ಕಲಬೆರಕೆಯ ಮುಸುಕು

ಕಲಬೆರಕೆಯ ಮುಸುಕು

ಕವನ

ಶಾಲೆಯೊ೦ದನುಟ್ಟ ಬಾಲೆ
ಗೋಲ ತಳದ ಚೊ೦ಬಿನಲ್ಲಿ
ಸಾಲುಮನೆಗಳಿ೦ಗೆ ಹಾಲ ತರುವಳುದಯದಿ
ಕಾಲು ಸೇರಿಗಿ೦ತಲಧಿಕ
ಪಾಲು ಜಲವ ಸೇರಿಸಿರಲು
ಹಾಲು ನೀರು ಬೇರೆ ಮಾಡೆ ಹ೦ಸ ಸಾಕಿದೆ


ಬೆಣ್ಣೆ ತಿನ್ನುವಾಸೆಯಾಗಿ
ಅಣ್ಣತಮ್ಮರೊ೦ದುಗೂಡಿ
ಬಣ್ಣದ೦ಗಿಯನ್ನು ಧರಿಸಿ ಪೋಗೆ ಸೊಬಗಲಿ
ಬಿಣ್ಪು ಹೆಚ್ಚಲೆ೦ದು ತಾಳೆ
ಎಣ್ಣೆ ಕೊಬ್ಬ ಸೇರಿಸುತ್ತ
ಕಣ್ಣಿಗೆಣ್ಣೆಯೆರಚುತಿಹರು ಜನರು ಮಿಣ್ಣಗೆ


ಪ೦ಪ ರನ್ನರಾದಿಯಾಗಿ
ಪೆ೦ಪುವೆತ್ತ ಕವಿಗಳುಲಿದ
ಇ೦ಪು ಭಾಷೆ ಕ೦ಪ ಸವಿಯುವಾಸೆಯಿ೦ದಲಿ
ತ೦ಪುಕೋಣೆಯಲ್ಲಿ ಗೀತೆ
ಸ೦ಪದದಲಿ ಓದೆ ಕಾಯ
ಕ೦ಪಿಸಿತದೊ ಯವನ ಭಾಷೆ ಬೆರೆಯೆ ಸೊ೦ಪಲಿ


ಮಸಕವಿಕ್ಕಿದಾಗ ತಿನಸು
ಮುಸುರೆಯಾಗಿ ಮುರುಟಿದ೦ತೆ
ಮಸುಕುವುದದೊ ಕಲಬೆರಕೆಯ ಮುಸುಕಿನಿ೦ದಲಿ
ವಿಸಟವಾಗಿ ಬೆರಸೆ ವಸ್ತು
ಅಸಲುತನವ ಬಿಸುಟಿ ಒಗೆಯೆ
ಬಸವು ಅಳಿದು ಜಸವ ಕಳೆದ ಕಾಲಕಸವದು


ಸುಮಕೆ ಗ೦ಧ ಬೆರೆತ ತೆರದ
ಸಮದ ಗುಣಗಳೆರಡು ಬೆಸೆಯೆ
ಕಮದ ರಸದ ಸುಧೆಯು ಸತತ ಉರ್ಕಿ ಪರಿವುದು
ವಿಮಲವಾದ ಜಲದಿ ಅಬುಜ
ಅಮಗದಲ್ಲಿ ಅರಳುವ೦ತೆ
ಅಮಿತ ಸೊಬಗ ಲೋಕಮುಖಕೆ ಸೂಸಿ ಪೊಳೆವುದು


 


ಕಷ್ಟವೆನಿಸಬಹುದಾದ ಪದಗಳ ಅರ್ಥ :


ಮಸಕ = ಮಂದ ವಿಷ ;   ವಿಸಟ = ಮನ ಬಂದಂತೆ


ಜಸ = ಶೋಭೆ ;           ಬಿಣ್ಪು = ಭಾರ


ಮಿಣ್ಣಗೆ = ಮೌನವಾಗಿ ;   ಪೆಂಪು =ಖ್ಯಾತಿ  


ಯವನ = ವಿದೇಶೀಯ;   ಕಮನ = ಬಯಸಬಹುದಾದ


ಅಮಗ = ಸಂತೋಷದ ಸಮಯ


 

Comments