ಕರ್ನಾಟಕ ಸಂಗೀತದಲ್ಲಿ ಪಿಟೀಲು

ಕರ್ನಾಟಕ ಸಂಗೀತದಲ್ಲಿ ಪಿಟೀಲು

ಬರಹ

ಕರ್ನಾಟಕ ಸಂಗೀತದಲ್ಲಿ ಪಿಟೀಲು
ಪಿಟೀಲು ವಾದ್ಯವನ್ನು ಕರ್ನಾಟಕ ಸಂಗೀತಕ್ಕೆ ತಂದ ಕೀರ್ತಿ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಕಿರಿಯ ಸೋದರರಾದ ಶ್ರೀ ಬಾಲುಸ್ವಾಮಿಯವರದ್ದು ಎಂದು ಹಂಸಾನಂದಿಯವರು ತಿಳಿಸಿದಾಗ ಅನಿಲ್ ಅವರು ಈ ವಿಚಾರದ ಬಗ್ಗೆ ಇನ್ನಷ್ಟು ಮಾಹಿತಿ ಕೊಡಲು ಸಾಧ್ಯವೇ ಎಂದು ಕೇಳಿದ್ದರು. ಅದಕ್ಕೆ ಹಂಸಾನಂದಿಯವರು ಶ್ರೀ ಬಾಲುಸ್ವಾಮಿಯವರ ಬಗ್ಗೆ ವಿವರವಾಗಿ ಬರೆಯಬಹುದೇನೋ ಎಂದು ನಾನೂ ಸಹಾ ಆಸೆಯಿಂದ ಕಾಯುತ್ತಿದ್ದೆ. ಆದರೆ ಅವರ ಕೆಲಸಗಳ ಹೆಚ್ಚಳದಲ್ಲಿ ಅವರಿಗೆ ಸಮಯವಾಗಲಿಲ್ಲವೋ ಏನೋ ಅವರು ಈವರೆಗೂ ಬರೆದಿಲ್ಲ. ಸಧ್ಯಕ್ಕೆ ಅನಿಲ್ ಅವರ ಕುತೂಹಲ ತಣಿಸಲು ನನಗೆ ತಿಳಿದಿರುವಷ್ಟು ತಿಳಿಸೋಣ ಎನ್ನಿಸಿತು. ನಂತರ ಹಂಸಾನಂದಿಯವರಿಂದ ವಿವರವಾಗಿ ಇನ್ನಷ್ಟು ವಿಚಾರ ತಿಳಿದುಕೊಳ್ಳೋಣ.
ಹಂಸಧ್ವನಿ ರಾಗವನ್ನು ಸಂಗೀತ ಜಗತ್ತಿಗೆ ಕೊಟ್ಟ ರಾಮಸ್ವಾಮಿ ದೀಕ್ಷಿತರಿಗೆ ಮುತ್ತುಸ್ವಾಮಿ ದೀಕ್ಷಿತರು, ಚಿನ್ನಸ್ವಾಮಿ ದೀಕ್ಷಿತರು ಹಾಗೂ ಬಾಲುಸ್ವಾಮಿ ದೀಕ್ಷಿತರು ಎಂಬ ಮುತ್ತಿನಂತ ಮೂರು ಗಂಡು ಮಕ್ಕಳೂ ಬಾಲಾಂಬಿಕೆ ಎಂಬ ಮುದ್ದಿನ ಮಗಳೂ ಇದ್ದರು. ಅವರಲ್ಲಿ ತನ್ನ ತಂದೆಯ ಕೀರ್ತಿಯನ್ನೇ ಮರೆಮಾಚುವಷ್ಟು ಕೀರ್ತಿ ಸಂಪಾದಿಸಿದವರು ಮುತ್ತುಸ್ವಾಮಿ ದೀಕ್ಷಿತರು. ಅವರ ಕಿರಿಯ ಸೋದರರೂ ಸಹಾ ಪ್ರತಿಭಾವಂತರೇ.

ಮದ್ರಾಸಿನ ಬಳಿ ಮಣಲಿ ಎಂಬ ಸಂಸ್ಥಾನದ ಒಡೆಯರಾಗಿದ್ದ ಮುತ್ತುಕೃಷ್ಣ ಮುದಲಿಯಾರ್ ಕಲೆ ಮತ್ತು ಸಂಸ್ಕೃತಿಗಳ ಪೋಷಕರಾಗಿ ಕಲಾಸೇವೆ ಮಾಡುತ್ತಿದ್ದರು. ಅವರು ಒಮ್ಮೆ ತಿರುವಾರೂರಿನಲ್ಲಿ ರಾಮಸ್ವಾಮಿ ದೀಕ್ಷಿತರು ಹಾಡುತ್ತಿದ್ದ ಭಜನೆಗಳನ್ನು ಕೇಳಿ ಅದರಿಂದ ಅವರ ಸಂಗೀತ ಪ್ರೌಢಿಮೆಗೆ ಮನಸೋತು ಪ್ರಭಾವಿತರಾಗಿ ಅವರನ್ನು ಮಣಲಿಗೆ ಬಂದು ತಮ್ಮೊಂದಿಗೆ ಇರುವಂತೆ ಪ್ರಾರ್ಥಿಸಿಕೊಂಡರು. ಅದಕ್ಕೊಪ್ಪಿ ಅವರು ತಮ್ಮ ಸಂಸಾರವನ್ನು ಮಣಲಿಗೆ ಸ್ಥಳಾಂತರಿಸಿದರು. ಅಲ್ಲಿ ಮುತ್ತುಕೃಷ್ಣ ಮುದಲಿಯಾರ್ ಅವರ ಆಶ್ರಯದಲ್ಲಿ ಸಂಗೀತ ಸೇವೆ ಮಾಡುತ್ತಾ ಜೀವನ ಸಾಗಿಸಿದರು. ಮುತ್ತುಕೃಷ್ಣ ಮುದಲಿಯಾರರ ಸುಪುತ್ರ ವೆಂಕಟಕೃಷ್ಣ ಮುದಲಿಯಾರ್ ಸಹಾ ತಮ್ಮ ತಂದೆಯಂತೆಯೇ ಕಲಾಪ್ರೇಮಿಗಳಾಗಿದ್ದರು. ಅವರು ಮದ್ರಾಸಿನ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ದ್ವಿಭಾಷಿ ಕೆಲಸವನ್ನೂ ಮಾಡುತ್ತಿದ್ದರು. ಈ ಸೌಲಭ್ಯದ ಮೇಲೆ ಸಂತ ಜಾರ್ಜ್ ಕೋಟೆಗೆ ಹೋಗುವ ಹಲವು ಅವಕಾಶಗಳನ್ನು ಪಡೆದಿದ್ದರು ಹಾಗೂ ಅಲ್ಲಿ ಪಾಶ್ಚಿಮಾತ್ಯ ಬ್ಯಾಂಡ್ ಸಂಗೀತ ಕೇಳುವ ಅವಕಾಶಗಳೂ ಅವರಿಗೆ ದೊರೆತವು. ಅವರಿಗೆ ಆ ಕಾರ್ಯಕ್ರಮಗಳು ಅತ್ಯಂತ ಪ್ರಿಯವಾಗಿ ದೀಕ್ಷಿತರ ಬಳಿ ಅದರ ಬಗ್ಗೆ ತಿಳಿಸಿದರು. ತಾನು ಅಂತಹಾ ಕಾರ್ಯಕ್ರಮಗಳಿಗೆ ಒಮ್ಮೆ ಅವರನ್ನು ಕರೆದೊಯ್ಯುವುದಾಗಿಯು ಹೇಳಿದರು. ನುಡಿದಂತೆ ದೀಕ್ಷಿತರ ಮನೆಯವರನ್ನೆಲ್ಲಾ ಆ ಕಾರ್ಯಕ್ರಮಕ್ಕೆ ಅನೇಕ ಬಾರಿ ಕರೆದುಕೊಂಡು ಹೋದರು ಸಹಾ. ಪಾಶ್ಚಿಮಾತ್ಯ ಸಂಗೀತದಲ್ಲಿ ಅವರನ್ನು ಆಕರ್ಷಿಸಿದ ವಾದ್ಯವೆಂದರೆ ಪಿಟೀಲು. ಆ ವಾದ್ಯವು ಆ ಬ್ಯಾಂಡ್‍ನಲ್ಲಿ ವಹಿಸಿದ ಪ್ರಮುಖ ಪಾತ್ರವು ಅವರನ್ನು ಮತ್ತಷ್ಟು ಮೂಕವಿಸ್ಮಿತರಾಗುವಂತೆ ಮಾಡಿತು. ಜೊತೆಗೆ ಆ ವಾದ್ಯದ ನಾದ ಮಾಧುರ್ಯಕ್ಕೆ ಅವರೆಲ್ಲಾ ಮಾರುಹೋದರು. ಆಗ ಅವರೆಲ್ಲರ ಮನಸ್ಸಿನಲ್ಲಿ ಹೊಳೆದ ಒಂದು ಯೋಚನೆ ಎಂದರೆ, “ಏಕೆ ಈ ವಾದ್ಯವನ್ನು ನಮ್ಮ ಸಂಗೀತ ಕಾರ್ಯಕ್ರಮಗಳಿಗೆ ವೀಣೆಯ ಬದಲಾಗಿ ಸಹವಾದ್ಯವನ್ನಾಗಿ ಉಪಯೋಗಿಸಬಾರದು” ಎಂಬುದೇ ಆಗಿತ್ತು. ಮುತ್ತುಸ್ವಾಮಿ ದೀಕ್ಷಿತರು ಆಗಲೇ ಗಂಗಾ ಮಾತೆಯ ಪ್ರಸಾದವಾಗಿ ಪಡೆದಿದ್ದ ವೀಣೆಯ ಒಡೆಯರಾಗಿದ್ದ ಕಾರಣ ಬಾಲುಸ್ವಾಮಿ ಪಿಟೀಲನ್ನು ಕಲಿಯಲಿ ಎಂದು ಎಲ್ಲರೂ ನಿರ್ಧರಿಸಿದರು. ಆಗ ವೆಂಕಟಕೃಷ್ಣ ಮುದಲಿಯಾರ್ ಒಬ್ಬ ಬ್ರಿಟಿಷ್ ಸಂಗೀತಗಾರರನ್ನು ಬಾಲುಸ್ವಾಮಿಯವರಿಗೆ ಸಂಗೀತ ಶಿಕ್ಷಕರನ್ನಾಗಿ ನೇಮಕ ಮಾಡಿಕೊಟ್ಟರು. ಅವರಿಂದ ಆ ವಾದ್ಯವನ್ನು ನುಡಿಸುವ ವಿಧಾನ ಕಲಿತ ಬಾಲುಸ್ವಾಮಿಯವರು ಬಹಳ ಬೇಗನೇ ಕರ್ನಾಟಕ ಸಂಗೀತಕ್ಕೆ ಅಳವಡಿಸಿಕೊಂಡದ್ದೂ ಅಲ್ಲದೇ ಅದರಲ್ಲಿ ಅತ್ಯುನ್ನತಮಟ್ಟದ ಪರಿಣತಿಯನ್ನೂ ಪಡೆದರು. ನಂತರ ಮುತ್ತುಸ್ವಾಮಿ ದೀಕ್ಷಿತರ ವೀಣಾವಾದನಕ್ಕೆ ಸಹವಾದ್ಯವಾಗಿ ನುಡಿಸಿದರು. ಅವರ ಈ ನೈಪುಣ್ಯ ಅವರ ಕೀರ್ತಿಯನ್ನೂ ಆ ಕಾಲದಲ್ಲಿ ಬೆಳಗಿಸಿತ್ತು. ಪ್ರಯೋಗಕ್ಕೆಂದು ಪ್ರಾರಂಭವಾದ ಈ ಪಿಟೀಲಿನ ವಾದನ ಇಂದು ಕರ್ನಾಟಕ ಸಂಗೀತದ ಎಲ್ಲಾ ಕಾರ್ಯಕ್ರಮಗಳಲ್ಲೂ ಅವಿಭಾಜ್ಯ ಅಂಗವಾಗಿ ಹೋಗಿದೆ. ಇಂದು ಅದು ವೀಣೆಯಂತೆ ನಮ್ಮ ಕರ್ನಾಟಕ ಸಂಗೀತ ಪರಂಪರೆಯಲ್ಲೇ ಹುಟ್ಟಿಬಂದಿದೆಯೇನೋ ಎನ್ನುವಷ್ಟರ ಮಟ್ಟಿಗೆ ನಮ್ಮ ಮಣ್ಣಿಗೆ ಅಂಟಿಕೊಂಡಿದೆ.