ಕಲ್ಲಂಗಡಿ ಹಂಚಿ ತಿಂದದ್ದು

ಕಲ್ಲಂಗಡಿ ಹಂಚಿ ತಿಂದದ್ದು

ರಾಜು ಹುಲ್ಲು ಕತ್ತರಿಸುವ ಕೆಲಸ ಮಾಡುತ್ತಿದ್ದ. ಬಡವನಾದ ಅವನು ಚಿಂಚು ಎಂಬ ಒಂದು ಗಿಳಿ ಮತ್ತು ಪಂಚು ಎಂಬ ಆಡನ್ನು ಸಾಕುತ್ತಿದ್ದ. ಕಾಡಿನಿಂದ ಹುಲ್ಲು ಕತ್ತರಿಸಿ ತಂದು ಮಾರುಕಟ್ಟೆಯಲ್ಲಿ ಮಾರುತ್ತಿದ್ದ ರಾಜುವಿಗೆ ಹೆಚ್ಚು ಆದಾಯ ಸಿಗುತ್ತಿರಲಿಲ್ಲ. ಕೆಲವೊಮ್ಮೆ ಅವನು ರಾತ್ರಿ ಗಂಜಿಯೂಟ ಮಾಡಿ ಮಲಗುತ್ತಿದ್ದ.

ಬೇಸಗೆಕಾಲ ಆರಂಭವಾಯಿತು. ಕಾಡಿನಲ್ಲಿ ಹುಲ್ಲು ಒಣಗುತ್ತಾ ಬಂತು. ಒಂದು ಮೂಟೆ ಹುಲ್ಲು ಕತ್ತರಿಸಬೇಕಾದರೆ ರಾಜು ಹಲವು ಗಂಟೆ ಕೆಲಸ ಮಾಡಬೇಕಾಗುತ್ತಿತ್ತು. ಅದೊಂದು ದಿನ ಬೆಳಗ್ಗೆಯಿಂದ ಸಂಜೆಯ ವರೆಗೆ ಹುಲ್ಲು ಕತ್ತರಿಸಿದರೂ ರಾಜುವಿಗೆ ಸಿಕ್ಕಿದ್ದು ಒಂದು ಮೂಟೆ ಹುಲ್ಲು.

ಅದನ್ನೇ ತಲೆಯಲ್ಲಿ ಹೊತ್ತುಕೊಂಡು ಮಾರುಕಟ್ಟೆಗೆ ಬಂದ ರಾಜು. ಒಂದು ಗಂಟೆ ಕಾದು ಕುಳಿತರೂ ರಾಜುವಿನ ಹುಲ್ಲಿನ ಮೂಟೆ ಖರೀದಿಸಲು ಯಾರೂ ಬರಲಿಲ್ಲ. ಇನ್ನೇನು ಮನೆಗೆ ಹೊರಡಬೇಕೆಂದು ರಾಜು ಎದ್ದು ನಿಂತಾಗ, “ಅಯ್ಯಾ, ನಿಮ್ಮ ಹುಲ್ಲಿನ ಮೂಟೆಗೆ ಎಷ್ಟು ರೂಪಾಯಿ" ಎಂದು ಕಲ್ಲಂಗಡಿ ಹಣ್ಣು ಮಾರುತ್ತಿದ್ದಾತ ಕೇಳಿದ.

“ಇದಕ್ಕೆ ಇಪ್ಪತ್ತು ರೂಪಾಯಿ" ಎಂದ ರಾಜು. “ಇದು ಸಣ್ಣ ಮೂಟೆ. ನಾನು ನಿನಗೆ ಒಂದು ಕಲ್ಲಂಗಡಿ ಹಣ್ಣು ಕೊಡುತ್ತೇನೆ; ಬದಲಾಗಿ ನಿನ್ನ ಹುಲ್ಲಿನ ಮೂಟೆ ಕೊಡು” ಎಂದು ಚೌಕಾಸಿ ಮಾಡಿದ ಕಲ್ಲಂಗಡಿ ಮಾರುವಾತ.

ಕೊನೆಗೆ ರಾಜು ಒಪ್ಪಿದ. ತನ್ನ ಹುಲ್ಲಿನ ಮೂಟೆ ಕೊಟ್ಟು, ಒಂದು ಕಲ್ಲಂಗಡಿ ಹಣ್ಣನ್ನು ಪಡೆದ. ತನ್ನ ಮನೆಗೆ ಹಿಂತಿರುಗುತ್ತಾ ರಾಜು ಯೋಚಿಸಿದ: ನಾವು ಮೂವರಿದ್ದೇವೆ. ಆದರೆ ಕಲ್ಲಂಗಡಿ ಹಣ್ಣು ಒಂದೇ ಇರೋದು. ಎಲ್ಲರ ಹೊಟ್ಟೆ ತುಂಬಿಸುವುದು ಹೇಗೆ? ಆಗ ರಾಜುವಿಗೆ ಮರದಲ್ಲೊಂದು ಅಳಿಲು ಚಿಂವ್ ಚಿಂವ್ ಎಂದದ್ದು ಕೇಳಿಸಿತು. ಆತ ತಲೆಯೆತ್ತಿ ನೋಡಿದಾಗ ಅಳಿಲು ಒಂದು ಕಾಯಿಯ ಚಿಪ್ಪು ಒಡೆದು ಒಳಗಿದ್ದ ಬೀಜ ತಿನ್ನುವುದು ಕಾಣಿಸಿತು. ಆಗ ರಾಜುವಿಗೆ ಒಂದು ಐಡಿಯಾ ಹೊಳೆಯಿತು.

ಮನೆಗೆ ಮರಳಿದ ರಾಜು, ಕಲ್ಲಂಗಡಿ ಹಣ್ಣನ್ನು ತುಂಡುಗಳನ್ನಾಗಿ ಕತ್ತರಿಸಿದ. ಅದರ ತಿರುಳನ್ನೆಲ್ಲ ತೆಗೆದಿಟ್ಟ. ಕಲ್ಲಂಗಡಿಯ ಸಿಪ್ಪೆಯನ್ನು ಆಡು ಪಂಚುವಿಗೆ ತಿನ್ನಲು ಕೊಟ್ಟ. ಅದರ ಬೀಜಗಳನ್ನು ಗಿಳಿ ಚಿಂಚುವಿಗೆ ಕೊಟ್ಟ. ಅನಂತರ ಕಲ್ಲಂಗಡಿಯ ತಿರುಳನ್ನು ಸಂತೋಷದಿಂದ ತಿಂದ. ಎಲ್ಲರ ಹೊಟ್ಟೆ ತುಂಬಿತೆಂದು ರಾಜುವಿಗೆ ಖುಷಿಯೋ ಖುಷಿ.

ಪ್ರೇರಣೆ: “ವಿಸ್-ಡಮ್ ಟೇಲ್ಸ್” ಪುಸ್ತಕ