ಕಲಾ ಲೋಕದ ‌ಸ್ವಾಭಿಮಾನ ಮತ್ತು ಗುಲಾಮಗಿರಿ...

ಕಲಾ ಲೋಕದ ‌ಸ್ವಾಭಿಮಾನ ಮತ್ತು ಗುಲಾಮಗಿರಿ...

ಅಕಾಡೆಮಿಗಳು - ಪ್ರಾಧಿಕಾರಗಳು - ಲಲಿತ ಕಲೆಗಳು - ಅಧ್ಯಕ್ಷರು ಮತ್ತು ಸದಸ್ಯರು - ಪ್ರಶಸ್ತಿಗಳು -  ಎಡ ಬಲ ಪಂಥಗಳು - ಸಾಂಸ್ಕೃತಿಕ ರಾಯಭಾರ - ಲಾಬಿಗಳು - ಪ್ರಾಮಾಣಿಕ ಅರ್ಹರು - ಚಮಚಾಗಳು. ಸಾಹಿತ್ಯ, ಸಂಗೀತ, ಭಾಷೆ, ಕ್ರೀಡೆ, ವಿಜ್ಞಾನ, ಸೇರಿ ಸುಮಾರು 40-50 ಅಕಾಡೆಮಿಗಳು, ಪ್ರಾಧಿಕಾರಗಳು, ಮಂಡಳಿಗಳು ಅದಕ್ಕೆ ಅಧ್ಯಕ್ಷರು, ಒಂದಷ್ಟು ಸದಸ್ಯರನ್ನು ಎಲ್ಲಾ ಸರ್ಕಾರಗಳ ಸಮಯದಲ್ಲಿ ನೇಮಕ ಮಾಡಲಾಗುತ್ತದೆ. ಇದರ ಜೊತೆಗೆ ಹಣಕಾಸಿನ ಅನುದಾನ, ಪ್ರಶಸ್ತಿಗಳು, ಸಹಾಯಧನ, ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂತಾದ ಚಟುವಟಿಕೆಗಳು ನಡೆಯುತ್ತವೆ. ತೊಂಬತ್ತರ ದಶಕದ ಆರಂಭದಲ್ಲಿ ಭಾರತದ ಜಾಗೃತ ಮನಸ್ಥಿತಿಯ ಮುಖ್ಯವಾಹಿನಿ ಜನರಲ್ಲಿ ಎಡ ಬಲ ಎಂಬ ಪಂಥಗಳ ವಿಚಾರಧಾರೆ ವ್ಯಾಪಕವಾಗಿ ಹರಡಿತು.

ಎಡ, ಪ್ರಗತಿಪರ, ಬಸವತತ್ವ ಮತ್ತು ಅಂಬೇಡ್ಕರ್ ವಾದದ ಜನರಿಗೆ ಸಾಮಾನ್ಯವಾಗಿ ಕಾಂಗ್ರೆಸ್ ಮತ್ತು ಬಲಪಂಥೀಯರಿಗೆ ಬಿಜೆಪಿ ಸಹಾನುಭೂತಿ ತೋರಿದವು ಅಥವಾ ನೆಲೆ ಒದಗಿಸಿದವು. ಎಲ್ಲೆಲ್ಲಿ ಆ ಪಕ್ಷಗಳು ಅಧಿಕಾರ ಸ್ಥಾಪಿಸಿದವೋ ಅಲ್ಲೆಲ್ಲಾ ತಮ್ಮ ಪಕ್ಷದ ಪರ ನಿಲುವನ್ನು ಹೊಂದಿರುವವರಿಗೆ ಅಧಿಕಾರ ಮತ್ತು ಪ್ರಶಸ್ತಿಗಳನ್ನು ಕೊಡತೊಡಗಿದವು. ಇದು ಸಹಜ ಸ್ವಾಭಾವಿಕ ಕ್ರಿಯೆಯಾಗಿ ಮುಂದುವರಿಯುತ್ತಿತ್ತು. ಕ್ರಮೇಣ ಸಂಪರ್ಕ ಕ್ರಾಂತಿಯ ಫಲವಾಗಿ ಕಲಾ ಮಾಧ್ಯಮ ಬೃಹದಾಕಾರವಾಗಿ ಬೆಳೆಯತೊಡಗಿತು. ಸಾಂಸ್ಕೃತಿಕ ಲೋಕವನ್ನು ಮೀರಿ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರವನ್ನು ಆಕ್ರಮಿಸಿದವು. ಅಲ್ಲಿಂದಲೇ ಈ ಅಕಾಡೆಮಿಗಳ ವ್ಯಾಪಾರೀಕರಣ, ರಾಜಕೀಕರಣ, ಜಾತೀಕರಣ, ಕೇಸರೀಕರಣ, ಗುಲಾಮೀಕರಣ ತನ್ನ ಮಿತಿ ಮೀರಿತು.

ಈಗಲೂ ಎಲ್ಲಾ ಸ್ಥಾನಗಳು ಸಂಪೂರ್ಣ ಲಾಭಿಗಳು ಎಂದು ಹೇಳಲಾಗುವುದಿಲ್ಲ. ಶೇಕಡಾ 25% ರಷ್ಟು ಪ್ರತಿಭಾವಂತ ಅರ್ಹರು, 25% ರಷ್ಟು ಕನಿಷ್ಠ ಪ್ರಮಾಣದ ಸಹಿಸಿಕೊಳ್ಳಬಹುದಾದಷ್ಟು ಪರಿಚಯ - ಪ್ರಭಾವ ಬೀರಿ ಸ್ಥಾನ ಪಡೆಯುತ್ತಾರೆ. ಇನ್ನುಳಿದ 50% ರಷ್ಟು ಜನರು ಅತ್ಯಂತ ಕೆಳ ದರ್ಜೆಯ ವಿಧಾನಗಳಿಗೆ ಮೊರೆ ಹೋಗುತ್ತಾರೆ. ಒಂದಷ್ಟು ಕಲಾ ಸೇವೆಯ ಹೆಸರಿನಲ್ಲಿ ಅಥವಾ ಬರಹಗಳಲ್ಲಿ ಅಥವಾ ಸಮಾರಂಭಗಳಲ್ಲಿ ಒಂದು ಪಂಥ ಅಥವಾ ಪಕ್ಷದ ಬಾಲಬುಡಕರಾಗಿ ಅದನ್ನು ಸಮರ್ಥಿಸಿಕೊಳ್ಳುವುದಲ್ಲದೆ ಇನ್ನೊಂದು ಸೈದ್ಧಾಂತಿಕ ವಿರೋಧಿಗಳ ವಿಚಾರವನ್ನು ತಮ್ಮೆಲ್ಲಾ ಸಭ್ಯತೆ ಮೀರಿ ತೆಗಳುತ್ತಾರೆ. ಅಕ್ಷರಗಳಿಗೆ ಅಕ್ಷರಗಳನ್ನು ಜೋಡಿಸಿ ಇತಿಹಾಸವನ್ನು, ವರ್ತಮಾನವನ್ನು ತಿರುಚಿ ವಿಷ ಉಗುಳುತ್ತಾರೆ. ಇದನ್ನು ದಾಖಲೆ ಎಂಬಂತೆ ಸಂಗ್ರಹಿಸಿಟ್ಟುಕೊಂಡು ಒಂದು ಸಾಧನೆ ಎಂಬಂತೆ ತೋರಿಸಿ ಅಧಿಕಾರ ಗಿಟ್ಟಿಸಿಕೊಳ್ಳುತ್ತಾರೆ. ಕೆಲವು ತಲೆ ಹಿಡುಕರು, ತಲೆ ಒಡೆಯುವವರು ಸಹ ದಲ್ಲಾಳಿಗಳಂತೆ ಇವುಗಳಲ್ಲಿ ಸ್ಥಾನ ಪಡೆಯುತ್ತಾರೆ.

ಯಾವ ಸಂಸ್ಥೆಗಳು ನಮ್ಮ ‌ಸಾಂಸ್ಕೃತಿಕ - ಸಾಹಿತ್ಯಕ ಕಲಾ ಲೋಕವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿ ನಿರ್ವಹಿಸಬೇಕೋ ಅದೇ ಸಂಸ್ಥೆಗಳು ಇಂದು ತಮ್ಮ ಸೂಕ್ಷ್ಮತೆ, ಸಂವೇದನೆಯನ್ನು ಕಳೆದುಕೊಂಡು ಬೆತ್ತಲಾಗಿವೆ. ಕಳೆದ ಎರಡು ಮೂರು ದಶಕಗಳ ಅಧ್ಯಕ್ಷರುಗಳು ಮತ್ತು ಸದಸ್ಯರುಗಳು ಹಾಗು ಸರ್ಕಾರಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನೊಮ್ಮೆ ಪರಿಶೀಲಿಸಿ. ನಿಮಗೆ ಪಂಥಗಳ, ಸರ್ಕಾರಿ ಕೃಪಾಪೋಷಿತ ಮಂಡಳಿಯ ಗುಲಾಮಿತನದ ಅರಿವಾಗುತ್ತದೆ. ಅತ್ಯಂತ ಬೇಸರದ ಸಂಗತಿ ಎಂದರೆ, ಒಂದಷ್ಟು ಸೂಕ್ಷ್ಮ ಮನಸ್ಸಿನ, ಕ್ರಿಯಾತ್ಮಕ ಮನಸ್ಥಿತಿಯ, ಸಮಾಜಕ್ಕೆ ಆದರ್ಶ ಪ್ರಾಯವಾಗಿ ಜೀವನ ನಡೆಸಬೇಕಾದ ಈ ಕಲಾಕಾರರು ಅಧಿಕಾರ, ಪ್ರಶಸ್ತಿಯ  ಆಸೆಗಾಗಿ ಆತ್ಮವಂಚನೆ ಮಾಡಿಕೊಂಡು ಸತ್ಯದ ಸಮಾಧಿಯ ಮೇಲೆ ಸುಳ್ಳಿನ ಅರಮನೆ ಕಟ್ಟುತ್ತಾ ಮುಂದಿನ ಪೀಳಿಗೆಯ ಯುವಕರ ದಾರಿ ತಪ್ಪಿಸುತ್ತಿದ್ದಾರೆ. ಅದರಲ್ಲೂ ಕೆಲವು ಬರಹಗಾರರು ಅಕ್ಷರಗಳನ್ನೇ ವಿಕೃತ ಉದ್ದೇಶಗಳಿಗಾಗಿ ಬಳಸುವ ದುರಂತ ಸನ್ನಿವೇಶಗಳಲ್ಲಿ ನಾವಿದ್ದೇವೆ.

ಅಕಾಡೆಮಿ, ಪ್ರಾಧಿಕಾರಗಳ ಅವಶ್ಯಕತೆ ಖಂಡಿತ ಇದೆ. ಮನುಷ್ಯನ ನಾಗರಿಕತೆಯ ಉಗಮದಿಂದಲೂ, ರಾಜಾಧಿಕಾರದಲ್ಲೂ ಇದು ಸಮೃದ್ಧವಾಗಿ ಬೆಳೆದು ಬಂದಿದೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಇದು ಹಾದಿ ತಪ್ಪಿರುವುದು ಅಪಾಯಕಾರಿಯಾಗಿದೆ. ಪಂಥಗಳು, ಪಕ್ಷಗಳನ್ನು ಮೀರಿ ಸತ್ಯ, ವಾಸ್ತವ, ಕ್ರಿಯಾತ್ಮಕತೆ, ಸ್ವಾಭಿಮಾನ ಮತ್ತು ಮಾನವೀಯ ಮೌಲ್ಯಗಳನ್ನು ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಈ ಕಲಾ ಲೋಕ ಮತ್ತೊಮ್ಮೆ ಕಾರ್ಯ ನಿರ್ವಹಿಸಲಿ. ಆ ಸಾಧಕರ ಪ್ರತಿಭೆಗಳ ಆತ್ಮಸಾಕ್ಷಿ ಮತ್ತೊಮ್ಮೆ ಜಾಗೃತವಾಗಲಿ ಎಂದು ಎಚ್ಚರಿಸುತ್ತಾ....

-ವಿವೇಕಾನಂದ. ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ