ಕಲಾಕೃತಿಗಳ ಮಾಯಾಲೋಕಕ್ಕೆ ಜನಸಮುದಾಯದ ಸೇತು: ಉತ್ಸವ್ ರಾಕ್ ಗಾರ್ಡನ್ (ಭಾಗ ೨)

ಕಲಾಕೃತಿಗಳ ಮಾಯಾಲೋಕಕ್ಕೆ ಜನಸಮುದಾಯದ ಸೇತು: ಉತ್ಸವ್ ರಾಕ್ ಗಾರ್ಡನ್ (ಭಾಗ ೨)

ಉತ್ಸವ್ ರಾಕ್ ಗಾರ್ಡನಿಗೆ ೧೧ ಜನವರಿ ೨೦೧೪ರ ಪೂರ್ವಾಹ್ನ ಭೇಟಿಯಿತ್ತಾಗ, ಅದು ಶೈಕ್ಷಣಿಕ ಸಾಂಸ್ಕೃತಿಕ ಪ್ರವಾಸಿ ಕೇಂದ್ರವಾಗಿ ಬೆಳೆದು ಬಂದ ಬಗೆಯನ್ನು ವಿವರಿಸಿದ್ದರು ಅದರ ಸ್ಥಾಪಕ ತಿಪ್ಪಣ್ಣ ಬಸವಣ್ಯೆಪ್ಪ ಸೊಲಬಕ್ಕನವರ್ (ಭಾಗ ೧ ಓದಿ).

ಅಂದು ಅಪರಾಹ್ನ ಅವರೊಂದಿಗೆ ಸಂವಾದ. ಆ ಸಂದರ್ಭದಲ್ಲಿ, “ಗ್ರಾಮಾಭಿವೃದ್ಧಿಗೆ ನಾವೇನು ಮಾಡಬಹುದು?” ಎಂಬುದರ ಬಗ್ಗೆ ತಮ್ಮ ಚಿಂತನೆಗಳನ್ನು ಅವರು ಹಂಚಿಕೊಂಡಿದ್ದರು. ಅದನ್ನು ಅವರ ಮಾತುಗಳಲ್ಲೇ ಈ ಬರಹದಲ್ಲಿ ದಾಖಲಿಸಿದ್ದೇನೆ:

"ನಾನು ನನ್ನ ಹಳ್ಳಿಗೆ ಮರಳಿ ಬಂದಿದ್ದು - ಎರಡು ಪ್ರಾಜೆಕ್ಟ್ ಇಟ್ಕಂಡು. ಒಂದು ಗ್ರಾಮರಂಗಭೂಮಿ ಸಂಘಟಿಸೋದು; ಅದಕ್ಕೆ “ಥರ್ಡ್ ರಂಗಭೂಮಿ” ಅಂತಾರೆ. ಇನ್ನೊಂದು ಸ್ವಾವಲಂಬಿ ಆಗೋದು.

ನಮ್ಮ ಹಳ್ಳಿ ಹುಲಸೋಗಿ. ಇಲ್ಲಿಂದ ನಾಲ್ಕು ಕಿಮೀ ದೂರದಲ್ಲಿದೆ. ನಮ್ಮ ಹಳ್ಳೀಲಿ ಏಳನೇ ಕ್ಲಾಸ್ ಪಾಸ್ ಮಾಡಿದ್ದು ನಾನೇ ಫಸ್ಟ್. ಆಗ ಹಳ್ಳಿಯೋರು ನನ್ನ ಮೆರವಣಿಗೆ ಮಾಡಿದ್ರು. ಅದಾದ ನಂತರಾನೂ ಎಲ್ಲದರಲ್ಲೂ ನಾನೇ ಫಸ್ಟ್. ಹಂಗಾಗಿ ಎಲ್ಲರಿಂದ ಗೌರವ ಸಿಗ್ತಿತ್ತು. ನಾನು ಹಳ್ಳಿಗೆ ಮರಳಿ ಬಂದಾಗ ನನ್ನ ಕೈಲಿ ೧೦,೦೦೦ ರೂಪಾಯಿ ಇತ್ತು. ಸ್ವಾವಲಂಬಿ ಆಗಬೇಕು ಅಂತ ಯಾಕೆ ಯೋಚನೆ ಮಾಡಿದೆ ಅಂತೀರಾ? ಇಲ್ಲಾಂದ್ರೆ ಹಳ್ಳೀಲಿ ಗೌರವ ಇರಲ್ಲ.

ನಾನು ಡೈರಿ ಶುರು ಮಾಡಿದೆ; ಕುಂದಾಪುರದಿಂದ ಆಕಳು ತಂದೆ. ಎಲ್ಲ ಕೆಲ್ಸ ನಾವೇ - ಮನೆಯವ್ರು, ಹೆಣ್ಮಕ್ಕಳು - ಸೇರ್ಕಂಡು ಮಾಡೋದು. ಆಗ ಗ್ರಾಮದ ಪರಿಸ್ಥಿತಿ ಈಗ ಇದ್ದಂಗಿರ್ಲಿಲ್ಲ. ಕೆಲಸಕ್ಕೆ ಬನ್ನಿ ಅಂದ್ರೆ ಯಾರಾದ್ರೂ ಬರ್ತಿದ್ರು.

ಈಗ ಹಂಗಿಲ್ಲ ಪರಿಸ್ಥಿತಿ - ಈಗ ಯಾರೂ ಕೆಲ್ಸಕ್ಕೆ ಬರಲ್ಲ. ಈಗ ಇವನಿಂದ ನಂಗೇನ್ ಸಿಗ್ತದೆ ಅಂತ ಯೋಚನೆ ಮಾಡ್ತಾರೆ. ಇಂವ ದುಡ್ಡು ಮಾಡ್ಯಾನ ಅಂದ್ಕೋತಾರೆ. ಇಂವ ಫಾರಿನ್‌ನಿಂದಲೂ ಫಂಡ್ ತಂದಿದಾನೆ ಅಂದ್ಕೋತಾರೆ. ಎಲ್ಲಿಂದ ಫಂಡ್ ತಂದಿದ್ದೀ ಅಂತಾನೂ ಕೇಳ್ತಾರೆ.

ಆಗ ನಮ್ ಹಳ್ಳೀಗೆ ಬಸ್ಸೂ ಇರ್ಲಿಲ್ಲ. ಬಸ್ ಹಿಡಿ ಬೇಕಾದ್ರೆ, ೪ ಕಿಮೀ ನಡೆದು ಹೋಗಬೇಕಾಗಿತ್ತು. (ಈಗ ಅಲ್ಲಿ ೨೦೦ ಟ್ರಾಕ್ಟರ್ ಇದ್ದಾವೆ ನೋಡ್ರೀ.) ಅನಂತ್ರ ಬಹಳ ಪ್ರಯತ್ನ ಮಾಡಿ ನಮ್ ಹಳ್ಳೀಗೆ ಬಸ್ ಹಾಕ್ಸಿದ್ವಿ. ಆದ್ರೂ ಬಸ್ ಹಿಡೀಲಿಕ್ಕೆ ಒಂದ್ ಕಿಮೀ ನಡೀಬೇಕಾಗಿತ್ತು. ಅಂಥ ಪರಿಸ್ಥಿತೀಲಿ ನಮ್ ಹಳ್ಳೀಲಿ ಸ್ಕೂಲ್ ಶುರು ಮಾಡಿದ್ವಿ. ಅಲ್ಲಿ ಗ್ರಾಮ ಜಾನಪದಾನೂ ಶುರು ಮಾಡಿದ್ವಿ.

ಈಗ ಹಳ್ಳಿಯೋರು ಬಾಳ ತಿಳ್ಕಂಡಿದಾರೆ ನೋಡ್ರೀ. ಯಾಕಂದ್ರೆ, ಟಿವಿಯವ್ರು ಅವನ ಮನೆಗೇ ಬರ್ತಾರೆ; ವಿಶ್ವವನ್ನೇ ಅವನೆದುರು ತಂದು ನಿಲ್ಲಿಸ್ತಾರೆ.

ಈಗಿನ ಹಳ್ಳಿ ಯುವಕರು ಹೆಂಗಿದಾರೆ? ಹುಬ್ಳಿ ನೋಡಿ ಬಂದಾರೆ; ಬೆಂಗ್ಳೂರ್ ನೋಡಿ ಬಂದಾರೆ. ಹುಬ್ಳಿ ರೈಲ್ವೇ ಸ್ಟೇಷನ್ ಎದುರು ದಿನಾಗ್ಲೂ ನಿಂತಿರ್ತಾರೆ - ಲೇಬರ್ ಎಲ್ಲಿ ಬೇಕಂದ್ರೆ ಅಲ್ಲಿಗೆ ಬರ್ತಾರೆ. ಅವರು ಈಗ ಸ್ವಾವಲಂಬಿ ಆಗ್ಯಾರೆ. ಕುಟುಂಬದಲ್ಲಿ ಒಬ್ಬ - ಬೇಸಾಯದಲ್ಲಿ ಆಸಕ್ತಿ ಇರೋನು - ಊರಲ್ಲಿದ್ದು ಬೇಸಾಯ ಮಾಡ್ತಾನೆ. ಉಳಿದೋರು ಹೊರಗಡೆ ಹೋಗಿ ದುಡೀತಾರೆ.

ಈಗ ಕೃಷಿ ಹೆಂಗಿದೆ? ಗೋವಿನ ಜೋಳ ತಗಳ್ಳಿ. ಅಬ್ಬಬ್ಬಾ ಅಂದ್ರೆ, ಇಡೀ ವರ್ಷದಾಗೆ ಮೂರು ದಿನ ಅದರ ಕೆಲಸ, ಅಷ್ಟೇ. ಒಂದೆಕ್ರೆಗೆ, ಉಳೋದು ಒಂದು ತಾಸು, ಸಾಲು ಹೊಡ್ಯೋದು ಒಂದು ತಾಸು, ಬಿತ್ತೋದು ಒಂದು ತಾಸು, ಕಳೆ ತೆಗೆಯೋದು ಒಂದು ದಿನ, ಕೊಯ್ಯೋದು ಒಂದು ದಿನ, ಕಾಳು ಬಿಡಿಸೋದು ಒಂದು ದಿನ, ಒಟ್ಟಾರೆ ಮೂರು ದಿನ ಮೂರು ತಾಸು ಕೆಲಸ ಮಾಡಿದ್ರಾತು. ಇಷ್ಟು ಕೆಲ್ಸಕ್ಕೆ ಎಕ್ರೆಗೆ ೨೫,೦೦೦ ರೂಪಾಯಿ ಆದಾಯ. ಅಂದ್ರೆ, ಎಲ್ಲ ಖರ್ಚು ಕಳದು, ಒಂದೆಕ್ರೆಗೆ ೨೫,೦೦೦ ರೂಪಾಯಿ ಉಳೀತದೆ. ಉಳಿದ ಹೊತ್ನಾಗೆ ರೈತ ಏನೇನೋ ಮಾಡ್ತಾನೆ - ರಾಜಕೀಯನೂ ಮಾಡ್ತಾನೆ.
ಸರಕಾರ ಕಿಲೋಗೆ ಒಂದು ರೂಪಾಯಿ ರೇಟಿಗೆ ಅಕ್ಕೀನೂ ಕೊಡ್ತದೆ. ಮಕ್ಳಿಗೆ ಮಧ್ಯಾಹ್ನ ಶಾಲೇಲಿ ಊಟ ಕೊಡ್ತಾರೆ; ಅದ್ರಿಂದಾಗಿ ಪಾಲಕರ ಸಮಸ್ಯೆನೂ ಬಗೆಹರಿದಿದೆ.

ಜಾನಪದ ಅಂದ್ನಲ್ಲ; ನಮ್ ಉದ್ದೇಶ ಏನಂದ್ರೆ ಜಾನಪದ ಉಳಿಸೋದು ಅಷ್ಟೇ. ಯಾಕಂದ್ರೆ, ಜಾನಪದ ಇರೋದು ಉದ್ಯೋಗ ಕೊಡೋದಕ್ಕಲ್ಲ. ಜಾನಪದಾನ್ನ ಪ್ರೈಮರಿ ಸ್ಕೂಲಿಂದ ಕಲಿತರೆ, ಎಂಎ ಕಲೀವಾಗ ಸಲೀಸಾಗ್ತದೆ. ಭಜನೆ ೨೫ ವರ್ಷ ಅಂವ ಕೇಳಿರ್ಬೇಕು; ಹಂಗಾದ್ರೆ ಅವ್ನಿಗೆ ಭಜನೆ ಸಿಲೆಬಸ್ ಮಾಡಾಕ ಬರ್ತದೆ. ಜಾನಪದ ಅಂದ್ರೆ: ಕುಡಿಯೋರಿಗೊಂದು ವ್ಯವಸ್ಥೆ, ಇಸ್ಪೀಟ್ ಆಡೋರಿಗೊಂದು ವ್ಯವಸ್ಥೆ, ಹಾಡೋಕೊಂದು ವ್ಯವಸ್ಥೆ - ಇವೆಲ್ಲ ಇರ್ಬೇಕು. ಅದು ಟೀಂ ವರ್ಕ್.

ಈಗ ಕ್ಯಾಸೆಟ್ ಬಂದಿವೆ. ಹಾಡೋರು ಇಲ್ಲ. ಹಂಗಾರೆ, ಭಜನಿ ಯಾಕಾರೆ ಉಳಿಸಬೇಕು? ಹ್ಯಾಂಗ್ ಉಳಿಸಬೇಕು? ಪ್ರತಿ ದೇಶಕ್ಕೊಂದು ಸಂಸ್ಕೃತಿ ಇರ್ತದೆ. ಅದನ್ನ ಉಳಿಸಲಿಕ್ಕೆ ಜಾನಪದ ಅಂದ್ರೆ ಫೋಕ್ ವಲ್ಡ್ ಬೇಕು. ಈಗ, ಜಾನಪದ ಅನ್ನೋದು ದೇವರ ಸುತ್ತ ಉಳಿದಿದೆ. ಬಸವಣ್ಣ ಮಾಡಿದ್ದೇನು? ಪ್ರತೀ ಜಾತೀಲೂ ಕವಿಗಳನ್ನ ಬೆಳೆಸಿದ, ಅವ್ರನ್ನ ವಿದ್ವತ್ಪೂರ್ಣ ಮಾಡಿದ. ಯಾವುದೂ ಇಲ್ಲ ಅಂದರೂ ಕೊನೆಗೆ “ಕೂಡಲಸಂಗಮದೇವ" ಅಂದ. ಈಗ ಹಂಗಾಗಲ್ಲ.

ಪ್ರತೀ ಗ್ರಾಮಕ್ಕೂ ಅದರದೊಂದು ಸಂಸ್ಕೃತಿ ಇದೆ. ಅದನ್ನ ಧಾರ್ಮಿಕದೊಳಗೆ ಇಟ್ಟು ಕೊಟ್ರೆ, ಜನ ಒಟ್ಟು ಸೇರ್ತಾರೆ. ಅದನ್ನ ಬಿಟ್ "ಗ್ರಾಮ ಸುಧಾರಣೆ ಮಾಡ್ತೇನೆ” ಅಂದ್ರೆ ಹಾಸ್ಯಾಸ್ಪದ.

ಜಾನಪದ ಹೊರಾಕಾರಗಳನ್ನು ಬದಲಿಸ್ತದೆ. ಆದ್ರೆ, ಒಳಾಕಾರ ಬದಲಾಯಿಸಲ್ಲ. ಉದಾಹರಣೆಗೆ “ರಾಗ". ಆಸಕ್ತರು ಒಟ್ಟು ಸೇರಿ, ಬಡಗುತಿಟ್ಟು ಯಕ್ಷಗಾನ ಮತ್ತು ಕಥಕ್ಕಳಿಗೆ ಸಿಲೆಬಸ್ ಮಾಡಿದಾರೆ; ಪರ್ಫೆಕ್ಟ್ ಮಾಡಿ ಇಟ್ಟಿದಾರೆ. ಉಳಿದ ಕಲಾಪ್ರಕಾರಗಳಲ್ಲಿ ಅಂಥ ಕೆಲಸ ಆಗಿಲ್ಲ.

ನಾವು “ಕನ್ನಡ ಜಾನಪದ ಪ್ರಾಥಮಿಕ ಶಾಲೆ” ಇಲ್ಲೇ ಶುರು ಮಾಡಿದ್ದೀವಿ. ಇದು ಇವತ್ತಿನ ತುರ್ತು ಅನಿಸ್ತದೆ. ಒಬ್ಬ ತಾಯಿ ಮಗೂನ್ನ ಬಾಲವಾಡಿಗೆ ಕಳಿಸ್ತಾಳೆ. ಯಾಕೆ? ಆ ಮಗೂಗೆ ಮುಂದೆ ನೌಕರಿ ಸಿಗಲಿ ಅಂತ. ಈ ನೌಕರಿ ಅನ್ನೋ “ಮೂಗಿಗೆ ಹಚ್ಚಿದ ತುಪ್ಪ” ಶಿಕ್ಷಣದ ಬೆಳವಣಿಗೆಗೆ ಕಾರಣ ಆಗ್ಯದೆ.

ಆದ್ರೆ, ಸಮಸ್ಯೆ ಇರೋದು ನಾವು ಕಲಿಸೋ ವಿಧಾನದಲ್ಲಿ. ನಾನು ೨೦ ವರ್ಷ ಇದ್ನಲ್ಲ, ಕಲಾ ಕಾಲೇಜಲ್ಲಿ; ಅಲ್ಲಿ ವಿದ್ಯಾರ್ಥಿಗಳು ಏನ್ ಕಲೀತಾರೆ? ಕೆಲವು ಚಿತ್ರಗಳನ್ನ ನೋಡ್ತಾರೆ, ಕಲಾಕಾರರ ಹೆಸರು ತಿಳ್ಕೋತಾರೆ. (“ಉತ್ಸವ್"ನಂಥ) ಕಲಾಕೇಂದ್ರಗಳಲ್ಲಿ ಅವ್ನಿಗೆ ಇವು ಎರಡೂ ಸಿಗ್ತವೆ. ಅದಲ್ದೆ, ಇಲ್ಲಿ ವಿದ್ಯಾರ್ಥಿ ಬೇರೇನೂ ಕಲೀತಾನೆ. ಉದಾಹರಣೆಗೆ - ಸಂಘಟನೆ ಮಾಡೋದನ್ನ. ಕಲಾ ಕಾಲೇಜಿನಲ್ಲಿ ಅಂವ ಕಲಿಯೋದು ಕಲೆ ಮಾತ್ರ.

ಇದು ಹೆಂಗದ್ರೆ, ರೆಸಿಡೆನ್ಸಿಯಲ್ ಸ್ಕೂಲಲ್ಲಿ ಇರೋನು “ಸುಳ್ ಹೇಳಬಾರದು” ಅನ್ನೋದನ್ನ ಕಲೀತಾನೆ. ಅದನ್ನೇ ಮನೇಲಿ ಇರೋನೂ ಕಲೀತಾನೆ; ಆದ್ರೆ ಅಪ್ಪ ಸುಳ್ ಹೇಳೋದು ನೋಡ್ತಾ ಕಲೀತಾನೆ. ಇಂವ ಒಟ್ಟಾರೆ ಬದ್ಕಲಿಕ್ಕೆ ಕಲೀತಾನೆ. ರೆಸಿಡೆನ್ಸಿಯಲ್ ಸ್ಕೂಲಲ್ಲಿ ಇದ್ದೋನು ಇದನ್ನ ಕಲಿಯೋಕಾಗಲ್ಲ. ಅವನಿಗೆ ಇಲ್ಲಿ ನಮ್ ಜೊತೆ ಇರೋ ಕಲಾಕಾರರಂಗೆ ಬದುಕು ಕಟ್ಟಿ ಕೊಳ್ಳೋಕೂ ಆಗಲ್ಲ. ಯಾಕಂದ್ರೆ, ಬದುಕಲಿಕ್ಕೆ ಬಾಳಬಾಳ ರೀತೀಲಿ ಬಾಳಬಾಳ ಕಲೀಬೇಕಾಗ್‌ತೈತೆ.”
 
ಫೋಟೋಗಳು: ಟಿ.ಬಿ. ಸೊಲಬಕ್ಕನವರು, ಉತ್ಸವ್ ರಾಕ್ ಗಾರ್ಡನಿನ ಶಿಲ್ಪಗಳು ಮತ್ತೊಂದು ಕಲಾಕೃತಿ