ಕಲರ್ ಕಲರ್ !

ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಎಂದು ವಿಜ್ಞಾನ ಹೇಳುತ್ತದೆ. ಬದುಕು ವರ್ಣಮಯವಾಗಿರಬೇಕು ಎಂದು ಆಧ್ಯಾತ್ಮ ಹೇಳುತ್ತದೆ. ವರ್ಣಮಯ ಆಗಿದ್ದಾಗಲೇ ಅದು ಬಿಳಿಯದಾದ, ಶುಭ್ರವಾದ, ಸ್ವಚ್ಛವಾದ, ಮಾಲಿನ್ಯರಹಿತ ಬದುಕು ಆಗುತ್ತದೆಂಬ ಇಂಗಿತದಲ್ಲಿ ವರ್ಣಮಯ ಬದುಕು ಎಂಬ ಕಲ್ಪನೆ ಬಂದಿದೆ. ವರ್ಣವೆಂದರೆ ಎಲ್ಲರಿಗೂ ಇಷ್ಟ. ಶೋಕಿ ಬದುಕೆಂಬರ್ಥದಲ್ಲಿ ವರ್ಣಮಯ ಎಂಬ ಪದದ ಬಳಕೆಯಾಗಿಲ್ಲ.
ನೃತ್ಯ ನಾಟಕಾದಿಗಳು ವರ್ಣರಹಿತವಾದರೆ ಸೊಗಸೆನಿಸದು. ಒಂದು ಕಾಲದಲ್ಲಿ ವರ್ಣರಹಿತ ಸಿನಿಮಾಗಳಿದ್ದುವು. ಇಂದು ಕಪ್ಪು ಬಿಳುಪು ಸಿನಿಮಾಗಳು ಯಾರಿಗೂ ಬೇಡ. ಧಾರಾವಾಹಿಗಳು, ರೀಲ್ಗಳು, ಚಿತ್ರಗಳು, ವೀಡಿಯೋಗಳು, ಉಡುಪುಗಳು, ಕಟ್ಟಡಗಳು, ಸುದ್ದಿ ಚಾನೆಲ್ಗಳು, ಕೋಲಗಳು, ನೇಮಗಳು, ಸಮಾರಂಭಗಳು ಎಲ್ಲವೂ ಕಲರ್ ಕಲರ್ ಆಗಿದ್ದರೆನೇ ಎಲ್ಲರಿಗೂ ಮುದ. ತಿಂಡಿಯೂ ಕಲರ್ಫುಲ್ ಆದರೆ ಈಗೀಗ ಜನಪ್ರಿಯವಾಗುತ್ತಲಿದೆ. ಯಕ್ಷಗಾನದಲ್ಲಿ ಸಾಮಾನ್ಯ ಬಣ್ಣದ ವೇಷಗಳ ಪ್ರವೇಶಕ್ಕೆ ಅಷ್ಟೊಂದು ಅಬ್ಬರವಿರುವುದಿಲ್ಲ. ಆದರೆ ಬಹು ಬಣ್ಣದ ಮತ್ತು ಮೇರು ಮುಖವರ್ಣಿಕೆಯ ಕಿರೀಟದ ವೇಷಗಳ ರಂಗ ಪ್ರವೇಶದ ವೇಳೆ ಜನರ ಗೌಜಿ ಗಮ್ಮತ್ತು ನೋಡಬೇಕು. ಬಣ್ಣದ ವೇ಼ಷ ಭೂಷಣ ಇರದ ಪ್ರಗಲ್ಭ ಮಟ್ಟದ ನಾಟ್ಯವನ್ನಾದರೂ ಯಾರೂ ಕತ್ತುದ್ದಮಾಡಿ ನೋಡಲು ಹವಣಿಸುವುದಿಲ್ಲ, ಷಹಭಾಸ್ ಎಂದು ಹೇಳುವುದಿಲ್ಲ. ವರ್ಣಗಳು ನಯನ ಮೋಹಕ, ಮನರಂಜಕ.
ಭಾರತೀಯ ಪುರುಷರ ಸಾಂಪ್ರದಾಯಿಕ ಉಡುಪು ಬಿಳಿ ಕಚ್ಚೆ, ಬಿಳಿ ಕುರ್ತಾ ಮತ್ತು ಹೆಗಲಿಗೆ ಬಿಳಿ ಶಲ್ಯ, ತಲೆಗೊಂದು ಬಿಳಿ ಟೋಪಿ. ಆದರೆ ಇಂದು ಅವುಗಳನ್ನು ಇಷ್ಟ ಪಡುವವರು ಕಡಿಮೆ. ವರ್ಣಮಯ ದಿರಿಸಲ್ಲದಿದ್ದರೆ ನಮಗೇಕೋ ಇರುಸು ಮುರುಸು. ಪ್ರತಿಯೊಂದೂ ಬಣ್ಣ ಬಣ್ಣದ್ದೇ ಆದರೆ ನಮಗೆ ಬಹಳ ಪ್ರಿಯ. ಮನೆ, ವಾಹನ, ಪೀಠೋಪಕರಣ, ಕೈತೋಟ ಎಲ್ಲೆಂದರಲ್ಲಿ ನಾವು ಕಲರ್ ಪ್ರೇಮಿಗಳು. ತುಟಿಗೆ ಕಲರ್, ಮುಖಕ್ಕೆ ಕಲರ್, ಕೂದಲಿಗೆ ಕಲರ್, ಉಗುರಿಗೆ ಕಲರ್ ಅದೂ ಉಡುಪಿಗೆ ಮ್ಯಾಚಿಂಗ್ ಕಲರ್, ಅಬ್ಬಬ್ಬಾ ! ಆದರೆ ಕಲರ್ ಕಲರ್ ಎಂದು ಗೋಗರೆಯುವ ವರ್ಣ ಪ್ರಿಯರಲ್ಲದವರೂ ಇದ್ದಾರೆನ್ನುವುದು ಸತ್ಯ.
ಮಕ್ಕಳಿಗೆ ಕಲಿಕಾ ಹಂತದಲ್ಲಿ ವರ್ಣಮಯ ಚಿತ್ರಪಟಗಳು, ಅಕ್ಷರಗಳು ಇದ್ದರೆ ಅವರ ಗಮನ ಸೆಳೆಯುತ್ತದೆ. ಕಲಿಕೆ ಬಹಳ ವೇಗ ಪಡೆಯುತ್ತದೆ. ಆದರೆ ಸಾಹಿತ್ಯ ಓದುಗರು ಕಪ್ಪು ಬಿಳಿಯನ್ನು ಹೆಚ್ಚು ಇಷ್ಟ ಪಡುತ್ತಾರೆ. ಕಣ್ಣು ಮಸುಕಾದವರು ಕಲರ್ಲೆಸ್ ಕನ್ನಡಕ ಹಾಕುತ್ತಾರೆ, ಶೋಕಿಗಳು ಕಲರ್ಫುಲ್ ಕನ್ನಡಕ ಹಾಕುತ್ತಾರೆ. ಜಗತ್ತಿನೊಳಗೆ ಕಲರ್ನ ಶಕ್ತಿ ಅದ್ಭುತ, ಅತ್ಯದ್ಭುತ. ಇತ್ತೀಚೆಗೆ ತಿಂಡಿ ತೀರ್ಥಗಳೂ ಕಲರ್ ಫುಲ್ ಆಗಲಾರಂಭಿಸಿವೆ. ತಿಂಡಿಗಳಿಗೂ ಬಣ್ಣ ಬಳಿಯಲಾರಂಭಿಸಿದ್ದಾರೆ. ಗೋಬಿ ಮಂಚೂರಿಯ ಕೆಂಪು ಬಣ್ಣ ಇಷ್ಟವಾಗದವನು ನಾಗರಿಕರೆದುರು ಪೆಚ್ಚುಮೋರೆ ಹಾಕಿ ನಿಲ್ಲಬೇಕಾದ ಕಾಲವಿದು. ಬ್ರೆಡ್ಗೆ ಜಾಮೂನು ಕಲರ್ ಫುಲ್. ಜ್ಯೂಸ್ಗಳು ಕಲರ್ಮಯ. ಅಕ್ಕಿದೋಸೆ ವರ್ಣವಿದ್ದರೆ ಆಕರ್ಷಕ. ಬಿಳಿ ಅನ್ನವೇ ಬೇಕೆನ್ನುವವರ ಸಂಖ್ಯೆಯೂ ಇಳಿಯುತ್ತಿದೆ. ಅದು ಚಿತ್ರಾನ್ನವಾದರೆ ಬಲು ಇಷ್ಟ ಯಾಕೆಂದರೆ ಕಲರ್ನ ಖದರ್.
ʼಬಚ್ಚಂಗಾಯಿʼ ಎಂದೇ ಜನಜನಿತವಾಗಿರುವ ಕಲ್ಲಂಗಡಿಯೊಳಗೆ ಕೆಂಪು ತಿರುಳನ್ನು ಮಾತ್ರ ನೋಡಿದ ನೆನಪು. ಆದರೆ ಈಗೀಗ ಹಳದಿ, ಹಸುರು ವರ್ಣದ ತಿರುಳಿನ ಕಲ್ಲಂಗಡಿಗಳೂ ಸಿಗಲಾರಂಬಿಸಿವೆ. ಇಷ್ಟವಾದ ʼಕಲರ್ʼ ಕೊಡುವುದರಲ್ಲಿ ನಮ್ಮಷ್ಟು ನಿಸ್ಸೀಮರೆನಿಸಿದವರು ಜಗದೊಳಗೆ ಅನ್ಯ ಜೀವಿಗಳು ದುರ್ಲಭ. ನಾವು ಮಾತನ್ನು ಕೂಡಾ ಕಲರ್ಫುಲ್ ಮಾಡುವುದರಲ್ಲಿ ಎತ್ತಿದ ಕೈಯಲ್ಲವೇ?
-ರಮೇಶ ಎಂ. ಬಾಯಾರು, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ