ಕಲಾಚಿಯ ನಿದ್ರಾನಗರಿಯ ಬಗ್ಗೆ ನಿಮಗೆ ಗೊತ್ತೇ?

ಕಲಾಚಿಯ ನಿದ್ರಾನಗರಿಯ ಬಗ್ಗೆ ನಿಮಗೆ ಗೊತ್ತೇ?

ದಿನವಿಡೀ ಶ್ರಮ ವಹಿಸಿ ದುಡಿದು ಮನೆಗೆ ಮರಳುವ ನೀವು ಸುಖವಾದ ನಿದ್ರೆಯ ಆಶೆಯಲ್ಲಿರುತ್ತೀರಿ. ಆದರೆ ನೀವು ಹಾಸಿಗೆಯಲ್ಲಿ ಮಲಗಿದಾಗ ಎಷ್ಟು ಸಮಯವಾದರೂ ನಿದ್ರಾದೇವಿ ನಿಮ್ಮನ್ನು ಆವರಿಸದೇ ಇದ್ದಾಗ, ಇಡೀ ರಾತ್ರಿ ಹೊರಳಾಡಿ ಹಾಗೂ ಹೀಗೂ ಬೆಳಿಗ್ಗೆ ಆದಾಗ ನಿಮ್ಮ ದೇಹದ ಚೈತನ್ಯ ಮಾಯವಾಗಿರುತ್ತದೆ. ದಣಿದ ದೇಹಕ್ಕೆ ನಿದ್ರೆ ಅತ್ಯವಶ್ಯಕ. ವಯಸ್ಕರಿಗೆ ಕನಿಷ್ಟ ೬ ಗಂಟೆ ನಿದ್ರೆ ಅಗತ್ಯ ಎನ್ನುತ್ತದೆ ವೈದ್ಯಶಾಸ್ತ್ರ. ನಿದ್ರೆಯೇ ಬಾರದೇ ನಿದ್ರಾ ಮಾತ್ರೆಗೆ, ಕುಡಿತಕ್ಕೆ ಶರಣಾದವರ ಸಂಖ್ಯೆ ಕಮ್ಮಿಯೇನಿಲ್ಲ. ಹಲವು ಮಂದಿಗೆ ರಾತ್ರಿ ಮದ್ಯ ಕುಡಿಯದೇ ನಿದ್ರೆ ಬರುವುದೇ ಇಲ್ಲ. ಇದು ಒಂದು ಚಟವಾಗಿ ಮಾರ್ಪಟ್ಟಿರುತ್ತದೆ. ನಮಗೆ ನೆಮ್ಮದಿ ನೀಡುವ ನಿದ್ರೆಯೇ ಸಮಸ್ಯೆಯಾದರೆ? ಈ ಬಗ್ಗೆ ನೀವು ಯೋಚಿಸಿರಲಿಕ್ಕಿಲ್ಲ. ಈ ಪ್ರಪಂಚ ವಿಸ್ಮಯ ಸಂಗತಿಗಳ ಮಾಯಾ ಲೋಕ. ನಿದ್ರಾನಗರಿಯಂಥಹ ಒಂದು ಊರು ನಮ್ಮ ವಿಶ್ವದಲ್ಲಿ ಇದೆಯೆಂದರೆ ನಿಮಗೆ ಆಶ್ಚರ್ಯವಾದೀತು. ಆದರಿದು ಸತ್ಯ. ವಿಜ್ಞಾನಿಗಳ ಲೆಕ್ಕಾಚಾರಕ್ಕೂ ಮೀರಿದ ವಿಷಯವೊಂದು ಇದೆ ಇಲ್ಲಿ.

ಕಝಗಿಸ್ತಾನ ದೇಶದ ಕಲಾಚಿ ಎಂಬ ಊರು ನಿದ್ರಾನಗರಿ (Sleeping City of Kalachi / Sleepy Hollow of Kalachi) ಎಂಬ ಕುಖ್ಯಾತಿಗೆ ಒಳಗಾಗಿದೆ. ಈ ಊರಿನಲ್ಲಿ ಜನರು ಎಲ್ಲೆಂದರಲ್ಲಿ ಅಲ್ಲಿ ನಿದ್ರೆಗೆ ಜಾರಿ ಬಿಡುತ್ತಾರೆ. ಅದೂ ಅಂತಿಂಥಾ ನಿದ್ರೆಯಲ್ಲ ದಿನಗಟ್ಟಲೆ, ಕೆಲವೊಮ್ಮೆ ವಾರಗಟ್ಟಲೆ. ಆದರೆ ಈ ನಿದ್ರೆ ಯಾಕೆ ಬರುತ್ತದೆ ಎಂದು ಈ ವರೆಗೆ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ೨೦೧೩ರಲ್ಲಿ ಮೊದಲ ಸಲ ಈ ನಿದ್ರೆಯ ಸಮಸ್ಯೆಯನ್ನು ಗುರುತಿಸಲಾಯಿತು. ಅಲ್ಲಿಂದ ಇತ್ತೀಚಿನ ವರೆಗೆ ಸುಮಾರು ೮೦೦ಕ್ಕೂ ಅಧಿಕ ಮಂದಿ ಈ ನಿದ್ರಾ ರೋಗಕ್ಕೆ ಗುರಿಯಾಗಿದ್ದಾರೆ ಎಂದು ಸಮೀಕ್ಷೆಗಳು ತಿಳಿಸುತ್ತಿವೆ. ಇಲ್ಲಿಯ ಜನರಿಗೆ ರಾತ್ರಿಯೇ ಈ ನಿದ್ರೆ ಬರಬೇಕೆಂದೇನೂ ಇಲ್ಲ. ಶಾಪಿಂಗ್ ಹೋದಾಗ, ಆಟದ ಮೈದಾನದಲ್ಲಿ, ಮಕ್ಕಳಾದರೆ ಶಾಲೆಯಲ್ಲಿ ನಿದ್ರೆಗೆ ಜಾರಿದವರಿದ್ದಾರೆ. ಕೆಲವರು ನಡೆದುಕೊಂಡು ಹೋಗುವಾಗಲೇ ನಿದ್ರೆಗೆ ಜಾರುತ್ತಾರೆ. ಕೆಲವರು ಬಸ್ಸಿನಲ್ಲಿ, ಆಫೀಸಿನಲ್ಲಿ, ರಸ್ತೆಯ ಬದಿಗಳಲ್ಲಿ, ಉದ್ಯಾನವನದಲ್ಲಿ ಎಲ್ಲೆಂದರಲ್ಲಿ ಅಲ್ಲಿ ಜನರು ನಿದ್ರಿಸುತ್ತಿರುವುದು ಕಂಡು ಬರುತ್ತದೆ. ಕೆಲವು ಮಂದಿ ಎರಡರಿಂದ ಮೂರು ದಿನಗಳಲ್ಲಿ ನಿದ್ರೆಯಿಂದ ಎದ್ದರೆ, ಕೆಲವರು ವಾರಗಟ್ಟಲೆ ನಿದ್ರೆಯಲ್ಲಿರುತ್ತಾರೆ. ನಿದ್ರೆಯಿಂದ ಎದ್ದವರಿಗೆ ಕಳೆದು ಹೋದ ದಿನಗಳ ಯಾವ ಘಟನೆಗಳೂ ನೆನಪಿರುವುದಿಲ್ಲ. ಅರೆ ಮಂಪರು ಸ್ಥಿತಿಯಲ್ಲಿರುತ್ತಾರೆ. ಅಪರೂಪಕ್ಕೆ ಕೆಲವರು ನಿದ್ರೆಯಲ್ಲೇ ಮರಣ ಹೊಂದಿದ ಪ್ರಕರಣಗಳೂ ಇವೆಯಂತೆ. ಕೆಲವು ಜನರಿಗೆ ಈ ರೀತಿಯ ನಿದ್ರೆಯು ೩-೪ ಸಲ ಬಂದದ್ದೂ ಇದೆ. ಹಲವಾರು ಮಂದಿ ವೈಜ್ಞಾನಿಕರು ಈ ಬಗ್ಗೆ ಸಂಶೋಧನೆ ನಡೆಸಿದರೂ ಫಲಿತಾಂಶ ಶೂನ್ಯ. ಯಾರೂ ನಿಖರವಾದ ಕಾರಣಗಳನ್ನು ನೀಡಲು ಸಾಧ್ಯವಾಗಿಲ್ಲ.

ಕಲಾಚಿ ನಗರದಲ್ಲಿ ಒಂದು ಹಳೆಯ ಯುರೇನಿಯಂ ನಿಕ್ಷೇಪದ ಗಣಿ ಇದೆ. ಇದರಿಂದ ಹೊರ ಬಂದ ಸ್ವಲ್ಪ ಪ್ರಮಾಣದ ಯುರೇನಿಯಂ ನಗರದ ನೀರಿನಲ್ಲಿ ಬೆರೆತು, ಅದನ್ನು ಇಲ್ಲಿನ ಜನರು ಕುಡಿದ ಪರಿಣಾಮವಾಗಿ ಕೆಲವರಿಗೆ ನಿದ್ರೆ ಬಂದಿರಲೂ ಸಾಧ್ಯ ಎಂದು ತರ್ಕಿಸುತ್ತಾರೆ. ಆದರೆ ನೀರಿನಲ್ಲಿ ಯುರೇನಿಯಂ ಅಂಶ ಗಣನೀಯ ಪ್ರಮಾಣದಲ್ಲಿ ಕಮ್ಮಿ ಇತ್ತು. ಇದರಿಂದ ಯಾವುದೇ ದುಷ್ಪರಿಣಾಮಗಳು ಬೀರಲು ಸಾಧ್ಯವಿರಲಿಲ್ಲ. 

ಮಾನವನು ಬದುಕಲು ಆಮ್ಲಜನಕದ ಅವಶ್ಯಕತೆ ಇದೆ.  ಕೆಲವು ವೈಜ್ಞಾನಿಕ ಅನ್ವೇಷಣೆಗಳ ಪ್ರಕಾರ ಕಲಾಚಿ ನಗರದ ಗಾಳಿಯಲ್ಲಿ ಕಾರ್ಬನ್ ಮೋನೋಕ್ಸೈಡ್ ಎಂಬ ವಿಷಕಾರಿ ಅಂಶ ಜಾಸ್ತಿ ಇದೆಯಂತೆ. ಆಮ್ಲಜನಕದ ಪ್ರಮಾಣ ಗಣನೀಯ ಕಮ್ಮಿ ಇರುವುದರಿಂದ ಇಲ್ಲಿನ ಜನರಿಗೆ ಉಸಿರಾಡುವಾಗ ಕಾರ್ಬನ್ ಮೋನೋಕ್ಸೈಡ್ ದೇಹವನ್ನು ಪ್ರವೇಶಿಸಿ ನಿದ್ರೆ ಬರುತ್ತದೆ ಎಂದು ಅನಿಸಿಕೆ ವ್ಯಕ್ತ ಪಡಿಸಿದರು. ನಮ್ಮ ಮೆದುಳಿಗೆ ಸರಬರಾಜು ಆಗುವ ಆಮ್ಲಜನಕದ ಪ್ರಮಾಣ ಕಮ್ಮಿ ಇದ್ದರೆ ಈ ರೀತಿಯ ಸಮಸ್ಯೆಗಳು ಬರುವ ಸಾಧ್ಯತೆ ಇದೆ ಎನ್ನುತ್ತಾರೆ. ಆದರೆ ಈ ಬಗ್ಗೆ ವಿಜ್ಞಾನಿಗಳು ಪ್ರಯೋಗ ಮಾಡಲಾಗಿ ಖಚಿತ ನಿರ್ಣಯಕ್ಕೆ ಬಂದಿಲ್ಲ. ಆದುದರಿಂದ ಈ ಸಮಸ್ಯೆಯ ಮೂಲ ಇನ್ನೂ ಪತ್ತೆ ಆಗಿಲ್ಲ, ನಿದ್ರೆಗೆ ಶರಣಾಗುವವರು ಇನ್ನೂ ನಿದ್ರೆ ಮಾಡುತ್ತಲೇ ಇದ್ದಾರೆ. ಅವರಾಗಿಯೇ ಏಳುವ ತನಕ ಅವರನ್ನು ನಿದ್ರೆಯಿಂದ ಎಬ್ಬಿಸಲು ಆಗುತ್ತಿಲ್ಲ.

ಮಾನವರನ್ನು ಹೊರತು ಪಡಿಸಿ ಪ್ರಾಣಿಗಳ ಪೈಕಿ ಕೇವಲ ಬೆಕ್ಕುಗಳಿಗೆ ಮಾತ್ರ ಈ ನಿದ್ರೆಯ ಸಮಸ್ಯೆ ಆಗಿದೆ. ಕೆಲವು ಸಾಕು ಬೆಕ್ಕುಗಳು ದಿನಗಟ್ಟಲೇ ಮಲಗಿದ ಉದಾಹರಣೆಗಳಿವೆ. ಅವುಗಳನ್ನು ಹೊರತು ಪಡಿಸಿ ಬೇರೆ ಯಾವ ಪ್ರಾಣಿಗಳಲ್ಲೂ ಈ ಸಮಸ್ಯೆ ಕಂಡು ಬರುವುದಿಲ್ಲ. 

ಚಿತ್ರ ಕೃಪೆ: ವಿವಿಧ ಅಂತರ್ಜಾಲ ತಾಣಗಳಿಂದ