ಕಲಾ ಶಿಕ್ಷಕ ವಿ ಕೆ ವಿಟ್ಲರಿಗೆ ಉತ್ತಮ ಶಿಕ್ಷಕ ಗೌರವ

ಕಲಾ ಶಿಕ್ಷಕ ವಿ ಕೆ ವಿಟ್ಲರಿಗೆ ಉತ್ತಮ ಶಿಕ್ಷಕ ಗೌರವ

ಮಾನವನ ಸೃಜನಾತ್ಮಕ ಕೌಶಲ್ಯಗಳು ಹಾಗೂ ಸಂವೇದನಾ ಭಾವಲಹರಿಗಳನ್ನು ದೃಶ್ಯ ಕಲೆಗಳ ಮೂಲಕ ಜನಮಾನಸದಲ್ಲಿ ಅಜರಾಮರಗೊಳಿಸಲು ಚಿತ್ರಕಲೆ ಬಲು ದೊಡ್ಡ ಮಾಧ್ಯಮವಾಗಿದೆ. ನಮ್ಮ ನಾಡಿನ ಹಲವಾರು ಸೃಜನಶೀಲ, ಹುಟ್ಟು, ಪ್ರತಿಭಾವಂತ ಕಲಾವಿದರು ತಮ್ಮ ಸಹಜ ಕಲಾ ಪ್ರತಿಭೆಗಳನ್ನು ಕಾಲ- ಕಾಲಕ್ಕೆ ಅನಾವರಣ ಮಾಡುತ್ತಿದ್ದಾರೆ. ಅಂತಹ ಸಹಜ ಕಲಾ ಪ್ರತಿಭೆ, ಕಲಾರಾಧಕರಲ್ಲಿ ಒಬ್ಬರು ವಿ ಕೆ ವಿಟ್ಲ (ವಿಶ್ವನಾಥ ಗೌಡ ಕೆ). ವಿಶ್ವನಾಥ ಗೌಡ ಕೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರು. ಕಲಾ ಕ್ಷೇತ್ರದಲ್ಲಿ ವಿ. ಕೆ. ವಿಟ್ಲ ಎಂದೇ ಪ್ರಸಿದ್ದರಾದ ಇವರು 2024ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅಭಿನಂದನೀಯ.

ವಿ.ಕೆ ವಿಟ್ಲ ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಬಂಟ್ವಾಳ ತಾಲೂಕಿನ ಚಂದಳಿಕೆ ಪ್ರಾಥಮಿಕ ಶಾಲೆಯಲ್ಲಿ ಪಡೆದು ಪ್ರೌಢ ಶಿಕ್ಷಣವನ್ನು ವಿಠಲ ಪ.ಪೂ ಕಾಲೇಜು ವಿಠಲದಲ್ಲಿ ಮುಂದುವರಿಸಿದರು. ಈ ಶಾಲೆಯಲ್ಲಿ ತನ್ನ ಸುಪ್ತ ಪ್ರತಿಭೆಗೆ ರೂಪಕೊಟ್ಟು ನೀರೆರೆದವರು ಚಿತ್ರಕಲಾ ಶಿಕ್ಷಕರಾದ ಶ್ರೀ ಸುರೇಶ ಹಂದಾಡಿ. ಇವರ ಮಾರ್ಗದರ್ಶನದಡಿಯಲ್ಲಿ ತನ್ನ ಕಲ್ಪನೆಗಳಿಗೆ ಬಣ್ಣದ ರೂಪ ನೀಡಿ ಕಲಾ ಲೋಕಕ್ಕೆ ಕಾಲಿರಿಸಿದ ವಿ ಕೆ ವಿಟ್ಲ, ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಮಹಾಲಾಸ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲೆಯಲ್ಲಿ ಪದವಿಯನ್ನು ಪಡೆದರು.      

ಸುಬ್ರಹ್ಮಣ್ಯೇಶ್ವರ ಪ್ರೌಢಶಾಲೆ ಬಿಳಿನೆಲೆ, ಸುಳ್ಯ ನಂತರ ಎಸ್.ಡಿ.ಎಂ ಉಜಿರೆಯಲ್ಲಿ ಸೇವೆ ಸಲ್ಲಿಸಿದ ಹಿರಿಮೆ ಇವರದು. ಇವರ ವಿಶೇಷ ಗುಣವೇ ಶ್ರದ್ಧೆ. ಭಕ್ತಿ ಕಲಾರಾಧನೆ - ಶಿಕ್ಷಕ ವೃತ್ತಿಯಲ್ಲಿ ಶಿಸ್ತು, ಸಮಯ ಪಾಲನೆ, ಛಲ ಹಾಗೂ ಸಮರ್ಪಣಾಭಾವಕ್ಕೆ ಪ್ರಥಮ ಪ್ರಾಶಸ್ತ್ರ ನೀಡುವವರು. ಕಲಾ ಸ್ವರೂಪದ ಇನ್ನಿತರ ಕಲಾ ಪ್ರಕಾರಗಳಾದ ಶಿಲ್ಪಕಲೆ, ವಿಗ್ರಹಗಳ ನಿರ್ಮಾಣ, ಅವರನ್ನು ಇನ್ನಷ್ಟು ಪಕ್ವಗೊಳಿಸಿದವು. ಹೀಗೆ ಕಲೆಯನ್ನು ಹತ್ತು ಹಲವು ರೀತಿಯಲ್ಲಿ ಆರಾಧಿಸಿ, ಸೌಂದರ್ಯವನ್ನು ಉಣ ಬಡಿಸುತ್ತಿರುವ ಸರಳ, ಸಜ್ಜನಿಕೆಯ ಕಲಾವಿದ ವಿ ಕೆ ವಿಟ್ಲ.

 ಮಂಗಳೂರಿನಿಂದ ಧರ್ಮಸ್ಥಳ ದಾರಿಯ ಗುರುವಾಯನಕೆರೆ ಎಂಬಲ್ಲಿ 'ನಮ್ಮೂರ ಸರಕಾರಿ ಪೌಢಶಾಲೆ' ಎಂಬ ಬೋರ್ಡ್ ಒಂದು ನಿಂತಿರುವುದು ಕಾಣಿಸುತ್ತದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಸರಕಾರಿ ಪ್ರೌಢಶಾಲೆ, ಗುರುವಾಯನಕೆರೆ. ಶಾಲೆಯ ದಾರಿಗೆ ಮುಖವಿಟ್ಟು ನಡೆಯುವಾಗ ಎಡಬಲಗಳಲ್ಲೂ ಹಸಿರು ಹಸಿರು.. ಹಸಿರು ಗಿಡಮರಗಳನ್ನು ಕಣ್ತುಂಬಿಕೊಳ್ಳುತ್ತಾ ಏರಿ ಏರಿ ನಡೆದರೆ ಬಣ್ಣ ಬಣ್ಣಗಳಿಂದ ಮೈತುಂಬಿಕೊಂಡಿರುವ ದೊಡ್ಡ ಚಿಟ್ಟೆಯೊಂದು ನಮ್ಮನ್ನು ಸೆಳೆದುಬಿಡುತ್ತದೆ. ಅಲ್ಲಿಂದ ಹೊರಳಿದಾಗ ಭಿತ್ತಿಯ ಮೇಲೆ ಅರಳಿದ ನಮ್ಮ ದೇಶದ ಮಾಜಿ ರಾಷ್ಟ್ರಪತಿ ಡಾ| ಎ ಪಿ ಜೆ ಅಬ್ದುಲ್ ಕಲಾಂ ಅವರ ಭಾವಚಿತ್ರ ನೋಡುಗರಿಗೆ ಸ್ಪೂರ್ತಿಯನ್ನೇ ನೀಡುತ್ತದೆ. ಅಲ್ಲಿಂದ ಮುಂದೆ ಕಣ್ಣು ಹಾಯಿಸಿದಲ್ಲೆಲ್ಲ ಒಂದಲ್ಲ ಒಂದು ಚಿತ್ರ, ನುಡಿಮುತ್ತು, ಕಲಾಕೃತಿ ನಮ್ಮ ಕಣ್ಣಿಗೆ ಬೀಳುತ್ತಾ ಹೋಗುತ್ತದೆ. 

ಎದುರಲ್ಲೇ ಕಾಣುವ 'ಕಥಕ್ಕಳಿ' ವೇಷಧಾರಿಯ ಬೃಹತ್ ಪ್ರತಿಮೆ ಸೂಕ್ಷ್ಮ ಕುಸುರಿ ಕೆಲಸವನ್ನು ಒಳಗೊಂಡಿದ್ದು, ಅತ್ಯಾಕರ್ಷಕವಾಗಿದೆ. ಶಾಲೆಯ ಆವರಣದಲ್ಲಿರುವ ನೈಸರ್ಗಿಕವಾದ ಆನೆಯ ದೇಹದಾಕಾರವನ್ನು ಹೊಂದಿದ್ದ ದೊಡ್ಡ ಬಂಡೆಗೆ ಒಪ್ಪುವ ಹಾಗೆ ಸುಂದರ ಸೊಂಡಿಲನ್ನು ಸಿದ್ಧಪಡಿಸಿ ಜೋಡಿಸಲಾಗಿದ್ದು ನಿಜವಾದ ಆನೆಯನ್ನು ಕಂಡಂತೆಯೇ ಆಗುತ್ತದೆ. ಆ ಆನೆಯ ಸೊಂಡಿಲಿನಿಂದ ನೀರು ಹರಿಯುವಂತೆ ವ್ಯವಸ್ಥೆ ಮಾಡಲಾಗಿರುವುದು ಬಹಳ ವಿಶೇಷ ಅನಿಸುತ್ತದೆ. 

ಮಳೆಕೊಯ್ಲಿಗೆಂದು ನಿರ್ಮಿಸಲಾದ ನೀರು ಸಂಗ್ರಹಗಾರಕ್ಕೆ ಚಂದದ ಯಕ್ಷಗಾನದ ಮುಖವನ್ನು ಅಳವಡಿಸಿ ಸೌಂದರ್ಯ ಪ್ರಜ್ಞೆ ಮೆರೆದಿದ್ದಾರೆ. ಶಾಲೆಯ ಒಂದು ಗೋಡೆಯ ಮೇಲೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಭಾವಚಿತ್ರ ಇನ್ನೊಂದು ಗೋಡೆಯ ಮೇಲೆ ಪಾಟಿ ಚೀಲ ಧರಿಸಿ ಸಾಗರದಿಂದ ಆಗಸದೆಡೆಗೆ ಮೆಟ್ಟಿಲೇರಿ ನಡೆಯುತ್ತಿರುವ ಬಾಲಕಿಯ ಚಿತ್ರ ನಮ್ಮ ಮನಸ್ಸನ್ನು ಸೆಳೆಯುತ್ತದೆ. ವಿದ್ಯೆಯ ಹಂಬಲದಲ್ಲಿ ಕನಸುಗಳ ಮೂಟೆ ಹೊತ್ತು ಎತ್ತರೆತ್ತರಕ್ಕೆ ಏರಿ ಹೋಗುತ್ತಿರುವ ಬಾಲಕಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಕಲ್ಪನೆ ನಿಜಕ್ಕೂ ಸುಂದರ ಎನಿಸದಿರದು. ಶಾಲೆಯ ಪ್ರತಿ ಗೋಡೆಯಲ್ಲೂ ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲೆಲ್ಲ ಚಿತ್ರ ಚಿತ್ತಾರಗಳು ತುಂಬಿವೆ. 

ಗೋಡೆಯೊಂದರ ಮೇಲೆ ಕಾಣುವ ಜಿಂಕೆಗಳು ಹಾಗೂ ಮರಗಳ ಚಿತ್ರ ಮನಮೋಹಕ. ಶಾಲಾ ಸಭಾಂಗಣವನ್ನು ಹೊಕ್ಕರೆ ಅದ್ಭುತ ಅನುಭವವೊಂದರ ಗುಂಗಿನಲ್ಲಿ ಬೀಳುತ್ತೇವೆ. ಇಡೀ ಸಭಾಂಗಣವನ್ನು ಅಕ್ವೇರಿಯಂ ಎಂಬಂತೆ ಕಲ್ಪಿಸಿಕೊಂಡು ಮೂಡಿಸಲಾಗಿರುವ ವಿವಿಧ ಜಲಚರಗಳ ಜೊತೆ ನಾವು ಒಂದಾಗಿ ಬಿಡುತ್ತೇವೆ. ಮನಸ್ಸು ಕಲ್ಪನೆಯ ಸಾಗರದಲ್ಲಿ ಈಜಲಾರಂಭಿಸುತ್ತದೆ. ಸಭಾಂಗಣದ ಛಾವಣಿಯನ್ನು ಕೂಡ ಆಕಾಶವೆಂಬ ಕಲ್ಪನೆಯಲ್ಲಿ ಚಿತ್ತಾರಗಳಿಂದ ಸಿಂಗರಿಸಲಾಗಿದೆ. ಡಾಲ್ಫಿನ್ ಮೇಲೆ ಕೂತ ಮಕ್ಕಳ ಚಿತ್ರವು ಮನಸ್ಸಿಗೆ ಮುದ ನೀಡುತ್ತದೆ. ಗೋಡೆಯಲ್ಲಿ ಕಾಣುವ ಬೃಹತ್ ಗಾತ್ರದ ಬುದ್ಧಗುರುವಿನ ಪ್ರಶಾಂತ ಮುಖ ದೈವಿಕ ಅನುಭೂತಿಯನ್ನು ನೀಡುತ್ತದೆ. ಕನಸು ಕಲ್ಪನೆಗಳಲ್ಲಿ ಮೈಮರೆಯುವ ಮಕ್ಕಳ ಮನಸ್ಸಿಗೆ ಈ ಶಾಲೆಯ ಪ್ರತೀ ಗೋಡೆಯಲ್ಲೂ ಕಾಣುವ ಚಿತ್ರಗಳು ಹೊಸ ಲೋಕವನ್ನೇ ತೆರೆದಿಡುತ್ತವೆ.

ಶಿಕ್ಷಕರು ಹಾಗೂ ಮಕ್ಕಳ ಕೈಚಳಕದಿಂದ ತಯಾರಾದ ಹಲವಾರು ಸುಂದರ ಕಲಾಕೃತಿಗಳನ್ನು ಒಪ್ಪವಾಗಿ ಜೋಡಿಸಿಟ್ಟಿರುವ ಡ್ರಾಯಿಂಗ್ ರೂಮ್ ಕೂಡ ಈ ಶಾಲೆಯಲ್ಲಿ ಇದೆ. ಶಾಲೆಯನ್ನು ಹೀಗೆ ಚಿತ್ತಾರಗಳಿಂದ ಸಿಂಗರಿಸಿ ರಂಗುಗೊಳಿಸಿ ಆಕರ್ಷಕವಾಗಿಸಿದವರು ಈ ಶಾಲೆಯ ಚಿತ್ರಕಲಾ ಶಿಕ್ಷಕ ವಿಶ್ವನಾಥ ಕೆ. ವಿಟ್ಲ ಅವರು ಅರ್ಹವಾಗಿಯೇ 2024ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.     

2010ರಲ್ಲಿ ಗುರುವಾಯನಕೆರೆ ಸರಕಾರಿ ಪ್ರೌಢಶಾಲೆಯು ದ.ಕ ಜಿಲ್ಲೆಯ ಅತ್ಯುತ್ತಮ ಶಾಲೆ ಎಂಬ ಪ್ರಶಸ್ತಿ ಪಡೆಯಲು ವಿ ಕೆ ವಿಟ್ಲ ರವರ ಚಿತ್ರಕಲೆಗಳು, ಭಿತ್ತಿಚಿತ್ರ, ಗೋಡೆ ಬರಹಗಳು ಬಹುಮುಖ್ಯ ಕಾರಣಗಳಲ್ಲಿ ಒಂದಾಗಿತ್ತು. ಶಾಲೆಯು ಪ್ರಶಸ್ತಿಯೊಂದಿಗೆ 15 ಲಕ್ಷ ಪಡೆಯಲು ವಿ.ಕೆ. ವಿಟ್ಲ ರವರ ಸುಂದರ ಶಾಲಾ ಚಿತ್ರಕಲಾ ಪರಿಸರವು ಕಾರಣವಾಗಿತ್ತು. ಇವರ ಕಲಾ ಪ್ರತಿಭೆಗೆ ಸೂಕ್ತ ಗೌರವವನ್ನು ಕಾಲ ಕಾಲಕ್ಕೆ ಹಲವು ಸಂಘ- ಸಂಸ್ಥೆಗಳು ನೀಡಿ ಗೌರವಿಸಿದ್ದಾರೆ. ಕರ್ನಾಟಕ ಸರ್ಕಾರ 2017 ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದೆ. ವಿ.ಕೆ.ವಿಟ್ಲ ನಿರ್ವಿವಾದವಾಗಿ ಗುರುವಾಯನಕೆರೆ ಪ್ರೌಢ ಶಾಲೆಯ ಹಾಗೂ ಸಮಾಜದ ಅನರ್ಘ್ಯ ಆಸ್ತಿ. ಅವರ ಕಲೆಯ ಹಂದರ ಕಲ್ಪನಾ ಲೋಕ, ಅವರ ಸಹಜ ಹುಟ್ಟು ಪ್ರತಿಭೆ, ಕೈಯಲ್ಲಿನ ಕಲಾ ಮಾಂತ್ರಿಕತೆ ಅವರ ಒಟ್ಟು ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ. ಸರಳ, ಸಭ್ಯ, ಸ್ನೇಹಶೀಲ ವಿ. ಕೆ. ವಿಟ್ಲ ಎಲ್ಲಾ ವರ್ಗದ ಕಲಾ ಪ್ರತಿಭೆಗಳಿಗೆ ಕಲಾ ರಸಿಕರಿಗೆ ಸ್ಫೂರ್ತಿಯ ಸೆಲೆ. ವಿ ಕೆ ವಿಟ್ಲ ರವರಿಗೆ ಕಲಾ ಮಾತೆಯ ಅನುಗ್ರಹವಿರಲಿ. ಇನ್ನಷ್ಟು ಕಲಾವಿದರನ್ನು ಸಮಾಜಕ್ಕೆ ನೀಡುವ ಶಕ್ತಿ - ಸಾಮರ್ಥ್ಯ ನೀಡಲಿ ಎಂಬುದೇ ನಮ್ಮ ಶುಭಹಾರೈಕೆ.

-ತಾರಾನಾಥ್ ಕೈರಂಗಳ