ಕಲ್ಲುಗುಡ್ಡೆಯ ‘ಧನುಷ್ ತೀರ್ಥ'
ಕಳೆದ ಭಾನುವಾರ (೨೧-೦೫-೨೦೨೩) ಬಿಡುವಾಗಿದ್ದುದರಿಂದ ಉಡುಪಿ ಕಡೆಗೆ ಪತ್ನಿಯ ಜೊತೆ ಪ್ರಯಾಣ ಬೆಳೆಸಿದೆ. ‘ಸಂಪದ' ದ ಬರಹಗಾರರೂ, ಪತ್ರಕರ್ತರೂ ಆಗಿರುವ ಶ್ರೀ ಶ್ರೀರಾಮ ದಿವಾಣರ ಮನೆಯ ಕಡೆಗೂ ಹೋಗುವ ಮನಸ್ಸಿತ್ತು. ಎರಡು ತಿಂಗಳ ಹಿಂದೆ ಅವರ ನೂತನ ಮನೆಯ ಗೃಹ ಪ್ರವೇಶವೂ ನಡೆದಿತ್ತು. ಆಗ ಹೋಗಲು ಆಗಿರಲಿಲ್ಲ. ಈ ಕಾರಣದಿಂದ ಅವರನ್ನೂ ಭೇಟಿಯಾಗಿ, ಮನೆಯನ್ನೂ ನೋಡಿ ಶುಭ ಹಾರೈಸಿ ಬರುವ ಎಂದು ಹೊರಟೆವು.
ಅವರಿಗೆ ಮೊದಲೇ ಕರೆ ಮಾಡಿ ತಿಳಿಸಿದ್ದಕ್ಕೆ ಅವರು ನಿಮಗೊಂದು ‘ಕಲ್ಲು ಗುಡ್ಡೆ’ ತೋರಿಸುವೆ. ಬಹಳ ಅಪರೂಪದ್ದು. ಕಾಪು ಬಂದ ಬಳಿಕ ಕರೆ ಮಾಡಿ ಎಂದರು. ಮಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಚಲಿಸಿ ಕಾಪು ತಲುಪಿದ ಬಳಿಕ ಕರೆ ಮಾಡಿದಾಗ ಅವರು ಅಲ್ಲಿಂದ ಪೂರ್ವ ದಿಕ್ಕಿನಲ್ಲಿರುವ ಇನ್ನಂಜೆ-ಬಂಟಕಲ್ಲು ಮಾರ್ಗದಲ್ಲಿ ಸುಮಾರು ೩-೪ ಕಿ.ಮೀ. ಬರುವಂತೆ ತಿಳಿಸಿದರು. ಹಾಗೇ ಬಂದಾಗ ಅವರು ಕಲ್ಲುಗುಡ್ಡೆಗೆ ಹೋಗುವ ದಾರಿಯಲ್ಲೇ ನಮಗಾಗಿ ಕಾಯುತ್ತಿದ್ದರು. ಕಾಡು ದಾರಿ, ಹೆಚ್ಚೇನೂ ದೂರವಿಲ್ಲ. ಕಾಪು-ಇನ್ನಂಜೆ-ಬಂಟಕಲ್ ಮಾರ್ಗದಿಂದ ಒಳಕ್ಕೆ ಒಂದು ಅರ್ಧ ಕಿ.ಮೀ. ಆಗಬಹುದು ಅಷ್ಟೇ. ಇದು ಕಾಪು ತಾಲೂಕಿನ ಇನ್ನಂಜೆ ಗ್ರಾಮದಲ್ಲಿದೆ.
ಅರ್ಧ ಕಿ.ಮೀ. ದಾರಿ ಸವೆಸಿದಾಗ ನಮಗೆ ಗೋಚರವಾದದ್ದು ಬೃಹತ್ ಆಕಾರದ ಕಪ್ಪು ಶಿಲೆಯ ದೊಡ್ದ ಬಂಡೆ. ಕಪ್ಪು ಕಲ್ಲುಗಳಿಂದಲೇ ಕೂಡಿದ ಬಂಡೆಯಾದುದರಿಂದ ಅದಕ್ಕೆ ‘ಕಲ್ಲುಗುಡ್ಡೆ' ಎಂಬ ಹೆಸರೇ ಇರಿಸಿದ್ದಾರೆ. ಕಲ್ಲು ಬಂಡೆಯನ್ನು ಏರಲು ಅನುಕೂಲವಾಗುವಂತೆ ಸೊಗಸಾದ ಮೆಟ್ಟಿಲುಗಳನ್ನು ನಿರ್ಮಾಣ ಮಾಡಿದ್ದಾರೆ. ಸುಮಾರು ೪೦-೫೦ ಮೆಟ್ಟಿಲುಗಳನ್ನು ಏರಿ ಕಲ್ಲುಗುಡ್ಡೆಯ ಮೇಲೆ ತಲುಪಿದಾಗ ನಮಗೆ ಹೊಸದೊಂದು ಲೋಕಕ್ಕೆ ಹೋದ ಅನುಭವವಾಯಿತು. ಕಲ್ಲಿನ ಗುಡ್ಡೆಯ ಮೇಲೆ ಸಮದಟ್ಟಾದ ಪ್ರದೇಶವಿದೆಯಾದುದರಿಂದ ಅಷ್ಟಾಗಿ ಅಪಾಯಕಾರಿಯಲ್ಲ. ಸಮದಟ್ಟಾಗಿರುವ ಜಾಗವೂ ಬಹಳ ವಿಸ್ತಾರವಾಗಿದೆ. ಮಕ್ಕಳನ್ನೂ ಕರೆದುಕೊಂಡು ಬರಬಹುದಾಗಿದೆ. ಆದರೆ ಅವರ ಮೇಲೆ ಒಂದು ಕಣ್ಣಿರಿಸಿರಬೇಕು. ಕೆಲವೆಡೆ ಕಡಿದಾದ ಪ್ರಪಾತದಂತಹ ಗುಂಡಿಗಳಿವೆ.
ಈ ಕಲ್ಲುಬಂಡೆಯ ಮೇಲೆ ಇರುವುದೇ ಎಂದೂ ಬತ್ತದ ‘ಧನುಷ್ ತೀರ್ಥ'. ಇದು ಕುಂಜಾರು ಶ್ರೀ ದೇವಿಯ ಆರಾಧನಾ ಸ್ಥಳ ಎಂದು ಬರೆದ ಸೂಚನಾ ಫಲಕವಿದೆ. ಇದನ್ನು ಹೊರತು ಪಡಿಸಿದರೆ ಈ ತೀರ್ಥದ ಬಗ್ಗೆ ಯಾವುದೇ ಮಾಹಿತಿ ವಿವರಗಳು ಅಲ್ಲಿ ಸಿಗುವುದಿಲ್ಲ. ನನ್ನ ಗೆಳೆಯ ಮತ್ತು ಕೆಲವು ಮಾಹಿತಿಗಳು ತಿಳಿಸುವ ಪ್ರಕಾರ ಪರಶುರಾಮರು ಜಗತ್ತನ್ನು ಸುತ್ತಿ ಈ ಪ್ರದೇಶಕ್ಕೆ ಬಂದು ಕುಂಜಾರುಗಿರಿ ಎಂಬಲ್ಲಿ (ಕುಂಜಾರುಗಿರಿ ಪ್ರದೇಶ ಈ ಸ್ಥಳಕ್ಕೆ ಹತ್ತಿರದಲ್ಲಿದೆ) ತಪಸ್ಸಿಗೆ ಕುಳಿತುಕೊಳ್ಳುವ ಮೊದಲು ತಮ್ಮ ನಾಲ್ಕು ಆಯುಧಗಳಾದ ಪರಶು (ಕೊಡಲಿ), ಧನಸ್ಸು (ಬಿಲ್ಲು), ಗಧೆ ಮತ್ತು ಬಾಣಗಳನ್ನು ಎಸೆದ ಸ್ಥಳಗಳಲ್ಲಿ ತೀರ್ಥಗಳು ಉಂಟಾದುವು.
ಹಿಂದಿನಿಂದ ಹೇಳಿ-ಕೇಳಿಕೊಂಡು ಬಂದ ಕಥೆಗಳ ಪ್ರಕಾರ ಧನಸ್ಸು ಬಿದ್ದ ಸ್ಥಳವೇ ಈ ಧನುಷ್ ತೀರ್ಥ. ಇದೇ ರೀತಿ ಪರಶುರಾಮರ ಇತರ ಮೂರು ಆಯುಧಗಳನ್ನು ಎಸೆದ ಸ್ಥಳಗಳೂ ತೀರ್ಥಗಳಾಗಿವೆ ಎನ್ನುವುದು ನಂಬಿಕೆ. ಹೀಗೆ ಒಟ್ಟಿಗೆ ಈ ಕುಂಜಾರುಗಿರಿ ಪ್ರದೇಶದ ಸುತ್ತಮುತ್ತಲು ನಾಲ್ಕು ತೀರ್ಥಗಳಿವೆ. ಅದರಲ್ಲಿ ಒಂದು ಧನುಷ್ ತೀರ್ಥ. ಎರಡನೇ ತೀರ್ಥವು ಪರಶು ಬಿದ್ದ ಸ್ಥಳ ಪಡುಬೆಳ್ಳೆ ಬಳಿಯ ಕಲ್ಲುಗುಡ್ಡೆಯಲ್ಲಿದೆ. ಪರಶು ತೀರ್ಥದ ಪಕ್ಕವೇ ಗೋಪಾಲಕೃಷ್ಣ ದೇವಸ್ಥಾನವಿದೆ. ಗಧೆ ಹೋಗಿ ಬಿದ್ದ ಸ್ಥಳ ಕುಂಜಾರುಗಿರಿಯ ಪರಶುರಾಮ ದೇವಸ್ಥಾನವಿರುವ ಬೆಟ್ಟದ ಬುಡದಲ್ಲಿ ಮೂರನೇ ತೀರ್ಥವಾದ ಗದಾ ತೀರ್ಥ ನಿರ್ಮಾಣವಾಗಿದೆ. ನಾಲ್ಕನೇ ತೀರ್ಥವಾದ ಬಾಣ ತೀರ್ಥವು ಕುಂಜಾರುಗಿರಿ ದೇವಸ್ಥಾನದ ಉತ್ತರ ದಿಕ್ಕಿನಲ್ಲಿದೆ. ಇದು ಬಾಣ ಬಿದ್ದ ಸ್ಥಳ. ಈ ತೀರ್ಥದ ಸಮೀಪವೇ ಈಶ್ವರ ದೇವಸ್ಥಾನವಿದೆ.
ಧನುಷ್ ತೀರ್ಥದ ನೀರು ಯಾವುದೇ ಬೇಸಿಗೆಯಲ್ಲೂ ಬತ್ತಿ ಹೋದ ನಿದರ್ಶನವಿಲ್ಲ. ಈ ತೀರ್ಥ ಎಷ್ಟು ಆಳವಿದೆ ಎಂಬ ಅಂದಾಜು ಸಿಗುವುದಿಲ್ಲ. ನೀರಿನ ಗಾಢ ಬಣ್ಣವನ್ನು ಗಮನಿಸುವಾಗ ಹತ್ತು ಅಡಿಗಳಷ್ಟಾದರೂ ಆಳವಿರಬಹುದು ಎಂದು ಊಹೆ ಮಾಡಬಹುದಾಗಿದೆ.
ತೀರ್ಥದ ಒಂದು ಬದಿಯಲ್ಲಿ ಸ್ವಲ್ಪ ಎತ್ತರದ ಪ್ರದೇಶವಿದ್ದು ಭಗವಾಧ್ವಜವನ್ನು ಅಳವಡಿಸಲಾಗಿದೆ. ಮತ್ತೊಂದು ಬದಿ ವಿಶಾಲವಾಗಿದ್ದು ಕೆಲವೆಡೆ ಬಹಳ ಹಿಂದೆ ಯಾವುದೋ ಒಂದು ಕಟ್ಟಡ ಅಥವಾ ಗುಡಿ ಇರುವ ಕೆಲವು ಕುರುಹುಗಳು ಕಾಣ ಸಿಗುತ್ತವೆ. ಕೆಲವೆಡೆ ಬ್ರಿಟೀಷ್ ಪುರಾತತ್ವ ಇಲಾಖೆಯವರು ಮಾಡಿದ ಕೆಲವೊಂದು ಗುರುತುಗಳು (ಮಾರ್ಕ್ಸ್) ಇವೆ. ಹಳೆಯ ಬ್ರಿಟೀಷ್ ದಾಖಲೆಗಳಲ್ಲಿ ಈ ಬಗ್ಗೆ ಉಲ್ಲೇಖಗಳಿರಲೂ ಬಹುದು.
ಏನಾದರಾಗಲಿ, ಬಹಳ ಸೊಗಸಾದ ಕಲ್ಲುಗುಡ್ಡೆಯನ್ನು ನೋಡಲೇಬೇಕು. ಬೆಳಿಗ್ಗೆ ಮತ್ತು ಸಾಯಂಕಾಲದ ಹೊತ್ತು ಗಾಳಿ ಸೇವನೆಗೆ ಮತ್ತು ಧ್ಯಾನ ಮಾಡಲು ಪ್ರಶಸ್ತವಾದ ಸ್ಥಳವೆಂದರೆ ತಪ್ಪಾಗದು. ಆದರೆ ಇಲ್ಲಿಗೆ ಬರುವ ಪ್ರವಾಸಿಗರು ಬಳಸಿ ಬಿಸಾಕಿದ ನೀರಿನ ಬಾಟಲಿಗಳು ಮತ್ತು ತಿಂಡಿತಿನಸುಗಳ ಪ್ಲಾಸ್ಟಿಕ್ ತೊಟ್ಟೆಗಳು ಕಣ್ಣಿಗೆ ರಾಚುವಂತಿದೆ. ಈ ಬಗ್ಗೆ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ಯೋಚನೆ ಮಾಡಬೇಕು. ಉತ್ತಮ ಪರಿಸರ ನಿರ್ಮಾಣದಲ್ಲಿ ಸಹಕಾರ ನೀಡಬೇಕು. ಗುಡ್ಡದ ಮೇಲಿರುವ ಶುದ್ಧ ತೀರ್ಥದಲ್ಲೂ ಚಾಕಲೇಟ್, ಬಿಸ್ಕಿಟ್ ಪ್ಯಾಕೆಟ್ ನ ಖಾಲಿ ಹೊರಕವಚಗಳು ತೇಲಾಡುವುದು ಕಾಣುತ್ತವೆ. ಪ್ರವಾಸಿಗರು ಇಂತಹ ಪ್ರವಾಸೀ ತಾಣಗಳನ್ನು ಶುಚಿಯಾಗಿಟ್ಟರೆ ಇನ್ನಷ್ಟು ಖ್ಯಾತಿ ಈ ‘ಕಲ್ಲುಗುಡ್ಡೆ'ಯಂತಹ ಮನೋಹರ ತಾಣಗಳಿಗೆ ಸಿಗುವುದರಲ್ಲಿ ಸಂಶಯವೇ ಇಲ್ಲ.
ಮಾಹಿತಿ ಸಹಕಾರ: ಶ್ರೀರಾಮ ದಿವಾಣ, ಉಡುಪಿ
ಚಿತ್ರ ವಿವರ: ೧. ಕಲ್ಲುಗುಡ್ಡೆಯ ಮೇಲಿರುವ ‘ಧನುಷ್ ತೀರ್ಥ'
೨. ಕಲ್ಲುಗುಡ್ಡೆಯನ್ನು ಏರಲು ಮೆಟ್ಟಿಲುಗಳು
೩. ಕೆಳಗಿನಿಂದ ಕಲ್ಲುಗುಡ್ಡೆಯ ನೋಟ
೪. ಕಲ್ಲುಗುಡ್ಡೆಯ ಮೇಲಿನ ಸಮತಟ್ಟಾದ ಪ್ರದೇಶ