ಕರ್ನಾಟಕ ಬ್ಯಾಂಕ್ ನಿವೃತ್ತ ಚೇರ್ಮನ್ ಜಯರಾಮ್ ಭಟ್ ಅವರಿಗೆ ನುಡಿನಮನ

ಐದು ದಶಕಗಳ ಬ್ಯಾಂಕಿಂಗ್ ಸೇವೆಯಲ್ಲಿ ಬ್ಯಾಂಕಿಂಗ್ ದಿಗ್ಗಜನಾಗಿ ಬೆಳೆದು, ಕರ್ನಾಟಕ ಬ್ಯಾಂಕ್‌ನ ಚೇರ್ಮನ್ ಆಗಿ ನಿವೃತ್ತರಾದ ಪೊಳಲಿ ಜಯರಾಮ ಭಟ್ 9 ಆಗಸ್ಟ್ 2023ರಂದು ಹೃದಯಾಘಾತದಿಂದ ನಮ್ಮನ್ನಗಲಿದರು.
ರಾಜ ಪುರೋಹಿತ ಪೊಳಲಿ ದಿ. ದೊಡ್ಡ ವಾಸುದೇವ ಭಟ್ಟರ ಏಳು ಮಕ್ಕಳಲ್ಲಿ ಐದನೆಯವರಾದ ಜಯರಾಮ ಭಟ್ ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಪೊಳಲಿಯಲ್ಲಿ 14 ನವಂಬರ್ 1951ರಂದು. ಬದುಕಿನುದ್ದಕ್ಕೂ ಪೌರೋಹಿತ ಪರಂಪರೆಯ ಮೌಲ್ಯಗಳನ್ನು ಅನುಸರಿಸಿದವರು. ಬಾಲ್ಯದ ಬಡತನದ ಎಲ್ಲ ಕಷ್ಟಕಾರ್ಪಣ್ಯಗಳನ್ನು ಎದುರಿಸುತ್ತಾ, ಬೆಳೆದವರು. ಪೊಳಲಿ ವಿದ್ಯಾವಿಲಾಸ ಪ್ರಾಥಮಿಕ ಶಾಲೆಯಲ್ಲಿ ಅವರ ಆರಂಭಿಕ ವಿದ್ಯಾಭ್ಯಾಸ. ಅನಂತರ 4 ಮೈಲು ದೂರದ ಗುರುಪುರ ಬೋರ್ಡ್ ಹೈಸ್ಕೂಲಿಗೆ ಪ್ರತಿದಿನವೂ ಬರಿಗಾಲಿನಲ್ಲೇ ನಡೆದು ಹೋಗಿ ಬರುತ್ತಾ ಹೈಸ್ಕೂಲು ಕಲಿಕೆ. ತದನಂತರ ಬಾಡಿಗೆ ಕೋಣೆಯಲ್ಲಿ ವಾಸ ಮಾಡುತ್ತಾ ಮಂಗಳೂರಿನ ಸೈಂಟ್ ಎಲೋಸಿಯಸ್ ಕಾಲೇಜಿನಲ್ಲಿ ಪಿ.ಯು.ಸಿ. ಹಾಗೂ ಬಿ.ಎಸ್ಸಿ. ಪದವಿ ಶಿಕ್ಷಣ. ನಂತರ ಮೈಸೂರು ವಿಶ್ವವಿದ್ಯಾಲಯದಿಂದ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು.
ಚಿಕ್ಕಮಗಳೂರು ಮತ್ತು ಮೂಲ್ಕಿಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಕೆಲವೇ ತಿಂಗಳುಗಳ ಅವಧಿ ಉಪನ್ಯಾಸಕರಾಗಿ ಕೆಲಸ ಮಾಡಿದ ನಂತರ ಆಕಸ್ಮಿಕವಾಗಿ ಕರ್ನಾಟಕ ಬ್ಯಾಂಕಿನ ಬೆಂಗಳೂರಿನ ಚಿಕ್ಕಪೇಟೆ ಬ್ರ್ಯಾಂಚಿನಲ್ಲಿ ಪ್ರೊಬೆಷನರಿ ಅಧಿಕಾರಿ ಹುದ್ದೆಗೆ 17-4-1973ರಂದು ಸೇರಿಕೊಂಡರು. ಅನಂತರ ಪದೋನ್ನತಿಗಳನ್ನು ಪಡೆಯುತ್ತಾ ಅತ್ಯುನ್ನತ ಹುದ್ದೇಗೇರಿದರು.
1976ರಲ್ಲಿ ಮೊದಲ ಬಾರಿ ಬ್ರ್ಯಾಂಚ್ ಮೆನೇಜರ್ ಆಗಿ ನೇಮಕವಾದ ಜಯರಾಮ ಭಟ್ ಅವರು ಅನಂತರ ವಿವಿಧ ಬ್ರ್ಯಾಂಚ್‌ಗಳ ಮುಖ್ಯಸ್ಥರಾಗಿ ದುಡಿದರು. 1993ರಲ್ಲಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಮುಖ್ಯ ಅಕೌಂಟೆಂಟ್ ಆಗಿ ಬಡ್ತಿ ಗಳಿಸಿದರು. 2005ರಲ್ಲಿ ಚೀಫ್ ಜನರಲ್ ಮೆನೇಜರ್ ಆಗಿ ನೇಮಕವಾದರು. ತದನಂತರ ಬ್ಯಾಂಕಿನ ಮೆನೇಜಿಂಗ್ ಡೈರೆಕ್ಟರ್ (ಜುಲಾಯಿ 2009ರಿಂದ ಎಪ್ರಿಲ್ 2017 ವರೆಗೆ) ಹಾಗೂ ಚೇರ್ಮನ್ (2017ರಿಂದ) ಆಗಿ ಕಾರ್ಯ ನಿರ್ವಹಿಸಿ 13 ನವಂಬರ್ 2021ರಂದು ನಿವೃತ್ತರಾದರು.
ಪೊಳಲಿ ಜಯರಾಮ ಭಟ್ ಅವರ ಅವಧಿಯಲ್ಲಿ ಕರ್ನಾಟಕ ಬ್ಯಾಂಕ್ ಸರ್ವಾಗೀಣ ಪ್ರಗತಿ ಸಾಧಿಸಿ, ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿತು. ತನ್ನ ಅವಧಿಯಲ್ಲಿ ಇ-ಲಾಬಿ, ಮೊಬೈಲ್ ಬ್ಯಾಂಕಿಂಗ್, ಪಿಓಎಸ್, ಆನ್-ಲೈನ್ ಟ್ರೇಡಿಂಗ್ ಎಕೌಂಟ್, ಟ್ರಾವಲ್ ಕಾರ್ಡ್ ಇತ್ಯಾದಿ ಅತ್ಯಾಧುನಿಕ ತಂತ್ರಜ್ನಾನ ಆಧಾರಿತ ಬ್ಯಾಂಕಿಂಗ್ ಸೇವೆಗಳನ್ನು ಪರಿಚಯಿಸಿದ್ದರು. ಅವರು ಮೆನೇಜಿಂಗ್ ಡೈರೆಕ್ಟರ್ ಆಗಿದ್ದ ಅವಧಿಯಲ್ಲಿನ ಸಾಧನೆಗಾಗಿ, ಐಬಿಎ, ಐಡಿಬಿಆರ್-ಟಿ, ಸಿಐಎಂಎಸ್‌ಎಂಇ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳಿಂದ ಕರ್ನಾಟಕ ಬ್ಯಾಂಕ್ ಪ್ರಶಸ್ತಿಗಳನ್ನು ಗಳಿಸಿತು.
ನನ್ನೂರು ಅಡ್ಡೂರಿನ ಪಕ್ಕದ ಪೊಳಲಿಯವರು ಜಯರಾಮ ಭಟ್. ಬಾಲ್ಯದಿಂದಲೂ ಹಲವಾರು ಸಂದರ್ಭಗಳಲ್ಲಿ ನಮ್ಮ ಮುಖಾಮುಖಿ. ವ್ಯಾಲ್ಯೂವರ್ ವೃತ್ತಿನಿರತರ ಹಿತರಕ್ಷಣೆಗಾಗಿ ಹಾಗೂ ಈ ವೃತ್ತಿಗೆ ಪ್ರವೇಶಿಸುವವರ ಮಾರ್ಗದರ್ಶನಕ್ಕಾಗಿ ಮಂಗಳೂರಿನಲ್ಲಿ "ಎಸೋಸಿಯೇಷನ್ ಆಫ್ ವಾಲ್ಯೂವರ್ಸ್” ಎಂಬ ಸಂಸ್ಥೆಯನ್ನು ಸ್ಥಾಪಿಸಿ ನೋಂದಾಯಿಸಿದೆವು. ಅದರ ಕಾರ್ಯದರ್ಶಿಯಾದ ನಾನು ಅದನ್ನು ಉದ್ಘಾಟಿಸಬೇಕೆಂದು ಅವರನ್ನು ವಿನಂತಿಸಿದಾಗ ತಕ್ಷಣವೇ ಒಪ್ಪಿಕೊಂಡು, 31ಜನವರಿ 2020ರಂದು ಜರಗಿದ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು. ಹಾಗೆಯೇ, 2013ರಿಂದ ಮಂಗಳೂರಿನಲ್ಲಿ “ವಿಷಮುಕ್ತ ಊಟದ ಬಟ್ಟಲು" ಆಂದೋಲನವನ್ನು ಮುನ್ನಡೆಸುತ್ತಿರುವ “ಸಾವಯವ ಕೃಷಿಕ ಗ್ರಾಹಕ ಬಳಗ (ರಿ.)” ಸಂಘಟನೆಯ ಸ್ಥಾಪಕ - ಅಧ್ಯಕ್ಷ ಎಂಬ ನೆಲೆಯಲ್ಲಿ, ನನ್ನ ವಿನಂತಿಯ ಮೇರೆಗೆ ಇದರ ಹಲವು ಕಾರ್ಯಕ್ರಮಗಳಿಗೆ ನೆರವಿತ್ತು ಬೆಂಬಲಿಸಿದವರು ಅವರು.
ಕೂಟ ಮಹಾಜಗತ್ತು ಮಂಗಳೂರು ಅಂಗಸಂಸ್ಥೆಯ ಹಿತೈಷಿಯಾಗಿದ್ದು, ಈ ಅಂಗಸಂಸ್ಥೆಯನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದ ಪೊಳಲಿ ಜಯರಾಮ ಭಟ್ ಅವರು ಪ್ರಾತಃ ಸ್ಮರಣೀಯರು. ಅಂಗಸಂಸ್ಥೆಯ ಮುಖವಾಣಿಯಾದ “ಕೂಟವಾಣಿ" ಮಾಸಪತ್ರಿಕೆಗೆ ನಾನೀಗ ಪ್ರಧಾನ ಸಂಪಾದಕನಾಗಿದ್ದು, ಇದಕ್ಕೆ ಅವರು ನೀಡಿದ ಬೆಂಬಲಕ್ಕೆ ಬೆಲೆ ಕಟ್ಟಲಾಗದು.
ಜಯರಾಮ ಭಟ್ ಅವರಂತಹ ಸರಳ ಹಾಗೂ ಸಜ್ಜನ ವ್ಯಕ್ತಿಗಳು ವಿರಳ. ದೇಶದ ಖಾಸಗಿ ರಂಗದ ದೊಡ್ಡ ಬ್ಯಾಂಕಿನ ಅತ್ಯುನ್ನತ ಹುದ್ದೆಯಲ್ಲಿದ್ದರೂ ಕೂಟ ಮಹಾಜಗತ್ತು - ಮಂಗಳೂರು ಅಂಗಸಂಸ್ಥೆಯ ಕಾರ್ಯಕ್ರಮಗಳಿಗೆ ಬಂದಾಗ ಎಲ್ಲ ಕೂಟ ಬಾಂಧವರಲ್ಲಿ ಒಬ್ಬರಾಗಿ ಭಾಗವಹಿಸುತ್ತಿದ್ದರು. ಅವರ ದುಂಡುಮುಖದಲ್ಲಿ ಸದಾ ಮುಗುಳ್ನಗು. ಯಾರನ್ನೇ ಆದರೂ ತಾನೇ ಮುಂದಾಗಿ ಮಾತನಾಡಿಸುವ ಹೃದಯಸಂಪನ್ನರು. ತಮ್ಮ ಬಿಡುವಿಲ್ಲದ ಕೆಲಸಕಾರ್ಯಗಳ ನಡುವೆಯೂ ಹಲವಾರು ಸಾಹಿತ್ಯ, ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದುದು ಅವರ ಅಪ್ಪಟ ಕಲಾಭಿಮಾನದ ಪುರಾವೆ.
ಇಂತಹ ಮೇರು ವ್ಯಕ್ತಿತ್ವದ ಜಯರಾಮ ಭಟ್ ಅವರು ಆರ್ಯಭಟ ಅಂತರರಾಷ್ಟ್ರಿಯ ಪ್ರಶಸ್ತಿ, ಔಟ್-ಸ್ಟ್ಯಾಂಡಿಂಗ್ ಮೆನೇಜರ್ ಪ್ರಶಸ್ತಿ, ಟಿ.ಎ. ಪೈ ಸ್ಮಾರಕ ಶ್ರೇಷ್ಠ ಬ್ಯಾಂಕರ್ ಪ್ರಶಸ್ತಿ, ಪರಮಾನುಗ್ರಹ ಪ್ರಶಸ್ತಿ, ವಂದನಾ ಪ್ರಶಸ್ತಿ, ಪೇಜಾವರ ಶ್ರೀ ವಿಶ್ವೇಶತೀರ್ಥ ಜೀವಮಾನ ಸಾಧನೆ ಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳಿಂದ ಪುರಸ್ಕೃತರಾಗಿರುವುದು ಅಚ್ಚರಿಯೇನಲ್ಲ.
ಇವತ್ತು, 20 ಆಗಸ್ಟ್ 2023ರಂದು, ಮಂಗಳೂರಿನ ಶಕ್ತಿ ನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅವರ ವೈಕುಂಠ ಸಮಾರಾಧನೆ ಜರಗಿತು. ಐನೂರಕ್ಕೂ ಅಧಿಕ ಜನರು ಭಾಗವಹಿಸಿ, ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು. ಅವರ ಬದುಕು-ಸಾಧನೆಗಳ ಬಗ್ಗೆ ಕಾಂತಾವರ ಕನ್ನಡ ಸಂಘ ಪ್ರಕಟಿಸಿರುವ ಶ್ರೀನಿವಾಸ ದೇಶಪಾಂಡೆ ಬರೆದಿರುವ “ಸಮಚಿತ್ತದ ಶಾಂತಮೂರ್ತಿ ಕರ್ಣಾಟಕ ಬ್ಯಾಂಕಿನ ನಿವೃತ್ತ ಚೇರ್-ಮನ್ ಪಿ. ಜಯರಾಮ ಭಟ್” ಎಂಬ ಪುಸ್ತಕವನ್ನು ಎಲ್ಲರಿಗೂ ವಿತರಿಸಲಾಯಿತು. ಪೊಳಲಿ ಜಯರಾಮ ಭಟ್ ಈಗ ನಮ್ಮೊಂದಿಗೆ ಇಲ್ಲವಾದರೂ ತಮ್ಮ ಬದುಕಿನ ಸಾಧನೆ ಹಾಗೂ ಸಾರ್ಥಕ ಸಮಾಜಮುಖಿ ಬದುಕಿನ ಮೂಲಕ ನಮ್ಮೆಲ್ಲರ ನೆನಪಿನಲ್ಲಿ ಶಾಶ್ವತವಾಗಿ ಇರುತ್ತಾರೆ.