ಕಲಾಮ್ ಕಮಾಲ್
‘ಕಲಾಮ್ ಕಮಲ್’ ಕೃತಿಯು ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಅವರ ಕಾರ್ಯದರ್ಶಿ ಪಿ.ಎಂ. ನಾಯರ್ ಅವರು ಡಾ. ಕಲಾಂ ಕುರಿತು ಹಂಚಿಕೊಂಡ ಅಭಿಪ್ರಾಯಗಳ ಕೃತಿಯನ್ನು ಲೇಖಕ ವಿಶ್ವೇಶ್ವರ ಭಟ್ ಅವರು ಅನುವಾದಿಸಿದ ಕೃತಿ. ಇಲ್ಲಿಯ ಬರಹಗಳು ತುಂಬಾ ಆತ್ಮೀಯವಾಗಿವೆ. ನಡೆಯಲ್ಲಿ ಮಾದರಿಯಾಗಿವೆ. ಕಲಾಮ್ ಅವರು ತಮ್ಮ ನಡೆ ನುಡಿ ಹಾಗೂ ಸರಳ ವ್ಯಕ್ತಿತ್ವದಿಂದ ಭಾರತ ಕಂಡ ಅಪರೂಪದ ರಾಷ್ಟ್ರಪತಿ ಎಂದು ಕರೆಸಿಕೊಂಡವರು. ಇವರು ಕೇವಲ ಒಬ್ಬ ವಿಜ್ಞಾನಿ ಮಾತ್ರವಲ್ಲ. ಒಬ್ಬ ಅತ್ಯುತ್ತಮ ಕೇಳುಗ ಮತ್ತು ಹೊಸ ಬಗೆಯ ಸಂವಹನಗಳ ಸಂಶೋಧಕರು ಹೌದು. ಆಧ್ಯಾತ್ಮಿಕ ಮೌಲ್ಯಗಳಿಗೆ ಅವರು ಕೊಡುತ್ತಿದ್ದ ಕ್ರಿಯಾಶೀಲ ಮತ್ತು ಹೊಸ ಬಗೆಯ ಒತ್ತು ಭಾರತದ ನಾಗರಿಕರ ಪಾಲಿಗೆ ನಿಜಕ್ಕೂ ಭರವಸೆಯ ಕಿರಣವಾಗಿದೆ. ತಮ್ಮ ಅಪಾರ ವೈಜ್ಞಾನಿಕ ಸಾಧನೆಯ ಹಿನ್ನೆಲೆಯಲ್ಲಿ ಮಾನವೀಯತೆಯನ್ನು ಎರಕ ಹೊಯ್ದಂತಹ ಕಲಾಮ್, ಭಾರತೀಯರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ ಎಂದು ಲೇಖಕ ಇಲ್ಲಿ ವಿಶ್ಲೇಷಿಸಿದ್ದಾರೆ. ಈ ಕೃತಿಯು ಕಲಾಮ್ ವ್ಯಕ್ತಿತ್ವ ಕುರಿತ ಚಿತ್ರಣಗಳಿಂದ ತುಂಬಿರುವ ನೆನಪುಗಳ ಮೆರವಣಿಗೆಯಂತಿದೆ.
ಈ ಕೃತಿಯನ್ನು ಅನುವಾದಿಸಿದ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ತಮ್ಮ ಅನುವಾದಕರ ನುಡಿಯಲ್ಲಿ ಹೇಳಿರುವುದು ಹೀಗೆ…”ಕಲಾಮ್ ರಾಷ್ಟ್ರಪತಿಯಾಗಿದ್ದಾಗ ಅವರ ಕಾರ್ಯದರ್ಶಿಯಾಗಿದ್ದ ಪಿ ಎಂ ನಾಯರ್ ಪುಸ್ತಕ ಬರೆದಿದ್ದಾರೆಂದು ಗೊತ್ತಾದಾಗ ತಕ್ಷಣ ದಿಲ್ಲಿಯಿಂದ ಪ್ರತಿಯನ್ನು ತರಿಸಿಕೊಂಡು ಒಂದೇ ಬೈಠಕ್ ನಲ್ಲಿ ಓದಿ ಮುಗಿಸಿದೆ. ರಾಷ್ಟ್ರಪತಿ ಕಲಾಮ್ ಅವರನ್ನು ನಾಯರ್ ಅವರಷ್ಟು ಹತ್ತಿರದಿಂದ ಮತ್ತ್ಯಾರೂ ಕಂಡಿರಲಾರರು. ಹೀಗಾಗಿ ಈ ಕೃತಿ ನನ್ನಲ್ಲಿ ತೀವ್ರ ಕುತೂಹಲವನ್ನುಂಟು ಮಾಡಿತ್ತು. ಪುಸ್ತಕ ಓದಿ ಮುಗಿಸಿದಾಗ ನಾಯರ್ ಅವರು ಕಲಾಮ್ ಗೆ ಸಂಪೂರ್ಣ ನ್ಯಾಯವೊದಗಿಸಿದ್ದಾರೆ ಅನಿಸಿತು. ತಾವು ಕಂಡ ಕಲಾಮ್ ಅವರನ್ನು ನಾಯರ್ ಇಲ್ಲಿ ಯಥಾವತ್ತಾಗಿ ಚಿತ್ರಿಸಿದ್ದಾರೆ. ಇದು ಕೇವಲ ಹೊಗಳಿಕೆಯ ಕಥನವಲ್ಲ, ಪ್ರಭಾವಿ ವ್ಯಕ್ತಿಗಳ ಬಗ್ಗೆ ಬರೆದು ನಿವೃತ್ತರಾದ ನಂತರವೂ ಸರಕಾರದಲ್ಲಿ ಯಾವುದಾದರೂ ಹುದ್ದೆ ಗಿಟ್ಟಿಸುವ ಹುನ್ನಾರದಿಂದ ಬರೆದ ಕೃತಿ ಇದಲ್ಲ. ಅಲ್ಲಲ್ಲಿ ಕಲಾಮ್ ಬಗ್ಗೆ ತಮಗನಿಸಿದ್ದನ್ನು ನಾಯರ್ ನಿಷ್ಟುರವಾಗಿ ಹೇಳಿದ್ದಾರೆ. ಸಮಯ ಪ್ರಜ್ಞೆ ಇಲ್ಲದ ಕಲಾಮ್ ಕುರಿತು ಚೆನ್ನಾಗಿ ಟೀಕಿಸಿದ್ದಾರೆ.
ಅಧಿಕಾರದ ಉನ್ನತ ಪದವಿಯಲ್ಲಿರುವವರು ಏನೂ ಮಾಡಿದರೂ ಸುದ್ದಿಯಾಗುತ್ತದೆ. ಆದರೆ ರಾಷ್ಟ್ರಪತಿ ಸ್ಥಾನದಲ್ಲಿರುವವರು ಸುಲಭವಾಗಿ ಯಾರ ಕೈಗೂ ಸಿಗುವುದಿಲ್ಲ. ಪತ್ರಕರ್ತರಿಂದಲೂ ಅವರು ದೂರವಾಗಿಯೇ ಉಳಿಯುತ್ತಾರೆ. ಅವರ ಸುತ್ತಮುತ್ತ ಏನು ನಡೆಯುತ್ತದೆಂಬುದು ಗೊತ್ತಾಗುವುದಿಲ್ಲ. ಆದರೆ ಇಡೀ ಸರಕಾರದ ಮಹತ್ವದ ಚಟುವಟಿಕೆಗಳಿಗೆ ಅವರೇ ಕೇಂದ್ರಬಿಂದು. ಹೀಗಾಗಿ ಇಂಥವರ ನಿಕಟವರ್ತಿಗಳು ಬರೆಯುವ ನಿಷ್ಪಕ್ಷಪಾತ ಕೃತಿಗಳನ್ನು ಗಂಭೀರವಾಗಿಯೇ ಪರಿಗಣಿಸಬೇಕಾಗುತ್ತದೆ. ಆ ಕೆಲಸವನ್ನು ನಾಯರ್ ಬಹಳ ಸಮರ್ಥವಾಗಿ, ಸೊಗಸಾಗಿ ಮಾಡಿದ್ದಾರೆ.”
ಮೂಲ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಫಾಲಿ ಎಸ್ ನಾರಿಮನ್ ಇವರು. ಆ ಮುನ್ನುಡಿಯಲ್ಲಿ “ಪಿ ಎಂ ನಾಯರ್ ಅವರ ಈ ಪುಸ್ತಕ ಅಂಥ ಸ್ತುತಿಪಠ್ಯವಲ್ಲ. ಇದು, ಅವರು ರಾಷ್ಟ್ರಪತಿಯಾಗಿದ್ದ ಎ ಪಿ ಜೆ ಅಬ್ದುಲ್ ಕಲಾಮ್ ಅವರೊಂದಿಗೆ ಕಳೆದ ದಿನಗಳನ್ನು ಕುರಿತ ನಿರ್ಭೀತ ಮತ್ತು ಪ್ರೀತಿಯ ನೆನಪು. ಹೀಗಾಗಿ ಇದು ಹೊಗಳುವಿಕೆ ಮತ್ತು ಓಲೈಸುವಿಕೆಯ ಕಗ್ಗವಲ್ಲ. ಆದ್ದರಿಂದಲೇ ಈ ಪುಸ್ತಕವನ್ನು ಸುಲಭವಾಗಿ ಓದಬಹುದಾಗಿದೆ. ಈ ಪುಸ್ತಕದ ಬಗ್ಗೆ ನನ್ನ ಅಭಿಪ್ರಾಯವನ್ನು ಎರಡೇ ಎರಡು ಪದಗಳಲ್ಲಿ ಹೇಳಬಹುದಾದರೆ, ಇದು ಓದಲು ಅತ್ಯಂತ ಯೋಗ್ಯವಾದ ಪುಸ್ತಕ.
ಸ್ಥೂಲವಾಗಿ ಹೇಳುವುದಾದರೆ ಇದು ಬಣ್ಣಬಣ್ಣದ ಚಿತ್ರಗಳಿಂದ ತುಂಬಿರುವ ನೆನಪುಗಳ ಮೋಹಕ ಮೆರವಣಿಗೆ. ಆದರೆ, ಅಲ್ಲಲ್ಲಿ ಒಂದೆರಡು ಕಹಿ ಪ್ರಸಂಗಗಳೂ ಉಂಟು. ಅಂದಂತೆ, ಕಲಾಮ್ ಅವರು ಪಕ್ಕಾ ರಾಜಕಾರಣಿಯಲ್ಲ. ಆದರೆ, ಅವರಲ್ಲಿ ಒಂದು ರಾಜಕೀಯ ಅಳುಕಿತ್ತು. ಉದಾಹರಣೆಗೆ, ಸಂಸತ್ ಮೇಲಿನ ದಾಳಿ ಮಾಡಿ ಮರಣದಂಡನೆಗೆ ಎದುರಿಸುತ್ತಿರುವ ಅಫ್ಜಲ್ ಗುರುವಿಗೆ ಕ್ಷಮಾದಾನ ನೀಡಬೇಕೋ, ಬೇಡವೋ ಎಂಬ ಬಗ್ಗೆ ಅವರು ತಮ್ಮ ಮನಸ್ಸಿನಲ್ಲಿ ಏನಿತ್ತು ಎಂಬ ಬಗ್ಗೆ ಇಲ್ಲಿಯವರೆಗೆ ಎಲ್ಲೂ ಬಾಯಿ ಇಟ್ಟಿಲ್ಲ. ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಸರಕಾರ ಶಿಫಾರಸು ಕಳಿಸಿದಾಗ ತಮ್ಮನ್ನು ಭೇಟಿಯಾದವರಿಗೂ ಅವರು, ಈ ಬಗ್ಗೆ ತಮ್ಮ ನಿರ್ಧಾರ ಏನೆಂಬುದನ್ನು ಹೇಳಿಲ್ಲ. ಆದರೆ, ಅವರು ಉಳಿದ ಎಷ್ಟೋ ಸಂದರ್ಭಗಳಲ್ಲಿ ಮರಣ ದಂಡನೆಯಂಥ ಶಿಕ್ಷೆಯನ್ನು ತಾವು ಒಪ್ಪುದಿಲ್ಲ ಎಂದಿರುವುದು ಬೇರೆ ವಿಚಾರ.” ಎಂದಿದ್ದಾರೆ.
ಕಲಾಮ್ ಅವರು ರಾಷ್ಟ್ರಪತಿಗಳಾಗಿದ್ದ ಸಮಯದ ಪ್ರಮುಖ ಘಟನೆಗಳ ವರ್ಣರಂಜಿತ ಛಾಯಾಚಿತ್ರಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ. ೧೬೦ ಪುಟಗಳ ಈ ಪುಸ್ತಕವನ್ನು ಅನುವಾದಕರಾದ ವಿಶ್ವೇಶ್ವರ ಭಟ್ ಅವರು ಈ ಕೃತಿಯನ್ನು ಬರೆಯಲು ಸ್ಫೂರ್ತಿ ನೀಡಿದ ಆತ್ಮೀಯರೂ, ಮಾರ್ಗದರ್ಶಕರೂ ಆದ ಪರಮಪೂಜ್ಯ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಅವರಿಗೆ ಅರ್ಪಿಸಿದ್ದಾರೆ.