ಕರ್ನಾಟಕದ ಹಾನಿಮನ್ ಡಾ.ಕೆ. ವಸಂತಕುಮಾರ ರಾವ್,ಕೈಕಂಬ

ಕರ್ನಾಟಕದ ಹಾನಿಮನ್ ಡಾ.ಕೆ. ವಸಂತಕುಮಾರ ರಾವ್,ಕೈಕಂಬ

ಬರಹ

(ಬಂಟ್ವಾಳ ತಾಲೂಕಿನ ಪೆರುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿರುವ ಡಾ.ವಿಶ್ವೇಶ್ವರ ವಿ ಕೆ ಅವರ ಕಾಂತಾವರ ಕನ್ನಡ ಸಂಘದ "ನಾಡಿಗೆ ನಮಸ್ಕಾರ" ಸರಣಿಯ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಹತ್ತನೇ ಪುಸ್ತಕದಿಂದ ಆಯ್ದ ಭಾಗಗಳು. ಅಧಿಕೃತ ಮಾರಾಟಗಾರರು: ಜ್ಞಾನಗಂಗಾ ಪುಸ್ತಕ ಮಳಿಗೆ ,ಪ್ರವಾಸಿ ಮಂದಿರದ ಎದುರು,ದರ್ಬೆ, ಪುತ್ತೂರು-574202 ದ.ಕ. tel:08251-232421 cell: 9448381511)

ತಂತ್ರಜ್ಞಾನದ ಪ್ರಗತಿ ಮತ್ತು ವೈದ್ಯ ವಿಜ್ಞಾನದಲ್ಲಿ ಸಾಧಿಸಿರುವ ಪ್ರಗತಿ ಅಚ್ಚರಿ ತರುವಂಥದ್ದು. ರೋಗಗಳಿಂದ ವಿಮುಕ್ತರಾಗಿ ಜೀವನ ಸಾಗಿಸಲು ಹೊಸ ಆವಿಷ್ಕಾರಗಳು ಸಹಕಾರಿಯಾಗಿವೆ. ಆದರೆ ಅಪಶ್ರುತಿಯೂ ಮಿಡಿಯುತ್ತಿದೆ.ಹಣದ ವಿಷ ವರ್ತುಲದೊಳಗೆ ಸಿಲುಕಿದ ವೈದ್ಯ ವೈದ್ಯಕೀಯ ಕ್ಷೇತ್ರ, ಸೇವೆಯ ಕಕ್ಷೆ ದಾಟಿ ವ್ಯಾಪಾರ ವಾಣಿಜ್ಯವಾಗಿದೆ.ಔಷಧ ಕಂಪೆನಿಗಳು -ವೈದ್ಯರು-ಪ್ರಯೋಗಾಲಯಗಳು ಇತ್ಯಾದಿಗಳ ನಡುವಣ ಸಂಬಂಧದಲ್ಲಿ ನೈತಿಕತೆಯ ಸೋಲು -ವೈದ್ಯಕೀಯ ರಂಗ ಸಿಕ್ಕಿಕೊಂಡಿರುವ ಹೊಸ ಗೋಜಲು. ಎಂಥ ರೋಗಿಯೇ ಇರಲಿ ಸರಳವಾದ ಚಿಕಿತ್ಸೆಯ ಮೂಲಕ ಸಮಾಧಾನ ನೀಡುವುದು ಸರಿಯಾದ ಕ್ರಮ. ಹೋಮಿಯೋಪತಿ ವೈದ್ಯ ಪದ್ಧತಿ ಇಲ್ಲಿ ಹೆಚ್ಚು ಪ್ರಸ್ತುತವಾಗುತ್ತದೆ. ದಕ್ಷಿಣಕನ್ನಡದಲ್ಲಿ ಹೋಮಿಯೋಪತಿಯ ಜತೆಗೇ ಡಾ.ವಸಂತ್‍ಕುಮಾರ್ ರಾವ್ ಕೈಕಂಬ ಬೆಸೆದುಕೊಂಡಿದ್ದಾರೆ.ವಿವಿಧ ವೈದ್ಯ ಪದ್ಧತಿಗಳನ್ನು ಅನುಸರಿಸುವವರ ನಡುವೆ ಅವಿಶ್ವಾಸ-ದ್ವೇಷ-ಅಪನಂಬಿಕೆಗಳು ಹೆಡೆಯಾಡುತ್ತಿರುವ ದಿನಗಳಲ್ಲಿ ಬಿ ಎ ಎಂ ಎಸ್, ಎಂ ಬಿ ಬಿ ಎಸ್ ಮತ್ತು ಎ ಎಂ ಐ ಎಚ್ - ಹೀಗೆ ಮೂರು ಮುಖ್ಯ ವೈದ್ಯಪದ್ಧತಿಗಳಲ್ಲಿ ಪಧವೀಧರನಾಗಿ, ಸ್ವತ: ತಾನು ಗುಣ ಕಾಣದ ಕಾಯಿಲೆಯಿಂದ ಶಾರೀರಿಕವಾಗಿ, ಮಾನಸಿಕವಾಗಿ ಜರ್ಜರಿತನಾಗಿದ್ದರೂ ರೋಗಿಗಳ ಹಿತಚಿಂತನೆಯನ್ನು ಹಗಲೂ ರಾತ್ರಿ ಧ್ಯಾನಿಸುತ್ತಿರುವ ಅಪರೂಪದ ಮನುಷ್ಯನಾಗಿ ಈ ವೈದ್ಯ ಕಾಣಿಸಿಕೊಳ್ಳುತ್ತಾರೆ.ಅವರ ಮೂಲಮಂತ್ರ: ನ ತ್ವಹಂ ಕಾಮಯೇ ರಾಜ್ಯಂ ನ ಸ್ವರ್ಗಂ ನ ಪುನರ್ಭವಂ ಕಾಮಯೇ ದು:ಖ ತಪ್ತಾನಾಂ ಪ್ರಾಣೀನಾಂ ಅರ್ತಿನಾಶನಂ|| "ಸಮನ್ವಯಿತ ವೈದ್ಯ ಪದ್ಧತಿ"ಯ ರೂವಾರಿಯಾಗ ಬಲ್ಲವರು. ಆದರ್ಶ ವೈದ್ಯ, ವೈದ್ಯ ವಿಜ್ಞಾನಿ, ವೈದ್ಯಕೀಯ ಮುತ್ಸದ್ಧಿ, ಭೀಕರ ರೋಗವೊಂದರ ವಿರುದ್ಧ ಸ್ವತ: ಧೀರ ಹೋರಾಟ ನಡೆಸುತ್ತಿರುವ "ಸಮರ್ಥ" ರೋಗಿ ಡಾ ವಸಂತ್. ಡಾ ವಸಂತ್ poly arteritis nodosa ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದಾರೆ. ನಲ್ವತ್ತನೇ ವಯಸ್ಸಿನಲ್ಲೇ ಕಾಯಿಲೆಗೆ ತುತ್ತಾಗಿ, ಕಾಲು ಕತ್ತರಿಸ ಬೇಕೆನ್ನುವ ಸಲಹೆ ಎದುರಾಯಿತಿವರಿಗೆ.ಆಗ ಚಾರ್ಟರ್ಡ್ ಅಕೌಂಟೆಂಟ್ ಬಿ ಪಿ ರಾವ್ ಸಲಹೆ ಮೇರೆಗೆ ಹೊಮಿಯೋ ವೈದ್ಯ ಡಾ ಸುಂದರರಾಯರನ್ನು ಚಿಕಿತ್ಸೆಗೆ ಹೋದರು. ಇವರ ತೊಂದರೆ ಆಲಿಸಿ, ಸುಂದರ ರಾಯರು ಕೇಳಿದ್ದು ಮೂರೇ ಪ್ರಶ್ನೆಗಳು: *"ರಾತ್ರಿ ಮಲಗಿದಾಗ ಬಾಯಿಯಲ್ಲಿ ಜೊಲ್ಲು ಬರತ್ತದೋ?" *"ತುಂಬಾ ಜಾಸ್ತಿ ಬೆವರುತ್ತದೋ? ಬೆವರಿನ ಬಣ್ಣ ಹಳದಿಯೋ?" *ಕಾಲು ನೋವು ಸಾಮಾನ್ಯವಾಗಿ ರಾತ್ರಿ ಬರುವುದೋ?" ಹೌದು ಎನ್ನುವುದೇ ವಸಂತರ ಉತ್ತರವಾಗಿತ್ತು. ನಂತರ ಸುಂದರರಾಯರು ಹೇಳಿದ್ದು:"you are destined to become a wonderful homeopathic doctor". "ಸದ್ಯ ಬದುಕುವ ಆಸೆಯನ್ನೇ ಬಿಟ್ಟಿರುವ ನನ್ನ ವಿಷಯದಲ್ಲಿ ತಾವು ಹೇಗೆ ಈ ಮಾತನ್ನು ಹೇಳುವಿರಿ?",ವಸಂತರ ಪ್ರಶ್ನೆಗೆ ಸುಂದರರಾಯರ ನಗೆಯ ಉತ್ತರ: "ಇಷ್ಟೊಂದು ಭಯಂಕರ ಕಾಯಿಲೆಯಿದ್ದು ವಾಸಿಯಾದ ಬಳಿಕ ನೀವು ಅಷ್ಟು ಸುಲಭದಲ್ಲಿ ಹೊಮಿಯೋಪತಿಯನ್ನು ಬಿಟ್ಟು ಕೊಡುತ್ತೀರಾ?ಖಂಡಿತಾ ಹೊಮಿಯೋಪತಿ ಕಲಿಯುತ್ತೀರಿ;ಶ್ರೇಷ್ಠ ಹೊಮಿಯೋಪತ್ ಆಗುತ್ತೀರಿ." ಹದಿನೈದು ವರ್ಷಗಳ ನಂತರ ಬಳಿಕ ಈ ಘಟನೆಯನ್ನಿನ್ನೂ ವಸಂತ್ ನೆನೆಯುತ್ತಾರೆ. ಒಂದೇ ವಾರದ ಚಿಕಿತ್ಸೆಯಿಂದ ವಸಂತ್ ಪವಾಡ ಸದೃಶ್ಯ ಚೇತರಿಕೆ ಕಂಡರು! ಮುಂದೆ ಹೋಮಿಯೋಪತಿ ಸೆಳೆತ ವಸಂತ್‌ರನ್ನು AMIH ಪದವಿ ಪಡೆಯಲು ಪ್ರೇರೇಪಿಸಿತು. ಈ ಪದ್ಧತಿಯಲ್ಲಿ ಚಿಕಿತ್ಸೆ ನಡೆಸಿ, ಆರ್ತ್ರೈಟಿಸ್,ಅಸ್ತಮಾ, ಮೈಗ್ರೇನ್,ಮುಟ್ಟಿನ ತೊಂದರೆಗಳು,ಮಾನಸಿಕ ಕಾಯಿಲೆಗಳು... ಹೀಗೆ ಹಲವು ವಿಧದ ಕಾಯಿಲೆಗಳಿಂದ ಕತ್ತಲಲ್ಲಿದ್ದ ಅನೇಕ ಮಂದಿಯ ಬಾಳಿನಲ್ಲಿ ನೆಮ್ಮದಿಯ ದೀಪವನ್ನು ಹಚ್ಚಿದ್ದಾರೆ. ವಸಂತರ ಪ್ರಕಾರ ಹೋಮಿಯೀಪತಿ ಔಷಧಿಗಳು ಮೂರು ಲಕ್ಷಣಗಳನ್ನು ಹೊಂದಿವೆ: *ತಕ್ಷಣ ಕಾರ್ಯವೆಸಗುವುದು. *ದೇಹಕ್ಕೆ ಸೌಮ್ಯವಗಿ ಚಿಕಿತ್ಸೆ ನೀಡುವುದು. *ಶಾಶ್ವತವಾಗಿ ರೋಗ ಗುಣ ಮಾಡುವುದು. ಹೋಮಿಯೋಪತಿಯಲ್ಲಿ ರೋಗಿಗೆ ಪ್ರಾಧಾನ್ಯ.ಮನುಷ್ಯನನ್ನು ಒಂದೇ ಘಟಕವಾಗಿ ನೋಡುವುದು,ಮನುಷ್ಯನು ಪ್ರಕೃತಿಯ ಜತೆ ಸಾಮರಸ್ಯ ಕಾಪಾಡಿಕೊಂಡು ಬರಲು ಪ್ರತಿಪಾದಿಸುವುದು,ವ್ಯವಸ್ಥಿತ ಜೀವನ ವಿಧಾನಗಳ ಅಳವಡಿಕೆಗೆ ಇಂಬು ಕೊಡುವುದು,ಸಮಾಜ-ಕುಟುಂಬ ಮತ್ತು ಕಾರ್ಯಕ್ಷೇತ್ರಗಳಲ್ಲಿ ಸಮಸ್ಥಿರತೆ ಸಾಧಿಸಲು ಪ್ರಚೋದಿಸುವುದು -ಹೋಮಿಯೋಪತಿಯ ವೈಶಿಷ್ಠ್ಯತೆಗಳು. ಓರ್ವ ಹೊಮಿಯೋಪತಿ ವೈದ್ಯ ನುರಿತ ಪತ್ತೇದಾರನಂತೆ ಕಾರ್ಯವೆಸಗಬೇಕಾಗುತ್ತದೆ.ರೋಗಿಯ ಬಾಯಿಯಿಂದ ಕಾಯಿಲೆಯ ಮೂಲವನ್ನು ಹೊರಗೆಳೆಯಲು ಈ ಚಾಲಾಕು ಅಗತ್ಯ. ಮನೋಲೈಂಗಿಕ ಮತ್ತು ಮನೋ ರೋಗ ಚಿಕಿತ್ಸೆಯಲ್ಲೂ ಹೊಮಿಯೋಪತಿ ಪರಿಣಾಮಕಾರಿ. ಹಲವು ಮಂದಿ ಅಲೋಪತಿಯ ತಜ್ಞ ವೈದ್ಯರು ನಿರ್ದಿಷ್ಟ ಬಗೆಯ ರೋಗಿಗಳನ್ನು ಚಿಕಿತ್ಸೆಗೆಂದು ವಸಂತ್‌ರಲ್ಲಿ ಕಳುಹಿಸುವುದಿದೆ.ವಸಂತರ ಅರ್ಹತೆ,ಅವರ ರೋಗಿಪ್ರಿಯತೆ -ಯಾಶೋಪ್ರಮಾಣಗಳ ಮೇಲಿನ ನಂಬಿಕೆ ಇದರ ಹಿಂದಿದೆ. ಕೆ ಎಂ ಸಿಯ ಮೆಡಿಸಿನ್ ವಿಭಾಗದ ಡಾ ಕೆ ಚಕ್ರಪಾಣಿ, AJIMSನ optholmology head ಡಾ ರಾಮಮೋಹನ್ ರಾವ್, ಸ್ತ್ರೀ ರೋಗ ತಜ್ಞೆ ಡಾ ಸಾವಿತ್ರಿ ದೈತೋಟ, ಡಾ ಕಸ್ತೂರಿ, ಡಾ ಅನಂತಲಕ್ಷ್ಮಿ, ಪುತ್ತೂರಿನ್ ENT ತಜ್ಞ ಡಾ ರಾಮಮೋಹನ,ಮಂಗಳೂರಿನ ಡಾ ಜಿ ಕೆ ಹೆಬ್ಬಾರ್, ದಂತ ವೈದ್ಯಕೀಯ ತಜ್ಞರಾದ ಡಾ ಅರವಿಂದ ಭಟ್, ಡಾ ಶುಭನ್ ಆಳ್ವ, ಪಶುವೈದ್ಯಕೀಯ ತಜ್ಞ ಮನೋಹರ ಉಪಾಧ್ಯ..... ಹೀಗೆ ಹಲವಾರು ಮಂದಿ ನಿರಂತರವಾಗಿ ಡಾ ವಸಂತ್‌ರಿಂದ ಹೋಮಿಯೋ ಪರಿಮಳವನ್ನು ಆಸ್ವಾದಿಸುತ್ತಾರೆ. ಡಾ.ವಸಂತ್ ಹೀಗೆ ಹೇಳುತ್ತಾರೆ:"ಯಾವುದೇ ಪದ್ಧತಿಯ ಚಿಕಿತ್ಸೆಯಿರಲಿ ಗುಣ ಆಗುವವನಿಗೆ ಅಗುತ್ತದೆ.ಆಗದವನಿಗೆ ಇಲ್ಲ. ಯಾಕೆಂದರೆ ವ್ಯಕ್ತಿಯೊಬ್ಬನ ಆಧಿದೈವಿಕ,ಆಧಿಭೌತಿಕ,ಆಧ್ಯಾತ್ಮಿಕ ಹಿನ್ನೆಲೆಯನ್ನು ಪೂರ್ತಿಯಾಗಿ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ",ಎನ್ನುವ ವಾಸ್ತವವಾದಿ ಅವರು.ಶೇಕಡಾ ಅರುವತ್ತು-ಎಪ್ಪತ್ತರಷ್ಟು ಯಶೋಪ್ರಮಾಣ ಇದ್ದರೂ ಚಿಕಿತ್ಸೆ ವಿಫಲವಾಗುವುದೂ ಇದೆ.ಸ್ವತ: ಅವರ ಕಾಯಿಲೆಗೂ ಅವರಿಗೆ ಪೂರ್ತಿ ಪರಿಹಾರ ಸಿಕ್ಕಿಲ್ಲ!