ಕಲ್ಲಂಗಡಿ ಖರೀದಿಸಿದ ಸೋಮಾರಿ ಕರಡಿ ಮರಿಗಳು

ಕಲ್ಲಂಗಡಿ ಖರೀದಿಸಿದ ಸೋಮಾರಿ ಕರಡಿ ಮರಿಗಳು

ಒಂದು ಕರಡಿ ಕುಟುಂಬದಲ್ಲಿ ಇಬ್ಬರು ಸೋದರರಿದ್ದರು. ಇಬ್ಬರೂ ಶುದ್ಧ ಸೋಮಾರಿಗಳು. ಅಣ್ಣ ಕರಡಿಯನ್ನು "ಹಿರಿಯ ಸೋಮಾರಿ” ಮತ್ತು ತಮ್ಮ ಕರಡಿಯನ್ನು "ಕಿರಿಯ ಸೋಮಾರಿ" ಎಂದು ತಾಯಿಕರಡಿ ಕರೆಯುತ್ತಿದ್ದಳು.

ಬೇಸಗೆ ಶುರುವಾಯಿತು. ವಾತಾವರಣ ಬಿಸಿಯಾಗಿ ಶುಷ್ಕವಾಯಿತು. ಸಿಕಾಡ ಕೀಟಗಳು ಮರಗಳಲ್ಲಿ ಸದ್ದು ಮಾಡುತ್ತಿದ್ದವು. ತಾಯಿಕರಡಿಗೆ ಸಣ್ಣಮನೆಯಲ್ಲಿ ಬಹಳ ಸೆಕೆಯಾಯಿತು.

ಆಗ ಕಿರಿಯ ಸೋಮಾರಿ ಕರಡಿ ಹೇಳಿತು, “ಇಂತಹ ಸುಡುಬಿಸಿಲಿನ ದಿನ ತಿನ್ನಲು ಕಲ್ಲಂಗಡಿ ಹಣ್ಣಿದ್ದರೆ ಚೆನ್ನ.” ಹಿರಿಯ ಸೋಮಾರಿ ಕರಡಿ ದನಿಗೂಡಿಸಿತು. “ಹೌದು ಹೌದು. ಕಲ್ಲಂಗಡಿ ಸಿಹಿಸಿಹಿ. ಅದನ್ನು ತಿಂದರೆ ನಮ್ಮ ಬಾಯಾರಿಕೆ ತಣಿಯುತ್ತದೆ. ಆದರೆ ಅದನ್ನು ಖರೀದಿಸಿ ತರುವವರು ಯಾರು?"

ಕಿರಿಯ ಸೋಮಾರಿ ಕರಡಿ ಹೇಳಿತು, “ನೀನು ನನಗಿಂತ ದೊಡ್ಡವನು. ಹಾಗಾಗಿ ನೀನೇ ಹೋಗಿ ತರಬೇಕು.” ಹಿರಿಯ ಸೋಮಾರಿ ಕರಡಿ ಹೇಳಿತು, “ನೀನು ನನಗಿಂತ ವೇಗವಾಗಿ ಓಡುತ್ತಿ. ಹಾಗಾಗಿ ನೀನೇ ಹೋಗಿ ತರಬೇಕು.”

ಅವರಿಬ್ಬರೂ ನೀನು-ತಾನೆಂದು ಹೀಗೆ ವಾದ ಮಾಡುತ್ತಿರುವಾಗ, ತಾಯಿಕರಡಿ “ಸುಮ್ಮನಿರಿ" ಎಂದು ಗದರಿಸಿತು. “ಹೀಗೆ ವಾದ ಮಾಡಬೇಡಿ. ನಿಮಗೆ ನಿಜವಾಗಿಯೂ ಕಲ್ಲಂಗಡಿ ಹಣ್ಣು ಬೇಕಾದರೆ, ಇಬ್ಬರೂ ಜೊತೆಯಾಗಿ ಹೋಗಿ ಒಂದು ಹಣ್ಣು ತನ್ನಿ. ನೀವು ಸೋಮಾರಿಗಳಾಗಿ ಕೂತರೆ ನಿಮಗೆ ಹಣ್ಣು ಸಿಗದು."

ಇಬ್ಬರು ಕರಡಿ ಸೋದರರಿಗೂ ಕಲ್ಲಂಗಡಿ ಬೇಕೇ ಬೇಕಾಗಿತ್ತು. ಆದ್ದರಿಂದ ಒಂದು ಹಣ್ಣು ತರಲು ಇಬ್ಬರೂ ಹೊರಟರು. ಹಸುರು ಬಯಲು ಮತ್ತು ಕಾಡಿನಲ್ಲಿ ನಡೆದು ಹೋಗಿ, ಅಜ್ಜ ಆಡಿನ ಕಲ್ಲಂಗಡಿ ತೋಟ ತಲಪಿದರು.

ಎಂತಹ ವಿಶಾಲ ಕಲ್ಲಂಗಡಿ ತೋಟ! ಅಲ್ಲಿ ಉದ್ದವಾದ ಮತ್ತು ದಪ್ಪವಾದ ಕಲ್ಲಂಗಡಿ ಬಳ್ಳಿಗಳಲ್ಲಿ ದೊಡ್ಡದೊಡ್ಡ ಹಣ್ಣುಗಳು ಬೆಳೆಯುತ್ತಿದ್ದವು.

ಅಜ್ಜ ಆಡಿಗೆ ಹಿರಿಯ ಸೋಮಾರಿ ಹೇಳಿತು, "ದಯವಿಟ್ಟು ನನಗೆ ದೊಡ್ಡ ಕಲ್ಲಂಗಡಿ ಕೊಡಿ.” ಕಿರಿಯ ಸೋಮಾರಿ ಹೇಳಿತು, "ದಯವಿಟ್ಟು ನನಗೆ ಸಿಹಿ ಕಲ್ಲಂಗಡಿ ಕೊಡಿ.” “ಖಂಡಿತ ಕೊಡೋಣ" ಎನ್ನುತ್ತಾ ಅಜ್ಜ ಆಡು ತೋಟದಲ್ಲಿ ಅಲ್ಲಿಇಲ್ಲಿ ಹುಡುಕಿತು. ಕೊನೆಗೆ ದೊಡ್ಡದಾದ ಮತ್ತು ಸಿಹಿಯಾದ ಕಲ್ಲಂಗಡಿ ಹಣ್ಣೊಂದನ್ನು ತೆಗೆದು ಕೊಟ್ಟಿತು.  

ಹಿರಿಯ ಸೋಮಾರಿ, ಅಜ್ಜ ಆಡಿಗೆ ಕಲ್ಲಂಗಡಿಯ ಬೆಲೆ ಪಾವತಿಸಿ, ಅದನ್ನು ಹೊತ್ತು ಮನೆಯ ಕಡೆಗೆ ನಡೆಯ ತೊಡಗಿತು. ಸ್ವಲ್ಪ ಹೊತ್ತಿನಲ್ಲೇ ಅದು ಬಹಳ ಭಾರವಿದೆಯೆಂದು ದೂರಿತು. ತಮ್ಮ ಕರಡಿ ಕಲ್ಲಂಗಡಿಯನ್ನು ಹೊತ್ತು ಸ್ವಲ್ಪ ದೂರ ನಡೆಯಬೇಕೆಂದಿತು.

ಅದರಂತೆ ತಮ್ಮ ಕರಡಿ ಅಸಮಾಧಾನದಿಂದಲೇ ಕಲ್ಲಂಗಡಿ ಹೊತ್ತು ಸಾಗಿತು. ಕೆಲವೇ ಹೆಜ್ಜೆ ನಡೆದ ತಮ್ಮ ಕರಡಿ ಕಲ್ಲಂಗಡಿ ಬಹಳ ಭಾರವಿದೆ ಎನ್ನುತ್ತಾ ಅದನ್ನು ನೆಲಕ್ಕೆ ಹಾಕಿತು. ಅಣ್ಣ ಕರಡಿ ಅದನ್ನು ಹೊತ್ತು ನಡೆಯಬೇಕೆಂದು ವಾದಿಸಿತು.

ಅಣ್ಣ ಮತ್ತು ತಮ್ಮ ಕರಡಿ ಬಹಳ ಹೊತ್ತು ಜಗಳ ಮಾಡಿದವು. ಕೊನೆಗೊಮ್ಮೆ ತಮ್ಮ ಕರಡಿ ಅದನ್ನು ತಳ್ಳಿದಾಗ, ಕಲ್ಲಂಗಡಿ ಹಣ್ಣು ಮುಂದಕ್ಕೆ ಉರುಳಿತು. “ಅಣ್ಣ, ಇಲ್ಲಿ ನೋಡು. ಕಲ್ಲಂಗಡಿಯನ್ನು ನೆಲದಲ್ಲಿ ಉರುಳಿಸುತ್ತಾ ಮನೆಗೆ ಒಯ್ಯೋಣ” ಎಂದಿತು.

ಹೀಗೆನ್ನುತ್ತಾ ಅಣ್ಣ ಮತ್ತು ತಮ್ಮ ಕರಡಿ ಜಗಳ ನಿಲ್ಲಿಸಿದರು. ಇಬ್ಬರೂ ಸೇರಿ ಕಲ್ಲಂಗಡಿಯನ್ನು ನೆಲದಲ್ಲಿ ಉರುಳಿಸ ತೊಡಗಿದರು. ಬಯಲಿನಲ್ಲಿ ಉರುಳಿಸುತ್ತಾ ಅಣ್ಣ ಮತ್ತು ತಮ್ಮ ಕರಡಿ ಕಲ್ಲಂಗಡಿಯನ್ನು ಮನೆಗೆ ತಂದರು. “ಅಮ್ಮಾ, ದೊಡ್ಡದಾದ, ಸಿಹಿಯಾದ ಕಲ್ಲಂಗಡಿ ತಂದಿದ್ದೇವೆ” ಎಂದು ಘೋಷಿಸಿದರು.

ದೊಡ್ಡ ಪಾತ್ರೆಗೆ ಕಲ್ಲಂಗಡಿ ಹಣ್ಣು ಹಾಕಿ, ಅಮ್ಮ ಕರಡಿ ಅದನ್ನು ತೊಳೆದಳು. ಅನಂತರ ಅದನ್ನು ಕತ್ತರಿಸಲಿಕ್ಕಾಗಿ ಮೇಜಿನ ಮೇಲಿಟ್ಟಳು.

“ಈ ಕಲ್ಲಂಗಡಿ ಬಹಳ ಸಿಹಿ. ಅದರ ತಿರುಳು ಕೆಂಪುಕೆಂಪು ಮತ್ತು ರುಚಿ” ಎಂದಿತು ಕಿರಿಯ ಸೋಮಾರಿ ಕರಡಿ. “ನನಗೊಂದು ದೊಡ್ಡ ತುಂಡು ಕೊಡು” ಎಂದು ಕೇಳಿತು.

ತಾಯಿ ಕರಡಿ ಕಲ್ಲಂಗಡಿ ಕತ್ತರಿಸಿದಾಗ ಅಲ್ಲೇನಿತ್ತು? ಅದರ ತಿರುಳೆಲ್ಲ ಕೆಂಪುಕೆಂಪು ನೀರಾಗಿತ್ತು! ಆ ಕೆಂಪು ನೀರು ಮೇಜಿನಲ್ಲಿ ಹರಿದು ನೆಲಕ್ಕೆ ಸುರಿಯಿತು.

ಹಿರಿಯ ಸೋಮಾರಿ ಮತ್ತು ಕಿರಿಯ ಸೋಮಾರಿ ಕರಡಿಗಳಿಗೆ ಭಾರೀ ನಿರಾಶೆಯಾಯಿತು. ಆದರೆ ಅವರು ಈಗ ಏನೂ ಮಾಡುವಂತಿರಲಿಲ್ಲ. ಯಾರ ತಪ್ಪಿನಿಂದಾಗಿ ಹೀಗಾಯಿತು?

ಚಿತ್ರ ಕೃಪೆ: ನ್ಯಾಷನಲ್ ಬುಕ್ ಟ್ರಸ್ಟ್ ಪುಸ್ತಕ “ರೀಡ್ ಮಿ ಎ ಸ್ಟೋರಿ”
ಚಿತ್ರಕಾರ: ವು ಡೈ ಶೆಂಗ್