ಕರ್ವಾ ಚೌತ್ ಸುದ್ದಿಯ ವಿವಿಧ ಆಯಾಮಗಳು !

ಕರ್ವಾ ಚೌತ್ ಸುದ್ದಿಯ ವಿವಿಧ ಆಯಾಮಗಳು !

ಕರ್ವಾ ಚೌತ್ ಸುದ್ದಿಯೊಂದು ಉತ್ತರ ಪ್ರದೇಶದಿಂದ ಬಂದಿದೆ. ಅದಕ್ಕೆ ವಿವಿಧ ಆಯಾಮಗಳಿವೆ. ಕರ್ವಾ ಚೌತ್ ಎಂಬ ಹಬ್ಬದ ಪ್ರಯುಕ್ತ ಮಹಿಳೆಯರ ಮೆಹಂದಿ ಕಾರ್ಯಕ್ರಮ ಅಲ್ಲಿ ಜನಪ್ರಿಯ. ಬಹುತೇಕ ಮುಸ್ಲಿಮರೇ ಹಿಂದು ‌ಹೆಣ್ಣುಮಕ್ಕಳ ಕೈಗಳಿಗೆ ಮೆಹಂದಿ ಹಚ್ಚುತ್ತಾರೆ. ಇದು ಹಿಂದಿನಿಂದಲೂ ಬೆಳೆದು ಬಂದ ಸಂಪ್ರದಾಯ.

ಉತ್ತರ ಪ್ರದೇಶದ ಸಂಘ ಪರಿವಾರದವರು ಒಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಯಾವುದೇ ಕಾರಣಕ್ಕೂ ಹಿಂದು ಮಹಿಳೆಯರು ಈ ಬಾರಿ ಮುಸ್ಲಿಮರಿಂದ ಮೆಹಂದಿ ಹಾಕಿಸಿಕೊಳ್ಳಬಾರದು. ಹಿಂದೂಗಳಿಂದಲೇ ಮೆಹಂದಿ ಹಚ್ಚಿಸಿಕೊಳ್ಳಬೇಕು. ಅದಕ್ಕಾಗಿ ವಿಶೇಷ ಬೇರೆ ವ್ಯವಸ್ಥೆ ಮಾಡಲಾಗಿದೆ. ಏಕೆಂದರೆ ಮುಸ್ಲಿಂ ಯುವಕರು ಮೆಹಂದಿ ಹಾಕುವ ನೆಪದಲ್ಲಿ ಹಿಂದು ಮಹಿಳೆಯರ ಕೈಹಿಡಿದು ಆಸೆ ಆಮಿಷ ತೋರಿಸಿ ಲವ್ ಜಿಹಾದ್ ಮಾಡುವ ಸಂಚು ಮಾಡುತ್ತಾರೆ. ಅದಕ್ಕಾಗಿ ಈ ಮುನ್ನೆಚ್ಚರಿಕೆ ಎಂದು ಎಲ್ಲಾ ಕಡೆ ಸಂದೇಶ ರವಾನಿಸಲಾಗಿದೆ. ಈ ವಿಷಯವನ್ನು ದಯವಿಟ್ಟು ಸೂಕ್ಷ್ಮವಾಗಿ ಮತ್ತು ಸಮಗ್ರವಾಗಿ ಪರಿಶೀಲಿಸಬೇಕು.

ಮೊದಲನೆಯದಾಗಿ, ಒಂದು ವೇಳೆ ಲವ್ ಜಿಹಾದ್ ಎಂಬುದು ನಿಜವೇ ಆಗಿದ್ದರೆ ಅದು ಅಕ್ರಮ - ಅಧರ್ಮ - ಅಪರಾಧ - ನಂಬಿಕೆ ದ್ರೋಹ. ಅದಕ್ಕೆ ಶಿಕ್ಷೆ ವಿಧಿಸಲೇಬೇಕು ಮತ್ತು ಮುಸ್ಲಿಂ ಧರ್ಮದ ಮುಖಂಡರ ಗಮನಕ್ಕೆ ಇದು ಬಂದಿದ್ದರೆ ದಯವಿಟ್ಟು ಈ ಧರ್ಮ ದ್ರೋಹದ ಕೆಲಸವನ್ನು ತಡೆಯಿರಿ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಒಂದು ವೇಳೆ ಅದು ಸುಳ್ಳಾಗಿದ್ದು ರಾಜಕೀಯ ಅಪಪ್ರಚಾರವಾಗಿದ್ದರೆ ಆ ಪಿತೂರಿಗಾರರು  ಹಿಂದುಗಳಾಗಿದ್ದರೆ  ಅವರು ಸಹ ದೇಶದ್ರೋಹಿಗಳೇ.

ಎರಡನೆಯದಾಗಿ, ಒಂದು ವೇಳೆ ಹಿಂದು ಮಹಿಳೆ ಮುಸ್ಲಿಂ ಯುವಕರ ಆಸೆ ಆಮಿಷಗಳಿಗೆ ಒಳಗಾದರೆ ಅಥವಾ ಕೇವಲ ಕೈಗೆ ಮೆಹಂದಿ ಹಚ್ಚುವ ಸಮಯದಲ್ಲೇ ಮುಸ್ಲಿಂ ಪುರುಷರ ಆಕರ್ಷಣೆಗೆ ಒಳಗಾಗಬಹುದು ಎಂದಾದರೆ ಆ ಮಹಿಳೆಯರ ನೈತಿಕತೆಯನ್ನು ಪ್ರಶ್ನೆ ಮಾಡಬೇಕಲ್ಲವೇ ? ಆ ಹಿಂದು ಹೆಣ್ಣು ಮಕ್ಕಳು ಪ್ರೀತಿಯ ವಿಷಯದಲ್ಲಿ ಅಷ್ಟೊಂದು ದುರ್ಬಲರೇ ? ಆಸೆ ಆಮಿಷ ಹಣ ಸೌಂದರ್ಯ ಮುಂತಾದ ಬಾಹ್ಯ ಆಕರ್ಷಣೆಯನ್ನು ಮೀರಲಾರದಷ್ಟು ಅಮಾಯಕರೇ ?

ಅಂತಹ ದುರ್ಬಲ ಮನಸ್ಥಿತಿಯನ್ನು ಎಷ್ಟು ದಿನ ರಕ್ಷಿಸಬಹುದು ? ನಾವು ಗೆಲ್ಲಬೇಕಾಗಿರುವುದು ಏನನ್ನು ? ಹಿಂದೂ ಮಹಿಳೆಯರಿಗೂ ಪರದೆ ಹಾಕಬೇಕೆ ? ತಮ್ಮ ಬದುಕಿನ ಭವಿಷ್ಯವನ್ನು ತಾವೇ ನಿರ್ಧರಿಸುವಷ್ಟು ಸ್ವಾತಂತ್ರ್ಯ ಮತ್ತು ಬೌದ್ದಿಕತೆಯನ್ನು ಹೆಣ್ಣು ಮಕ್ಕಳಿಗೆ ಬೆಳೆಸಬೇಕಲ್ಲವೇ ? ಪ್ರೀತಿಯ ಉಗಮದಲ್ಲಿ ಇಬ್ಬರ ಪಾಲು ಇರುತ್ತದೆಯಲ್ಲವೇ ? ಅದರಿಂದ ‌ಆಗಬಹುದಾದ ಒಳ್ಳೆಯದು ಮತ್ತು ಕೆಟ್ಟದ್ದಕ್ಕೆ ಅವರೂ ಜವಾಬ್ದಾರರಲ್ಲವೇ ?

ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಸಾಮಾಜಿಕ ಸಮಸ್ಯೆ ಎಂದು ಬಿಂಬಿಸಿ ಒಂದು ಸಂಘಟನೆ ನೈತಿಕ ಪೋಲೀಸ್ ಗಿರಿ ಮಾಡಿದರೆ ಮತ್ತಷ್ಟು ಸಮಸ್ಯೆ ಉದ್ಭವಿಸಿ ಸಂಘರ್ಷ ಆಗುವುದಿಲ್ಲವೇ ? ಲವ್ ಜಿಹಾದ್ ತಡೆಯಲು ಸಾಧ್ಯವಾಗದಷ್ಟು ಪೋಲೀಸ್ ವ್ಯವಸ್ಥೆ ದುರ್ಬಲವೇ ? ಈ ಪ್ರಶ್ನೆಗಳನ್ನು ನಮ್ಮ ‌ಆತ್ಮಸಾಕ್ಷಿಗೆ ಕೇಳಿಕೊಳ್ಳಬೇಕಲ್ಲವೇ ? ನಮ್ಮ ದೌರ್ಬಲ್ಯ ಮುಚ್ಚಿಕೊಳ್ಳಲು ಇತರರ ಮೇಲೆ ಆರೋಪ ಮಾಡುವುದು ಸರಿಯೇ ?

ಇಲ್ಲಿ ಬಲವಂತ ಅಥವಾ ಒತ್ತಾಯ ಪೂರ್ವಕ ಪ್ರೀತಿಯ ಬಗ್ಗೆ ಮಾತನಾಡುತ್ತಿಲ್ಲ. ಅದು ಸಹಜವಾಗಿ ಅಪರಾಧ. ಆದರೆ ಒಪ್ಪಿತ ಪ್ರೀತಿಯ ಬಗ್ಗೆ ಮಾತ್ರ ಈ ಅಭಿಪ್ರಾಯ. ಮುಂದೆ ದಾಂಪತ್ಯದಲ್ಲಿ ಆಗಬಹುದಾದ ಸಮಸ್ಯೆಗಳು ಪ್ರತ್ಯೇಕ. ಅದು ಎಲ್ಲಾ ಜೋಡಿಗಳ ಒಂದು ಸಮಸ್ಯೆ. ಮದುವೆ ನಂತರ ಎಷ್ಟೋ ಕುಟುಂಬಗಳಲ್ಲಿ ಅಕ್ಕನ ಮಕ್ಕಳನ್ನೇ ಮದುವೆಯಾಗಿದ್ದರೂ ಸಮಸ್ಯೆ ಬಂದಿರುವುದನ್ನು ಕಾಣಬಹುದಾಗಿದೆ. ಅಂತಹುದರಲ್ಲಿ ಹಿಂದು ಮುಸ್ಲಿಮ್ ಮದುವೆಯ ಸನ್ನಿವೇಶದಲ್ಲಿ ಜಗಳ ಆಶ್ಚರ್ಯಕರವೇನು ಅಲ್ಲ. ಅದು ಬಹುತೇಕ ನಿಶ್ಚಿತ. ಆದರೆ ಅದನ್ನು ಕೋಪದ ಬರದಲ್ಲಿ ಲವ್ ಜಿಹಾದ್ ಎಂದು ಕರೆಯಬಹುದೇ ?

ದೃಢವಾದ ಮತ್ತು ಪ್ರಾಮಾಣಿಕವಾದ ನೈತಿಕ ತಳಹದಿಯ ಮೇಲೆ ಸಮಾಜ ನಿರ್ಮಿಸಿದರೆ ಲವ್ ಜಿಹಾದ್ ಸಂಭವಿಸುವುದೇ ಇಲ್ಲ ಮತ್ತು ಅದಕ್ಕೆ ಅವಕಾಶವೂ ಇರುವುದಿಲ್ಲ. ಆದರೆ ಕೇವಲ  ಭಾವನಾತ್ಮಕವಾಗಿ ಸಮಾಜ ಸೃಷ್ಟಿಸಿದರೆ ಅದು ಕ್ಷಣಿಕ ಮತ್ತು ಅಪಾಯಕಾರಿ. ಅದಕ್ಕೆ ಇನ್ನೊಬ್ಬರನ್ನು ದೂಷಿಸಬಾರದು. ಆದರೆ ಇನ್ನೊಬ್ಬರು ಉದ್ದೇಶ ಪೂರ್ವಕವಾಗಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ ಈ ದೇಶದ ಕಾನೂನು ಮತ್ತು ಸುವ್ಯವಸ್ಥೆ ಕಠಿಣ ಕ್ರಮಗಳನ್ನು ಕೈಗೊಳ್ಳಲೇ ಬೇಕು. ಇದೇ ವಾಸ್ತವ.

ಮಹಿಳೆಯರು ಸಹ ತಾವು‌ ದುರ್ಬಲರಲ್ಲ ಸಬಲರು. ನಮ್ಮ ಭವಿಷ್ಯ ನಾವೇ ನಿರ್ಧರಿಸುವ ತಿಳಿವಳಿಕೆ ನಮಗಿದೆ. ನಮ್ಮನ್ನು ಯಾರು ವಂಚಿಸಲು ಸಾಧ್ಯವಿಲ್ಲ. ಯಾವುದೇ ಆಕರ್ಷಣೆಗೆ ನಾವು ಬಲಿಯಾಗುವುದಿಲ್ಲ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕಿದೆ. ದುರ್ಬಲ ಮನಸ್ಥಿತಿ ಎಂದಿಗೂ ಅಪಾಯ. ಇದನ್ನು ವಿಶಾಲ ಮನೋಭಾವದಿಂದ ನೋಡಬೇಕು. ಕೇವಲ ದ್ವೇಷ ಅಸೂಯೆ ರಾಜಕೀಯದ ಸಣ್ಣತನದಿಂದ ನಮ್ಮ ದೌರ್ಬಲ್ಯಗಳನ್ನು ಮರೆಮಾಚಬಾರದು.

ಹಿಂದೂ ಮುಸ್ಲಿಂ ಎರಡೂ ಧರ್ಮದವರಿಗೂ ಪ್ರೀತಿ ಧರ್ಮ ಮಾನವೀಯತೆ ಕಾನೂನು ಸಮನಾಗಿ ಅನ್ವಯ. ಅದು ಯಾರ ಪರವೂ ಅಲ್ಲ. ವಿರುದ್ದವೂ ಅಲ್ಲ. ಸೃಷ್ಟಿಯ ಸಹಜ ನ್ಯಾಯ..... ಭಾರತದಲ್ಲಿ ಭಾರತೀಯರು ಮಾತ್ರ ಇರುವಂತಾಗಲಿ.

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಅಂತರ್ಜಾಲ ತಾಣ