ಕಲ್ಲು ಸೇರೆಬಿಟ್ಟಿತು, ಮಂಗಳನಂಗಳ !
ಚಿತ್ರ ಕೃಪೆ - ಇಸ್ರೊ:
http://www.isro.org/mars/home.aspx
ಅಂದುಕೊಂಡಿದ್ದಂತೆ ಎಲ್ಲಾ ಸರಿಯಾಗಿ ನಡೆದು ಕೊನೆಗೂ ಇಸ್ರೋದ ಹೋದ ವರ್ಷದ ದೀಪಾವಳಿ ಪಟಾಕಿ ತನ್ನ ನಿಶ್ಚಿತ ಗುರಿ ಸೇರುವುದರಲ್ಲಿ ಯಶಸ್ವಿಯಾಗಿದೆ - 'ಠುಸ್' ಪಟಾಕಿಯಾಗದೆ. ಹೆಚ್ಚು ಕಡಿಮೆ ಮುಂದಿನ ದೀಪಾವಳಿಗೆ ಒಂದು ತಿಂಗಳಿಗೆ ಮೊದಲೆ ಯಶಸ್ಸನ್ನು ಕಂಡಿರುವುದರಿಂದ, ಒಂದು ರೀತಿ 'ದೀಪಾವಳಿಯ ಮುಂಗಡ ಬೋನಸ್' ಕೊಟ್ಟುಕೊಂಡುಬಿಟ್ಟಿದೆ ಎಂದೆ ಹೇಳಬಹುದು - ಜತೆಗೆ ಅದೇ ಉಡುಗೊರೆಯನ್ನು ದೇಶವಿದೇಶಗಳಲ್ಲಿರುವ ಅಸಂಖ್ಯಾತ, ದೇಶಾಭಿಮಾನಿ ಭಾರತೀಯರೆಲ್ಲರಿಗೂ ನೀಡುತ್ತ. ಕಳೆದ ದೀಪಾವಳಿಯ ಹೊತ್ತಲ್ಲಿ ಉಡ್ಡಯಾನವಾದಾಗ 'ಮಂಗಳನತ್ತ ಒಂದು ಕಲ್ಲು..' ಎನ್ನುವ ಹೆಸರಲ್ಲಿ ಅದರ ಕುರಿತಾಗೆ ಬರೆದಿದ್ದ ಬರಹವೊಂದನ್ನು ಸಂಪದದಲ್ಲಿ ಪ್ರಕಟಿಸಿದ್ದೆ (ಕೊಂಡಿಯನ್ನು ನೋಡಿ). ಅದರಲ್ಲಿ ಇಸ್ರೊವನ್ನು, ಭಾರತೀಯ ವಿಜ್ಞಾನಿ ಬಳಗವನ್ನು ಉಡ್ಡಯನದ ಯಶಸ್ಸಿಗೆ ಅಭಿನಂದಿಸುತ್ತಲೆ ಜತೆಗೆ ತುಸು ಸಾವಧಾನದಿಂದ ಅಂತಿಮ ಫಲಿತಾಂಶ ಗೊತ್ತಾಗುವವರೆಗೂ ಕಾಯುವುದುಚಿತ ಎಂದೂ ಧ್ವನಿಸಿದ್ದೆ. ಈಗ ಆ ಮೈಲಿಗಲ್ಲನ್ನು ಯಶಸ್ವಿಯಾಗಿ ದಾಟಿದ ಸಂತಸದಲ್ಲಿ ಇಡೀ ಭಾರತೀಯ ವ್ಯೋಮಯಾನದ ವಿಜ್ಞಾನಿಗಳೆಲ್ಲರನ್ನು ಈ ಯಶಸ್ಸಿಗೆ ಮನಃಪೂರ್ವಕವಾಗಿ ಅಭಿನಂದಿಸುತ್ತೇನೆ, ಈ ಪುಟ್ಟ ಕಾವ್ಯದ ಉಪಸಂಹಾರದೊಂದಿಗೆ!
ಕಲ್ಲು ಸೇರೆಬಿಟ್ಟಿತು, ಮಂಗಳನಂಗಳ !
_______________________
ಮಂಗಳನಂಗಳಕೊಂದು ಕಲ್ಲು
ಹೊಡೆದರಂತೆ ಎಲ್ಲೆಲ್ಲು ಗುಲ್ಲು
ಕಲ್ಲಿಗೆಲ್ಲಿ ಕಾಸು, ಇದ್ದರು ಭಾರ
ಹೋದರೆ ಕಲ್ಲು, ಅಗ್ಗ ವ್ಯಾಪಾರ ||
ಬುಗುರಿ ಸುತ್ತಿನ ಹಾಗೆ ಗಮ್ಮತ್ತು
ಚಾಟಿ ಸುತ್ತೆಸೆದು ಬೀಸಿದ ಗತ್ತು
ಗೋಲಿ, ಚಿನ್ನಿ-ದಾಂಡಿನ ಹೊಡೆತ
ಹಾರಿ ಬಿಟ್ಟಿತೆ ನಿಖರ ಗುರಿಯತ್ತ ? ||
ಎದೆಗಾರಿಕೆ ಬುಡುಬುಡುಕೆ ಸರಿ
ಆತ್ಮವಿಶ್ವಾಸ ನಿಮಿರಿ ಗರಿ ಕೆದರಿ
ವಿಪರ್ಯಾಸದ ನಾಡಲಿ ಮೋಡಿ
ಬುದ್ಧಿ ಮತ್ತೆ ಚತುರತೆ ಒಡನಾಡಿ ||
ಸುಖ ಪ್ರಸವದೆ ಎಡವದೆ ಇನಿತು
ಉಂಡದ್ದು ಅಲ್ಲಾಡದಂತೆ ಕಿಂಚಿತ್ತು
ತನ್ನ ಹೆರಿಗೆಗೆ ತಾನೆ ದಾದಿಯಾಗಿ
ಗಗನ ಬಯಲಲಿಹನಾರೆ ಯೋಗಿ ||
ಮೊದಲ ಸೃಷ್ಟಿ ಕೀರ್ತಿಯ ಪ್ರಖರ
ಮುಂದಿನೆಲ್ಲ ಸಾಹಸಕದುವೆ ಸದರ
ತಲೆಗೇರದೆಲೆ ಹಮ್ಮು ಹೆಮ್ಮೆ ಸಾಕು
ಭವಿತವಿನ್ನು ನೂರೆಂಟು ಸಾಧಿಸಬೇಕು ||
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು