಆ ಸಮಯದಲ್ಲಿ ಆ ಸಂಸ್ಥೆಗೆ ಅರ್ಜಿ ಸಲ್ಲಿಸಿದವರಲ್ಲಿ ರಾಜೇಶ್ವರಿಯವರು ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದರು. ಇವರನ್ನು ಆಯ್ಕೆ ಮಾಡುವ ವಿಷಯದಲ್ಲೂ ಬಹಳಷ್ಟು ತಿಣುಕಾಟಗಳು ನಡೆದಿದ್ದವು. ಮಹಿಳಾ ಅಭ್ಯರ್ಥಿಯನ್ನು ಸೇರಿಕೊಳ್ಳಬೇಕೋ, ಬೇಡವೋ? ಎಂಬ ಬಗ್ಗೆ ಬಹಳ ಚರ್ಚೆಗಳು ನಡೆದವು. ಕೊನೆಗೆ ಸಂಸ್ಥೆಯ ಅಂದಿನ ಅಧ್ಯಕ್ಷರಾಗಿದ್ದ ಸರ್ ಸಿ.ವಿ.ರಾಮನ್ ಅವರು ಇವರ ಅರ್ಜಿಯನ್ನು ಮಾನ್ಯ ಮಾಡಿ ರಾಜೇಶ್ವರಿಯವರನ್ನು ವಿದ್ಯಾರ್ಥಿಯನ್ನಾಗಿ ಸೇರಿಸಿಕೊಂಡರು. ಹೀಗೆ ಭಾರತೀಯ ವಿಜ್ಞಾನ ಸಂಸ್ಥೆಗೆ ಸೇರ್ಪಡೆಯಾದ ಇವರು ತಮ್ಮ ಆಯ್ಕೆಯನ್ನು ದೆಹಲಿ ಸರಕಾರದಿಂದ ಕೊಡಲ್ಪಡುವ ‘ಉತ್ತಮ ವಿದ್ಯಾರ್ಥಿನಿ' ಪ್ರಶಸ್ತಿಯನ್ನು ಗಳಿಸುವ ಮೂಲಕ ಸಮರ್ಥಿಸಿಕೊಂಡರು. ೧೯೪೬ರಲ್ಲಿ ರಾಜೇಶ್ವರಿಯವರಿಗೆ ಈ ಪ್ರಶಸ್ತಿ ದೊರೆಯಿತು ಅದರ ಜೊತೆಗೆ ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಲು ಧನ ಸಹಾಯವೂ ದೊರೆಯಿತು. ಈ ಸಂದರ್ಭವನ್ನು ಸೂಕ್ತವಾಗಿ ಬಳಸಿಕೊಂಡ ಇವರು ಉನ್ನತ ಶಿಕ್ಷಣಕ್ಕಾಗಿ ಅಮೇರಿಕಾದ ಮಿಚಿಗನ್ ವಿಶ್ವವಿದ್ಯಾಲಯಕ್ಕೆ ತೆರಳಿ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ನಲ್ಲಿ ಪಿ ಹೆಚ್ ಡಿ ಪದವಿ (೧೯೫೩) ಯನ್ನು ಗಳಿಸಿದರು.
ನಂತರ ಭಾರತಕ್ಕೆ ಮರಳಿದ ರಾಜೇಶ್ವರಿಯವರು ಭಾರತೀಯ ವಿಜ್ಞಾನ ಸಂಸ್ಥೆಯ ಎಲೆಕ್ಟ್ರಿಕಲ್ ಕಮ್ಯೂನಿಕೇಶನ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಉದ್ಯೋಗಿಯಾಗಿ ಸೇರಿಕೊಂಡರು. ಅದೇ ಸಮಯ ಅವರ ಸಹೋದ್ಯೋಗಿಯಾಗಿದ್ದ ಬಂಗಾಳದ ಸಿಸಿರ್ ಕುಮಾರ್ ಚಟರ್ಜಿಯವರ ಜೊತೆ ಪ್ರೇಮಾಂಕುರವಾಗಿ ಮದುವೆಯಾದರು. ಮದುವೆಯ ಬಳಿಕ ಇವರ ಹೆಸರಿಗೆ ಚಟರ್ಜಿ ಎಂಬ ಅಡ್ಡ ನಾಮ (ಸರ್ ನೇಮ್) ಸೇರ್ಪಡೆಯಾಗಿ ‘ರಾಜೇಶ್ವರಿ ಚಟರ್ಜಿ’ ಆದರು. ವಿವಾಹದ ಬಳಿಕ ದಂಪತಿಗಳು ಮೈಕ್ರೋವೇವ್ ಇಂಜಿನಿಯರಿಂಗ್ ವಿಭಾಗದಲ್ಲಿ ಉನ್ನತ ಸಂಶೋಧನೆಯನ್ನು ಕೈಗೊಂಡರು. ಈ ರೀತಿಯ ಸಂಶೋಧನೆ ನಡೆಯುತ್ತಿರುವುದು ಭಾರತದಲ್ಲಿ ಪ್ರಥಮ ಬಾರಿಯಾಗಿತ್ತು. ಇವರು ಭಾರತದ ಮೊತ್ತ ಮೊದಲ ಮೈಕ್ರೋವೇವ್ ಸಂಶೋಧನಾ ಕೇಂದ್ರವನ್ನು ಸ್ಥಾಪನೆ ಮಾಡಿದರು. ಆ ಸಂಸ್ಥೆಯ ಪ್ರಾಧ್ಯಾಪಕರಾಗುವ ಜೊತೆಗೇ ಎಲೆಕ್ಟ್ರಿಕಲ್ ಕಮ್ಯೂನಿಕೇಶನ್ ಇಂಜಿನಿಯರಿಂಗ್ ಇಲಾಖೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.
ರಾಜೇಶ್ವರಿಯವರು ೧೯೮೦ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಸೇವೆಯಿಂದ ನಿವೃತ್ತಿ ಹೊಂದಿದರು. ನಿವೃತ್ತಿಯ ಬಳಿಕವೂ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಮಹಿಳಾ ಶಿಕ್ಷಣದ ಸಬಲೀಕರಣ, ಬಡತನ ನಿರ್ಮೂಲನೆ, ಜಾತಿ ವ್ಯವಸ್ಥೆ, ಲಿಂಗ ಅಸಮಾನತೆಯ ಕುರಿತು ದನಿ ಎತ್ತಿದರು. ಇವರ ಪತಿ ಸಿಸಿರ್ ಚಟರ್ಜಿ ಇವರು ೧೯೯೪ರಲ್ಲಿ ನಿಧನ ಹೊಂದಿದರು. ರಾಜೇಶ್ವರಿಯವರು ತಮ್ಮ ೮೮ನೇ ವಯಸ್ಸಿನಲ್ಲಿ ೨೦೧೯ ಸೆಪ್ಟೆಂಬರ್ ೩ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು. ಇವರ ಮಗಳು ಇಂದಿರಾ ಚಟರ್ಜಿಯೂ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಜೇಶ್ವರಿಯವರು ಹಲವಾರು ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ. ಎಲಿಮೆಂಟ್ಸ್ ಆಫ್ ಮೈಕ್ರೋವೇವ್ ಇಂಜಿನಿಯರಿಂಗ್, ಭಾರತದ ಕೆಲವು ಮಹಿಳೆಯರು ಮತ್ತು ಪುರುಷರ ನೈಜ ಕಥೆಗಳು, ಸುಧಾರಿತ ಮೈಕ್ರೋವೇವ್ ಇಂಜಿನಿಯರಿಂಗ್, ಡೈ ಎಲೆಕ್ಟ್ರಿಕಲ್ ಮತ್ತು ಡೈ ಎಲೆಕ್ಟ್ರಿಕಲ್ ಲೋಡೆಡ್ ಅಂಟೆನಾಗಳು ಮೊದಲಾದ ಕೃತಿಗಳನ್ನು ರಚನೆ ಮಾಡಿದ್ದಾರೆ. ಇವರಿಗೆ ಜಗದೀಶ್ಚಂದ್ರ ಭೋಸ್ ಸ್ಮಾರಕ ಪ್ರಶಸ್ತಿ, ಮೌಂಟ್ ಬ್ಯಾಟನ್ ಪಾರಿತೋಷಕ, ಅತ್ಯುತ್ತಮ ಸಂಶೋಧನೆಗಾಗಿ ರಾಮಲಾಲ್ ವಾದ್ವಾ ಪ್ರಶಸ್ತಿ, ಮೇಘನಾದ ಸಹಾ ಬಹುಮಾನಗಳು ಲಭಿಸಿವೆ.
ಮಹಿಳೆಯರು ಮನೆಯಿಂದ ಹೊರಗೇ ಬಾರದೇ ಅಡುಗೆ ಮನೆ, ಮಕ್ಕಳು ಇವುಗಳ ನಡುವೇ ಸೀಮಿತರಾಗಿದ್ದ ಕಾಲಘಟ್ಟದಲ್ಲಿ ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ವಿಭಾಗದಲ್ಲಿ ಡಾಕ್ಟರೇಟ್ ಪದವಿಗಳನ್ನು ಪಡೆದ ರಾಜೇಶ್ವರಿ ಚಟರ್ಜಿಯವರು ಮಹಿಳೆಯರಿಗೆಲ್ಲಾ ಪ್ರೇರಣಾ ಶಕ್ತಿ. ಕರ್ನಾಟಕ ರಾಜ್ಯದ ಮೊದಲ ಮಹಿಳಾ ಇಂಜಿನಿಯರ್ ಆಗಿ ಇವರ ಹೆಸರು ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿರುತ್ತದೆ.
ಚಿತ್ರ ಕೃಪೆ: ಅಂತರ್ಜಾಲ ತಾಣ