ಕರ್ಪೂರಿ ಠಾಕೂರ್ ಎಂಬ ನೈಜ ಭಾರತ ರತ್ನ !

ಕರ್ಪೂರಿ ಠಾಕೂರ್ ಎಂಬ ನೈಜ ಭಾರತ ರತ್ನ !

ಈ ವರ್ಷ ಘೋಷಣೆಯಾದ ಐದು ಭಾರತ ರತ್ನಗಳ ಪೈಕಿ ಮೊದಲ ಗೌರವ ಸಂದದ್ದು ಕರ್ಪೂರಿ ಠಾಕೂರ್ ಎಂಬ ವ್ಯಕ್ತಿಗೆ. ಹಲವರ ಮನದಲ್ಲಿ ಮೂಡಿದ ಸಂದೇಹವೆಂದರೆ ‘ಯಾರು ಈ ಕರ್ಪೂರಿ ಠಾಕೂರ್?’ ತದ ನಂತರ ದೂರದರ್ಶನ, ವಾರ್ತಾ ಪತ್ರಿಕೆಗಳಲ್ಲಿ ನೋಡಿಯೋ, ಓದಿಯೋ ಎಲ್ಲರೂ ಈ ಅಪರೂಪದ ವ್ಯಕ್ತಿಯ ಬಗ್ಗೆ ತಿಳಿದುಕೊಂಡರು. ಈಗಿನ ರಾಜಕೀಯದಲ್ಲಂತೂ ನಾವು ಇಂತಹ ವ್ಯಕ್ತಿಯನ್ನು ನೋಡಲು ಸಾಧ್ಯವೇ ಇಲ್ಲ. ಬಿಹಾರದ ತೀರಾ ಹಿಂದುಳಿದ ‘ನೈ’ (ಕ್ಷೌರಿಕ) ಜಾತಿಯಲ್ಲಿ ಜನಿಸಿದ ಇವರು ಆರ್ಥಿಕವಾಗಿಯೂ ಬಹಳ ಹಿಂದುಳಿದಿದ್ದರು. ಆದರೆ ಇಂತಹ ವ್ಯಕ್ತಿಯೊಬ್ಬ ಬಿಹಾರದ ಮುಖ್ಯಮಂತ್ರಿ ಪದವಿಯ ತನಕ ಬೆಳೆದು ನಿಂತ ಪರಿ ಯಾರನ್ನೂ ಅಚ್ಚರಿಗೆ ಒಳಪಡಿಸದೇ ಇರದು.

ಬಹುತೇಕರು ಇಂದು ಕರ್ಪೂರಿ ಠಾಕೂರ್ ಬಗ್ಗೆ ಬಹಳಷ್ಟು ಮಾಹಿತಿಯನ್ನು ತಿಳಿದುಕೊಂಡೇ ಇರುತ್ತೀರಿ. ನಾನಿಲ್ಲಿ ಹೇಳ ಹೊರಟಿರುವುದು ಉನ್ನತ ಸ್ಥಾನದಲ್ಲಿದ್ದರೂ ಅವರ ಜೀವನದಲ್ಲಿ ನಡೆದ ಎರಡು ಪುಟ್ಟ ಘಟನೆಗಳ ಬಗ್ಗೆ ಹಾಗೂ ಅವರು ಅದಕ್ಕೆ ನೀಡಿದ ಸ್ಪಂದನೆಯ ಬಗ್ಗೆ. ಅದಕ್ಕೂ ಮೊದಲು ಕರ್ಪೂರಿ ಠಾಕೂರ್ ಅವರ ಪುಟ್ಟ ಪರಿಚಯವನ್ನು ನಿಮಗೆ ನಾನು ನೀಡಲೇ ಬೇಕು.

೧೯೨೪ರಲ್ಲಿ ಬಿಹಾರದ ಪಿತೌಂಜಿಯಾದಲ್ಲಿ ಜನಿಸಿದ ಕರ್ಪೂರಿ ಠಾಕೂರ್ ಅವರು ಬಾಲ್ಯದಿಂದಲೇ ಜಾತಿ ಬೇಧ, ಬಡವ ಬಲ್ಲಿದ ಎಂಬ ಸವಾಲುಗಳನ್ನು ಎದುರಿಸುತ್ತಾ ಬೆಳೆದರು. ಹಿಂದುಳಿದ ಸಮಾಜದಲ್ಲಿ ಜನಿಸಿದರೂ ನ್ಯಾಯಕ್ಕಾಗಿ ಹೋರಾಡುವ ಕೆಚ್ಚನ್ನು ಇವರು ಬಾಲ್ಯದಲ್ಲೇ ತೋರಿಸಿದ್ದರು. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್ ಸೇರಿಕೊಂಡು ಬ್ರಿಟೀಷರ ವಿರುದ್ಧ ‘ಭಾರತ ಬಿಟ್ಟು ತೊಲಗಿ' ಚಳುವಳಿಯಲ್ಲಿ ಸಕ್ರಿಯರಾಗಿ ಭಾಗವಹಿಸಿದರು. ಈ ಕಾರಣದಿಂದ ಅವರು ಸುಮಾರು ಎರಡು ವರ್ಷಗಳ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗಿ ಬಂತು. 

ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಕರ್ಪೂರಿ ಠಾಕೂರ್ ಅವರು ಅಲ್ಪ ಕಾಲ ತಮ್ಮ ಹುಟ್ಟೂರಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ೧೯೫೨ರಲ್ಲಿ ರಾಜಕಾರಣದಲ್ಲಿ ಆಸಕ್ತಿ ತೋರಿ, ಸಕ್ರಿಯ ರಾಜಕಾರಣಕ್ಕೆ ಧುಮುಕಿದರು. ೧೯೫೨ರಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಮೊದಲ ಬಾರಿಗೆ ವಿಧಾನ ಸಭೆಯ ಸದಸ್ಯರಾದರು. ಇವರು ೧೯೬೭ರಲ್ಲಿ ಅಂದಿನ ಸರಕಾರದಲ್ಲಿ ಶಿಕ್ಷಣ ಸಚಿವರಾಗಿ ಕೈಗೊಂಡ ಧೃಢ ನಿರ್ಧಾರಗಳು ಅನೇಕ ಶೈಕ್ಷಣಿಕ ಸುಧಾರಣೆಗೆ ಕಾರಣವಾದವು. ಮೆಟ್ರಿಕ್ ವರೆಗೆ ಕಡ್ಡಾಯವಾಗಿದ್ದ ಆಂಗ್ಲ ಭಾಷಾ ಶಿಕ್ಷಣವನ್ನು ರದ್ದು ಮಾಡಿದ್ದು ಇವರ ಕ್ರಾಂತಿಕಾರಕ ನಡೆ. ಹತ್ತನೇ ತರಗತಿಯವರೆಗಿನ ಶಿಕ್ಷಣವನ್ನು ಉಚಿತ ಎಂದು ಘೋಷಣೆ ಮಾಡಿದ್ದು ಇನ್ನೊಂದು ಉತ್ತಮ ನಡೆ ಎನ್ನಬಹುದು. 

ಇವರ ಈ ನಿರ್ಧಾರಗಳನ್ನು ಮೆಚ್ಚಿದ ಜನರು ಇವರನ್ನು ೧೯೭೦ರಲ್ಲಿ ಸಂಯುಕ್ತ ಸೋಷಿಯಲಿಸ್ಟ್ ಪಕ್ಷದಿಂದ ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವಂತೆ ಮಾಡಿದರು. ಆದರೆ ಆರೇ ತಿಂಗಳಲ್ಲಿ ಅವರ ಸರ್ಕಾರ ಬಿದ್ದು ಹೋಯಿತು. ಮತ್ತೊಮ್ಮೆ ೧೯೭೭ರಲ್ಲಿ ಮುಖ್ಯಮಂತ್ರಿಯಾದರೂ ಅವರಿಗೆ ದೊರೆತ ಅವಧಿ ೨ ವರ್ಷಗಳು ಮಾತ್ರ. ಆದರೆ ಮುಖ್ಯಮಂತ್ರಿಯಾಗಿದ್ದಷ್ಟು ಸಮಯ ಸಾಮಾನ್ಯರಂತೆಯೇ ಬದುಕಿದರು. ಹಳೆಯ, ಮಾಸಿಕ, ಕೆಲವೊಮ್ಮೆ ಹರಿದ ಕುರ್ತಾಗಳನ್ನು ಧರಿಸಿಯೇ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರಂತೆ. ಅವರ ಅಧಿಕಾರಾವಧಿಯಲ್ಲಿ ತೆಗೆದುಕೊಂಡ ಸಾಮಾಜಿಕ ನ್ಯಾಯಕ್ಕೆ ಪೂರಕವಾಗುವಂತಹ ನಿರ್ಣಯಗಳು ಜನಮೆಚ್ಚುಗೆಯನ್ನು ಗಳಿಸಿದವು. ಹಿಂದುಳಿದ ವರ್ಗಗಳಲ್ಲೂ ಅತ್ಯಂತ ಹಿಂದುಳಿದ ವರ್ಗಗಳನ್ನು ಗುರುತಿಸಿದವರು ಕರ್ಪೂರಿ ಠಾಕೂರ್ ಅವರು. ಉದ್ಯೋಗ ಮತ್ತು ರೈತ ಕಲ್ಯಾಣದ ಪರವಾಗಿದ್ದ ಮೀಸಲಾತಿಯನ್ನು ಜಾರಿಗೆ ತಂದರು. ಅನೇಕ ಬಡ ಕುಟುಂಬಗಳಿಗೆ ಕಂಟಕವಾಗಿದ್ದ ಕುಡಿತವನ್ನು ಬಿಡಿಸಲು ಮದ್ಯಪಾನ ನಿಷೇಧವನ್ನು ಜಾರಿಗೆ ತಂದ ಧೀಮಂತ ವ್ಯಕ್ತಿ ಇವರು. ತಮ್ಮ ರಾಜಕೀಯ ಜೀವನದಲ್ಲಿ ಅಲ್ಪ ಕಾಲಕ್ಕೆ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ ಯಾವತ್ತೂ ಐಷಾರಾಮಿ ಜೀವನವನ್ನು ಬಯಸಲಿಲ್ಲ. ೧೯೫೨ರಿಂದ ೧೯೮೮ರಲ್ಲಿ ನಿಧನ ಹೊಂದುವ ಸಮಯದವರೆಗೆ ಒಮ್ಮೆ ಮಾತ್ರ (೧೯೮೪) ಚುನಾವಣೆಯಲ್ಲಿ ಸೋತಿದ್ದರು. ಅನಾರೋಗ್ಯದ ಸಂದರ್ಭದಲ್ಲೂ ಸರ್ಕಾರದ ಸಹಾಯಹಸ್ತವನ್ನು ಬಯಸಲಿಲ್ಲ. ಈಗಿನ ರಾಜಕಾರಣದಲ್ಲಿ ಇಂಥವರ ಸಂಖ್ಯೆ ಇಲ್ಲವೇ ಇಲ್ಲ ಎಂದು ಅನಿಸುತ್ತೆ. 

ಕರ್ಪೂರಿ ಠಾಕೂರ್ ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಎರಡು ಪುಟ್ಟ ಘಟನೆಗಳು ಇಲ್ಲಿವೆ: 

ಕರ್ಪೂರಿ ಠಾಕೂರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ ಅವರ ಸಹೋದರಿಯ ಗಂಡ ಅವರ ಕಚೇರಿಗೆ ಹೋಗಿ ‘ತಾವು ಈಗ ಮುಖ್ಯಮಂತ್ರಿಯಾಗಿದ್ದೀರಿ. ನನಗೊಂದು ಸರ್ಕಾರಿ ನೌಕರಿ ಕೊಡಿಸಿ' ಎಂದು ಕೇಳಿಕೊಂಡರು. ಅದಕ್ಕೆ ಕರ್ಪೂರಿ ಠಾಕೂರ್ ತನ್ನ ಅಂಗಿಯ ಕಿಸೆಯಲ್ಲಿದ್ದ ಐವತ್ತು ರೂಪಾಯಿಗಳನ್ನು  ನೀಡಿ ‘ ಈ ಹಣದಿಂದ ಕ್ಷೌರದ ಅಂಗಡಿಗೆ ಬೇಕಾದ ಸಲಕರಣೆಗಳನ್ನು ಖರೀದಿಸಿ ನಿಮ್ಮ ಊರಿನಲ್ಲಿ ಕ್ಷೌರಿಕ ಉದ್ಯೋಗ ಪ್ರಾರಂಭಿಸಿ. ನಾನು ನನ್ನ ಅಧಿಕಾರದ ದುರುಪಯೋಗ ಮಾಡಿಕೊಂಡು ಅನ್ಯಾಯದ ಮಾರ್ಗದಲ್ಲಿ ನಿಮಗೆ ಉದ್ಯೋಗ ಕೊಡಿಸಲಾರೆ' ಎಂದರಂತೆ.

ಮತ್ತೊಂದು ಪ್ರಸಂಗವು ಎಷ್ಟರ ಮಟ್ಟಿಗೆ ನಿಜ ಎನ್ನುವ ಬಗ್ಗೆ ಸಂಶಯವಿದ್ದರೂ ಕರ್ಪೂರಿ ಠಾಕೂರ್ ಅವರನ್ನು ತೀರಾ ಹತ್ತಿರದಿಂದ ಬಲ್ಲವರು ಇದನ್ನು ನಿಜವೆಂದೇ ಹೇಳುತ್ತಾರೆ. ಕರ್ಪೂರಿಯವರು ಬಿಹಾರದ ಮುಖ್ಯಮಂತ್ರಿಯಾಗಿದ್ದಾಗಲೂ ಅವರ ತಂದೆ ತಮ್ಮ ಗ್ರಾಮದಲ್ಲಿ ಮನೆಗಳಿಗೆ ತೆರಳಿ ಕ್ಷೌರವನ್ನು ಮಾಡಿ ಬರುತ್ತಿದ್ದರು. ಒಮ್ಮೆ ಕ್ಷೌರವನ್ನು ಮಾಡಲು ಒಬ್ಬರ ಮನೆಗೆ ಹೋಗಲು ತಡವಾಯಿತು. ಅದಕ್ಕೆ ಆತ ಬಹಳ ಕೋಪಗೊಂಡಿದ್ದ. ಅವನ ಕೋಪವನ್ನು ನಿವಾರಿಸಿಲು ಖುದ್ದು ಕರ್ಪೂರಿ ಠಾಕೂರ್ ಅವರೇ ತಮ್ಮ ತಂದೆಯ ಪರವಾಗಿ ಆತನ ಬಳಿಗೆ ತೆರಳಿ ಕ್ಷಮೆ ಕೇಳಿ ತಾವೇ ಕ್ಷೌರ ಮಾಡುವುದಾಗಿ ಹೇಳಿದರಂತೆ. 

ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಕರ್ಪೂರಿ ಠಾಕೂರ್ ಅವರು ಎಂದೂ ಜನರನ್ನು ಮರೆಯಲಿಲ್ಲ. ತಮ್ಮ ಸ್ವಂತಕ್ಕಾಗಿ ಅಥವಾ ಕುಟುಂಬಕ್ಕಾಗಿ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳಲಿಲ್ಲ. ಈಗಿನ ‘ಕುಟುಂಬ ರಾಜಕಾರಣ' ದ ಸುಳಿಯೂ ಅವರು ತಮ್ಮ ಸುತ್ತ ಬರದಂತೆ ಮಾಡಿದ್ದರು. ನಿಜಕ್ಕೂ ಅವರೊಬ್ಬ ಜನ ನಾಯಕರಾಗಿದ್ದರು. ಅವರ ಗೌರವಾರ್ಥ ಅವರು ಹುಟ್ಟಿದ ಊರಾದ ಪಿತೌಜಿಯಾವನ್ನು ಈಗ ‘ಕರ್ಪೂರಿ ಗ್ರಾಮ' ಎಂದು ಕರೆಯಲಾಗುತ್ತದೆ. ಭಾರತ ಸರಕಾರ ಅವರ ಸ್ಮರಣಾರ್ಥ ೧೯೯೧ರಲ್ಲಿ ಅಂಚೆ ಚೀಟಿಯನ್ನು ಹೊರತಂದಿದೆ. ಈ ಎಲ್ಲಾ ಕಾರಣದಿಂದ ಅವರಿಗೆ ತಡವಾಗಿಯಾದರೂ ಅರ್ಹವಾಗಿ ‘ಭಾರತ ರತ್ನ' ಘೋಷಣೆಯಾಗಿದೆ.

(ಆಧಾರ ಮಾಹಿತಿ)

ಚಿತ್ರ ಕೃಪೆ: ಅಂತರ್ಜಾಲ  ತಾಣ