ಕರ್ನಾಟಕದ ಸರಣಿ ಹಂತಕರು
ಈ ಪುಸ್ತಕವೊಂದು ಕರ್ನಾಟಕದ ಪಾಪಿಗಳ ಲೋಕದ ಡೈಜೆಸ್ಟ್ ಎನ್ನಬಹುದಾಗಿದೆ. ಇದರಲ್ಲಿ ಪ್ರಮುಖವಾದ ಮೂರು ಸರಣಿ ಹಂತಕರ ಕೇಸ್ ವಿವರಗಳನ್ನು ಸವಿಸ್ತಾರವಾಗಿ ನೀಡಲಾಗಿದೆ. ದಕ್ಷಿಣ ಭಾರತದಲ್ಲೇ ಕುಖ್ಯಾತವಾಗಿದ್ದ ದಂಡುಪಾಳ್ಯ ಕ್ರಿಮಿನಲ್ ಗ್ಯಾಂಗ್, ಸೈನೈಡ್ ಕಿಲ್ಲರ್ ಮಲ್ಲಿಕಾ, ಸನೈಡ್ ಕಿಲ್ಲರ್ ಹೆಣ್ಣು ಬಾಕ ಮೋಹನ್ ಇವರ ಬಗ್ಗೆ ಸವಿವರವಾದ ಮಾಹಿತಿ ನೀಡಲಾಗಿದೆ.
ಕುಖ್ಯಾತ ದಂಡುಪಾಳ್ಯದ ಬಗ್ಗೆ ನಿಮಗೆ ಈಗಾಗಲೇ ಅದೇ ಹೆಸರಿನ ಚಲನ ಚಿತ್ರ ಬಿಡುಗಡೆಯಾಗಿರುವುದರಿಂದ ಬಹಳಷ್ಟು ವಿಷಯ ತಿಳಿದಿದ್ದರೂ ರಾಜ್ಯದಾದ್ಯಂತ ೬೫ ಕಡೆಗಳಲ್ಲಿ ಅವರ ತಂಡದ ಮೇಲೆ ದಾಖಲಾಗಿರುವ ಕೇಸ್ ಗಳ ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ. ದಂಡು ಪಾಳ್ಯದ ಹಂತಕರ ಹಿನ್ನಲೆ ಬಗ್ಗೆ ಸ್ವಲ್ಪ ವಿವರಗಳನ್ನೂ ನೀಡಲಾಗಿದೆ.
“ಅಪರಾಧ ಪ್ರವೃತ್ತಿಯನ್ನು ಬೆಳೆಸಿಕೊಂಡ ದಂಡು ಪಾಳ್ಯ ಕಾಲೋನಿಯ ಜನ ಆಂಧ್ರ ಪ್ರದೇಶದ ಕುಪ್ಪಂನಿಂದ ನಮ್ಮ ರಾಜ್ಯಕ್ಕೆ ಬಂದವರು. ಕರ್ನಾಟಕದ ಕೆ.ಜಿ.ಎಫ್., ಆಂಧ್ರ ಹಾಗೂ ತಮಿಳುನಾಡು ರಾಜ್ಯಗಳಿಗೆ ಹೊಂದಿಕೊಂಡಿರುವುದರಿಂದ, ಆಂಧ್ರದ ಜನ ಕುಪ್ಪಂ ಮೂಲಕ ತಮಿಳುನಾಡಿಗೆ ಬಂದು ಅಲ್ಲಿಂದ ಕೆ. ಜಿ.ಎಫ್. ಗೆ ಬಂದು, ನಂತರ ದಂಡು ಪಾಳ್ಯದಲ್ಲಿ ವಾಸಿಸತೊಡಗಿದರು. (ದಂಡು ಪಾಳ್ಯ ಎಂಬ ಪುಟ್ಟ ಹಳ್ಳಿ ಇರೋದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ.) ದಂಡುಪಾಳ್ಯದ ಭೋವಿಗಳು ಒಂದು ವಿಶೇಷ ರೀತಿಯ ಭಾಷೆಯನ್ನು ಮಾತನಾಡುತ್ತಾರೆ. ಇವರು ಕನ್ನಡ, ತಮಿಳು, ತೆಲುಗು, ಹಿಂದಿ, ಮರಾಠಿ ಭಾಷೆಯನ್ನು ಸುಲಲಿತವಾಗಿ ಮಾತಾನಾಡುತ್ತಾರೆ. ದಂಡುಪಾಳ್ಯದ ಭೋವಿಗಳ ಕೆಲವು ಸಂಬಂಧಿಕರು ಕೋಲಾರ ಜಿಲ್ಲೆಯ ಕೂರ್ಲಾಪಳ್ಳಿ, ಸಿರುಬರಾಳ ಹಳ್ಳಿಗಳಲ್ಲಿ ವಾಸಿಸುವುದಲ್ಲದೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬೇಗೂರು ಹಾಗೂ ಮೈಸೂರಿನ ಪಿರಿಯಾಪಟ್ಟಣದಲ್ಲೂ ವಾಸಿಸುತ್ತಿದ್ದರು. ಪರಿಶಿಷ್ಟ ಜನಾಂಗಕ್ಕೆ ಇವರು ಸೇರಿರುವುದರಿಂದ ಹಲವಾರು ಜನರಿಗೆ ಸರ್ಕಾರ ಸೈಟುಗಳನ್ನು ಮಂಜೂರಿಸಿದೆ.”
ಕ್ರಮೇಣ ಇವರು ಕೊಲೆ ಮಾಡಿ, ದರೋಡೆ ಮಾಡುವುದನ್ನೇ ಕಸುಬಾಗಿಸಿಕೊಂಡರು. ಕರ್ನಾಟಕ ರಾಜ್ಯದ ಹಲವೆಡೆ ಈ ರೀತಿಯಾದ ಘಟನೆಗಳು ನಡೆದವು. ದಂಡುಪಾಳ್ಯ ಹೆಸರು ಬಹಳ ಕುಖ್ಯಾತಿ ಪಡೆಯಿತು. ಅದೇ ರೀತಿಯ ಮತ್ತೊಂದು ಕೇಸ್ ಸೈನೈಡ್ ಕಿಲ್ಲರ್ ಮಲ್ಲಿಕಾ. ದೇವಸ್ಥಾನಗಳಿಗೆ ಬರುವ ಮಧ್ಯವಯಸ್ಕ ಹೆಂಗಸರನ್ನು ಮಾತನಾಡಿ, ಅವರ ಬಳಿ ಸಲುಗೆ ಬೆಳೆಸಿ ಅವರ ಸಂಕಷ್ಟಗಳನ್ನು ಆಲಿಸಿ, ಪರಿಹಾರಕ್ಕಾಗಿ ಪೂಜೆ ಮಾಡಿಸಿಕೊಡುತ್ತೇನೆ ಎಂದು ನಂಬಿಸಿ, ಉಪಾಯವಾಗಿ ಸೈನೈಡ್ ತಿನ್ನಿಸಿ ಅವರನ್ನು ಕೊಂದು ಅವರ ಆಭರಣ ಮತ್ತು ಹಣವನ್ನು ಲಪಟಾಯಿಸುತ್ತಿದ್ದಳು. ಮಲ್ಲಿಕಾ ಒಮ್ಮೆ ಬೆಂಗಳೂರಿನ ಕಲಾಸಿಪಾಳ್ಯಂ ಬಸ್ ನಿಲ್ದಾಣದಲ್ಲಿ ಮೊಬೈಲ್ ಫೋನ್ ಮಾರಾಟ ಮಾಡುತ್ತಿದ್ದಾಗ ಅನುಮಾನಗೊಂಡ ಪೋಲೀಸರು ಆಕೆಯನ್ನು ವಿಚಾರಣೆ ಮಾಡಿದಾಗ ಅವಳು ಮಾಡಿದ ಕೊಲೆಯ ವಿವರಗಳು ಒಂದೊಂದಾಗಿ ಹೊರಬಂದವು.
ಈ ಪುಸ್ತಕದಲ್ಲಿರುವ ಮತ್ತೊರ್ವ ಹಂತಕ ‘ಕರಾವಳಿ ತೀರದ ಹೆಣ್ಣುಬಾಕ ಮೋಹನ್ ಕುಮಾರ್'. ಈತ ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದು, ಉಪಾಯದಿಂದ ಮದುವೆಯಾಗದ, ಬಡತನದ ಹಿನ್ನಲೆಯ ಯುವತಿಯರನ್ನು ಮದುವೆಯಾಗುತ್ತೇನೆಂದು ಪುಸಲಾಯಿಸಿ, ಅವರನ್ನು ಲೈಂಗಿಕವಾಗಿ ಬಳಸಿ ನಂತರ ಉಪಾಯದಿಂದ ಸೈನೈಡ್ ತಿನ್ನಿಸಿ ಕೊಲೆ ಮಾಡುತ್ತಿದ್ದ. ಅವರ ಬಂಗಾರ ಮತ್ತು ಹಣವನ್ನು ಅಪಹರಿಸುತ್ತಿದ್ದ. ಈತನಿಗೆ ‘ಸೈನೈಡ್ ಮೋಹನ' ಎಂಬ ಹೆಸರೂ ಇದೆ. ರಾಜ್ಯದ ಹಲವೆಡೆ ಈತನ ಮೇಲೆ ದೂರು ದಾಖಲಾಗಿದೆ. ಈತನ ಬಂಧನವಾದಾಗ ವಕೀಲರನ್ನು ನೇಮಿಸದೇ ಈತನೇ ಖುದ್ದಾಗಿ ತನ್ನ ಪರವಾಗಿ ವಾದ ಮಾಡಿದ್ದ. ಹಲವು ಕೇಸುಗಳಲ್ಲಿ ಗಲ್ಲು ಶಿಕ್ಷೆ ಮತ್ತು ಜೀವಾವಧಿ ಶಿಕ್ಷೆಗಳು ಆಗಿವೆ.
ಈ ಮೂವರು ಹಂತಕರ ವಿವರಗಳನ್ನು ಓದುತ್ತಾ ಓದುತ್ತಾ ನೀವು ಭಯಬೀಳುವ ಸಾಧ್ಯತೆ ಇದೆ. ಏಕೆಂದರೆ ಅತ್ಯಂತ ದಾರುಣವಾಗಿ ಇವರು ಕೊಲೆಗಳನ್ನು ಮಾಡಿದ್ದಾರೆ. ಸುಮಾರು ೧೩೫ ಪುಟಗಳ ಈ ಪುಸ್ತಕವನ್ನು ರಾಜ್ಯೋತ್ಸವದ ೫೫ನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಸಪ್ನ ಬುಕ್ ಹೌಸ್ ಇವರು ಹೊರತಂದಿದ್ದಾರೆ.