ಕಲಾವಿದ ಹೆಬ್ಬಾರರ ರೇಖಾಲಾವಣ್ಯ

ಕಲಾವಿದ ಹೆಬ್ಬಾರರ ರೇಖಾಲಾವಣ್ಯ

ಪುಸ್ತಕದ ಲೇಖಕ/ಕವಿಯ ಹೆಸರು
ವ್ಯಾಸರಾಯ ಬಲ್ಲಾಳ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ
ಪುಸ್ತಕದ ಬೆಲೆ
ರೂ.೯೦.೦೦

ವಿಶ್ವಮಾನ್ಯತೆ ಪಡೆದ ಮಹಾನ್ ಕಲಾವಿದ ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್ ಅವರನ್ನು ಆಪ್ತವಾಗಿ ಈ ಪುಸ್ತಕದಲ್ಲಿ ಪರಿಚಯಿಸಿದ್ದಾರೆ ವ್ಯಾಸರಾಯ ಬಲ್ಲಾಳರು. ಇವರು, ಮುಂಬಯಿಯಲ್ಲಿ ಕಲಾನಗರದ ಹೆಬ್ಬಾರರ ಮನೆಯ ಹತ್ತಿರದಲ್ಲೇ ಸುಮಾರು ಎಂಟು ವರುಷ ಕಾಲ ನೆಲೆಸಿದ್ದರು. ಈ ಅವಧಿಯಲ್ಲಿ ಮತ್ತು ಅನಂತರವೂ ಇವರಿಬ್ಬರ ಒಡನಾಟ ನಿರಂತರ. ಅದುವೇ ಇಂತಹ ಅಪರೂಪದ ಪುಸ್ತಕ ರೂಪುಗೊಳ್ಳಲು ಕಾರಣವಾಯಿತು.

ಆ ಒಡನಾಟವನ್ನು ನೆನಪು ಮಾಡಿಕೊಳ್ಳುತ್ತಾ ವ್ಯಾಸರಾಯ ಬಲ್ಲಾಳರು "ಮೊದಲ ಮಾತಿ” ನಲ್ಲಿ ಹೀಗೆ ಬರೆದಿದ್ದಾರೆ: “ಕಲಾವಿದ ಕಟ್ಟಿಂಗೇರಿ ಕೃಷ್ಣ ಹೆಬ್ಬಾರರು ನನಗೆ ದೀರ್ಘ ಕಾಲದ ಆತ್ಮೀಯರು…. ಈ (ಎಂಟು ವರುಷಗಳ) ಅವಧಿಯಲ್ಲಿ ಅವರ ಜತೆ ಕಲೆಯ ವಿಚಾರ ಚರ್ಚಿಸುವ, ಕಲೆಯ ಕುರಿತು ನನ್ನ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳುವ, ಅವರ ಕೆಲಸ ಮಾಡುವ ರೀತಿಯನ್ನು ವೀಕ್ಷಿಸುವ, ಅವರ ಸಂದರ್ಶನಕ್ಕೆಂದೆ ಬರುತ್ತಿದ್ದ ಗಣ್ಯ ಕಲಾವಿದರ ಪರಿಚಯ ಮಾಡಿಕೊಳ್ಳುವ, ಅವರ “ಸ್ಕೆಚ್" ಪುಸ್ತಕಗಳನ್ನು ನೋಡಿ ಅವುಗಳಲ್ಲಿ ಅವರು ಮೂಡಿಸಿದ್ದ ರೇಖಾಚಿತ್ರಗಳ ಸಂದರ್ಭಗಳ ಬಗೆಗೆ ಕೇಳಿ ತಿಳಿದುಕೊಳ್ಳುವ ಸದಾವಕಾಶಗಳು ನನಗೆ ಒದಗಿ ಬಂದುದರಿಂದಲೇ ನಾನು ಕನ್ನಡಿಗರಿಗೆ ಅವರ ರೇಖೆಗಳು ಅಭಿವ್ಯಕ್ತಿಸುವ ಸೌಂದರ್ಯಾನು-ಭೂತಿಯನ್ನು ಪರಿಚಯಿಸುವ ಉದ್ದೇಶದಿಂದ ಕೆಲವು ಲೇಖನಗಳನ್ನು ಬರೆದಿದ್ದೆ. ಹಾಗೆಯೇ ಅವರ ೮೦ನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ, "ಪ್ರತಿಮೆಗಳಲ್ಲಿ ಪಯಣ” ಎಂಬ ಅವರ ಚಿತ್ರ ಸಂಪುಟ ಬಿಡುಗಡೆಯಾದ ಸಂದರ್ಭದಲ್ಲಿ ಪರಿಚಯಾತ್ಮಕ ಲೇಖನಗಳನ್ನು ಬರೆದಿದ್ದೆ. ….. ಹೆಬ್ಬಾರರ ಸಂದರ್ಶನ ಲೇಖನವೊಂದನ್ನೂ ಸಿದ್ಧಪಡಿಸಿದ್ದೆ"

ಕೆ.ಕೆ. ಹೆಬ್ಬಾರರ ಬಗ್ಗೆ ವ್ಯಾಸರಾಯ ಬಲ್ಲಾಳರ ಇವೆಲ್ಲ ಲೇಖನ ಮತ್ತು ಸಂದರ್ಶನದ ಸಂಕಲನವೇ ಈ ಪುಸ್ತಕ. ಇದರಲ್ಲಿ ಅಲ್ಲಲ್ಲಿ ಪ್ರಕಟಿಸಿರುವ ಹೆಬ್ಬಾರರ ರೇಖಾಚಿತ್ರಗಳು ಮತ್ತು ಎಂಟು ಪುಟಗಳಲ್ಲಿ ಅಚ್ಚಾಗಿರುವ ಹೆಬ್ಬಾರರ ೧೭ ವರ್ಣಚಿತ್ರಗಳು ಪುಸ್ತಕದ ಮೌಲ್ಯವನ್ನು ಹೆಚ್ಚಿಸಿವೆ.

“ಧೀರ, ನೇರ ನಡೆ, ಸ್ಪಷ್ಟ ಚಿಂತನೆ, ಕಲೆಯ ಸಿದ್ಧಿಯಲ್ಲೂ ತನ್ನ ದಾರಿಯನ್ನು ತಾನೇ ಕಂಡುಕೊಳ್ಳುತ್ತೇನೆ ಎಂಬ ಸಂಕಲ್ಪ ಶಕ್ತಿಯನ್ನು ಪ್ರತಿಬಿಂಬಿಸುವಂತಹ ತಾರುಣ್ಯದ ಹುಮ್ಮಸ್ಸನ್ನು ಕೊನೆಯ ತನಕವೂ ಉಳಿಸಿಕೊಂಡ ಧೀಮಂತ ಕಲಾವಿದ ಹೆಬ್ಬಾರರು ಮನೆಯ ದೈನಂದಿನ ವ್ಯವಹಾರದ ಯೋಚನೆಗಳಿಗಿಂತಲೂ ತನ್ನ ಕಲಾ ಜೀವನದ ಆದ್ಯತೆಗಳೇ ಮುಖ್ಯವೆಂದು ತಿಳಿದು ತನ್ನ ಜೀವನದುದ್ದಕ್ಕೂ ಅದೇ ರೀತಿಯಲ್ಲಿ ಮುಂದುವರಿದು ಬಂದವರು ಅವರು" ಎಂದು ಹೆಬ್ಬಾರರ ಧೀಮಂತ ವ್ಯಕ್ತಿತ್ವದ ಬಗ್ಗೆ ಬರೆಯುತ್ತಾರೆ ಬಲ್ಲಾಳರು.

ಕರ್ನಾಟಕದ ಕರಾವಳಿಯ ಉಡುಪಿಯ ತೀರಾ ಬಡ ಕುಟುಂಬವೊಂದರಲ್ಲಿ ೧೫ ಜೂನ್ ೧೯೧೧ರಲ್ಲಿ ಜನಿಸಿದ ಹೆಬ್ಬಾರರು ಅಲ್ಲಿನ ಪ್ರಕೃತಿ ಸೌಂದರ್ಯದಿಂದ ಬಾಲ್ಯದಲ್ಲೇ ಪ್ರಭಾವಕ್ಕೆ ಒಳಗಾದರು. ಬಡತನದ ಬಾಲ್ಯದಲ್ಲಿಯೂ ಎಳೆಯ ಹೆಬ್ಬಾರರ ಸೃಜನಶೀಲತೆ ಮನೆಯ ಗೋಡೆಗಳಲ್ಲಿ ಮಸಿಯಿಂದ ಚಿತ್ರ ರಚಿಸುವುದರಲ್ಲಿ, ಮಣ್ಣಿನಿಂದ ಪ್ರತಿಕೃತಿಗಳನ್ನು ರೂಪಿಸುವುದರಲ್ಲಿ ವ್ಯಕ್ತವಾಗುತ್ತಿತ್ತು. ಕರಾವಳಿಯ ಜಾನಪದ ಕಲೆಯಾದ ಯಕ್ಷಗಾನದ ಬಣ್ಣದ ವೇಷಗಳನ್ನು ನೋಡಿಯೂ ಅವರು ಚಿತ್ರಗಳನ್ನು ಬರೆದಿದ್ದರು. ಪ್ರಾಥಮಿಕ ಶಿಕ್ಷಣದ ನಂತರ ಅವರು ತಮ್ಮ ಅಣ್ಣನ ಸಹಾಯದಿಂದ ಉಡುಪಿಯಲ್ಲಿ ಹೈಸ್ಕೂಲ್ ಶಿಕ್ಷಣ ಮುಂದುವರಿಸಿದರು.

ಅನಂತರ ತನ್ನ ಅಣ್ಣ ನೆಲೆಸಿದ್ದ ಮುಂಬಯಿಗೆ ಹೋದರು ಕೆ.ಕೆ. ಹೆಬ್ಬಾರರು. ಅಲ್ಲಿ ಅವರ ಕಲಾಸಕ್ತಿ ಸ್ಪಷ್ಟ ರೂಪ ಪಡೆದು, ಅವರ ಕಲಾ ಪ್ರತಿಭೆ ಅವರನ್ನು ವಿಶ್ವವಿಖ್ಯಾತ ಕಲಾವಿದರನ್ನಾಗಿಸಿತು. ಆರಂಭದಲ್ಲಿ ದಂಡಾವತಿಮಠ ಎಂಬವರ ಕಲಾಮಂದಿರದಲ್ಲಿ ಹೆಬ್ಬಾರರ ಕಲಾ ಅಧ್ಯಯನ. ೧೯೩೭ರಲ್ಲಿ ಮುಂಬಯಿಯ ಸುಪ್ರಸಿದ್ಧ ಜೆ.ಜೆ. ಕಲಾ ಶಾಲೆಯಲ್ಲಿ ಕಲಾ ಡಿಪ್ಲೊಮಾ ಅಧ್ಯಯನ. ೧೯೩೯ರ ಕೊನೆಗೆ ಅದೇ ಕಲಾಶಾಲೆಯಲ್ಲಿ ಅಧ್ಯಾಪಕನ ವೃತ್ತಿ ಜೊತೆಗೆ ಕಲೆಯ ಅಧ್ಯಯನದ ಮುಂದರಿಕೆ.
೧೯೪೬ರಲ್ಲಿ ಕೆ.ಕೆ. ಹೆಬ್ಬಾರರು ಕೇರಳಕ್ಕೆ ಭೇಟಿಯಿತ್ತರು. ಆಗ ಅಲ್ಲಿ ಕಂಡ ಕೆಲವು ದೃಶ್ಯಗಳಿಂದ ಪ್ರೇರಿತರಾಗಿ ಅವರು ರಚಿಸಿದ ಕೆಲವು ಚಿತ್ರಗಳು ಅವರಿಗೆ ಬಹಳ ಪ್ರಸಿದ್ಧಿಯನ್ನು ತಂದುಕೊಟ್ಟವು. ೧೯೪೮ರಲ್ಲಿ ಹೆಬ್ಬಾರರ ಚಿತ್ರಗಳ ಪ್ರತಿಗಳ ಒಂದು ದೊಡ್ಡ ಸಂಗ್ರಹ ಪ್ರಕಟವಾಯಿತು. ಅನಂತರ ಹೆಬ್ಬಾರರು ಕಲಾ ಜಗತ್ತಿನಲ್ಲಿ ಉನ್ನತಿಯಿಂದ ಉನ್ನತಿಗೆ ಏರುತ್ತಲೇ ಹೋದರು.

ಅದಾದ ಬಳಿಕ ಪಾಶ್ಚಾತ್ಯ ದೇಶಗಳಲ್ಲಿ ಆಧುನಿಕ ಚಿತ್ರಕಲೆ ಸಾಧಿಸಿರುವ ಪ್ರಗತಿಯ ಅಧ್ಯಯನಕ್ಕಾಗಿ ಹೆಬ್ಬಾರರು ಯುರೋಪಿನ ದೇಶಗಳ ಪ್ರವಾಸ ಕೈಗೊಂಡರು. ಅಲ್ಲಿ ಹಲವಾರು ಜಗದ್ವಿಖ್ಯಾತ ಚಿತ್ರ ಕಲಾವಿದರ ಒಡನಾಟ; ಅವರ ಚಿತ್ರಗಳ ಅಧ್ಯಯನ. ತಾನು ಚಿತ್ರ ರಚನೆಯಲ್ಲಿ ಅನುಸರಿಸ ಬೇಕಾದುದು ತನ್ನದೇ ಆದ ವಿಶಿಷ್ಠ ಶೈಲಿ ಎಂಬ ಚಿಂತನೆ ಅವರಲ್ಲಿ ಮೂಡಿತು.

ನಂತರ ಮುಂಬಯಿಯ ಹತ್ತಿರದ ಮಹಾಬಲೇಶ್ವರದ ಪ್ರಕೃತಿ ರಮ್ಯ ಗಿರಿಧಾಮದಲ್ಲಿ ಒಂದು ವರುಷದ ಅವಧಿ ಇದ್ದಾಗ ಹೆಬ್ಬಾರರ ಚಿಂತನೆಗೆ ಸ್ಪಷ್ಟ ರೂಪ ದೊರೆಯಿತು. "ತನ್ನ ಕಲಾಕೃತಿಗಳೆಲ್ಲ ತನ್ನ ವೈಯುಕ್ತಿಕತೆಯನ್ನು ಬಿಂಬಿಸುವಂತೆ ಎಲ್ಲ ಸಂಪ್ರದಾಯಗಳಿಗಿಂತಲೂ ಭಿನ್ನವಾಗಿ ಸರಳವಾಗಿಯೂ ಮಹತ್ವದ್ದೆನಿಸುವಂತೆಯೂ ಇರಬೇಕು ಎಂಬ ನಿರ್ಧಾರಕ್ಕೆ ಬಂದರು” ಎಂದು ದಾಖಲಿಸಿದ್ದಾರೆ ವ್ಯಾಸರಾಯ ಬಲ್ಲಾಳರು.

ಈ ಪುಸ್ತಕದಲ್ಲಿ ಹೆಬ್ಬಾರರ ಬದುಕಿನ ಹಲವಾರು ಆಸಕ್ತಿಯುತ ಪ್ರಸಂಗಗಳನ್ನು ಪ್ರಸ್ತಾಪಿಸಿದ್ದಾರೆ ಬಲ್ಲಾಳರು. ಅಂತಹ ಒಂದು ಪ್ರಸಂಗ ಹೀಗಿದೆ: "ನಮ್ಮೆಲ್ಲರಲ್ಲಿರುವ ಸೃಜನಶೀಲ ಶಕ್ತಿಯ ಕುರಿತ ಎಚ್ಚರವನ್ನು ನಾವೇ ತಂದುಕೊಳ್ಳುತ್ತಿಲ್ಲ ಎಂದು ಹೆಬ್ಬಾರರು ನನ್ನೊಡನೆ ಹೇಳಿದ ಒಂದು ಉದಾಹರಣೆ ನನಗೆ ನೆನಪಾಗುತ್ತದೆ. ಬೆಂಗಳೂರಿನ ಒಂದು ಸಮಾವೇಶದಲ್ಲಿ ಹೆಬ್ಬಾರರು ಅರ್ಥ ಮೂಡುವಂತೆ ಚಿತ್ರ ಬರೆಯುವ ನಮ್ಮ ಸಾಮರ್ಥ್ಯವನ್ನು ನಾವೇ ಗುರುತಿಸಿಕೊಳ್ಳುವುದಿಲ್ಲ ಎಂದು ಸಭೆಯಲ್ಲಿದ್ದ ಯಾರಾದರೂ ಮುಂದೆ ಬಂದು ವೇದಿಕೆಯಲ್ಲಿದ್ದ ಕರಿಹಲಗೆಯಲ್ಲಿ ತೋಚಿದ್ದನ್ನು ಬರೆಯುವಂತೆ ಕೇಳಿಕೊಂಡರಂತೆ. ವಯಸ್ಸಾದ ಒಬ್ಬರು ಮುಂದೆ ಬಂದು ಗೀಚಿದ್ದು ಮಕ್ಕಳು ಬರೆಯುವಂತಹ ಗೀಚಿದ ಗೆರೆಗಳ ಒಂದು ಪುಂಜವನ್ನು. ಅವರು ತನ್ನ ಕೆಲಸ ಮುಗಿಸಿದ ನಂತರ ಹೆಬ್ಬಾರರು ಅರ್ಥವಾಗದ ಆ ಗೆರೆಗಳ ಪುಂಜದ ಕೆಳಗೆ ಎಳೆದದ್ದು ಒಂದು ರೇಖೆಯನ್ನು. "ಈಗೇನಾಗಿದೆ ನೋಡಿ” ಎಂದು ಹೆಬ್ಬಾರರು ಕೇಳಿದಾಗ ನೆರೆದಿದ್ದ ಸಭೆಗೇ ಆಶ್ಚರ್ಯ. ಆ ರೇಖೆಗಳ ಪುಂಜ ಒಂದು ಹೂವಿನ ಆಕೃತಿಯನ್ನು ಪಡೆದಿತ್ತು.”

೨೬ ಮಾರ್ಚ್ ೧೯೯೬ರಂದು ತನ್ನ ೮೫ನೆಯ ವಯಸ್ಸಿನಲ್ಲಿ  ಕೆ.ಕೆ. ಹೆಬ್ಬಾರರು ನಮ್ಮನ್ನು ಅಗಲಿದರು. ಬದುಕಿನ ಕೊನೆಯ ಎರಡು ವರುಷಗಳಲ್ಲಿ ಅನಾರೋಗ್ಯದಿಂದ ಬಳಲಿದರು; ಅವರು ಆಮ್ಲಜನಕ ಒದಗಿಸುವ ಉಪಕರಣದ ನೆರವು ಪಡೆಯಬೇಕಾಗುತ್ತಿತ್ತು. ಅಂತಹ ಪರಿಸ್ಥಿತಿಯಲ್ಲಿಯೂ ಅವರು ಕಲೆಯ ಚಿಂತನೆಯಲ್ಲೇ ಮುಳುಗಿದ್ದರು. “ಹೆಚ್ಚು ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲೇ ಮಲಗಿರುತ್ತಿದ್ದಾಗಲೂ ಅವರ ಕೈ ತಡಕಾಡುತ್ತಿದ್ದುದು ಬಿಳಿಯ ಹಾಳೆಗಳಿಗಾಗಿ; ಕಪ್ಪು ಶಾಯಿಯ ಪೆನ್ನಿಗಾಗಿ.” ಯಾಕೆಂದರೆ ಚಿತ್ರಕಲೆಯೇ ಅವರ ಉಸಿರಾಗಿತ್ತು, ಬದುಕಾಗಿತ್ತು.

ಇಂದು ಕೆ.ಕೆ. ಹೆಬ್ಬಾರರ ಕಲಾಕೃತಿಗಳು ದೇಶವಿದೇಶಗಳ ಹಲವಾರು ಕಲಾ ಸಂಗ್ರಹಾಲಯಗಳಲ್ಲಿ ಮತ್ತು ಖಾಸಗಿಯವರ ಸಂಗ್ರಹದಲ್ಲಿ ರಾರಾಜಿಸುತ್ತಿವೆ. “ವೊಯೇಜ್ ಇನ್ ಇಮೇಜಸ್ ಕೆ.ಕೆ. ಹೆಬ್ಬಾರ್” (ಪ್ರ: ಜಹಾಂಗೀರ್ ಆರ್ಟ್ ಗ್ಯಾಲರಿ); “ಏನ್ ಆರ್ಟಿಸ್ಟ್ ಕ್ವೆಸ್ಟ್ ಕೆ.ಕೆ.ಹೆಬ್ಬಾರ್” (ಪ್ರ: ಅಭಿನವ್ ಪಬ್ಲಿಕೇಷನ್ಸ್, ನ್ಯೂ ಢೆಲ್ಲಿ); "ದ ಸಿಂಗಿಂಗ್ ಲೈನ್-ಡ್ರಾಯಿಂಗ್ಸ್” (ಪ್ರ: ಪೀಕೊಕ್ ಪಬ್ಲಿಕೇಷನ್ಸ್, ಬೊಂಬೆ) ಎಂಬ ಪುಸ್ತಕಗಳಲ್ಲಿ ಅವರ ಚಿತ್ರಗಳ ಪ್ರತಿಗಳಿವೆ. ಅವರ ರೇಖಾಚಿತ್ರಗಳಂತೂ ನಮ್ಮಲ್ಲಿ ವಿಸ್ಮಯ ಮೂಡಿಸುತ್ತವೆ. ಯಾಕೆಂದರೆ ಅವುಗಳಿಗೊಂದು ವಿವರಿಸಲಾಗದ ಸೊಬಗು. ಯಾವುದೇ ಭಾವವನ್ನು ವ್ಯಕ್ತಪಡಿಸುವ, ನೋಡುಗನ ಮನದಲ್ಲಿ ಭಾವದ ಅಲೆಗಳನ್ನು ಎಬ್ಬಿಸಬಲ್ಲ ಮಾಂತ್ರಿಕಶಕ್ತಿ ಅವುಗಳಿಗಿದೆ. ಅವರ ಅದ್ಭುತ ಕಲಾಕೃತಿಗಳು ಅವರನ್ನು ಅಮರರನ್ನಾಗಿಸಿವೆ.