ಕಲಿಗಾಲ

ಕಲಿಗಾಲ

ಬರಹ

ಕಲಿಗಾಲವಯ್ಯ ಇಂದಿಗಿದು ಕೆಟ್ಟಕಾಲ
ಬೇಸಿಗೆಕಾಲದಲ್ಲಿಯೂ ತೋರುವ ಛಳಿಗಾಲ
ನಿನ್ನೆಗೆ ಇಂದಾಗಿಹುದು ದುರ್ಭಿಕ್ಷದ ಕಾಲ
ನಾಳೆಗೆ ಇಂದಾಗುವುದು ಸುಭಿಕ್ಷ ಕಾಲ

ಕಾಲ ಕೆಳಗೆ ಕುಸಿಯುತಿಹಳು ಭೂಮಾತೆ
ನಿಸರ್ಗ ಪ್ರದೂಷಣೆಯಿಂದ ಕಲುಷಿತೆ
ಓಝೋನ್ ಪದರ ಕಳಚಿಕೊಳ್ಳುತ್ತಿರುವ ದೇವತೆ
ಮುಂದೆ ಉಸಿರಾಡಲೂ ಗಾಳಿ ಸಿಗದ ಕಾಲವಂತೆ

ಛಳಿಗಾಲದಲಿ ಮೈಯ ಹಲ್ಲು ಕಟಕಟಿಸುವುದು
ಮೈ ಥರ ಥರಗುಟ್ಟುತಾ ನಡುಗುವುದು
ಹಿಮ ಕಂಡಿರದ ಪ್ರದೇಶಗಳಲ್ಲೂ
ಕಾಣುವಿರಿ ಹಿಮಪಾತ, ಹಿಮಕರಡಿ

ಬೇಸಿಗೆಯಲಿ ಇದ್ದಿಲಿನಂತೆ ಮೈ ಕರಕಲು ಮಾಡುವ
ಸುಡು ಸುಡು ಬಿಸಿಲು, ಸಹಿಸಲಸಾದ್ಯದ ತಾಪ
ಮರೀಚಿಕೆಯನ್ನೇ ನೀರೆಂದು ತಿಳಿದು ಮರಳು ಮುಕ್ಕುವ ಕಾಲ
ಕೆಳಗೆ ಮೇಲೆ ಸುಟ್ಟು ಭಸ್ಮ ಮಾಡುವ ರವಿಯ ಜಾಲ

ತ್ಸುನಾಮಿ ರೀಟಾ, ಕತ್ರಿನಾಗಳ ಸ್ಯಾಂಪಲ್
ತೋರಿಸುವ ಅಬ್ಬರದ ಮಳೆಗಾಲ
ಅತಿವೃಷ್ಟಿ ಅನಾವೃಷ್ಟಿಗಳ
ಎರಡನ್ನೂ ಒಮ್ಮೆಗೇ ತೋರಿಸುವ ಆಗರ

ಊಟದ ಮಧ್ಯೆ ಉಪ್ಪಿನಕಾಯಿಯಂತೆ
ರುಚಿ ತೋರಿಸುವ ಭೂಕಂಪನ
ಅಟ್ಟಹಾಸಕೆ ಹೆಸರಾದ ರಾವಣ
ಕೌರವ, ಹಿರಣ್ಯಕಶಿಪುಗಳಂತಹವರನೂ
ಬಗ್ಗು ಬಡೆಯುವ ಸಕಾಲ

ಮೂರ್ಕಾಸಿಗೆ ಆರು ಸೇರು ಅನ್ನ
ಕೊಡುತ್ತಿದ್ದ ನಿನ್ನೆಯ ಕಾಲ ಸುಭಿಕ್ಷ
ನಾಳೆ ನೂರ್ಕಾಸಿಗೆ ಆರು ಕಾಳು ಅನ್ನ
ಸಿಗುವ ಕಾಲಕೇ ಇಂದಿನ ಕಾಲವೇ ಸುಭಿಕ್ಷ

ನಿನ್ನೆಗೆ ಇಂದಾಗಿಹುದು ತುಸು ದುರ್ಭಿಕ್ಷ
ಇಂದಿಗೆ ನಾಳೆ ಆಗುವುದು ಮತ್ತಷ್ಟು ದುರ್ಭಿಕ್ಷ
ಕಾಲ ಉರುಳುತಲೇ ಇರುವುದು
ಕಲಿಗಾಲ ಉಲ್ಬಣಿಸುತಲೇ ಇರುವುದು

ಮಗನಾಗುವ ಅಪ್ಪ
ಅಪ್ಪನಾಗುವ ಅಜ್ಜ
ಅಜ್ಜಗೆ ಕಾದಿಹುದು ಬೊಜ್ಜ
ಬಾಳಲು ಹೊಂದಿಕೊಳ್ಳಲೇಬೇಕು
ಹೊಂದಿಕೊಳ್ಳಲು ನಾವಾಗಲೇ ಬೇಕು ಸಜ್ಜ