ಕಲೆಗಳ ನಿವಾರಣೆಗೆ ಮನೆಯಲ್ಲೇ ತಯಾರಿಸಿ ಫೇಸ್ ಪ್ಯಾಕ್ !
ಪ್ರತಿಯೊಬ್ಬರಿಗೂ ತಾನು ಚೆನ್ನಾಗಿ ಕಾಣಬೇಕು ಎನ್ನುವ ಮನಸ್ಸು, ಕನಸು ಎರಡೂ ಇರುತ್ತದೆ. ಆದರೆ ಇಂದಿನ ಯುಗದಲ್ಲಿ ಚೆನ್ನಾಗಿ ಕಾಣಲು ಕೈತುಂಬಾ ಹಣವೂ ಬೇಕು. ಒಮ್ಮೆ ಬ್ಯೂಟಿ ಪಾರ್ಲರ್ ಗೆ ಹೋಗಿ ಬಂದರೆ ಸಾವಿರಾರು ರೂಪಾಯಿಗಳು ಢಮಾರ್! ನಮ್ಮ ಪೂರ್ವಿಕರು ಯಾರೂ ಬ್ಯೂಟಿ ಪಾರ್ಲರ್ ಹೋದದ್ದಿಲ್ಲ. ಅವರೆಲ್ಲಾ ಸಹಜ ಸುಂದರವಾಗಿದ್ದರು. ಬಹಳಷ್ಟು ಮಂದಿಗೆ ಸೌಂದರ್ಯ ಪ್ರಜ್ಞೆ ಸಹಜವಾಗಿಯೇ ಇತ್ತು. ತಮ್ಮನ್ನು ಅಲಂಕರಿಸಿಕೊಳ್ಳಲು ಅವರು ಯಾವುದೇ ಬಾಹ್ಯ ವಸ್ತುಗಳನ್ನು ಬಳಸದೇ ಮನೆಯಲ್ಲೇ ಇರುವ ವಸ್ತುಗಳನ್ನು ಬಳಸುತ್ತಿದ್ದರು. ಕ್ರಮೇಣ ಸೌಂದರ್ಯ ವರ್ಧಕ ಕ್ರೀಂ, ಪೌಡರ್ ಮೊದಲಾದುವುಗಳು ಮಾರುಕಟ್ಟೆಗೆ ಬರಲು ಶುರುವಾದ ಬಳಿಕ ಬಹುತೇಕರು ಅದನ್ನು ಬಳಸಲು ಪ್ರಾರಂಭ ಮಾಡಿದರು. ಕೆಲವರಿಗೆ ಅದು ಒಗ್ಗಿಕೊಂಡರೆ ಮತ್ತೆ ಕೆಲವರಿಗೆ ಅಲರ್ಜಿಯಂತಹ ಸಮಸ್ಯೆಗಳು ಶುರುವಾದವು.
ಬಹಳಷ್ಟು ಮಂದಿಗೆ ಬ್ಯೂಟಿ ಪಾರ್ಲರ್ ಹೋಗಿ ಫೇಸ್ ಪ್ಯಾಕ್ ಗಳನ್ನು ಮೆತ್ತಿಕೊಂಡು ಸುಂದರವಾಗಿ ಕಾಣುವ ಆಸೆ. ಆದರೆ ರಾಸಾಯನಿಕ ಮಿಶ್ರಿತ ಈ ಫೇಸ್ ಪ್ಯಾಕ್ ಗಳು ದುಬಾರಿಯಷ್ಟೇ ಅಲ್ಲ ಸೌಂದರ್ಯ ಹಾಗೂ ಆರೋಗ್ಯಕ್ಕೆ ಅಪಾಯಕಾರಿಯೂ ಆಗಬಹುದು. ಅದಕ್ಕಾಗಿ ಮನೆಯಲ್ಲೇ ತಯಾರಿಸಬಹುದಾದ ಫೇಸ್ ಪ್ಯಾಕ್ ಒಂದನ್ನು ನಿಮಗೆ ತಿಳಿಸಿಕೊಡಲಿದ್ದೇವೆ. ಇವೆಲ್ಲಾ ಆಯುರ್ವೇದಕ್ಕೆ ಸಂಬಂಧಿಸಿದ ವಸ್ತುಗಳಾದುದರಿಂದ ಅಡ್ಡ ಪರಿಣಾಮಗಳು ಇರುವುದಿಲ್ಲ ಎನ್ನುತ್ತಾರೆ ಖ್ಯಾತ ಆಯುರ್ವೇದ ತಜ್ಞರಾದ ಡಾ. ಗಾಯತ್ರಿ ದೇವಿ.
ಫೇಸ್ ಪ್ಯಾಕ್ ತಯಾರಿಸಲು ನಿಮಗೆ ಬೇಕಾದ ವಸ್ತುಗಳೆಂದರೆ ಯಷ್ಟಿ ಮಧು ಅಥವಾ ಅತಿ ಮಧುರದ ಹುಡಿ ಅರ್ಧ ಚಮಚ, ಲೋಧ್ರಾ ಹುಡಿ ಅರ್ಧ ಚಮಚ, ಬಾರ್ಲಿ ಹುಡಿ ಒಂದು ಚಮಚ, ಹುಳಿ ಮೊಸರು ಸ್ವಲ್ಪ.
ಸಿದ್ಧ ಪಡಿಸುವ ಕ್ರಮ: ಮೊದಲು ಬಾರ್ಲಿ ಬೀಜಗಳನ್ನು ಪೇಸ್ಟ್ ಮಾಡಲು ಹುಡಿಯನ್ನಾಗಿ ಮಾಡಿ ಮತ್ತು ಅದನ್ನು ಒಂದು ಪಾತ್ರೆಗೆ ಹಾಕಿ. ನಂತರ ಲೋಧ್ರ ಹುಡಿ ಮತ್ತು ಯಷ್ಟಿ ಮಧು ಚೂರ್ಣ ಮಿಶ್ರಣ ಮಾಡಿ. ಬಳಿಕ ಹುಳಿ ಮೊಸರು ಸೇರಿಸಿ ಪೇಸ್ಟ್ ಮಾಡಿ. ಈ ಮಿಶ್ರಣ ಫೇಸ್ ಪ್ಯಾಕ್ ನಂತೆ ಸಿದ್ಧ ಪಡಿಸಿ, ಬಾಧಿತ ಜಾಗಕ್ಕೆ ಜೌಷಧದ ರೀತಿಯಲ್ಲಿ ಹಚ್ಚಿ. ಇದನ್ನು ಪ್ರತಿ ನಿತ್ಯ ಹದಿನೈದು ನಿಮಿಷಗಳ ಕಾಲ ಮುಖಕ್ಕೆ ಹಚ್ಚಿ ನಂತರ ತೊಳೆದರೆ ಉತ್ತಮ ಫಲಿತಾಂಶ ಸಿಗುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು. ಏಕೆಂದರೆ ಬಾರ್ಲಿಯಲ್ಲಿ ನೈಸರ್ಗಿಕವಾಗಿ ಕಲೆಯನ್ನು ನಿವಾರಿಸುವ ಗುಣವಿದೆ. ಲೋಧ್ರಾ ಹುಡಿಯೂ ಕಲೆಗಳನ್ನು ಕಡಿಮೆ ಮಾಡಲು ಸಹಕಾರಿ. ಅದರ ಜೊತೆಗೆ ಮುಖಕ್ಕೆ ಕಾಂತಿಯನ್ನೂ ನೀಡುತ್ತದೆ. ಇದರ ಜೊತೆಗೆ ಬೆರೆತಿರುವ ಯಷ್ಟಿಮಧು ಮುಖಕ್ಕೆ ಹೊಳಪು ನೀಡುವುದರಲ್ಲಿ ಸಹಕಾರಿ.
ಮುಖದಲ್ಲಿರುವ ಕಲೆಯನ್ನು ಹೋಗಲಾಡಿಸಲು ಮನೆಯಲ್ಲಿ ಒಂದು ಮದ್ದನ್ನು ತಯಾರಿಸಬಹುದು. ಅದಕ್ಕೆ ಬೇಕಾಗುವ ವಸ್ತುಗಳೆಂದರೆ ಲಾವಂಚದ ಬೇರು (ಕುಟ್ಟಿ ಹುಡಿ ಮಾಡಿದ್ದು) ಒಂದು ಚಮಚ, ಶ್ರೀಗಂಧದ ಹುಡಿ ಒಂದು ಚಮಚ, ಸುಗಂಧಪಾಲ ಎಲೆಯ ಹುಡಿ ಒಂದು ಚಮಚ (ಸುಗಂಧಪಾಲ ಸಸ್ಯದ ಎಲೆ) ಮತ್ತು ಜೇನುತುಪ್ಪ ಒಂದು ಚಮಚ.
ತಯಾರಿಕಾ ವಿಧಾನ: ಮೊದಲು ಅಗಲ ಬಾಯಿಯ ಪಾತ್ರೆಯನ್ನು (ಕಡಾಯಿ) ಉರಿಯುತ್ತಿರುವ ಒಲೆಯ ಮೇಲಿಟ್ಟು ಒಂದು ಲೋಟ ನೀರು ಹಾಕಿ. ಅದರ ನಂತರ ಒಣಗಿದ ಲಾವಂಚ ಬೇರು (ವೆಟಿವರ್) ಹುಡಿ ಮತ್ತು ಸುಗಂಧ ಪಾಲ ಎಲೆ ಹುಡಿ ಸೇರಿಸಿ. ಬಳಿಕ ಅದೆಲ್ಲವನ್ನೂ ಮಿಶ್ರಣ ಮಾಡಿ. ಬಿಸಿ ಆರಿದ ಬಳಿಕ ಶ್ರೀಗಂಧದ ಹುಡಿ ಮಿಕ್ಸ್ ಮಾಡಿ. (ನೆನಪಿರಲಿ- ಕುದಿಯುತ್ತಿರುವಾಗ ಶ್ರೀಗಂಧದ ಹುಡಿ ಮಿಶ್ರ ಮಾಡಿದರೆ ಅದರ ಔಷಧೀಯ ಗುಣಗಳು ಕಡಿಮೆಯಾಗುತ್ತವೆ) ಈ ಔಷಧವನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಸಂಪೂರ್ಣ ತಣ್ಣಗಾದ ಬಳಿಕ ಅದಕ್ಕೆ ಒಂದು ಚಮಚ ಜೇನು ತುಪ್ಪ ಸೇರಿಸಿ. ನಿಮ್ಮ ಮುಖದ ಕಲೆಗಳನ್ನು ಕಡಿಮೆ ಮಾಡಲು ಈ ಮದ್ದನ್ನು ಬೆಳಿಗ್ಗೆ ಮತ್ತು ಸಂಜೆ ೩೦-೪೦ ಮಿಲಿ ಸೇವಿಸಬೇಕು. ಇದನ್ನು ಕನಿಷ್ಟ ೨ ರಿಂದ ೩ ತಿಂಗಳುಗಳ ಕಾಲ ಸೇವನೆ ಮಾಡುವುದರಿಂದ ಕಲೆಗಳು ಕಡಿಮೆಯಾಗಿ ತ್ವಜೆ ಸಾಮಾಜ್ಞ ಬಣ್ಣಕ್ಕೆ ತಿರುಗುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು.
ಏಕೆಂದರೆ ಇದರಲ್ಲಿ ಮಿಶ್ರ ಮಾಡಿರುವ ಲಾವಂಚ ಬೇರು ನಮ್ಮ ದೇಹದಲ್ಲಿರುವ ರಕ್ತವನ್ನು ಶುದ್ಧ ಮಾಡುವ ಗುಣವನ್ನು ಹೊಂದಿದೆ. ಇದರಿಂದ ಚರ್ಮವು ಸಹಜ ವರ್ಣಕ್ಕೆ ಬದಲಾಗುತ್ತದೆ. ಸುಗಂಧ ಪಾಲ ಸಸ್ಯದ ಎಲೆಯ ಹುಡಿ ರಕ್ತವನ್ನು ಶುದ್ಧೀಕರಿಸುವುದರ ಜೊತೆಗೆ ಪಿತ್ತ ದೋಷವನ್ನೂ ಕಡಿಮೆ ಮಾಡುತ್ತದೆ. ಚರ್ಮದ ಕಲೆಗಳನ್ನು ನಿವಾರಿಸುವಲ್ಲಿ ಇದು ಬಹು ಉಪಕಾರಿ. ಶ್ರೀಗಂಧದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಇದು ನಮ್ಮ ತ್ವಚೆಗೆ ಬಹಳ ಉತ್ತಮ. ಚರ್ಮದ ಕಾಂತಿಯನ್ನೂ ಅಧಿಕಗೊಳಿಸುತ್ತದೆ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ