ಕಲ್ಮರ ಎಂಬ ಹಳೆಯ ಮರದ ಪಳೆಯುಳಿಕೆ

ಕಲ್ಮರ ಎಂಬ ಹಳೆಯ ಮರದ ಪಳೆಯುಳಿಕೆ

ನಿಮಗೆ ಹೊಂಡ ತೋಡುವಾಗ ಸಿಗುವ ಕಲ್ಲು ಮಣ್ಣುಗಳ ನಡುವೆ, ಹಳೆಯ ಮರದ ತುಂಡು ಸಿಗಲೂ ಬಹುದು, ಆ ಮರದ ತುಂಡು ಕಲ್ಲಿನಂತೆ ಗಟ್ಟಿಯಾಗಿರುತ್ತದೆ. ನೋಡಲು ಮರದ ಆಕಾರ, ರಚನೆ ಹೊಂದಿದ್ದರೂ ಕಲ್ಲಿನ ರೀತಿ ಆಗಿರುತ್ತದೆ. ಏಕೆ ಹೀಗಾಗುತ್ತದೆ? ಅದು ಯಾಕೆ ಹಾಳಾಗಲಿಲ್ಲ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಈ ಲೇಖನವನ್ನು ನೀವು ಓದಲೇ ಬೇಕು.

ಕಲ್ಮರ ಅಥವಾ ಹಳೆಯ ಮರದ ಪಳೆಯುಳಿಕೆ (Fossil Wood) ಹೇಗೆ ನಿರ್ಮಾಣವಾಗುತ್ತದೆ ಎಂಬುದು ಬಹಳ ಕುತೂಹಲಕರವಾದ ಸಂಗತಿ. ಯಾವುದೇ ಪ್ರಾಣಿ ಅಥವಾ ಸಸ್ಯ ಜೀವ ಕಳೆದುಕೊಂಡ ಬಳಿಕ ಕೊಳೆಯುವುದಕ್ಕೆ ಪ್ರಾರಂಭವಾಗುತ್ತದೆ. ಇದಕ್ಕೆ ಬಹಳಷ್ಟು ಸೂಕ್ಷ್ಮ ಜೀವಿಗಳು ಸಹಾಯ ಮಾಡುತ್ತವೆ. ಕೆಲವೊಂದು ಸಮಯದಲ್ಲಿ ವಾತಾವರಣ ಅಥವಾ ಮಣ್ಣು ಆ ದೇಹ ಅಥವಾ ಸಸ್ಯವನ್ನು ಕೊಳೆಯಲು ಬಿಡದೇ ಗಟ್ಟಿಯಾದ ಶಿಲೆಯಾಗಿ ಮಾಡಿ ಬಿಡುತ್ತದೆ. ನಾವು ಮರಗಳು ಕಲ್ಲಾಗುವ ಪ್ರಕ್ರಿಯೆಯ ಬಗ್ಗೆ ಗಮನಹರಿಸುವುದಾದರೆ,

ಗಿಡ ಮರಗಳಿಗೂ ಜೀವವಿದೆ, ಅವುಗಳು ಬೆಳೆಯುತ್ತವೆ. ಹೂ ಬಿಡುತ್ತವೆ, ಬೀಜ ಹುಟ್ಟುತ್ತದೆ ಮತ್ತು ಇನ್ನೊಂದು ಸಸ್ಯದ ಬೆಳವಣಿಗೆಗೆ ಕಾರಣವಾಗುತ್ತದೆ. ಒಂದು ಕಾಲದಲ್ಲಿ ಜೀವಂತವಾಗಿದ್ದ ಮರದ ಜೀವಕೋಶಗಳ ಜೀವ ರಸ ಹೇಗೆ ಬತ್ತಿ ಹೋಗುತ್ತದೆ? ಜೀವದಿಂದ ನಳನಳಿಸುತ್ತಿದ್ದ ಮರವೊಂದು ಕಲ್ಲಾಗಿ ಪರಿವರ್ತನೆಯಾವುದುದು ಹೇಗೆ? ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಲು ಹೋದಾಗ, ಈ ಭೂಮಿಯಲ್ಲಿ ಹುಟ್ಟಿದ ಪ್ರಾಣಿ ಅಥವಾ ಸಸ್ಯ ಕೊನೆಗೆ ಸತ್ತು ಪಂಚಭೂತಗಳಲ್ಲಿ ಲೀನವಾಗುವುದು ಪ್ರಕೃತಿಯ ಸಹಜ ನಿಯಮ. ಕೆಲವೊಮ್ಮೆ ಈ ಕ್ರಮದಲ್ಲಿ ವ್ಯತ್ಯಾಸವಾಗಿ ಭೂತಕಾಲದಲ್ಲಿ ನಾವೆಲ್ಲಾ ಬದುಕಿದ್ದೆವು ಎಂಬುವುದನ್ನು ತಿಳಿಸಲು ಈ ಸಸ್ಯಗಳ ಪಳೆಯುಳಿಕೆಗಳು ಉಳಿದು ಬಿಡುತ್ತವೆ. ಭೂಮಿಯ ಆಳದಲ್ಲಿ ಹುದುಗಿ ಹೋದ ಈ ಪಳೆಯುಳಿಕೆಗಳು ಮುಂದೆ ಯಾವತ್ತಾದರೂ ಭೂಮಿಯ ಉತ್ಖತನ ಮಾಡಿದ ಸಂದರ್ಭದಲ್ಲಿ ಎದ್ದು ಹೊರಗೆ ಬರುತ್ತದೆ. ಹಳೆಯ ಮರಗಳ ತುಂಡು. ಎಲೆ, ಹೂವಿನ ಪಡಿಯಚ್ಚುಗಳು ನಮಗೆ ಸಿಗುತ್ತವೆ. 

ಪ್ರಾಣಿಗಳಾದರೆ ಅವುಗಳ ಮೂಳೆಗಳು, ಚಿಪ್ಪುಗಳು, ಹಲ್ಲುಗಳು ಸಿಗುತ್ತವೆ. ತಮಿಳುನಾಡು ಬಳಿಯ ಪಾಂಡಿಚೇರಿಯ ತಿರವಕ್ಕರೈ ಎಂಬ ಊರಿನಲ್ಲಿ ಈ ರೀತಿಯ ಹಲವಾರು ಕಲ್ಮರಗಳು ಸಿಕ್ಕಿವೆ. ಸಸ್ಯಾವಶೇಷವೆಂದರೆ ಹಿಂದೆ ಬದುಕಿದ್ದ ಸಸ್ಯ ಅಥವಾ ಸಸ್ಯದ ಯಾವುದಾದರೊಂದು ಭಾಗ ಭೂಮಿಯ ಶಿಲೆಯಲ್ಲಿ ನೈಜ ರೀತಿಯಲ್ಲಿ ಸುರಕ್ಷಿತವಾಗಿದ್ದರೆ ಅದನ್ನು ಸಸ್ಯಾವಶೇಷ (Plant Fossil) ಎಂದು ಕರೆಯುತ್ತಾರೆ. 

ಪುರಾತನ ಕಾಲದಲ್ಲಿ ಈ ನಮ್ಮ ಭೂಮಿಯು ಹೀಗೇ ಇಂದಿನಂತೆ ಇರಲಿಲ್ಲ. ಕಾಲಕ್ರಮೇಣ ಹಲವಾರು ಬದಲಾವಣೆಗಳು ಆಗುತ್ತಲೇ ಬಂದವು. ಭೂಮಿಯ ಕೆಲವು ಭಾಗಗಳು ನೀರಿನಲ್ಲಿ ಮುಳುಗಿದವು. ಕೆಲವು ಮುಳುಗಿದ್ದ ಭಾಗಗಳು ಮೇಲಕ್ಕೆ ಎದ್ದು ಬಂದವು. ಇದರಿಂದಾಗಿ ಭೂಮಿಯ ಮೇಲಿದ್ದ ಕಲ್ಲು, ಮಣ್ಣು, ಸಸ್ಯಗಳ ಅವಶೇಷಗಳು ಕೊಚ್ಚಿ ಹೋಗಿ, ಸಾಗರ, ಸರೋವರಗಳ ಅಡಿಯಲ್ಲಿ ಮಡ್ಡಿಯಾಗಿ ಶೇಖರವಾದವು. ಈ ಮಡ್ಡಿಗಳು ಕಾಲಾನುಕ್ರಮೇಣ ಗಟ್ಟಿಯಾಗಿ ಮರಳು ಶಿಲೆಗಳಾಗುವಾಗ ಅವುಗಳ ನಡುವೆ ಸಿಲುಕಿಕೊಂಡ ಸಸ್ಯ, ಪ್ರಾಣಿಗಳ ಅವಶೇಷಗಳು ಪಳೆಯುಳಿಕೆ (Fossil) ಗಳಾಗಿ ಪರಿವರ್ತನೆಯಾದುವು. ಗಟ್ಟಿಯಾಗಿದ್ದ ಮರದ, ಸಸ್ಯದ ಭಾಗಗಳು ಕಲ್ಲಿನ ರೀತಿ ಬದಲಾದವು. ಆದರೆ ಸಸ್ಯದ ಧೃಢವಲ್ಲದ ಭಾಗಗಳಾದ ಹೂವು, ಎಲೆಗಳು, ಪಾಚಿ ಸಸ್ಯಗಳು ಪಳೆಯುಳಿಕೆಗಳಾಗಿ ಉಳಿದುಕೊಳ್ಳಲಿಲ್ಲ.  

ಸಸ್ಯಗಳ ಗಟ್ಟಿ ಭಾಗಗಳು ಮೊದಲಿನಂತೆ ಉಳಿದುಕೊಂಡಿದ್ದರೆ ಅವು ಪಳೆಯುಳಿಕೆಗಳಾಗುತ್ತವೆ. ಸಾವಿರಾರು ವರ್ಷಗಳ ಹಿಂದೆ ಭೂಮಿಯಲ್ಲಿ ಹೂತು ಹೋಗಿದ್ದ ಸಸ್ಯಗಳ ಭಾಗಗಳು ಕೊಳೆತು ಹೋಗುವುದರ ಬದಲು ಭೂಮಿಯಲ್ಲಿರುವ ಶಿಲೆಗಳ ನಡುವೆ ಒತ್ತಡಕ್ಕೆ ಸಿಲುಕಿ ಪಡಿಯಚ್ಚುಗಳಾಗಿ ಬದಲಾಗುತ್ತವೆ. 

ಶಿಲೀಕರಣ (Petrifaction) ಎಂಬ ಪ್ರಕ್ರಿಯೆಯಿಂದ ಪುರಾತನ ಮರಗಳ ಭಾಗಗಳು ಕಲ್ಲಾಗುತ್ತವೆ. ಶಿಲೆಗಳ ಪದರಗಳಲ್ಲಿ ಸಸ್ಯದ ಮೃದು ಭಾಗಗಳಾದ ಹೂವು, ಎಲೆ ಮೊದಲಾದುವುಗಳು ಮುದ್ರೆಯ ರೂಪದಲ್ಲಿ ಪಡಿಯಚ್ಚು ಮೂಡುವುದು, ಮರಳು ಶಿಲೆಗಳ ಮಧ್ಯೆ ಸಿಕ್ಕಿಕೊಂಡ ಸಸ್ಯಗಳು ಒತ್ತಡದ ಪರಿಣಾಮವಾಗಿ ಪಡಿಯಚ್ಚುಗಳಾಗಿ ಬದಲಾಗುವುದು ಇವೆಲ್ಲಾ ನಿಸರ್ಗದಲ್ಲಾಗುವ ಸಹಜ ಪರಿವರ್ತನೆಗಳು. 

ಪಾಂಡಿಚೇರಿಯ ತಿರುವಕ್ಕರೈನಲ್ಲಿ ಕಂಡು ಬಂದಿರುವ ಮರದ ಶಿಲಾ ದಿಮ್ಮಿಗಳು ಶಿಲೀಕರಣದ ಪಳೆಯುಳಿಕೆಗಳು. ಜೀವ ಕಳೆದುಕೊಂಡ ಸಸ್ಯ ಮಣ್ಣಿಗೆ ಸೇರಿದಾಗ ಕೊಳೆತು ಅದು ಮಣ್ಣಲ್ಲಿ ಬೆರೆತು ಹೋಗುತ್ತದೆ. ಕೆಲವು ಸಮಯದಲ್ಲಿ ಸಸ್ಯಗಳು ಅಪ್ಪಿತಪ್ಪಿ ಸರೋವರದ ಜೌಗು ಪ್ರದೇಶಗಳಲ್ಲಿ ಬಿದ್ದು ಮಣ್ಣಿನಲ್ಲಿ ಸೇರಿ ಬಿಡುತ್ತದೆ. ಆಗ ಕೆಲವು ಸಲ ಅವುಗಳು ಕೊಳೆತು ಹೋಗದೇ ಸಮಾಧಿಯಾಗಿಬಿಡುತ್ತದೆ. ಈ ಸಮಾಧಿಯಾದ ಸಸ್ಯಗಳಿರುವ ಪರಿಸರದಲ್ಲಿ ಆಮ್ಲಜನಕದ ಕೊರತೆಯಿರುವುದರಿಂದ ಹಾಗೂ ನೀರಿನಲ್ಲಿ ವಿಷಯುಕ್ತ ಪದಾರ್ಥಗಳು ಬೆರೆತಿದ್ದರೆ, ನೀರಿನಲ್ಲಿರುವ ಖನಿಜಗಳು ಸಮಾಧಿಯಾದ ಸಸ್ಯಗಳ ಜೀವಕೋಶಗಳ ಒಳಗೆ ನುಸುಳಿ ಅಲ್ಲಿ ಮೃತ ಸಸ್ಯವು ಸಾವಯವ ವಸ್ತುಗಳನ್ನು ಕಳೆದುಕೊಂಡು ಖನಿಜಗಳಿಂದ ಗಟ್ಟಿಯಾಗಿ ಬಿಡುತ್ತದೆ. ಆದರೆ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗಿರುವುದಿಲ್ಲ. ಹೀಗೆ ಒಂದು ಸಸ್ಯವು ಸತ್ತ ಬಳಿಕವೂ ಶಿಲಾರೂಪದಲ್ಲಿ ಉಳಿದುಕೊಳ್ಳುವ ಕ್ರಿಯೆಯನ್ನು ಶಿಲೀಕರಣವೆಂದು ಕರೆಯುತ್ತಾರೆ. 

ಸಸ್ಯಗಳು ಕಲ್ಲಾಗಿ ಬದಲಾವಣೆಗೊಂಡಂತಹ ಬಹಳ ಪ್ರದೇಶಗಳು ನಮ್ಮ ಪ್ರಪಂಚದಲ್ಲಿ ಕಾಣಸಿಗುತ್ತವೆ. ಸ್ಕಾಟ್ಲೆಂಡ್ ನಲ್ಲಿ ಕಲ್ಲಾಗಿರುವ ಜೊಂಡು ಸಸ್ಯಗಳು, ಉತ್ತರ ಅಮೇರಿಕಾದ ‘ಯೆಲ್ಲೋ ಸ್ಟೋನ್ ನ್ಯಾಶನಲ್ ಪಾರ್ಕ್' ನಲ್ಲಿ ಕಲ್ಲಾದ ಮರಗಳ ಶಿಲಾ ಉದ್ಯಾನವನವನ್ನು ನೋಡಬಹುದು. ಅಮೇರಿಕಾದ ಅರಿಜೋನಾ ಪ್ರಾಂತ್ಯದಲ್ಲೂ ಕಲ್ಮರಗಳ ಸಮೂಹಗಳು ಕಾಣಸಿಗುತ್ತವೆ. ಪಾಂಡಿಚೇರಿಯ ತಿರುವಕ್ಕರೈ ನಲ್ಲಿರುವ ರಾಷ್ಟ್ರೀಯ ಮರದ ಪಳೆಯುಳಿಕೆಗಳ ಉದ್ಯಾನವನ (National Fossil Wood Park) ಕ್ಕೆ ಭೇಟಿ ನೀಡಿದರೆ ನಿಮಗೆ ಹಲವಾರು ಮರಗಳು ಶಿಲೆಯಾದ ಪಳೆಯುಳಿಕೆಗಳನ್ನು ನೋಡಲು ಸಿಗುತ್ತದೆ.  

ಶಿಲೀಕರಣದಿಂದ ಸಸ್ಯಗಳು ಕಲ್ಲಾಗಿ ಪರಿವರ್ತನೆಯಾಗುವ ವಿಷಯವನ್ನು ಇನ್ನೂ ಸರಿಯಾಗಿ ತಿಳಿದುಕೊಳ್ಳಲಾಗಿಲ್ಲ. ಆದರೆ ಸಂಶೋಧನೆಗಳ ಪ್ರಕಾರ ಸಸ್ಯದ ಪ್ರತಿಯೊಂದು ಜೀವಕೋಶಗಳ ಪ್ರತಿ ಅಣುವಿನ ಜಾಗದಲ್ಲಿ ಈ ಖನಿಜಗಳು ತುಂಬುವುದರಿಂದ ಅದು ಕಲ್ಲಾಗಿ ಪರಿವರ್ತನೆಯಾಗುತ್ತವೆ ಎಂದು ಅಭಿಪ್ರಾಯ ಪಡಲಾಗಿದೆ. ನಮ್ಮ ನಡುವೆಯೇ ಹಲವಾರು ಕಲ್ಮರಗಳು ಕಾಣಸಿಗಬಹುದು. ವರ್ಷಗಳು ಕಳೆದಂತೆ ಕೆಲವು ಮರಗಳು ಬಾಹ್ಯ ಒತ್ತಡದ ಪರಿಣಾಮವಾಗಿ ಕಲ್ಲಿನಂತೆ ಗಟ್ಟಿಯಾಗಿ ಬಿಡುತ್ತವೆ. ಇನ್ನೂ ಸಂಶೋಧನೆಗಳು ಆಗಲು ಬಾಕಿ ಇದೆ. ನೋಡುವ ಮುಂದೆ ಏನಾಗುವುದೆಂದು…

(ಆಧಾರ)

ಚಿತ್ರದಲ್ಲಿ ತಿರುವಕ್ಕರೈ ರಾಷ್ಟ್ರೀಯ ಮರದ ಪಳೆಯುಳಿಕೆಗಳ ಉದ್ಯಾನದ ದೃಶ್ಯಗಳನ್ನು ಗಮನಿಸಬಹುದು.

-ಚಿತ್ರ ಕೃಪೆ: ಅಂತರ್ಜಾಲ ತಾಣ