ಕಲಿಕಾ ಚೇತರಿಕೆ ವಿಸ್ತರಿಸಿ

ಕಾರ್ಯಕ್ರಮ ವ್ಯಾಪ್ತಿಗೆ ಎಲ್ಲ ಮಕ್ಕಳನ್ನು ತನ್ನಿ. ಕಳೆದ ಎರಡು ವರ್ಷಗಳಲ್ಲಿ ಶೈಕ್ಷಣಿಕ ವಲಯವು ಕೋವಿಡ್ - ೧೯ ಪಿಡುಗಿನಿಂದ ಅತಿ ಹೆಚ್ಚು ಬಾದಿತವಾಗಿರುವ ಕ್ಷೇತ್ರವಾಗಿದೆ. ನರ್ಸರಿಯಿಂದ ಹಿಡಿದು ಸ್ನಾತಕೋತ್ತರ ಪದವಿವರೆಗಿನ ಇಡೀ ಶೈಕ್ಷಣಿಕ ವ್ಯವಸ್ಥೆಯು ಹಾದಿ ತಪ್ಪಿತು. ಇದರ ಪರಿಣಾಮವು ನೇರವಾಗಿ ಮಕ್ಕಳ ಮೇಲಾಗಿದೆ. ಒಂದೆಡೆ ಮಕ್ಕಳ ಕಲಿಕಾ ಮಟ್ಟ ಕುಸಿತ ಕಂಡರೆ, ಇನ್ನೊಂದೆಡೆ ಶೈಕ್ಷಣಿಕ ವರ್ಷವೇ ಅಸ್ತವ್ಯಸ್ತಗೊಂಡಿತ್ತು. ಇದರಿಂದ ಶಾಲಾ ಪಠ್ಯಗಳನ್ನು ಕಡಿತ ಮಾಡಲಾಯಿತು. ಈಗ ‘ಕಲಿಕಾ ಚೇತರಿಕೆ' ಕಾರ್ಯಕ್ರಮದ ಮೂಲಕ ಸರಿಪಡಿಸುವ ಪ್ರಯತ್ನ ಮಾಡಲಾಗುತ್ತದೆ. ಹಾಗಾಗಿ, ಕೋವಿಡ್ ಅವಧಿಯಲ್ಲಿ ಮಕ್ಕಳಿಗೆ ಕಲಿಸದೇ ಕೈಬಿಟ್ಟ ಪಾಠಗಳನ್ನು ಬೋಧಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿರುವುದು ಸ್ವಾಗತಾರ್ಹ ನಡೆಯಾಗಿದೆ.
ಕೋವಿಡ್ ಹಿನ್ನಲೆಯಲ್ಲಿ ವಿದ್ಯಾರ್ಥಿಗಳನ್ನು ನಿರಂತರ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸುವ ಸಲುವಾಗಿ ಆನ್ಲೈನ್, ದೂರದರ್ಶನ ಚಂದನ ವಾಹಿನಿ ಮೂಲಕ ಪಾಠಗಳ ಪ್ರಸಾರದಂಥ ಸುಧಾರಿತ ಕ್ರಮಗಳ ಮೂಲಕ ಶಿಕ್ಷಣ ನೀಡಲಾಯಿತು. ಆದರೆ ಈ ಕಲಿಕಾ ಪ್ರಕ್ರಿಯೆಗಳಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಲಾಭವಾಗಲಿಲ್ಲ. ಗ್ರಾಮೀಣ ಪ್ರದೇಶದ ಮಕ್ಕಳು ಕಲಿಕೆಯಲ್ಲಿ ತೀರಾ ಹಿಂದೆ ಉಳಿದಿದ್ದರು. ಈ ಒಟ್ಟು ಕಲಿಕಾ ಪ್ರಕ್ರಿಯೆಯನ್ನು ಪೂರ್ತಿಗೊಳಿಸುವುದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಮೂರು ವಿಧಾನಗಳಲ್ಲಿ ಕಲಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಈ ಸಂಬಂಧ ಸಕಲ ಸಿದ್ಧತೆ ನಡೆದಿದ್ದು, ಶಿಕ್ಷಕರಿಗೆ ಕಾರ್ಯಾಗಾರದ ಮೂಲಕ ವಿಶೇಷ ತರಬೇತಿಯನ್ನೂ ನೀಡಲಾಗಿದೆ. ಹೀಗಾಗಿ ಈ ವರ್ಷ ೧೫ ದಿನ ಮುಂಚಿತವಾಗಿಯೇ ತರಗತಿಗಳು ನಡೆಯಲಿವೆ. ಈ ಯೋಜನೆ ಅಡಿಯಲ್ಲಿ ೧ ರಿಂದ ೯ನೇ ತರಗತಿಯ ವಿದ್ಯಾರ್ಥಿಗಳು ತಾವು ಕಲಿತ ಹಿಂದಿನ ಎರಡು ವರ್ಷಗಳ ವಿಷಯಗಳನ್ನು ಅಭ್ಯಾಸ ಮಾಡಬೇಕಿದೆ. ಮೂರು ವಿಭಾಗಗಳಾಗಿ ಕಲಿಕಾ ಚೇತರಿಕೆಯನ್ನು ವಿಂಗಡಿಸಿ ಮೊದಲ ಭಾಗದಲ್ಲಿ ಮಕ್ಕಳಿಗೆ ಓದುವುದು, ಬರೆಯುವುದು, ಗಣಿತಕ್ಕೆ ಆದ್ಯತೆ ನೀಡಲಾಗುತ್ತದೆ. ೨ನೇ ಭಾಗದಲ್ಲಿ ಕಳೆದೆರಡು ವರ್ಷಗಳಲ್ಲಿನ ಮಿಸ್ ಆಗಿರುವ ಪಾಠಗಳ ಬದಲಿಗೆ ಮಿಸ್ ಆದ ಅಂಶಗಳನ್ನು ಕಲಿಸಲಾಗುತ್ತದೆ. ಮೂರನೇ ಅವಧಿಯಲ್ಲಿ ಪ್ರಸ್ತುತ ತರಗತಿಯ ಪಠ್ಯವನ್ನು ಕಡಿತಗೊಳಿಸಿ, ಅದನ್ನು ಕಲಿಸಲಾಗುತ್ತದೆ. ಮಕ್ಕಳಿಗೆ ತರಬೇತಿ ನೀಡುವ ಶಿಕ್ಷಕರಿಗೆ ಈಗಾಗಲೇ ಪ್ರತ್ಯೇಕ ಕೈಪಿಡಿ ತಯಾರಿಸಲಾಗಿದೆ. ಕೈಪಿಡಿ ಮತ್ತು ಕಲಿಕಾ ಹಾಳೆ ಆಧರಿಸಿ ಶಿಕ್ಷಕರು ಮಕ್ಕಳಿಗೆ ಪಾಠ ಹೇಳಿಕೊಡಲಿದ್ದಾರೆ. ಈ ಎಲ್ಲಾ ಪ್ರಯತ್ನಗಳ ಮೂಲಕ ಕಲಿಕೆಯಲ್ಲಿ ಹಿಂದೆ ಬಿದ್ದಿರುವ ಮಕ್ಕಳನ್ನು ಮತ್ತೆ ಎಂದಿನ ಕಲಿಕಾ ಮಟ್ಟಕ್ಕೆ ವಿಸ್ತರಿಸಲು ಬೇಕಾಗುವ ಪ್ರಯತ್ನ ಮಾಡುತ್ತಿರುವುದು ಒಳ್ಳೆಯ ನಿರ್ಧಾರವಾಗಿದೆ.
ಆದರೆ, ಸಾರ್ವಜನಿಕ ಶಿಕ್ಷಣ ಇಲಾಖೆಯು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ತನ್ನ ವ್ಯಾಪ್ತಿಯ ಸರಕಾರಿ ಶಾಲೆಗಳಿಗೆ ಮಾತ್ರವೇ ಸೀಮಿತಗೊಳಿಸಿರುವುದು ಸೂಕ್ತವಲ್ಲ. ಖಾಸಗಿ ಶಾಲೆಗಳು, ಅಲ್ಪಸಂಖ್ಯಾತರ ಇಲಾಖೆ ವ್ಯಾಪ್ತಿಯ ಶಾಲೆಗಳು, ವಸತಿ ಶಾಲೆಗಳನ್ನು ಈ ಕಲಿತಾ ಚೇತರಿಕೆ ಕಾರ್ಯಕ್ರಮದಿಂದ ಹೊರಗಿಡಲಾಗಿದೆ. ಇಲಾಖೆಯ ಈ ನಿರ್ಧಾರಕ್ಕೆ ವ್ಯಾಪಕ ಅಸಮಾಧಾನ ಕೂಡ ವ್ಯಕ್ತವಾಗಿದೆ. ಕೋವಿಡ್ ಸಾಂಕ್ರಾಮಿಕ ವೇಳೆಯಲ್ಲಿ ಎಲ್ಲ ಮಕ್ಕಳೂ ಶಿಕ್ಷಣ ವಂಚಿತರಾಗಿದ್ದಾರೆ. ಹಾಗಾಗಿ, ಮಕ್ಕಳ ವಿಷಯದಲ್ಲಿ ಭೇದ ಭಾವ ಎಣಿಸುವುದು ಸರಿಯಲ್ಲ. ಕಲಿಕಾ ಚೇತರಿಕಾ ಕಾರ್ಯಕ್ರಮಗಳನ್ನು ಖಾಸಗಿ ಸೇರಿದಂತೆ ಎಲ್ಲ ಇಲಾಖಾ ವ್ಯಾಪ್ತಿಯ ಶಾಲೆಗಳಿಗೂ ವಿಸ್ತರಿಸಬೇಕು. ಇಲ್ಲದಿದ್ದರೆ ಆ ಮಕ್ಕಳಿಗೆ ಸರಕಾರವೇ ಅನ್ಯಾಯ ಮಾಡಿದಂತಾಗುತ್ತದೆ. ಅದಕ್ಕೆ ಆಸ್ಪದ ನೀಡುವುದು ಬೇಡ.
(ಕೃಪೆ : ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೧-೦೫-೨೦೨೨)
ಚಿತ್ರ ಕೃಪೆ: ಅಂತರ್ಜಾಲ ತಾಣ