ಕರ್ನಾಟಕ ರಾಜ್ಯೋತ್ಸವದ ಸನಿಹದಲ್ಲಿ...
ಕನ್ನಡ ಭಾಷಾ ಸಾಹಿತ್ಯ ಬೆಳವಣಿಗೆಯ ಒಂದು ಸಣ್ಣ ಸರಳ ನೋಟ ನನಗೆ ಇರುವ ಅಲ್ಪ ಜ್ಞಾನ ಮತ್ತು ಮಾಹಿತಿಯ ಆಧಾರದಲ್ಲಿ… ಪಂಪನಿಂದ ಫೇಸ್ ಬುಕ್ ವರೆಗೆ, ಹಳಗನ್ನಡ ಏರಿ ನಡುಗನ್ನಡ ದಾಟಿ ಹೊಸಗನ್ನಡವಾಗಿ ಇದೀಗ ಕಂಗ್ಲೀಷ್ ಕನ್ನಡವಾಗಿ ಬೆಳೆದಿರುವ ಕನ್ನಡ ಭಾಷಾ ಸಾಹಿತ್ಯದ ಪ್ರಯಾಣ ಅದ್ಬುತ ಮತ್ತು ರೋಮಾಂಚನ.
ತಮಗೆ ರಾಜಾಶ್ರಯ ನೀಡಿದ ವ್ಯಕ್ತಿಗಳನ್ನು ಮಹಾಮಹಿಮರಂತೆ ಚಿತ್ರಿಸುತ್ತಿದ್ದ ಸಾಹಿತ್ಯದಿಂದ ಇತ್ತೀಚಿನ ತನ್ನ ಪ್ರೀತಿಯ ಹುಡುಗಿಯ ಅಂದ ಚೆಂದವನ್ನು ವರ್ಣಿಸುವವರೆಗೂ ಕನ್ನಡ ಸಾಹಿತ್ಯ ಬೆಳೆದುಬಂದ ಪರಿ ಅನನ್ಯ. ಈ ಸಾಹಿತ್ಯದ ಬೆಳವಣಿಗೆಯ ಒಳನೋಟಗಳಿಂದಲೇ ಕನ್ನಡಿಗರ ಜೀವನ ಶೈಲಿಯ ಇತಿಹಾಸವನ್ನೂ ಗುರುತಿಸಬಹುದು. ಅಕ್ಷರಗಳ - ಮಾತುಗಳ ಮತ್ತು ಎರಡರ ಸಮ್ಮಿಲನದ ಭಾಷೆಯ ಮುಖಾಂತರ ತಮ್ಮ ಮನಸ್ಸಿನಾಳದ - ಅರಿವಿನಾಳದ ತಿಳುವಳಿಕೆಯ ಭಾವನೆಗಳನ್ನೋ, ಕಲ್ಪನೆಯನ್ನೋ, ಅನುಭವವನ್ನೋ ದಾಖಲಿಸುವ ಪ್ರಕ್ರಿಯೆಯೇ ಸಾಹಿತ್ಯ. ಇದಲ್ಲದೇ ಇನ್ನಷ್ಟು ವಿಶಾಲ ಅರ್ಥದಲ್ಲೂ ಇದನ್ನು ಗುರುತಿಸಬಹುದು. ಇದು ಸಹಜ ಸ್ವಾಭಾವಿಕ ಜನರ ಜೀವನ ವಿಧಾನದ ಭಾಗವಾಗದಿದ್ದರೂ ಜಾಗೃತ ಮನಸ್ಥಿತಿಯ ವ್ಯಕ್ತಿಗಳ ಅಭಿವ್ಯಕ್ತಿಯ ಮಾಧ್ಯಮ ಸಾಹಿತ್ಯ.
ಪ್ರಾರಂಭಿಕ ಕನ್ನಡ ಸಾಹಿತ್ಯ ದೇವರುಗಳ ವರ್ಣನೆಯ ಭಕ್ತಿ ಪ್ರಧಾನ ಸಾಹಿತ್ಯವೇ ಆಗಿರಬೇಕು ಎನಿಸುತ್ತದೆ. ಸೃಷ್ಟಿಕರ್ತ ನನ್ನು ಪ್ರಕೃತಿಯ ಪ್ರತಿ ವಿಸ್ಮಯದಲ್ಲೂ ಕಾಣುತ್ತಾ ಸೂರ್ಯ ಚಂದ್ರ ಆಕಾಶ ಭೂಮಿ ಗಾಳಿ ಬೆಳಕು ಕಾಡು ಸಮುದ್ರ ಮತ್ತೂ ಮುಂದುವರೆದು ದೇವರನ್ನೇ ವಿವಿಧ ಆಕಾರ ಗುಣಗಳಲ್ಲಿ ಕಲ್ಪಿಸಿಕೊಂಡು ಅದನ್ನು ಸ್ತುತಿಸುವ ಮೆಚ್ಚಿಸುವ ಬರಹಗಳೇ ಸಾಹಿತ್ಯವಾಗಿದ್ದಿತು.
ವೇದ, ಉಪನಿಷತ್ತುಗಳು, ಸ್ಮೃತಿಗಳು, ಧರ್ಮ ಶಾಸ್ತ್ರದ ಗ್ರಂಥಗಳು ಮಹಾಕಾವ್ಯಗಳು ಕೂಡ ಕನ್ನಡ ಸಾಹಿತ್ಯದ ಪ್ರಾರಂಭದ ಪ್ರಕಾರಗಳಲ್ಲಿ ಮುಖ್ಯವಾಗಿದ್ದವು. ಅವುಗಳಲ್ಲಿ ಅನೇಕವು ಸಂಸ್ಕೃತ ಮತ್ತು ಪ್ರಾಕೃತ ಭಾಷೆಯ ಮೂಲ ಸ್ವರೂಪದಲ್ಲಿ ಇದ್ದರೂ ಅವುಗಳ ರೂಪಾಂತರ - ಭಾಷ್ಯ - ಅನುವಾದ - ಸಾರಾಂಶ - ವ್ಯಾಖ್ಯಾನ ಕನ್ನಡದಲ್ಲಿ ರಚಿತವಾಗುತ್ತಿದ್ದವು.
ನಂತರದಲ್ಲಿ ಧರ್ಮದ ಶ್ರೇಷ್ಠತೆಯನ್ನು ಸಾರುವ - ಬದುಕಿನ ಸಾರ್ಥಕತೆಯನ್ನು ಹೇಳುವ ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸುವ ಆಡಳಿತಾತ್ಮಕ ನೀತಿ ನಿಯಮಗಳನ್ನು ನಿರೂಪಿಸುವ ರಾಜ್ಯಾಡಳಿತದ ಮಹತ್ವವನ್ನು ಸಾರುವ ಸಾಹಿತ್ಯ ಕನ್ನಡದಲ್ಲಿ ಬಹಳಷ್ಟು ರಚಿತವಾಯಿತು. ಯುಧ್ಧದ ಗೆಲುವಿನ ಸಂಭ್ರಮ ಸೋಲಿನ ಅವಮಾನ ಸಾಹಸಗಳು ತ್ಯಾಗಗಳನ್ನು ಬಣ್ಣಿಸುವ ಸಾಹಿತ್ಯವೂ ಮೂಡಿಬಂದಿತು. ತಾಳೆಗರಿಯಲ್ಲಿಯೋ ದೇವಸ್ಥಾನದ ಮುಂದಿನ ಕಲ್ಲುಗಳ ಮೇಲೆಯೋ ಮಾಸ್ತಿಗಲ್ಲು ವೀರಗಲ್ಲುಗಳ ರೂಪದಲ್ಲಿಯೋ ಶಿಲಾ ಶಾಸನ ರೂಪದಲ್ಲಿಯೋ ಬಟ್ಟೆಯ ಮೇಲೋ ರಚಿಸಲಾಗುತ್ತಿತ್ತು.
ಕಪ್ಪು ಶಾಹಿಯ ಸಂಶೋಧನೆಯೊಂದಿಗೆ ಬರವಣಿಗೆಗೆ ಸರಳತೆ ಮತ್ತು ಆಕರ್ಷಣೆ ಮೂಡಿತು. ಅದು ಕನ್ನಡ ಸಾಹಿತ್ಯವನ್ನು ದಾಖಲಿಸಲೂ ಸುಲಭವಾಯಿತು. ಹಿಂದೆ ಸಾಕಷ್ಟು ಸಾಹಿತ್ಯ ರಚನೆಯಾಗಿದ್ದರು ಸಹ ರನ್ನ ಪೊನ್ನ ಪಂಪ ಕುಮಾರವ್ಯಾಸರ ಬರಹಗಳೇ ಕನ್ನಡ ಸಾಹಿತ್ಯದ ಪ್ರಾರಂಬಿಕ ಹಂತದ ಮಹತ್ವದ ಕೃತಿಗಳು ಎನ್ನಬಹುದು. ಮಹಾಭಾರತ ರಾಮಾಯಣದ ಪ್ರಮುಖ ಪಾತ್ರಗಳಿಗೆ ತಮ್ಮ ಆಗಿನ ರಾಜರುಗಳನ್ನು ಹೋಲಿಸಿ ಅದ್ಬುತವಾಗಿ ವರ್ಣಿಸುತ್ತಿದ್ದರು. ಹಳಗನ್ನಡ ಶೈಲಿಯ ಈ ಬರಹಗಳು ಸಂಸ್ಕೃತದ ಪ್ರಭಾವ ಹೊಂದಿರುತ್ತಿದ್ದರೂ ಅಚ್ಚ ಕನ್ನಡದ ಸೊಗಡನ್ನು ಹೊಂದಿದ್ದವು.
ಭಕ್ತಿ ಪಂಥಗಳ ಉಗಮದೊಂದಿಗೆ ದಾಸ ಸಾಹಿತ್ಯ ಕೀರ್ತನೆಗಳು ಸಾಕಷ್ಟು ರಚಿತವಾದವು. ಕನಕದಾಸರು ಪುರಂದರದಾಸರು ಆಚಾರ್ಯರುಗಳು ಮುಂತಾದವರು ಈ ಸಾಹಿತ್ಯ ಕೃಷಿಯ ಪ್ರಮುಖರು. ಇನ್ನು ಕನ್ನಡ ಸಾಹಿತ್ಯ ಲೋಕದ ಮಹತ್ವದ ಕಾಲವೆಂದು ಗುರುತಿಸಬಹುದಾದ್ದು ವಚನ ಸಾಹಿತ್ಯ. ಅಲ್ಲಮ, ಬಸವ, ಅಕ್ಕಮಹಾದೇವಿ ಮುಂತಾದವರ ಅನುಭಾವ ಸಾಹಿತ್ಯ ಇಂದಿಗೂ ಹೊಸಹೊಸ ಹೊಳಹುಗಳನ್ನು ನೀಡುತ್ತಲೇ ಇದೆ. ಅನುಭವ ಮಂಟಪದ ಶ್ರೇಷ್ಠ ಕೃತಿಗಳು ಕನ್ನಡ ಸಾಹಿತ್ಯವನ್ನು ಮಾತ್ರವಲ್ಲದೆ ಇಲ್ಲಿನ ಸಾಮಾಜಿಕ ವ್ಯವಸ್ಥೆಯನ್ನೂ ಪ್ರಭಾವಿಸಿವೆ. ಇನ್ನು ಸೂಫಿ ಸಾಹಿತ್ಯವೂ ಕನ್ನಡದ ಚಿಂತನೆ ಮೇಲೆ ಸಾಕಷ್ಟು ಬೆಳಕು ಚೆಲ್ಲಿದೆ. ಮುಂದೆ ಪಾಶ್ಚಾತ್ಯ ಸಾಹಿತ್ಯದ ಪ್ರಭಾವದಿಂದಲೋ ಪ್ರೇರಣೆಯಿಂದಲೋ ಅಥವಾ ತಮ್ಮ ಸ್ವಂತಿಕೆಯಿಂದಲೋ ಪ್ರಕೃತಿಯ ರಮ್ಯತೆಯನ್ನು ವರ್ಣಿಸುವ ಕಲ್ಪನಾಲೋಕವನ್ನೇ ತೆರೆಡಿಡುವ ನವೋದಯ ನವ್ಯ ಸಾಹಿತ್ಯವೂ ಕನ್ನಡದ ಮಟ್ಟಿಗೆ ಅತ್ಯಮೂಲ್ಯವಾದುದು.
ಕಥೆ ಕಾದಂಬರಿ ನಾಟಕ ಕವಿತೆಗಳ ಮೂಲಕ ಸೃಷ್ಟಿಯ ಅತ್ಯದ್ಬುತಗಳನ್ನು ಅಕ್ಷರಕ್ಕಿಳಿಸಿದ ಕೀರ್ತಿ ಈ ರೀತಿಯ ಸಾಹಿತ್ಯಕ್ಕೆ ಸಲ್ಲುತ್ತದೆ. ಕೌಟುಂಬಿಕ ಸಾಮರಸ್ಯ ಪ್ರೀತಿ ವಿರಹಗಳ ನೋವುನಲಿವುಗಳು ದಾಂಪತ್ಯದ ಸವಿ ಸಾವಿನ ಆತಂಕ ಮುಂತಾದುವುಗಳನ್ನು ಕೂಡ ಈ ಸಂಧರ್ಭದಲ್ಲಿ ಹಿಡಿದಿಡಲಾಗಿದೆ. ಇತಿಹಾಸದ ಅಧೀಕೃತ ಸಂಶೋಧನೆಯೊಂದಿಗೆ ಕನ್ನಡದಲ್ಲಿ ಐತಿಹಾಸಿಕ ಕಾದಂಬರಿಗಳ ಯುಗವೂ ಪ್ರಾರಂಭವಾಯಿತು. ಚಿಕ್ಕವೀರರಾಜೇಂದ್ರ ದುರ್ಗಾಸ್ತಮಾನದಂತ ಅತ್ಯುತ್ತಮ ಕೃತಿಗಳು ರಚಿತವಾದವು.
ಮುಂದೆ ಸಾಮಾಜಿಕ ಸಮಸ್ಯೆಗಳು, ಶಿಥಿಲವಾಗತೊಡಗಿದ ಮಾನವೀಯ ಮೌಲ್ಯಗಳು ಆಧುನಿಕ ಕನ್ನಡ ಸಾಹಿತ್ಯವನ್ನು ಆಕ್ರಮಿಸಿದವು. ಸ್ವಾತಂತ್ರ್ಯ ಯೋಧರ ತ್ಯಾಗ ಬಲಿದಾನಗಳೂ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾದವು. ಆತ್ಮ ಕತೆಗಳ ಪರ್ವ ಕೂಡ ಈ ಕಾಲಘಟ್ಟದಲ್ಲಿ ಹೆಚ್ಚನ ಪ್ರಾಮುಖ್ಯತೆ ಪಡೆಯಿತು. ಪತ್ರಿಕಾ ಮಾಧ್ಯಮದ ಬೆಳವಣಿಗೆ ಮುದ್ರಣ ಕ್ರಾಂತಿ ಪ್ರಕಾಶನಗಳ ಹುಟ್ಟು ಕನ್ನಡ ಸಾಹಿತ್ಯ ಪ್ರಕಾಶಮಾನವಾಗಲು ಕಾರಣವಾಯಿತು. ಸಾಹಿತ್ಯದ ಎಲ್ಲಾ ಪ್ರಕಾರಗಳೂ ಮುನ್ನಲೆಗೆ ಬಂದವು. ಪ್ರವಾಸ ಕಥನಗಳು ಪ್ರಬಂಧಗಳು ಪ್ರಾಮುಖ್ಯತೆ ಪಡೆದವು.ಅಕ್ಷರಸ್ಥರ ಸಂಖ್ಯೆ ಹೆಚ್ಚಾದಂತೆ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುವವರು ಏರಿಕೆಯಾದಂತೆ ಕನ್ನಡ ಸಾಹಿತ್ಯ ತನ್ನ ವಿರಾಟ್ ರೂಪ ಪ್ರದರ್ಶಿಸಲಾರಂಭಿಸಿತು. ಆ ಕಾಲ ಘಟ್ಟದಲ್ಲಿ ಎಂತೆಂಥಾ ಅದ್ಬುತ ಸಾಹಿತ್ಯ ಸೃಷ್ಟಿಯಾಯಿತೆಂದರೆ ಕನ್ನಡ ಸಾಹಿತ್ಯಕ್ಕೆ ಸಿಕ್ಕಿರುವ ಜ್ಞಾನ ಪೀಠ ಪ್ರಶಸ್ತಿಗಳು ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿಗಳು ಇದಕ್ಕೆ ಸಾಕ್ಷಿ.
ವಿಮರ್ಶಾ ಸಾಹಿತ್ಯ ಮಹತ್ವ ಪಡೆದುಕೊಂಡ ನಂತರ ಬರೆಯುವ ಜನರ ಸಂಖ್ಯೆ ಮತ್ತು ಶೈಲಿಯಲ್ಲಿಯೇ ಮಹತ್ತರ ಬದಲಾವಣೆಗಳಾದವು. ಹಿಂದೆ ತೆರೆಮರೆಯಲ್ಲಿ ಕೆಲವೇ ಜನರ ಸ್ವತ್ತಾಗಿದ್ದ ಮಹಿಳಾ ಸಾಹಿತ್ಯ ತನ್ನ ಗರಿ ಬಿಚ್ಚಿ ಮುಕ್ತತೆಗೆ ತೆರೆದುಕೊಂಡಿತು. ಶೋಷಕರ ಆಡಳಿತಗಾರರ ದೌರ್ಜನ್ಯದ ವಿರುಧ್ಧ ತಮ್ನ ಒಡಲಾಳದ ನೋವುಗಳನ್ನು ಬಿಂಬಿಸಲಾರಂಬಿಸಿದ ಬಂಡಾಯ ಸಾಹಿತ್ಯ ಇವತ್ತಿಗೂ ರಚಿತವಾಗುತ್ತಲೇ ಇದೆ.
ನಿರ್ಲಕ್ಷಿಸಲಾಗಿದ್ದ ಶಿಶು ಸಾಹಿತ್ಯ ಮತ್ತೆ ಚಿಗುರಲಾರಂಬಿಸಿದರೆ ಜಾನಪದ ಸಾಹಿತ್ಯ ರಾಜ್ಯದ ಮೂಲೆ ಮೂಲೆಗಳಿಂದಲೂ ಕ್ರೂಡೀಕರಣವಾಯಿತು. ವಿಜ್ಞಾನ ಲೋಕದ ವಿಸ್ಮಯಗಳು ಸಾಹಿತ್ಯ ರೂಪದಲ್ಲಿ ಪ್ರಕಟವಾಗುತ್ತಿವೆ. ವೈದ್ಯಕೀಯ ಸಂಶೋದನೆಯ, ಆರೋಗ್ಯದ ಬಗ್ಗೆ ಮಾಹಿತಿ ನೀಡುವ, ಜನರ ದೈಹಿಕ ಮಾನಸಿಕ ಸ್ಥಿತಿಯನ್ನು ವಿವರಿಸುವ ರಾಶಿ ರಾಶಿ ಪುಸ್ತಕಗಳು ಬರುತ್ತಿವೆ. ವ್ಯಕ್ತಿತ್ವದ ವಿಕಸನಕ್ಕೆ ಪೂರಕವಾದ ಅಂಶಗಳನ್ನು ಸಾಹಿತ್ಯ ಹಂಚಿಕೊಳ್ಳತೊಡಗಿತು.
ಜನಪ್ರಿಯತೆಯ ಉತ್ತುಂಗಕ್ಕೇರಿದ ಓದುಗರಲ್ಲಿ ರೋಮಾಂಚನ ಮೂಡಿಸುವ ಪತ್ತೇದಾರಿ ಸಾಹಿತ್ಯ ಇಂದಿಗೂ ಜನರನ್ನು ಆಕರ್ಷಿಸುತ್ತಿದೆ. ಆರ್ಥಿಕ ವ್ಯವಹಾರಗಳ ಸಾಹಿತ್ಯವೂ ಹೇರಳವಾಗಿ ಸೃಷ್ಟಿಯಾಗುತ್ತಿದೆ. ಜಾಗತೀಕರಣದ ಹಿನ್ನೆಲೆಯಲ್ಲಿ ಒಂದಷ್ಟು ಒತ್ತಡಕ್ಕೆ ಒಳಗಾಗಿರುವ ಜನರನ್ನು ನಕ್ಕು ನಲಿಸಲು ಹಾಸ್ಯದ ಹೊನಲನ್ನು ಹರಿಸುವ ಹಾಸ್ಯ ಸಾಹಿತ್ಯ ಕನ್ನಡವನ್ನು ಶ್ರೀಮಂತಗೊಳಿಸಿದೆ. ನಾಟಕ ರೂಪದ ಸಾಹಿತ್ಯ, ರಾಜಕೀಯ ವಿಡಂಬನಾತ್ಮಕ ಸಾಹಿತ್ಯ, ಅಭಿನಂದನಾ ಗ್ರಂಥಗಳ ಸಾಹಿತ್ಯ ಎಲ್ಲಾ ಸಂದರ್ಭಗಳಲ್ಲಿ ತನ್ನ ಪ್ರಾಮುಖ್ಯತೆ ಉಳಿಸಿಕೊಂಡಿದೆ.
ಇನ್ನು ಈ ಸೋಷಿಯಲ್ ಮೀಡಿಯಾಗಳ ಸಂಪರ್ಕ ಕ್ರಾಂತಿಯ ಈ ದಿನಗಳಲ್ಲಿ ಕನ್ನಡ ಸಾಹಿತ್ಯ ಪಡೆಯುತ್ತಿರುವ ತಿರುವುಗಳು ಊಹೆಗೆ ನಿಲುಕುತ್ತಿಲ್ಲ. ಕನ್ನಡ ಅಕ್ಷರ ಕಲಿತ ಬಹುತೇಕರು ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ವೇದಿಕೆಯನ್ನಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಚುಟುಕುಗಳು ವ್ಯಂಗ್ಯಗಳು ವಿಡಂಬನೆಗಳು ಗಾಳಿ ಸುದ್ದಿಗಳನ್ನು ನೀವು ಗಮನಿಸಿದರೆ ಅದರ ರುಚಿ ಮತ್ತು ವಾಸನೆ ನಿಮಗೆ ಸಿಗುತ್ತದೆ. ಶೃಂಗಾರ ಸಾಹಿತ್ಯದಿಂದ ಹೊಸ ಅಡುಗೆ ರುಚಿಯವರೆಗೆ ಅನೇಕ ಬ್ಲಾಗ್ ಗಳು ವೆಬ್ ಪೋರ್ಟಲ್ ಗಳು ವಾಟ್ಸಾಪ್ ಫೇಸ್ ಬುಕ್ ಗುಂಪುಗಳು ಸೃಷ್ಟಿಯಾಗಿವೆ.
ಸಾಹಿತ್ಯದ ವಿಚಾರ ಸಂಕಿರಣಗಳು ಕಮ್ಮಟಗಳು ಕವಿಗೋಷ್ಟಿಗಳು ಚರ್ಚಾ ವೇದಿಕೆಗಳು ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಇಂದು ನಾವು ಕಾಣಬಹುದು. ಕನ್ನಡ ಸಾಹಿತ್ಯ ಇನ್ನೇನು ನಾಶದ ಅಂಚಿಗೆ ತಲುಪಿದೆ ಎಂದು ಹಿರಿಯ ತಲೆಮಾರು ಗೊಣಗುತ್ತಿರುವಾಗಲೇ ಮತ್ತೆ ಫಿನಿಕ್ಸ್ ನಂತೆ ಎದ್ದು ಕುಳಿತಿದೆ. ಸಿನಿಮಾ, ಸಂಗೀತ, ಭಾವಗೀತೆ, ರಾಷ್ಟ್ರಭಕ್ತಿಯ ಸಾಹಿತ್ಯ ಯುವಕರು ತಮ್ಮ ಕ್ರಿಯಾತ್ಮಕತೆ ವ್ಯಕ್ತಪಡಿಸುವ ಮಾಧ್ಯಮವಾಗಿದೆ. ಪ್ರೇಮಪತ್ರವೇ ಇರಲಿ - ವಿರಹವೇದನೆಯೇ ಇರಲಿ -
ಸೋಲಿನ ಕಹಿ ನೆನಪೇ ಇರಲಿ - ಸಾವಿನ ದು:ಖವೇ ಇರಲಿ ಇಂದು ಬಹುತೇಕರು ಸಾಹಿತ್ಯದ ಯಾವುದಾದರೂ ಒಂದು ಪ್ರಕಾರವನ್ನು ಉಪಯೋಗಿಸಿಕೊಂಡು ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಅದಕ್ಕೆ ಪ್ರತಿಕ್ರಿಯೆಗಳೂ ಅದೇ ರೂಪದಲ್ಲಿರುತ್ತವೆ. ಬರದದ್ದೆಲ್ಲವೂ ಸಾಹಿತ್ಯವೇ ಆದರೂ ರೂಪ ಗುಣ ಪ್ರಾಮುಖ್ಯತೆ ಗ್ರಹಿಕೆ ಬೇರೆ ಬೇರೆಯಾಗಿರುತ್ತದೆ. ಇದು ಕನ್ನಡ ಸಾಹಿತ್ಯದ ಒಂದು ಸಣ್ಣ ಮತ್ತು ಸರಳ ಅವಲೋಕನ ಮತ್ತು ಎಂದೆಂದೂ ಮುಗಿಯದ ಎಲ್ಲಾ ಪ್ರಶ್ನೆಗಳಿಗೂ ಅನುಮಾನಗಳಿಗೂ ಕಾರಣವಾಗುವ ಬೆಳೆಯುತ್ತಲೇ ಸಾಗುವ ನನ್ನ ಕನ್ನಡಮ್ಮನ ಗುಣಲಕ್ಷಣಗಳು....
(ತಪ್ಪುಗಳಿದ್ದಲ್ಲಿ ಅದನ್ನು ದಯವಿಟ್ಟು ತಿಳಿಸಬಹುದು)
- 361 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಿಂದ ಸುಮಾರು 20 ಕಿಲೋಮೀಟರ್ ದೂರದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುಗಬಾಳ ಗ್ರಾಮ ತಲುಪಿತು. ಇಂದು 28/10/2021 ಗುರುವಾರ 362 ನೆಯ ದಿನ ನಮ್ಮ ಕಾಲ್ನಡಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮುಗಬಾಳ ಗ್ರಾಮದಿಂದ ಸುಮಾರು 12 ಕಿಲೋಮೀಟರ್ ಹೊಸಕೋಟೆ ತಾಲ್ಲೂಕು ತಲುಪಲಿದೆ. ನಾಳೆ 29/10/2021 ಶುಕ್ರವಾರ 363 ನೆಯ ದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನಿಂದ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಹಾದಿಯಲ್ಲಿ ಬೇಗೂರು ಗ್ರಾಮದ ಕಡೆಗೆ...
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ