ಕಲ್ಲಂಗಡಿ ಹಣ್ಣನ್ನು ತಿನ್ನುವಾಗ ಹೀಗೆ ಮಾಡಿ…!

ರಾಜ್ಯಾದ್ಯಂತ ಸೆಖೆಯು ತೀವ್ರವಾಗಿ ಏರುತ್ತಿದೆ. ಒಂದೆರಡು ಜಿಲ್ಲೆಗಳಲ್ಲಿ ಮಳೆಯಾದರೂ, ಈ ಅಕಾಲಿಕ ಮಳೆಯಿಂದ ತಾತ್ಕಾಲಿಕವಾಗಿ ಸೆಖೆಯಿಂದ ಆರಾಮ ದೊರೆತರೂ ಬೇಸಿಗೆಯಲ್ಲಿ ಫಲ ನೀಡುವ ಫಸಲಿಗೆ ತೊಂದರೆಯಾಗುವುದಂತೂ ದಿಟ. ಮಾವು, ಹಲಸು ಮುಂತಾದ ಹಣ್ಣುಗಳ ಕೊರತೆ ಈ ವರ್ಷವೂ ಕಾಡಲಿದೆ ಎನ್ನುವುದು ಬೆಳೆಗಾರರ ಅಭಿಮತ. ಏರುತ್ತಿರುವ ಉಷ್ಣಾಂಶದಿಂದಾಗಿ ನೀರಿನ ಪ್ರಮಾಣ ಬಾವಿ, ಕೆರೆ, ನದಿಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ನಮ್ಮ ದೇಹದಲ್ಲೂ ನೀರಿನ ಕೊರತೆಯುಂಟಾಗಿ ನಿರ್ಜಲೀಕರಣದ ಸಮಸ್ಯೆಯಾಗಲಿದೆ. ಈ ಸಂದರ್ಭದಲ್ಲಿ ನಾವು ನೀರಿನ ಜೊತೆಗೆ ನೀರಿ ಅಂಶ ಅಧಿಕ ಪ್ರಮಾಣದಲ್ಲಿರುವ ಕಲ್ಲಂಗಡಿ, ಕರಬೂಜ, ಸೌತೇಕಾಯಿ ಮೊದಲಾದ ಹಣ್ಣು ತರಕಾರಿಗಳನ್ನು ಅಧಿಕ ಪ್ರಮಾಣದಲ್ಲಿ ಸೇವನೆ ಮಾಡುವುದು ಹಿತಕರ.
ಬೇಸಿಗೆ ಕಾಲಕ್ಕೆ ಹೇಳಿ ಮಾಡಿಸಿದ ಹಣ್ಣು ಎಂದರೆ ಕಲ್ಲಂಗಡಿ. ಈ ಹಣ್ಣಿನಲ್ಲಿ ಶೇ ೮೦ - ೯೦ ಭಾಗ ನೀರಿನಿಂದಲೇ ಕೂಡಿರುವುದರಿಂದ ಇದರ ಸೇವನೆಯಿಂದ ದೇಹಕ್ಕೆ ಅಗತ್ಯವಿರುವ ನೀರು ಸಿಗುತ್ತದೆ. ಇದರ ಜೊತೆಗೆ ಆಂಟಿ ಆಕ್ಸಿಡೆಂಟ್, ವಿಟಮಿನ್ ಎ ಮತ್ತು ಸಿ ಸಹಾ ದೊರೆಯುತ್ತದೆ. ನಿರ್ಜಲೀಕರಣದಿಂದ ನಿಮ್ಮ ದೇಹವನ್ನು ರಕ್ಷಿಸಲು ಕಲ್ಲಂಗಡಿ ಉತ್ತಮ ಆಯ್ಕೆ.
ಈ ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಎ ಅಂಶವು ಚರ್ಮದ ಆರೋಗ್ಯವನ್ನು ಕಾಪಾಡಿ, ಚರ್ಮವನ್ನು ಕಾಂತಿಯುತವನ್ನಾಗಿಸುತ್ತದೆ. ಚರ್ಮದ ಹೊಳಪು ಮತ್ತು ತ್ವಚೆ ಹೆಚ್ಚುತ್ತದೆ. ವಿಟಮಿನ್ ಸಿ ಇರುವುದರಿಂದ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರತ್ಕದೊತ್ತಡದ ಪ್ರಮಾಣವನ್ನು ನಿಯಂತ್ರಿಸುತ್ತದೆ. ಸ್ನಾಯುಗಳ ಊತವನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಕಲ್ಲಂಗಡಿ ಹಣ್ಣನ್ನು ತುಂಡರಿಸಿ ನೇರವಾಗಿ ಸೇವನೆ ಮಾಡುವುದಕ್ಕಿಂತಲೂ ಅದಕ್ಕೆ ಒಂದು ಚಿಟಿಕೆಯಷ್ಟು ಉಪ್ಪನ್ನು ಸೇರಿಸಿ ಸೇವನೆ ಮಾಡುವುದರಿಂದ ಬಹಳಷ್ಟು ಪ್ರಯೋಜನಗಳಿವೆ.
ಕಲ್ಲಂಗಡಿಯಲ್ಲಿ ಅಧಿಕ ಪ್ರಮಾಣದಲ್ಲಿ ನೀರಿನ ಅಂಶವಿರುವುದರಿಂದ ಇದು ನಿಮ್ಮ ದೇಹವನ್ನು ತಂಪಾಗಿಡುವುದರಲ್ಲಿ ಸಹಕಾರಿ. ಇದರಲ್ಲಿರುವ ಪೊಟ್ಯಾಷಿಯಂ ಅಂಶವು ದೇಹಕ್ಕೆ ಇಲೆಕ್ಟ್ರೋಲೈಟ್ಸ್ ಗಳನ್ನು ಒದಗಿಸುತ್ತದೆ. ಸಂಜೆಯ ವೇಳೆಗೆ ಜ್ಯೂಸ್ ಮಾಡಿ ಅಥವಾ ನೇರವಾಗಿ ಹಣ್ಣನ್ನು ಸೇವಿಸುವುದು ಹಿತಕಾರಿ. ಕಲ್ಲಂಗಡಿಯಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಕೆಟ್ಟ ಕೊಬ್ಬಿನ ಅಂಶವನ್ನು ನಿವಾರಿಸಿ ರಕ್ತನಾಳದಲ್ಲಿ ರಕ್ತವು ಸರಾಗವಾಗಿ ಹರಿಯಲು ಸಹಕಾರಿ. ಇದರಿಂದ ಹೃದಯದ ಕಾರ್ಯಕ್ಷಮತೆ ಹೆಚ್ಚುತ್ತದೆ.
ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಅಧಿಕವಾಗಿರುವುದರಿಂದ ಜೀರ್ಣ ಕ್ರಿಯೆ ಸರಾಗವಾಗಿ ಆಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ಮಲಬದ್ಧತೆಯನ್ನು ತಡೆಯುವುದರಲ್ಲಿ ಮತ್ತು ಕರುಳಿನ ಆರೋಗ್ಯ ಕಾಪಾಡುವುದರಲ್ಲಿ ಸಹಕಾರಿ.ಕಲ್ಲಂಗಡಿಯಲ್ಲಿ ಕೋಲಿನ್ ಎನ್ನುವ ಅಂಶವಿದ್ದು, ಇದು ನಮ್ಮ ನರಮಂಡಲ ಮತ್ತು ಮೆದುಳಿನ ಕಾರ್ಯಕ್ಷಮತೆಯನ್ನು ಚುರುಕಾಗಿಸುತ್ತದೆ. ತೂಕ ಇಳಿಸುವುದರಲ್ಲಿ ಮತ್ತು ಲೈಂಗಿಕ ಶಕ್ತಿ ಸುಧಾರಣೆಯಲ್ಲಿ ಕಲ್ಲಂಗಡಿ ಹಣ್ಣು ಮಹತ್ವದ ಪಾತ್ರ ವಹಿಸುತ್ತದೆ. ವೈದ್ಯರು ಹೇಳುವಂತೆ ಕಲ್ಲಂಗಡಿ ಹಣ್ಣಿನಲ್ಲಿರುವ ಅರ್ಜಿನೈನ್ ಎನ್ನುವ ಅಮೀನೋ ಆಮ್ಲವು ವಯಾಗ್ರದಂತೆ ಕಾರ್ಯ ನಿರ್ವಹಿಸುತ್ತದೆ ಮತ್ತು ಲೈಂಗಿಕ ಶಕ್ತಿಯನ್ನು ವೃದ್ಧಿಸುತ್ತದೆ.
ಕಲ್ಲಂಗಡಿ ಹಣ್ಣಿಗೆ ಚಿಟಿಕೆ ಉಪ್ಪು ಸೇರಿಸಿ ಸೇವನೆ ಮಾಡಿದಾಗ ನಿಮ್ಮ ಆರೋಗ್ಯ ಬಹಳಷ್ಟು ವೃದ್ಧಿಯಾಗುತ್ತದೆ. ಉಪ್ಪು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಕಾರಿ. ಆದರೆ ಇದನ್ನು ಮಿತವಾಗಿ ಬಳಸಿ. ಉಪ್ಪಿನಲ್ಲಿ ಸೋಡಿಯಂ ಅಧಿಕ ಪ್ರಮಾಣದಲ್ಲಿದ್ದು ಇದು ದೇಹವನ್ನು ಹೈಡ್ರೇಟ್ ಆಗಿಡುತ್ತದೆ. ಸ್ವಲ್ಪ ಪ್ರಮಾಣದಲ್ಲಿ ಉಪ್ಪನ್ನು ಚಿಮುಕಿಸುವುದರಿಂದ ಕಲ್ಲಂಗಡಿ ಹಣ್ಣಿನ ರುಚಿ ಕೂಡಾ ಹೆಚ್ಚಾಗುತ್ತದೆ. ಆದರೆ ನೆನಪಿರಲಿ, ಉಪ್ಪಿನ ಸೇವನೆ ನಿಗದಿತ ಪ್ರಮಾಣದಲ್ಲಿರಲಿ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ