ಕಲೆಯ ಬಲೆಯೊಳಗೆ ‘ಭಾಗವತ’ ಕುಟುಂಬ
ಬದುಕು ಕಲೆಯಾಗಬೇಕು. ಆದರೆ ಬದುಕಿಗೆ ‘ಕಲೆ’ ಸೋಂಕಬಾರದು! ಎರಡೂ ವಾಕ್ಯಗಳಲ್ಲಿ ಬರುವ ‘ಕಲೆ’ ಶಬ್ದವು ಸ್ಫುರಿಸುವ ಅರ್ಥ, ಭಾವಗಳು ಭಿನ್ನ. ಬದುಕು ಕಲೆಯಾಗದಿದ್ದರೆ, ಕಲೆಯಾಗಿಸದಿದ್ದರೆ ಜಾಣ್ಮೆಯ ಒಳಸುರಿಗಳು ಮೌನವಾಗುತ್ತವೆ. ಇವು ಸದ್ದಾಗದಿದ್ದರೆ ‘ಇದ್ದೂ ಇಲ್ಲದಂತಿರುವುದು’ ಅಷ್ಟೇ.
ಬದುಕಿನಲ್ಲಿ ಕಲೆಯ ಮಿಳಿತ ಸುಲಭವಲ್ಲ. ಪಾರಂಪರಿಕ ಹಿನ್ನೆಲೆ, ಮನೆಯ ವಾತಾವರಣ, ಮನದ ಸಾಧ್ಯತೆ-ಸಿದ್ಧತೆ, ಪ್ರೀತಿ, ಆರಾಧನೆಗಳು ಪೂರಕ. ಎಷ್ಟೋ ಮಂದಿ ಗೊಣಗಾಡುವುದನ್ನು ಕೇಳಿದ್ದೇನೆ, “ಅಯ್ಯೋ, ನಮ್ಮ ಕಾಲಕ್ಕೆ ಸಾಕು. ಮಕ್ಕಳ ಕಾಲಕ್ಕೆ ಇದು ಬೇಡ,”. ಕಲಾನೋಟದಲ್ಲಿ ನೋಡಿದಾಗ ಈ ನಿಲುವು ಸಹ್ಯವಾಗುವುದಿಲ್ಲ. ಆದರೆ ದಶಕಕ್ಕೂ ಮಿಕ್ಕಿ ಕಲೆಯಲ್ಲಿ ತೊಡಗಿಸಿದ ಕಲಾವಿದರ ಅನುಭವ ಹೀಗಿರುವಾಗ ಅದರ ಹಿಂದಿನ ನೋವಿನ ಬದುಕು ಅರ್ಥವಾಗುತ್ತದೆ. ಆಗದಿದ್ದರೆ ಅರ್ಥ ಮಾಡಿಕೊಳ್ಳಬೇಕು.
ಯಕ್ಷಗಾನವನ್ನೇ ತೆಗೆದುಕೊಳ್ಳೋಣ. ಪ್ರಕೃತ ಸ್ಥಿತಿಯಲ್ಲಿ ಕುಟುಂಬವನ್ನು ಸಾಕಲು ಯಕ್ಷಗಾನಕ್ಕೆ ಕಷ್ಟವಾಗಲಾರದು. ಬಣ್ಣವನ್ನೇ ನಂಬಿದ ಎಷ್ಟೋ ಕುಟುಂಬಗಳಿಲ್ವಾ. ಅದನ್ನೇ ನೆಚ್ಚಿಕೊಂಡ ನೂರಾರು ಕಲಾವಿದರ ಬಾಳು ‘ತೊಂದರೆಯಿಲ್ಲ’ ಎನ್ನುವಷ್ಟು ಹಸನಾಗಿದೆ. ಇದು ಒಂದು ವಿಭಾಗದ ಕಲಾವಿದರ ಸ್ಥಿತಿ. ಮತ್ತೊಂದು ವಿಭಾಗಕ್ಕೆ ಹೊರಳಿದರೆ, ಮೇಳದ ತಿರುಗಾಟದ ಬಳಿಕ ಐದಾರು ತಿಂಗಳು ಮನೆಯಲ್ಲೇ ಕಳೆಯುವ (ಅವಕಾಶವಿಲ್ಲದೆ) ಕಲಾವಿದರು. ಇವರಿಗೆ ತಾರಾಮೌಲ್ಯ ಏನೆಂಬುದೇ ಗೊತ್ತಿಲ್ಲ. ಗುಂಪುಗಳು, ಇಸಂಗಳು, ಲಾಬಿಗಳ ಪರಿಚಯ.. ಊಹೂಂ. ಆಟ ಇಲ್ಲದ ಸಮಯದಲ್ಲಿ ಇತರ ಕೆಲಸಗಳನ್ನು ಮಾಡುತ್ತಾ ಜೀವಿಸುತ್ತಾರೆ. ಇವರಿಗೆ ‘ಯಕ್ಷಗಾನದ ಹೆಸರಿನಲ್ಲಿ’ ಏನೇನೋ ಮಾಡಲು ಗೊತ್ತಿಲ್ಲ, ಬರುವುದಿಲ್ಲ. ಈ ಎರಡೂ ವಿಭಾಗಗಳಿಗೆ ನಿಲುಕದ ಬೆರಳೆಣಿಕೆಯ ಕಲಾವಿದರು ವರುಷವಿಡೀ ಬ್ಯುಸಿ! ಖುಷಿಯ ವಿಚಾರ.
ವಿಷಯ ಎಲ್ಲೋ ಹೊರಳಿತಲ್ಲಾ. ಬದುಕಿನಲ್ಲಿ ಕಲೆ ಮಿಳಿತವಾಗಬೇಕು ಎನ್ನುವ ವಿಷಯದಲ್ಲಿ ತೊಡಗಿದ್ದೆ. ಅದು ಮಿಳಿತವಾಗದಿದ್ದರೆ ‘ಸಂಬಂಧ’ವೇ ಇಲ್ಲದಂತೆ ಇದ್ದುಬಿಡುತ್ತೇವೆ. ರಂಗದಲ್ಲಿದ್ದಷ್ಟು ಹೊತ್ತು ‘ಕಲಾವಿದ’ ಅಷ್ಟೇ. ರಂಗವಿಳಿದರೆ ಕಲೆಗೂ, ಕಲಾವಿದನಿಗೂ ಸಂಪರ್ಕವೇ ಇಲ್ಲ! ಈ ಮನಃಸ್ಥಿತಿಯನ್ನು ಕಲೆಯೂ ಸ್ವೀಕರಿಸುವುದಿಲ್ಲ. ಆದರೆ ನಮ್ಮೊಳಗಿನ ‘ಕಲಾವಿದ’ ಸದಾ ಜಾಗೃತನಾಗಿದ್ದರೆ ನಮಗರಿವಿಲ್ಲದೆ ಬದುಕೂ ಕಲೆಯಾಗುತ್ತದೆ. ಹೀಗೆ ಬದುಕನ್ನು ಕಲೆಯಾಗಿಸಿದ ಉದಾಹರಣೆ ‘ಪದ್ಯಾಣ ಕುಟುಂಬ’ ಮುಂದಿದೆ.
ಪದ್ಯಾಣ ಕುಟುಂಬ - ಎಂದಾಕ್ಷಣ ಅದರ ಹಿರಿದಾದ ವ್ಯಾಪ್ತಿ ಧುತ್ತೆಂದು ನಿಲ್ಲುತ್ತದೆ. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಒಂದೆಡೆ ಉಲ್ಲೇಖಿಸುತ್ತಾರೆ, “ಪದ್ಯಾಣ ಕುಟುಂಬವು ವಿದ್ಯಾವಂತರ ನೆಲೆವೀಡು. ಇಲ್ಲಿ ಉನ್ನತ ವ್ಯಾಸಂಗವನ್ನು ಗೈದವರಿದ್ದಾರೆ. ಸರಕಾರ ಮತ್ತು ಸಾರ್ವಜನಿಕ ವಲಯಗಳಲ್ಲಿ ಉನ್ನತೋನ್ನತವಾಗಿರುವ ಹುದ್ದೆಗಳನ್ನು ಅಲಂಕರಿಸಿದವರಿದ್ದಾರೆ. ಅಧ್ಯಾಪಕರಿದ್ದಾರೆ. ಸಂಗೀತ ಶಿಕ್ಷಕರಿದ್ದಾರೆ. ಯಕ್ಷಗಾನ ಕಲಾವಿದರು - ಗುರುಗಳು, ಸಂಗೀತಗಾರರು, ಗಮಕಿಗಳು, ಕಲಾಭಿಮಾನಿಗಳು ಮತ್ತು ಕಲಾ ಪ್ರೋತ್ಸಾಹಕರಿರುವ ಈ ಕುಟುಂಬವು ಸಾಂಸ್ಕøತಿಕವಾಗಿ ಔನ್ನತ್ಯವನ್ನು ಹೊಂದಿದೆ. ಸಂಗೀತ, ಯಕ್ಷಗಾನಕ್ಕೆ ಪಾರಂಪರಿಕಾ ಕೊಡುಗೆಯನ್ನು ನೀಡಿರುವ ಕುಟುಂಬವಿದು.”
ಈ ಕುಟುಂಬದ ಒಂದು ಕವಲಿಗೆ ಯಕ್ಷಗಾನ ಎನ್ನುವುದು ಜೀವ-ಭಾವ. ಭಾಗವತ ಪುಟ್ಟು ನಾರಾಯಣ ಭಾಗವತರ ಕುಟುಂಬದ ಎಲ್ಲಾ ಸದಸ್ಯರಲ್ಲೂ ಕಲಾವಾಹಿನಿ ಹರಿದಿದೆ. ಭಾಗವತಿಕೆ, ಚೆಂಡೆ, ಮದ್ದಳೆ, ಸಂಗೀತ, ಭಜನೆ, ನೃತ್ಯ, ಮೃದಂಗ, ವೇಷಗಾರಿಕೆ.. ಹೀಗೆ ಒಂದೊಂದು ಆಸಕ್ತಿಗಳು. ಈಚೆಗೆ ಮಂಗಳೂರಿನ ಪುರಭವನದಲ್ಲಿ ಪದ್ಯಾಣ ಗಣಪತಿ ಭಟ್ಟರ ಅರುವತ್ತರ ಸಂಭ್ರಮದ ‘ಪದಯಾನ’ ಜರುಗಿತ್ತು. ಸಂಪನ್ನವಾದ ‘ಪದ್ಯಾಣ ವೈಭವ’ವು ಪ್ರೇಕ್ಷಕರಿಗೆ ಮುದ ನೀಡಿತ್ತು. “ನಾವು ಹೀಗಿದ್ದೇವೆ, ನೀವು?” ಎನ್ನುವ ಸಂದೇಶವನ್ನೂ ರವಾನಿಸಿತ್ತು.
ಪುಟ್ಟು ನಾರಾಯಣ ಭಾಗವತರ ಹಿರಿಯ ಪುತ್ರ ತಿರುಮಲೇಶ್ವರ ಭಟ್. ನಾರಾಯಣ, ಪರಮೇಶ್ವರ, ಗಣಪತಿ, ಗೋಪಾಲಕೃಷ್ಣ ಮತ್ತು ಜಯರಾಮ – ಐವರು ಚಿರಂಜೀವಿಗಳು. ಮಧ್ಯಮನಾದ ಗಣಪತಿ, ಈಗ ಪ್ರಸಿದ್ಧ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ಟರು. ಇವರ ಚಿಕ್ಕಪ್ಪ ಹಿಮ್ಮೇಳದ ಭಾಷಾವಿದ ಪದ್ಯಾಣ ಶಂಕರನಾರಾಯಣ ಭಟ್. ಪದಯಾನದಲ್ಲಿ ಇಡೀ ಕುಟುಂಬದ ಕಲಾ ವೈಭವ ಸಾಕಾರಗೊಂಡಿತ್ತು. “ಯಕ್ಷಗಾನವು ನಮ್ಮನ್ನು ಮನುಷ್ಯರನ್ನಾಗಿ ಮಾಡಿದೆ. ಮನುಷ್ಯತ್ವವನ್ನು ತುಂಬಿದೆ,” ಎಂದು ಸ್ವಸ್ತಿಕ್ ಪದ್ಯಾಣ ಅಭಿಮಾನದಿಂದ ಆಡಿಕೊಂಡರು. ಇದೇನೂ ಗಂಟಲ ಮೇಲಿನ ಮಾತಲ್ಲ.
‘ಪದ್ಯಾಣ ವೈಭವ’ದಲ್ಲಿ ಭಾಗವತ ಪದ್ಯಾಣ ಗಣಪತಿ ಭಟ್ಟರು ಕೇಂದ್ರ ಬಿಂದು. ಇವರ ನಾಲ್ವರು ಸಹೋದರರಿಗೂ ಯಕ್ಷಗಾನದ ಹಿಮ್ಮೇಳ ಕರಗತ. ಇವರೊಂದಿಗೆ ಚಿಕ್ಕಪ್ಪ ಶಂಕರನಾರಾಯಣ ಭಟ್, ಇನ್ನೋರ್ವ ಚಿಕ್ಕಪ್ಪನ ಮಗ ಚೈತನ್ಯಕೃಷ್ಣ ಪದ್ಯಾಣ ಇವರೂ ಸೇರಿಕೊಂಡಂತೆ ಗದಾಯುದ್ಧ ಪ್ರಸಂಗದ ‘ಕಪಟ ನಾಟಕ ರಂಗ’ ಪದ್ಯದ ಪ್ರಸ್ತುತಿ ಕಲಾಪದ ಹೈಲೈಟ್. ಚೆಂಡೆ, ಮದ್ದಳೆಯಲ್ಲಿ ಪದ್ಯಾಣ ಗೋಪಾಲಕೃಷ್ಣ ಭಟ್ (ಗಣಪತಿ ಭಟ್ಟರ ಚಿಕ್ಕಪ್ಪ), ಶಂಕರನಾರಾಯಣ ಭಟ್; ಮದ್ದಳೆಯಲ್ಲಿ ಸಹೋದರರಾದ ಪರಮೇಶ್ವರ ಭಟ್, ಗೋಪಾಲಕೃಷ್ಣ ಭಟ್, ಜಯರಾಮ ಭಟ್; ಚಕ್ರತಾಳದಲ್ಲಿ ಹಿರಿಯಣ್ಣ ನಾರಾಯಣ ಭಟ್.
ಪದ್ಯಾಣರ ಪತ್ನಿ ಶೀಲಾಶಂಕರಿ. ಸೌಂದರ್ಯಲಹರಿಯನ್ನು ವಿವಿಧ ರಾಗಗಳಲ್ಲಿ ಪ್ರಸ್ತುತಪಡಿಸಿದ್ದರು. ಅರವಿಂದ ಪದ್ಯಾಣ, ಅಜಿತ್ ಪದ್ಯಾಣ, ತಿರುಮಲೇಶ್ವರೀ.. ಹೀಗೆ ವಿವಿಧ ಸದಸ್ಯರಿಂದ ವೈವಿಧ್ಯ ಕಲಾ ಪ್ರಸ್ತುತಿ. ಗಮಕ ವಾಚನದಲ್ಲಿ ಗಣಪತಿ ಪದ್ಯಾಣ ಪ್ರಸಿದ್ಧರು. ಮಾನಸ ರಾಮಚಂದ್ರ ಭಟ್ ಸಂಗೀತ ವಿದುಷಿ, ಅಧ್ಯಾಪಿಕೆ.
ಕುಟುಂಬದ ಒಬ್ಬೊಬ್ಬ ಸದಸ್ಯರಲ್ಲಿ ಕಲೆಯ ಸ್ಪರ್ಶವಿದೆ. ಬಹುತೇಕ ಎಲ್ಲರೂ ಬೇರೆ ಬೇರೆ ಉದ್ಯೋಗದಲ್ಲಿರುವವರು. ತಾವೆಲ್ಲಿ ನೆಲೆಯಾದರೂ ಅಲ್ಲಿ ಕಲೆಯ ಬಲೆಯನ್ನು ನೇಯ್ದು ಅದರೊಳಗೆ ಬದುಕನ್ನು ರೂಪಿಸಿರುವುದು ಹೆಗ್ಗಳಿಕೆ. ಪದಯಾನದಲ್ಲಿ ಪದ್ಯಾಣರ ಸೊಸೆ ತಿರುಮಲೇಶ್ವರೀ, “ನಾನು ಈ ಮನೆಯ ಸೊಸೆಯಾಗಿ ಬಂದಿರುವುದು ಹೆಮ್ಮೆಯೆನಿಸುತ್ತದೆ,” ಎಂದರು. ಪ್ರಕೃತ ಕಾಲಸ್ಥಿತಿಯಲ್ಲಿ ಹೀಗೆನ್ನಲು ಎಷ್ಟು ಮಂದಿ ಸೊಸೆಯಂದಿರಿಗೆ ಧೈರ್ಯ ಬಂದೀತು! ಇದು ಪದ್ಯಾಣ ಕುಟುಂಬ ಹಿರಿಮೆ. ಕಲೆಯ ಗರಿಮೆ.
(ಚಿತ್ರ : ದೇವಾನಂದ ಭಟ್)