ಕಲಾತ್ಮಕ ಚಿತ್ರಕ್ಕೂ ಮಾರುಕಟ್ಟೆ ಸೃಷ್ಟಿಸಿದ ‘ವಂಶವೃಕ್ಷ'

ಕಲಾತ್ಮಕ ಚಿತ್ರಕ್ಕೂ ಮಾರುಕಟ್ಟೆ ಸೃಷ್ಟಿಸಿದ ‘ವಂಶವೃಕ್ಷ'

ಕಲಾತ್ಮಕ ಚಿತ್ರಗಳಿಗೆ (Art Films) ಮೊದಲಿನಿಂದಲೂ ಹೇಳುವಂತಹ ಮಾರುಕಟ್ಟೆ ಇಲ್ಲ. ಕಲಾತ್ಮಕ ಚಿತ್ರ ಕೇವಲ ಬುದ್ಧಿ ಜೀವಿಗಳಿಗೆ ಮತ್ತು ಪ್ರಶಸ್ತಿ ಪಡೆಯಲು ಎನ್ನುವ ಮಾತು ಅಂದೂ ಇತ್ತು, ಈಗಲೂ ಇದೆ. ಇದು ಒಂದಿಷ್ಟು ಮಟ್ಟಿಗೆ ಸರಿಯೂ ಹೌದು. ಕಲಾತ್ಮಕ ಚಿತ್ರಗಳು ಸಾಮಾನ್ಯ ಪ್ರೇಕ್ಷಕನ ಮನಸ್ಸು ತಟ್ಟಿದ್ದು ಕಡಿಮೆ. ಇಡೀ ಚಿತ್ರ ಕತ್ತಲಿನಲ್ಲೇ ತೋರಿಸುವುದು, ಒಂದಕ್ಕೊಂದು ಸಂಬಂಧವಿಲ್ಲದ ಕಥಾ ಸ್ವರೂಪ, ಅಂತ್ಯ ಏನಿರಬಹುದು ಎಂದು ಪ್ರೇಕ್ಷಕನೇ ತಲೆಕೆಡಿಸಿಕೊಳ್ಳಬೇಕಾದ ಅನಿವಾರ್ಯತೆ ಈ ಕಾರಣಗಳಿಂದ ಕಲಾತ್ಮಕ ಚಿತ್ರಗಳು ಸಾಮಾನ್ಯ ಪ್ರೇಕ್ಷಕನಿಗೆ ರುಚಿಸಲೇ ಇಲ್ಲ. ಈಗಂತೂ ಕಲಾತ್ಮಕ ಚಿತ್ರಗಳ ನಿರ್ಮಾಣ ಎನ್ನುವುದು ಪ್ರಶಸ್ತಿ ಪಡೆದುಕೊಳ್ಳಲು ಮಾತ್ರ ಎನ್ನುವಂತಾಗಿದೆ.

೭೦ರ ದಶಕದಲ್ಲೂ ಕಲಾತ್ಮಕ ಚಿತ್ರಗಳಿಗೆ ಅಷ್ಟೇನೂ ಪ್ರೇಕ್ಷಕರಿರಲಿಲ್ಲ. ಅಂದು ಬಿಡುಗಡೆಯಾಗುತ್ತಿದ್ದ ಚಿತ್ರಗಳೂ ಕಡಿಮೆಯೇ. ಆಗೆಲ್ಲಾ ಪೌರಾಣಿಕ, ಭಕ್ತಿ ಪ್ರಧಾನ, ಸಾಮಾಜಿಕ ಚಿತ್ರಗಳಿಗೆ ಪ್ರೇಕ್ಷಕರು ಬರುತ್ತಿದ್ದರು. ಆದರೆ ಅದೇ ಸಮಯ ಕಲಾತ್ಮಕ, ಕಾದಂಬರಿ ಆಧಾರಿತ ಚಿತ್ರವೊಂದನ್ನು ನಿರ್ಮಾಣಗೊಂಡು ಬೆಂಗಳೂರಿನ ಚಿತ್ರ ಮಂದಿರವೊಂದರಲ್ಲಿ ನಿರಂತರ ೨೫ ವಾರಗಳ ಕಾಲ ಪ್ರದರ್ಶನ ಕಂಡದ್ದು ಒಂದು ದಾಖಲೆಯೇ ಸರಿ. ಈ ಚಿತ್ರ ‘ವಂಶವೃಕ್ಷ'. ಖ್ಯಾತ ಕಾದಂಬರಿಕಾರರಾದ ಡಾ. ಎಸ್ ಎಲ್ ಭೈರಪ್ಪ ಇವರ ಕಾದಂಬರಿಯ ಆಧಾರಿತ ಚಲನ ಚಿತ್ರವಿದು. ಕಾದಂಬರಿಯ ಕಥಾವಸ್ತು ಎಷ್ಟೇ ಗಟ್ಟಿಯಾಗಿದ್ದರೂ ಅದನ್ನು ತೆರೆಗೆ ತರುವಾಗ ನಿರ್ದೇಶಕರು ಅನುಭವಿಸುವ ಕಷ್ಟಗಳು ನೂರಾರು. 

‘ವಂಶವೃಕ್ಷ' ಕಾದಂಬರಿಯನ್ನು ಓದಿ ಮೆಚ್ಚಿಕೊಂಡ ಗಿರೀಶ್ ಕಾರ್ನಾಡ್ ಅವರು ಇದನ್ನು ತೆರೆಗೆ ತರುವ ಬಗ್ಗೆ ಯೋಚನೆ ಮಾಡಿದರು. ಅಂದಿನ ಖ್ಯಾತ ನಿರ್ದೇಶಕರಾದ ಜಿ ವಿ ಅಯ್ಯರ್ ಅವರೂ ಸೈ ಎಂದರು. ರಂಗಭೂಮಿಯಲ್ಲಿ ಉತ್ತಮ ಕಲಾವಿದರಾಗಿದ್ದ ಕಾರ್ನಾಡರು ಮತ್ತು ಬಿ ವಿ ಕಾರಂತರು ಈ ಚಿತ್ರವನ್ನು ಜಂಟಿಯಾಗಿ ನಿರ್ದೇಶಿಸುವ ಮನಸ್ಸು ಮಾಡಿದರು. ಆ ಸಮಯದಲ್ಲಿ ೩೪ರ ಯುವಕರಾಗಿದ್ದ ಗಿರೀಶ್ ಕಾರ್ನಾಡ್ ಎಸ್ ಎಲ್ ಭೈರಪ್ಪರ ಜೊತೆ ಮಾತನಾಡಿ ಈ ಕಾದಂಬರಿಯ ಹಕ್ಕನ್ನು ಪಡೆದುಕೊಂಡದ್ದೇ ದೊಡ್ಡ ಸಾಧನೆ. ಏಕೆಂದರೆ ಅಷ್ಟು ಸುಲಭದಲ್ಲಿ ಭೈರಪ್ಪನವರು ಯಾರನ್ನೂ ನಂಬುತ್ತಿರಲಿಲ್ಲ. ಅದರಲ್ಲೂ ಯುವಕರಾಗಿದ್ದ ಗಿರೀಶ್ ಕಾರ್ನಾಡ್ ಇವರು ತಮ್ಮ ಕಾದಂಬರಿಯನ್ನು ತೆರೆಗೆ ತರುತ್ತೇನೆ ಎಂದು ಕೇಳಲು ಹೋದಾಗ ಸ್ವತಃ ಕಾರ್ನಾಡರಿಗೂ ಹಕ್ಕುಗಳು ಸಿಗುತ್ತದೆ ಎಂದು ನಂಬಿಕೆ ಇದ್ದಿರಲಿಕ್ಕಿಲ್ಲ. ಆದರೆ ಕಾರಂತರ ಹಾಗೂ ಕಾರ್ನಾಡರ ರಂಗಭೂಮಿಯ ಅನುಭವವನ್ನು ಕಂಡಿದ್ದ ಭೈರಪ್ಪನವರು ಯಾವೊಂದು ಷರತ್ತುಗಳನ್ನು ವಿಧಿಸದೇ ‘ವಂಶವೃಕ್ಷ' ಕಾದಂಬರಿಯ ಹಕ್ಕುಗಳನ್ನು ನೀಡಿದರು. ಕಾರ್ನಾಡರು ತಮ್ಮಿಂದ ಸಾಧ್ಯವಾದಷ್ಟು ಸಂಭಾವನೆಯನ್ನೂ ನೀಡಿದರು. 

೧೯೭೨ರಲ್ಲಿ ‘ವಂಶವೃಕ್ಷ' ಚಿತ್ರ ಬಿಡುಗಡೆಯಾಯಿತು. ೧೯೭೧ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳ ಸಂಖ್ಯೆ ೩೬. ಆದರೆ ೧೯೭೨ರಲ್ಲಿ ಈ ಸಂಖ್ಯೆ ೨೪ಕ್ಕೆ ಇಳಿಯಿತು. ಸಂಖ್ಯೆಯಲ್ಲಿ ಕಡಿಮೆಯಾದರೂ ಗುಣಮಟ್ಟದಲ್ಲಿ ಉತ್ತಮ ಚಲನ ಚಿತ್ರಗಳು ತೆರೆಗೆ ಬಂದವು. ವಂಶವೃಕ್ಷವನ್ನು ನಿರ್ಮಾಣ ಮಾಡಿದ್ದು ಜಿ ವಿ ಅಯ್ಯರ್ ಇವರು. ಇವರು ಖುದ್ದು ಆ ಸಮಯದ ಖ್ಯಾತ ನಿರ್ದೇಶಕರಾಗಿದ್ದರೂ, ಈ ಚಿತ್ರವನ್ನು ನಿರ್ದೇಶಿಸುವ ಜವಾಬ್ದಾರಿಯನ್ನು ತಮ್ಮ ಶಿಷ್ಯಂದಿರಾದ ಕಾರ್ನಾಡ್ ಮತ್ತು ಕಾರಂತರಿಗೆ ಒಪ್ಪಿಸಿದರು. ಅವರು ವಹಿಸಿದ ಜವಾಬ್ದಾರಿಯನ್ನು ಬಹಳ ಸೊಗಸಾಗಿ ನಿಭಾಯಿಸಿದ ಕಾರ್ನಾಡ್ ಮತ್ತು ಕಾರಂತರು ಈ ಚಿತ್ರಕ್ಕೆ ಹೊಸ ಆಯಾಮ ತಂದುಕೊಟ್ಟರು. ಕಲಾತ್ಮಕ ಚಿತ್ರಗಳೂ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಿದೆ ಎಂದು ತೋರಿಸಿಕೊಟ್ಟರು. 

‘ಸಂಸ್ಕಾರ' ಎಂಬ ಚಿತ್ರದ ನಂತರ ‘ವಂಶವೃಕ್ಷ' ಚಿತ್ರವು ಕಲಾತ್ಮಕವಾಗಿ ನಿರ್ಮಾಣ ಮಾಡಿಯೂ ಗೆಲ್ಲಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿತು. ಈ ಚಿತ್ರಕ್ಕೆ ಹಲವಾರು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳು ಬಂದವು. ಎಸ್ ಎಲ್ ಭೈರಪ್ಪನವರಿಗೆ ಉತ್ತಮ ಕಥಾ ಲೇಖಕ ಪ್ರಶಸ್ತಿ ದೊರೆಯಿತು. ರಾಷ್ಟ್ರಮಟ್ಟದಲ್ಲಿ ಕಾರ್ನಾಡ್-ಕಾರಂತರ ಜೋಡಿಗೆ ಉತ್ತಮ ನಿರ್ದೇಶಕರು ಪ್ರಶಸ್ತಿ ಲಭಿಸಿತು. ಇದು ಭವಿಷ್ಯದಲ್ಲಿ ಇನ್ನಷ್ಟು ಕಲಾತ್ಮಕ ಚಿತ್ರಗಳನ್ನು ನಿರ್ಮಿಸುವ ನಿರ್ಮಾಪಕರ ಆಶಯಗಳಿಗೆ ಪ್ರೋತ್ಸಾಹದಾಯಕವಾಯಿತು. ರಂಗ ಕಲಾವಿದರಾದ ವೆಂಕಟರಾವ್ ತಲಗೇರಿಯವರ ಮನೋಜ್ಞ ಅಭಿನಯ ಮತ್ತು ಕಾತ್ಯಾಯಿನಿ ಪಾತ್ರದಲ್ಲಿ ನಟಿಸಿದ ಎಲ್ ವಿ ಶಾರದಾ ಅವರ ಪ್ರೌಢ ಅಭಿನಯಗಳು ಈ ಚಿತ್ರದ ಹೈಲೈಟ್ ಆಗಿದ್ದವು. ಅವರಿಗೂ ಪ್ರಶಸ್ತಿಗಳು ಸಂದವು. ವಂಶವೃಕ್ಷ ಚಿತ್ರಕ್ಕೆ ಒಟ್ಟು ಏಳು ಪ್ರಶಸ್ತಿಗಳು ದೊರೆತವು.

ವಂಶವೃಕ್ಷ ಚಿತ್ರದ ದಾಖಲೆ ಎಂದರೆ ಬೆಂಗಳೂರಿನ ‘ಸ್ಟೇಟ್ಸ್' ಚಿತ್ರ ಮಂದಿರದಲ್ಲಿ ಅಮೋಘ ೨೫ ವಾರಗಳ ಕಾಲ ನಿರಂತರ ಪ್ರದರ್ಶನ ಕಂಡಿತು. ಕಲಾತ್ಮಕ ಚಿತ್ರದ ವಿಷಯದಲ್ಲಿ ಇಂದಿಗೂ ಇದೊಂದು ದೊಡ್ಡ ದಾಖಲೆಯಾಗಿಯೇ ಉಳಿದಿದೆ. ಕಲಾತ್ಮಕ ಚಿತ್ರಗಳಿಗೆ ಚಿತ್ರ ಮಂದಿರ ಸಿಗುವುದೇ ಕಷ್ಟ ಎನ್ನುವ ಸಮಯದಲ್ಲಿ ೨೫ ವಾರಗಳ ಕಾಲ ಒಂದು ಚಿತ್ರ ಪ್ರದರ್ಶನ ಕಂಡದ್ದು ಇನ್ನೂ ದಾಖಲೆಯಾಗಿಯೇ ಉಳಿದಿದೆ. ಈ ಚಿತ್ರದ ವಿಶೇಷವೆಂದರೆ ಇದು ವಿಷ್ಟುವರ್ಧನ್ ಅವರ ಮೊದಲ ಚಿತ್ರ. ಆದರೆ ಈ ಚಿತ್ರದಲ್ಲಿ ಅವರು ವಿಷ್ಣುವರ್ಧನ್ ಆಗಿರದೇ ಕೇವಲ ‘ಕುಮಾರ್' (ವಿಷ್ಣು ಅವರ ಮೂಲ ಹೆಸರು) ಆಗಿದ್ದರು. 

ವಂಶವೃಕ್ಷದ ಪಾತ್ರ ವರ್ಗದ ಬಗ್ಗೆ ಒಮ್ಮೆ ಗಮನಿಸಿ ನೋಡುವುದಾದರೆ ಚಿತ್ರದ ನಿರ್ದೇಶನದ ಜೊತೆಗೆ ಕಾರ್ನಾಡ್ ಹಾಗೂ ಕಾರಂತರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತರ ಪಾತ್ರಗಳಲ್ಲಿ ವೆಂಕಟರಾವ್ ತಲಗೇರಿ, ಎಲ್ ವಿ ಶಾರದಾ, ಉಮಾ ಶಿವಕುಮಾರ್, ಜಿ ವಿ ಅಯ್ಯರ್, ಇಂದಿರಾ, ಕುಸುಮಾ, ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ಚಂದ್ರಶೇಖರ್ ಮೊದಲಾದವರಿದ್ದರು. ಚಿತ್ರದ ಸಂಕಲನವನ್ನು ಮಾಡಿದವರು ಅರುಣ್ ವಿಕಾಸ್ ಹಾಗೂ ಕ್ಯಾಮರಾ ಚಳಕ ತೋರಿಸಿದವರು ಯು ಎಂ ಎನ್ ಶರೀಫ್ ಇವರು. ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಈ ಚಿತ್ರದ ಚಿತ್ರೀಕರಣವಾಗಿತ್ತು. ಕಲಾತ್ಮಕ ಚಿತ್ರಗಳಿಗೂ ಪ್ರೇಕ್ಷಕರಿದ್ದಾರೆ ಎನ್ನುವುದನ್ನು ಮೊದಲಿಗೆ ತೋರಿಸಿಕೊಟ್ಟ ಚಿತ್ರವೇ ‘ವಂಶವೃಕ್ಷ'.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ