ಕಲಿಕೆ ಹೀಗಾದರೆ ಹೇಗೆ!?

ಕಲಿಕೆ ಹೀಗಾದರೆ ಹೇಗೆ!?

ಬರಹ

ಕಲಿಕೆ ಹೀಗಾದರೆ ಹೇಗೆ!?
ಯಾವುದೇ ವಿದ್ಯೆಯನ್ನು ಗಂಭೀರವಾಗಿ ಕಲಿಯುವವರನ್ನು ನಾವು ಇಲ್ಲಿ ಗಣನೆಗೆ ತೆಗೆದುಕೊಳ್ಳ ಬೇಕಾಗಿಲ್ಲ. ಆದರೆ ಹಿರಿಯರ ಬಲವಂತಕ್ಕೆ ಅಥವಾ ಸುಮ್ಮನೇ ಕಾಲ ಕಳೆಯಲೆಂದು ಕಲಿಯುವವರ ಚಿಂತನೆ ಹೇಗಿರಬಹುದೆಂಬುದರ ಬಗ್ಗೆ ಇಲ್ಲಿ ಒಂದು ಮಂಥನ ಅಷ್ಟೇ.
ನಾನು ವೀಣೆ ಕಲಿಯುತ್ತಿದ್ದಾಗ ನನ್ನೊಂದಿಗೆ ಕಲಿಯುತ್ತಿದ್ದ ಸಹಪಾಟಿಯೊಬ್ಬರ ಚಿಂತನೆಗಳು ಇವು. (ಇವು ನನ್ನವಲ್ಲ, ನಾನು ಸಾಚಾ ಎಂದು ನೀವು ನಂಬಲೇಬೇಕು.)
ವೀಣೆ ಕಲಿಸುವವರು ಪಾರಂಪರಿಕವಾಗಿ ಹೇಳುವ ಕೆಲವು ಮಾತುಗಳುಂಟು. ಅವುಗಳಿಗೆ ನನ್ನ ಸಹಪಾಟಿಯಂತವರು ಕಲ್ಪಿಸುವ ಅರ್ಥ ಮತ್ತು ಕಲಿತುಕೊಳ್ಳುವ ವಿಚಾರಗಳು ಯಾವುವು, ಎಂಬುದೇ ಈ ಲೇಖನದ ಮುಖ್ಯ ಉದ್ದೇಶ.
ವೀಣೆಯಲ್ಲಿ ಗಮಕಗಳು ಹೇಳಿಕೊಡುವಾಗಿನ ಕಲಿಕೆಗಳು ಇವು. ಶಾಸ್ತ್ರೀಯ ಸಂಗೀತದ ಪ್ರಕಾರ ಗಮಕಗಳ ಹೆಸರು ಬೇರೆ ಇರುತ್ತವೆ. ಇಲ್ಲಿನ ಗಮಕಗಳಿಗೆಲ್ಲ ಹೆಸರು ಕೊಟ್ಟವರು ನನ್ನ ಸಹಪಾಟಿ, ಮತ್ತು ಅವರದ್ದು ಪಂಚ ವಿಧ ಗಮಕಗಳು.
1) ಜಾರು ಗಮಕ:- ಗುರುಗಳ ಮಾತು, “ನೋಡಿ ಇಲ್ಲಿ ಬರಬೇಕಾದ ಸ್ವರ ‘ರಿ’ ಆದರೂ ನೀವು ‘ಪ’ನಲ್ಲಿ ಇರ್ತೀರಲ್ಲ ‘ಪ’ ನಲ್ಲಿ ಹೊಡೆದು ‘ರಿ’ಗೆ ಜಾರಿಕೊಳ್ಳಿ, ಆಗ ನಮಗೆ ‘ಪರಿ’ ಎಂದು ಕೇಳುತ್ತದೆ.”
ಅದಕ್ಕೆ ನನ್ನ ಸ್ನೇಹಿತರ ನೋಟ್ ಹೀಗಿದೆ, “ಹೊಡೆದುಬಿಟ್ಟು ಜಾರಿಕೊಳ್ಳುವ ಬುದ್ಧಿ ಈ ಗಮಕದಲ್ಲಿದೆ. ಇದಕ್ಕೆ ಜಾರುಗಮಕ ಎನ್ನಬಹುದು” ಎಂಬುದೇ ಆಗಿದೆ. ಈ‘ಪರಿ’ಯ ಕಲಿಕೆ ಅವರದ್ದು.
2) ಕಂಪಿತ ಗಮಕ:- ಗುರುಗಳ ಹೇಳಿಕೆ “ಕೆಲವೊಮ್ಮೆ ಈ ಪಾಶ್ಚಾತ್ಯ ಸಂಗೀತದಲ್ಲಿ ದ್ವನಿ ನಡುಗಿಸುತ್ತಾರಲ್ಲ ಹಾಗೆ ಬೇಕಾದ ಸ್ವರದ ಮನೆಯ ಮೇಲೆ ಬೆರಳಿಟ್ಟು ತಂತಿಯನ್ನು ಮೆಲ್ಲಗೆ ನಾಲ್ಕಾರು ಸಲ ಅಲುಗಿಸಬೇಕು”
ನನ್ನ ಸ್ನೇಹಿತರ ನೋಟ್, “ನಾನು ವೀಣೆಯ ಮೇಲೆ ಕೈಯಿಟ್ಟಕೂಡಲೇ ಬರೀ ಸ್ವರವೇನು, ಇಡೀ ವೀಣೆಯೇ ನಡುಗುತ್ತದೆ. ಈ ಗಮಕ ನನಗೆ ಸ್ಟ್ರಾಂಗಾಗಿ ಒಲಿದಿದೆ.” ಪಾಪ ವೀಣೆ ಒಳಗೇ ಅಳುತ್ತಿರಬಹುದೇ?
3) ಇಣುಕು ಗಮಕ:- ಗುರುಗಳ ಹೇಳಿಕೆ, "ನಾಲ್ಕನೆಯ ಕಾಲದಲ್ಲಿ 8 ಸ್ವರಗಳು ಒಂದಕ್ಷರ ಕಾಲದಲ್ಲಿ ನುಡಿಯಬೇಕು. ಸ್ವಲ್ಪ ಕೈ ಓಟ fast ಆಗಿರಬೇಕು. ನೋಡಿ ‘ಗಾಮಗ ರೀಗರಿ ಸಾ’ ಎಂಬ ಸ್ವರ ಸಂಚಾರವನ್ನು ತೆಗೆದುಕೊಳ್ಳೋಣ. ನೋಡಿ ಇಲ್ಲಿ 8 ಸ್ವರಗಳು ಒಂದಕ್ಷರ ಕಾಲದಲ್ಲಿ ಬರಬೇಕು ಅಂದ್ರೆ ‘ಗ’ನಲ್ಲಿ ತೋರುಬೆರಳಿಟ್ಟು ‘ಮ’ ಮನೆ ಇಣುಕಿ ನೋಡಿದ ಹಾಗೆ ಮಧ್ಯ ಬೆರಳಿನಿಂದ ಸವರಿ ಮತ್ತೆ ಬೇಗ ‘ಗ’ ಮನೆಗೆ ಬಂದುಬಿಡಬೇಕು ಹಾಗೇ ‘ರೀಗರಿ’ಯನ್ನೂ ನುಡಿಸಿ ‘ಸ’ಗೆ ಬಂದುಬಿಡಬೇಕು.”
ಇದಕ್ಕೆ ನನ್ನ ಸ್ನೇಹಿತರ ನೋಟ್, “ ಇದು ನಮ್ಮ ಮನೆಯಿಂದ ಪಕ್ಕದ ಮನೆಯಲ್ಲೇನಾಗುತ್ತಿದೆ ಎಂದು ಇಣುಕಿ ನೋಡುವ ಬುದ್ಧಿ. ಇದಕ್ಕೆ ಬೇಕಾದರೆ ಪಕ್ಕದ ಮನೆಯವರ ಬಗ್ಗೆ ಅನಾವಶ್ಯಕ ಕುತೂಹಲ ಎನ್ನಬಹುದೇನೋ. ಆದ್ದರಿಂದ ಇದಕ್ಕೆ ಇಣುಕು ಗಮಕ ಎನ್ನಬಹುದು.”
4) ಎಳೆದು ತರುವ ಗಮಕ:- ಸಾಧಾರಣವಾಗಿ ಎಷ್ಟೋ ಬಾರಿ ಮುಂದಿನ ಸ್ವರಗಳನ್ನು ವೀಣೆಯಲ್ಲಿ ಹಿಂದಿನ ಮನೆಯಲ್ಲಿ ಎಳೆದು ತಂದು ನಿಲ್ಲಿಸುವುದುಂಟು. ಮುಂದಿನ ಒಂದು ಸ್ವರವೋ ಅಥವಾ ಮುಂದಿನ ಎರಡು ಸ್ವರಗಳೋ ಹಿಂದಿನ ಮನೆಯಲ್ಲೇ ಎಳೆದು ನಿಲ್ಲಿಸುವುದು ಒಂದು ಸುಂದರವಾದ ರಂಜನೀಯ ಗಮಕ. ಉದಾಹರಣೆಗೆ ‘ಗಮಗಮದಾಪಾ’ ಎಂದು ನುಡಿಸಬೇಕಾಯಿತು ಎಂದಿಟ್ಟುಕೊಳ್ಳೋಣ. ಆಗ ‘ಗ’ ಮನೆಯಲ್ಲಿ ‘ಮ’ ತಂದು ಎರಡು ಸಲ ತಂತಿಯನ್ನು ಮೇಲಕ್ಕೂ ಕೆಳಕ್ಕೂ ಎಳೆದು ನಂತರ ‘ಪ, ಮನೆಯಲ್ಲಿ ತಂತಿಯನ್ನು ಸ್ವಲ್ಪ ಮೇಲಕ್ಕೆ ಎಳೆದು ‘ದ’ ತಂದು ಎರಡಕ್ಷರ ಕಾಲ ನಿಲ್ಲಿಸಿ ನಿಧಾನವಾಗಿ ‘ಪ’ಗೆ ಇಳಿಸಿದರೆ ಕರ್ಣಾನಂದ. ಇದನ್ನು ನಮ್ಮ ಗುರುಗಳು ವಿವರಿಸಿ ನುಡಿಸಿ ತೋರಿಸಿದಾಗ,
ನನ್ನ ಗೆಳೆಯರ ನೋಟ್ ಹೀಗಿತ್ತು. “ಸ್ವರಗಳು ದೇವರೇ ಅಂತ ತಮ್ಮ ತಮ್ಮ ಮನೆಯಲ್ಲಿ ಇರಬೇಕಾದರೆ ಹಿಂದಿನ ಸ್ವರಗಳು ತಮ್ಮ ಮನೆಗೆ ಎಳೆದು ತಂದು ಹೊಡೆಯುವ ಅವಶ್ಯಕತೆಯಾದರೂ ಏನು? ಇದಕ್ಕೆ ಎಳೆದು ತಂದು ಹೊಡೆವ ಗಮಕ ಎಂದು ಹೆಸರಿಸಬಹುದು.”
5) ಪೆಟ್ಟಿನ ಗಮಕ:- ಈ ಗಮಕ ಸ್ವರಗಳು ಜಂಟಿ ವರಸೆಯಲ್ಲಿ ಬಂದಾಗ ಉಪಯೋಗವಾಗುತ್ತದೆ. ಉದಾಹರಣೆಗೆ ‘ಗಗಮಮಪಪ’ ಎಂದು ಬಂದರೆ, ಗಗ ಎಂದು ನುಡಿಸುವಾಗ ಮಧ್ಯ ಬೆರಳನ್ನು ‘ಗ’ ಮೇಲಿಟ್ಟು ತೋರುಬೆರಳನ್ನು ‘ರಿ’ಮೇಲಿಟ್ಟು ಮೀಟಿದಾಗ ‘ಗ’ ಸ್ವರ ಬರುತ್ತದೆ. ಎರಡನೆಯ ‘ಗ’ ನುಡಿಸುವ ಮೊದಲು ಮಧ್ಯ ಬೆರಳನ್ನು ಎತ್ತಿ ನುಡಿಸಿ ನಂತರ ‘ಗ’ ಮೇಲೆ ಬೆರಳಿಟ್ಟಾಗ ‘ಗಗ’ ಎಂಬ ಜಂಟಿ ಸ್ವರಗಳು ‘ಗರಿಗ’ ಎಂಬಂತೆ ಕೇಳಿಸುತ್ತದೆ. ಹಾಗೆಯೇ ಮುಂದಿನ ಸ್ವರಗಳನ್ನು ನುಡಿಸಿದಾಗ ‘ಗರಿಗ ಮಗಮ ಪಮಪ’ ಎಂದು ಕೇಳಿಸುತ್ತದೆ. ಇದನ್ನು ಆರೋಹಣದಲ್ಲಿ ಆಹತ ಗಮಕ ಎಂದೂ ಅವರೋಹಣದಲ್ಲಿ ಪ್ರತ್ಯಾಹತ ಗಮಕ ಎಂದೂ ಹೇಳುತ್ತಾರೆ.
ಇದಕ್ಕೆ ನಮ್ಮ ಗೆಳೆಯರ ನುಡಿ, “ಜಂಟಿ ವರಸೆಯಲ್ಲಿ ನುಡಿಸುವಾಗ ಮೊದಲು ಸ್ವಲ್ಪ ಮೆದುವಾಗಿ ಹೊಡೆಯಬೇಕು. ಆಮೇಲೆ ಸ್ವಲ್ಪ ಜೋರಾಗಿ ಪೆಟ್ಟು ಕೊಡಬೇಕು. ಒಂದೊಂದು ಸ್ವರಕ್ಕೂ ಎರಡೆರಡು ಪೆಟ್ಟು ಕೊಡುವುದರಿಂದ ಇದಕ್ಕೆ ಪೆಟ್ಟು ಗಮಕ ಎಂದು ಹೆಸರಿಸುತ್ತೇನೆ.”
ಹೀಗೆ ನನ್ನ ಗೆಳೆಯರು ಹೊಡೆದುಬಿಟ್ಟು ಜಾರಿಕೊಳ್ಳುವ ಬುದ್ಧಿ, ಪಕ್ಕದ ಮನೆಯನ್ನು ಇಣುಕಿ ನೋಡುವ ಬುದ್ಧಿ, ಪಕ್ಕದ ಮನೆಯವರನ್ನು ಎಳೆದು ತಂದು ಹೊಡೆಯುವ ಬುದ್ಧಿ, ಎದುರಿಗಿರುವ ಯಾರನ್ನಾದರೂ ನಡುಗಿಸುವ ಬುದ್ಧಿ, ಪೆಟ್ಟಿನ ಮೇಲೆ ಪೆಟ್ಟು ಕೊಡುವ ಬುದ್ಧಿ ಎಲ್ಲಾ ಕಲಿತಮೇಲೆ ತನ್ನ ಕಲಿಕೆ ಪೂರ್ತಿಯಾಯಿತೆಂದು ಹೇಳಿ ವೀಣೆಯ ಮುಸುಕೆಳೆದು ತನ್ನ ಕಲಿಕೆಗೂ ಪೂರ್ಣ ವಿರಾಮ ನೀಡಿದರು.