ಕರ್ಮಫಲ
ಅಮೇರಿಕಾ ದೇಶದಲ್ಲಿ ಅಬ್ರಹಾಂ ಲಿಂಕನ್ ಎನ್ನುವ ವ್ಯಕ್ತಿ ರಾಷ್ಟ್ರಾಧ್ಯಕ್ಷನಾಗಿದ್ದನು. ಬಹಳ ಹೆಸರುವಾಸಿ, ದೊಡ್ಡ ಮನುಷ್ಯ. ಆತ ಅಷ್ಟು ಅದ್ಭುತವಾಗಿ ಬದುಕಿದ್ದನು. ಆತನ ಜೀವನ ಚರಿತ್ರೆ ಓದಿದರೆ ನಮಗೆ ಮಾರ್ಗದರ್ಶನ ಉಂಟಾಗುತ್ತದೆ, ಬದುಕಿಗೆ ದಾರಿ ತೋರಿಸುತ್ತದೆ. ಒಮ್ಮೆ ಒಂದು ಘಟನೆ ಆಯಿತು. ನಮ್ಮಲ್ಲಿ ಹೇಗೆ ವಿಧಾನಸಭೆ ಲೋಕಸಭೆ ಇದೆಯೋ ಹಾಗೆ ಅಮೆರಿಕದಲ್ಲಿ ಪಾರ್ಲಿಮೆಂಟ್ ಸಭೆ ಇದೆ. ಅಬ್ರಾಹಂ ಲಿಂಕನ್ ರವರು ರಾಷ್ಟ್ರ ಅಧ್ಯಕ್ಷರಿಗೆ ನೀಡಿದ ಮನೆಯಲ್ಲಿ ವಾಸವಾಗಿದ್ದರು. ಆ ಮನೆಯಿಂದ ಪಾರ್ಲಿಮೆಂಟ್ ಸಭೆಗೆ ಭಾಗಿಯಾಗಲು ಹೊರಟರು. ರಾಷ್ಟ್ರಾಧ್ಯಕ್ಷರು ಅಂದಮೇಲೆ ಅವರಿಗೆ ವಸ್ತ್ರ ಸಂಹಿತೆ ಇರುತ್ತದೆ. ಅದೇ ರೀತಿ ಸೂಟು ಬೂಟು ಧರಿಸಿ ಹೊರಟರು. ಅಲ್ಲಿ ಸಭೆ ಸರಿಯಾದ ಸಮಯಕ್ಕೆ ಪ್ರಾರಂಭವಾಗುತ್ತದೆ. ಭಾರತದಲ್ಲಿ ಹಾಗೇನೂ ಇಲ್ಲ. ಅತಿಥಿಗಳು ಬಂದ ನಂತರ ಪ್ರಾರಂಭವಾಗುತ್ತದೆ. ಹೀಗೆ ದಾರಿಯಲ್ಲಿ ಹೋಗುತ್ತಿರಬೇಕಾದರೆ ಮಳೆ ಬಂದು ಹೋಗಿತ್ತು. ಮಂಜು ಆವರಿಸಿತ್ತು. ಆಗ ಒಂದು ಪ್ರಾಣಿಯ ನರಳುವ ದ್ವನಿ ಕೇಳಿಸಿತು. ಅದು ಮೊಲದ ಮರಿ. ತಗ್ಗಾದ ನೀರಿನಲ್ಲಿ ಬಿದ್ದಿತ್ತು. ಅದು ಹೊರಬರಲು ಆಗದೆ ಅಲ್ಲೇ ಒದ್ದಾಡುತ್ತಿತ್ತು , ಮತ್ತೆ ನರಳುತ್ತಿತ್ತು. ಸಾಯುವ ಸ್ಥಿತಿಯಲ್ಲಿತ್ತು. ಆ ಧ್ವನಿ ಅಬ್ರಾಹಂ ಲಿಂಕನ್ ಗೆ ಕೇಳಿಸಿತು. ಆ ಧ್ವನಿ ಹಿಡಿದುಕೊಂಡು ಅದರ ಸಮೀಪಕ್ಕೆ ಹೋಗುತ್ತಾರೆ. ಕೊಳೆತ ನೀರಿನಲ್ಲಿ ಮೊಲದ ಮರಿ ಬಿದ್ದಿದೆ. ಇದನ್ನು ನೋಡಿದ ಅಬ್ರಾಹಂ ಲಿಂಕನ್ ನಿಗೆ ಬಹಳ ಮನಸ್ಸಿಗೆ ನೋವಾಯಿತು. ಆ ಸೂಟು ಬೂಟಿನಲ್ಲೇ ಹೊಲಸು ನೀರಿಗೆ ಇಳಿದರು. ಆ ಮರಿ ನೋಡಿದ ಅಬ್ರಾಹಂ ಲಿಂಕನ್ ಬಹಳ ಆನಂದವಾಗಿತ್ತು. ಆ ಮರಿ ಅಬ್ರಾಹಂ ಲಿಂಕನ್ ಅನ್ನು ನೋಡಿ ಕಣ್ತುಂಬ ಆನಂದ ವ್ಯಕ್ತ ಮಾಡಿತ್ತು. ಆ ಕ್ಷಣಕ್ಕೆ, ಆನಂದದ ಆ ಕಣ್ಣು ನೋಡಿದ ಅಬ್ರಾಹಂ ಲಿಂಕನ್ ಗೆ ಎಷ್ಟು ಆನಂದವಾಗಿತ್ತು ಎಂದರೆ ಅದನ್ನು ವರ್ಣಿಸಲು ಆಗುವುದಿಲ್ಲ. ಕೈ ಹೊಲಸಾಗಿತ್ತು. ಬಟ್ಟೆ ಹೊಲಸಾಗಿತ್ತು. ಆದರೂ ಮನೆಗೆ ಹೋಗಿ ಶುದ್ದಿಗೊಳ್ಳಲಿಲ್ಲ. ಏಕೆಂದರೆ ಅಲ್ಲಿ ಸಭೆ ಸಮಯ ಅಂದ್ರೆ ಸಮಯ. ಒಂದು ನಿಮಿಷ ವ್ಯತ್ಯಾಸವಿಲ್ಲ. ಹಾಗಾಗಿ ನೇರವಾಗಿ ಕೊಳಕು ಬಟ್ಟೆಯಲ್ಲಿ ಪಾರ್ಲಿಮೆಂಟಿಗೆ ಹೋದರು. ಇವರು ಸಭೆಗೆ ಹೋಗುವ ವೇಳೆಗೆ ಈ ಸುದ್ದಿ ಎಲ್ಲಾ ಕಡೆ ಹರಡಿತ್ತು. ಅಬ್ರಾಹಂ ಲಿಂಕನ್ ತಮಗೆ ನಿಗದಿಯಾಗಿದ್ದ ಸ್ಥಳದಲ್ಲಿ ಕುಳಿತರು. ಆಗ ಸೆನೆಟರ್ ಗಳು ಅಬ್ರಾಹಂ ಲಿಂಕನ್ ನ ಕೆಲಸ ಹೊಗಳಲು ಶುರು ಮಾಡಿದರು. ಎಂತಹ ನಮ್ಮ ರಾಷ್ಟ್ರ ಅಧ್ಯಕ್ಷರು?. ನಮ್ಮ ಅಬ್ರಾಹಂ ಲಿಂಕನ್ ದಯಾಳು ಅಂತ ಹೊಗಳಲು ಶುರು ಮಾಡಿದರು.
ಆಗ ಅಬ್ರಾಹಂ ಲಿಂಕನ್ ನಿಂತು ಹೇಳಿದ ಮಾತು ನಮಗೆಲ್ಲ ದಾರಿ ದೀಪ. ಅವರು ಹೇಳುತ್ತಾರೆ "ನೀವು ತಪ್ಪು ತಿಳಿದುಕೊಂಡಿದ್ದೀರಿ, ಏಕೆಂದರೆ ಅದರಲ್ಲಿ ನನ್ನ ಸ್ವಾರ್ಥ ಇದೆ". ಆಗ ಸೆನೆಟರಿಗೆ ಆಶ್ಚರ್ಯವಾಯಿತು. ಏನು ಅಂತ ಸ್ವಾರ್ಥ ಎಂದರು. ಆಗ ಅಬ್ರಾಹಂ ಲಿಂಕನ್ ಹೇಳುತ್ತಾನೆ "ಆ ಮೊಲ ನರಳಾಡುತ್ತಿತ್ತು, ಆ ಧ್ವನಿ ಕೇಳಿದಾಗ ನನ್ನ ಮನಸ್ಸಿಗೆ ನೋವಾಗಿತ್ತು. ಆ ಮಾನಸಿಕ ದುಃಖ ಕಳೆದುಕೊಳ್ಳಲು, ಆ ಮೊಲ ತೆಗೆದಿದ್ದೇನೆ ವಿನಹ, ಅದರ ಪ್ರಾಣ ಉಳಿಸಿ, ಅದರ ಮೇಲೆ ಕೃಪೆ ತೋರಲು ಮಾಡಲಿಲ್ಲ". ಸ್ವಾರ್ಥಕ್ಕಾಗಿ ಮಾಡಿದ ಈ ಕರ್ಮಕ್ಕೆ ನೀವು ಪ್ರಸಂಶೆ ಮಾಡಬಾರದು. ನನ್ನ ಹಿತಕ್ಕಾಗಿ ನಾನು ಮಾಡಿದ್ದೇನೆ ವಿನಹ ಅದರ ಸಂತೋಷಕ್ಕಲ್ಲ. ಅದು ಮಾಡಿದ್ದು ನನ್ನ ಸಂತೋಷಕ್ಕೆ ಅಂತ ಹೇಳಿದ. ನಾವೇನಾದರೂ ಮಾಡಿದ್ದರೆ ಹೀಗೆ ಹೇಳುತ್ತಿದ್ದೇವೆಯೇ? ಅವನಿಗಾಗಿ ಮಾಡಿದ್ದೇನೆ ಅದಕ್ಕಾಗಿ ನನಗೆ ಸನ್ಮಾನಿಸಿ ಎಂದು ಹೇಳುತ್ತಿದ್ದೆವು.
ನಾವು ನಮ್ಮ ಶಾಲೆಯ ಕಸ ಹೊಡೆದರೆ ಇತರರಿಗೆ ಅನುಕೂಲ ಅಂತ ಭಾವಿಸುವುದಲ್ಲ, ನಾನು ಸಂತೋಷವಾಗಿ ಕುಳಿತುಕೊಳ್ಳಲು ಕಸ ಹೊಡೆದೆ ಅನ್ನುವ ಭಾವ ಇರಬೇಕು. ನಾವು ಕೆಲಸದಲ್ಲಿ ಆನಂದ ಪಡಬೇಕು. ಈಗ ಊಟಕ್ಕೆ ಕುಳಿತಿದ್ದೇವೆ ಎಂದುಕೊಳ್ಳಿ. ಒಂದು ತುತ್ತು ತೆಗೆದು ಕೊಳ್ಳುತ್ತಾ, ಈ ತುತ್ತು ಎಷ್ಟು ಶಕ್ತಿ ಕೊಡುತ್ತದೆ?. ಈ ತುತ್ತಿಗೆ ನಾನು ಎಷ್ಟು ಖರ್ಚು ಮಾಡಿದ್ದೇನೆ?. ಅಂತ ಎಲ್ಲಾ ಲೆಕ್ಕ ಹಾಕುತ್ತಾ ತಿಂದರೆ, ಸಂತೋಷ ಎಲ್ಲಾಗುತ್ತದೆ?. ಎಲ್ಲಾ ಮರೆತು ಊಟದಲ್ಲಿ ಮಗ್ನರಾದರೆ ಅದರ ರಸ ಅನುಭವ ಪಡೆಯಲು ಸಾಧ್ಯ. ಅನುಭವ ಸಂತೋಷ ಕೊಡುತ್ತದೆ. ಹೀಗೆ ಲಾಭ, ನಷ್ಟ, ಪ್ರಸಂಶೆ ಬಯಸದೆ ಕೆಲಸದಲ್ಲಿ ಮಗ್ನರಾದರೆ ಅದು ಒಂದು ರೀತಿಯ ಸಂತೋಷ ಕೊಡುತ್ತದೆ. ಮನಸ್ಸು ಕೆಲಸದಲ್ಲಿ ಮಗ್ನವಾದಾಗ ಅಂದರೆ ನೋಡುವ ಕೆಲಸವಾಗಲಿ, ಹೇಳುವ ಕೆಲಸವಾಗಲಿ, ಗುರುತಿಸುವ, ರುಚಿಸುವ ವಾಸನೆ ಗ್ರಹಿಸುವ, ಓದುವ, ಬರೆಯುವ ಅಥವಾ ಮಾಡುವ ಯಾವುದೇ ಕೆಲಸವಾದರೂ, ಅದು ಮನಸ್ಸನ್ನು ತುಂಬುತ್ತದೆ. ಮನಸ್ಸಿನಲ್ಲಿ ತುಂಬಿಕೊಂಡು ಸಂತಸ ಪಡುವುದು ಅನುಭವ. ಕಣ್ಣು ಮುಚ್ಚಿದಾಗ ಆ ಜ್ಞಾನದ ಚಿತ್ರ, ಸೌಂದರ್ಯ, ರೂಪ, ಬಣ್ಣ, ವಾಸನೆ ಮತ್ತು ರುಚಿ ಸ್ಪಷ್ಟವಾಗಿ ಮನಸ್ಸಿನಲ್ಲಿ ಮೂಡಿದರೆ ಅದು ಅನುಭವ. ಅನುಭವದಿಂದಾಗುವ ಸಂತೋಷವೇ ಕರ್ಮಫಲ. ಅಲ್ಲವೇ?
-ಎಂ.ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ