ಕಲಾಪ ಸುಗಮವಾಗಿ ನಡೆಯಲಿ

ಕಲಾಪ ಸುಗಮವಾಗಿ ನಡೆಯಲಿ

ಸಂಸತ್ ಅಧಿವೇಶನ ಶುರುವಾದಾಗಿನಿಂದ ಪ್ರತಿಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ತೀವ್ರ ಗದ್ದಲ ಸೃಷ್ಟಿಸಿದ್ದು, ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಈವರೆಗೂ ಪ್ರತಿಪಕ್ಷಗಳ ೧೯ ಮಂದಿ ಸಂಸದರನ್ನು ಅಮಾನತುಗೊಳಿಸಲಾಗಿದೆ. ಅಗತ್ಯ ವಸ್ತುಗಳ ಮೇಲೆ ಜಿ ಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ವಿಧಿಸಿರುವುದನ್ನು ಮತ್ತು ಬೆಲೆ ಏರಿಕೆ ಖಂಡಿಸಿ ಪ್ರತಿಪಕ್ಷಗಳ ಸದಸ್ಯರು ಸದನದಲ್ಲಿ ಕರಪತ್ರಗಳನ್ನು ಹಂಚಿ ಪ್ರತಿಭಟನೆ ಕೈಗೊಂಡಿದ್ದಾರೆ. ಪ್ರತಿಪಕ್ಷಗಳಿಗೆ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ ಸ್ಪೀಕರ್ ಅವರ ಪೀಠದ ಎದುರು ಕರಪತ್ರಗಳನ್ನು ಪ್ರದರ್ಶಿಸುವುದು ಪ್ರತಿಭಟಿಸುವ ವಿಧಾನವಲ್ಲ. ಕಾಂಗ್ರೆಸ್ ಸಂಸದರ ಈ ನಡವಳಿಕೆಯು ಅವರಿಗೆ ಸ್ಪೀಕರ್ ಪೀಠದ ಮೇಲೆ ಗೌರವ ಇಲ್ಲವೆಂಬುದನ್ನು ತೋರಿಸಿಕೊಟ್ಟಿದೆ. ಜನರ ಸಮಸ್ಯೆಯನ್ನು ಕಲಾಪದಲ್ಲಿ ಜನಪ್ರತಿನಿಧಿಗಳು ಚರ್ಚಿಸಿ, ಪರಿಹಾರ ಸೂಚಿಸಲಿ ಎಂಬ ಕಾರಣಕ್ಕೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಲಾಪ ನಡೆಸಲಾಗುತ್ತಿದೆ. ಆದರೆ ಪ್ರತೀ ಬಾರಿಯೂ ಕಲಾಪವನ್ನು ಸುಗಮವಾಗಿ ನಡೆಸದೇ, ಈ ರೀತಿ ಗದ್ದಲದಲ್ಲೇ ಕಾಲ ಕಳೆಯುವಂತೆ ಮಾಡುವುದರಿಂದ ಯಾರಿಗೆ ಪ್ರಯೋಜನ ಎಂಬುದನ್ನು ಸಂಸದರು ಕಂಡುಕೊಳ್ಳಬೇಕಿದೆ. ಸದನದ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ. ಮೊಟ್ಟಮೊದಲಿಗೆ ಸಂಸದರು ಸ್ಪೀಕರ್ ಅವರ ಪೀಠಕ್ಕೆ ಗೌರವ ನೀಡಬೇಕು. ಆದರೆ ಇವ್ಯಾವುವೂ ಈಗಿನ ಸಂಸದರಿಂದ ಆಗುತ್ತಿಲ್ಲ. ಪ್ರತಿಪಕ್ಷಗಳ ಬೇಡಿಕೆಯ ಪ್ರಕಾರ ಬೆಲೆ ಏರಿಕೆ ಬಗ್ಗೆ ಸರಕಾರ ಉತ್ತರಿಸಬೇಕಿದೆ. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್ ನಿಂದಾಗಿ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಅವರು ಚೇತರಿಸಿಕೊಂಡ ಕೂಡಲೇ ಬೆಲೆ ಏರಿಕೆ ಬಗ್ಗೆ ಚರ್ಚಿಸಲು ಸರಕಾರ ಸಿದ್ದವಿದೆ ಎಂದು ತಿಳಿಸಿದೆ. ಆದರೂ ಪ್ರತಿಪಕ್ಷಗಳ ಸದಸ್ಯರು ಸರಕಾರದ ಉತ್ತರಕ್ಕೆ ಸಮಾಧಾನಗೊಳ್ಳದೆ ವಿನಾಕಾರಣ ಸದನದ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಪ್ರತಿ ಸಂಸದರಿಗೂ ತಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆ, ಅಭಿವೃದ್ಧಿ ಕುರಿತು ಮಾತನಾಡುವ ಸಂವಿಧನಾತ್ಮಕ ಅವಕಾಶವನ್ನು ಹಾಳು ಮಾಡುವುದು ಸಂವಿಧಾನಕ್ಕೂ ಅಗೌರವ ತೋರಿದಂತೆ ಎಂಬುದನ್ನು ಪ್ರತಿಪಕ್ಷಗಳ ಸದಸ್ಯರು ಅರ್ಥ ಮಾಡಿಕೊಳ್ಳಬೇಕು. ಬಾಕಿ ಉಳಿದ ಮುಂದಿನ ದಿನಗಳಲ್ಲಾದರೂ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕು.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೨೭-೦೭-೨೦೨೨  

ಚಿತ್ರ ಕೃಪೆ: ಇಂಟರ್ನೆಟ್ ತಾಣ