ಕಲ್ಲು ಹೇಳಿದ ಕತೆ

ಕಲ್ಲು ಹೇಳಿದ ಕತೆ

ಬರಹ

[ ಹೊಸ ದಿಲ್ಲಿಯಲ್ಲಿಯಲ್ಲಿರುವ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಕರ್ನಾಟಕದಿಂದ ತಂದ ವೀರಗಲ್ಲೊಂದನ್ನು ನಿಲ್ಲಿಸಿದ್ದಾರೆ. ಅದನ್ನು ಆಧರಿಸಿ ಬರೆದದ್ದು ಈ (ಅರೆಕಾಲ್ಪನಿಕ) ಕಥೆ. - ವೆಂ. ]

ನಮ್ಮದೊಂದು ಹಳ್ಳಿ. ಹೇಳಿಕೊಳ್ಳುವಂತಹದು ಏನೂ ಇಲ್ಲದ ಸಾಮಾನ್ಯ ಹಳ್ಳಿ. ಬೇಸಾಯದ ಬದುಕು. ಆಗಾಗ ದಂಡಿಗೆ ಕರೆಬರುವುದು. ಊರಿಗಿಷ್ಟು ಮಂದಿ ಗಂಡಾಳುಗಳು ದಂಡಿಗೆ ಹೊರಡಬೇಕು. ದಂಡಿಗೆ ಹೋದವರಲ್ಲಿ ಎಲ್ಲರೂ ಮರಳಿ ಬಾರರು. ಕಾಳಗದಲ್ಲಿ ಬಿದ್ದವರಿಗೆ ದೊರೆಗಳು ನೆಲ ಕಾಣಿ ಬಿಟ್ಟರೆಂದು ಕೇಳುವುದುಂಟು. ನಮ್ಮ ಹಳ್ಳಿಯವರೂ ಬಿದ್ದರು. ಇದ್ದವರು ಇದ್ದಹಾಗೆಯೇ ಇದ್ದಾರೆ, ನೆಲವಿಲ್ಲ ಕಾಣಿಯಿಲ್ಲ. ಮರಳಿದವರಿಗೂ ಕಾಳಗ ಮುಗಿಯಿತೆಂದಿಲ್ಲ. ಇದ್ದಾರಲ್ಲ, ಪಕ್ಕದೂರಿನವರು. ಜನಮೇಜಯರಾಯನ ಕಾಲದಿಂದಲೂ ನಮಗೂ ಅವರಿಗೂ ಆಗದು. ನಾವು ಅವರ ಮೇಲೆ ಕೈಮಾಡುವುದೂ ಅವರು ನಮ್ಮ ಮೇಲೆ ಕೈಮಾಡುವುದೂ ನಡೆಯುತ್ತಲೆ ಇರುತ್ತದೆ. ಇದು ಸರ್ವೇಸಾಮಾನ್ಯ. ಯಾರಿಗೆ ಯಾರು ಹೇಳುವುದು? ದೊರೆಗಳೂ ಏನು ಮಾಡಿಯಾರು? ಅವರಿಗೆ ದಂಡಿನ ಚಿಂತೆ. ನಮ್ಮ ಮನೆ ಮಾರು ದನ ಕಾಯ್ದುಕೊಳ್ಳುವುದು ನಮ್ಮ ನಮ್ಮ ಚಿಂತೆ.

ಮೊನ್ನೆ ಹೀಗಾಯಿತು. ನಮ್ಮೂರಿನವರೂ ಆವೂರಿನವರೂ ದಂಡಿನಿಂದ ಮರಳುತ್ತಿದ್ದರು. ದಾರಿಯಲ್ಲಿ ಏನೋ ಜಗಳ. ಕಿಡಿ ಹಾರುತ್ತಲೆ ಇತ್ತು. ಊರ ಬಳಿ ಬಂದಾಗ ಹೊತ್ತಿಕೊಂಡಿತು. ಅವರು ನಮ್ಮ ಆಕಳು ಮೇಯುತ್ತಿದ್ದ ಮಾಳಕ್ಕೆ ನುಗ್ಗಿ ದನಗಳನ್ನು ಸುತ್ತುಗಟ್ಟಿ ಹೊಡೆದುಕೊಂಡು ಹೊರಟರು. ಆಕಳು ನಮ್ಮ ಜೀವಾಳ. ನಾವು ಸುಮ್ಮನೆ ಬಿಟ್ಟೇವೆ? ಅವರನ್ನು ಅಟ್ಟಿಕೊಂಡು ಹೋದೆವು.

ವೀರಗಲ್ಲು

ಅವರಲ್ಲಿ ಕೆಲವರು ನಮ್ಮ ಮೇಲೆ ಎರಗಿದರು. ಕಾಳಗಕ್ಕೆ ಒಯ್ದಿದ್ದ ಈಟಿ ಭಲ್ಲೆಗಳು ಜೊತೆಗೆ ಇದ್ದವು. ನಾವೇನು ಬರಿಗೈ ಬಂಟರಲ್ಲ; ನಮ್ಮಲ್ಲಿಯೂ ಬಿಲ್ಲು, ಕಣೆಗಳು ಇದ್ದವು. ಕಾದಾಟ ಬಿರುಸಾಗಿಯೆ ಜರುಗಿತಂತೆ, ಕಂಡವರು ಹೇಳುತ್ತಾರೆ. ನಮಗಿಂತಲೂ ಅವರು ಮಂದಿ ಹೆಚ್ಚು. ಆದರೂ ಅವರನ್ನು ಚೆನ್ನಾಗಿಯೇ ಬಡಿದೆವು. ಆಕಳನ್ನು ಬಿಡಿಸಿಕೊಂಡೆವು. ಅವರನ್ನು ಕುಯ್ಯೋ ಮರ್ರೋ ಎನ್ನಿಸುತ್ತ ಓಡಿಸಿದೆವು. ನಮಗೆ ಏಟು ಬೀಳದೆ ಇಲ್ಲ. ನಮ್ಮೂರಿನ ಬಂಟ ಒಬ್ಬ ಬಿದ್ದ.

ಮಕ್ಕಳೊಂದಿಗ, ಎಷ್ಟೋಬಾರಿ ದಂಡಿಗೆ ಹೋಗಿ ಹೆಸರು ಮಾಡಿ ಮನೆಗೆ ನಡೆದು ಬಂದವ, ಇಲ್ಲಿ ಬಿದ್ದ. ದೊರೆಗಳ ಕಾಳಗದಲ್ಲಾದರೂ ಬಿದ್ದಿದ್ದರೆ ನೆಲ ಕಾಣಿ ಸಿಗುತ್ತಿತ್ತೇನೊ, ಆ ಹಾಳು ತುರುಗಳ್ಳರನ್ನು ಬಡೆಯುತ್ತ ಊರಮುಂದೆ ಬಿದ್ದ. ಅವನೇನು ಸಾವಿಗೆ ಹೆದರುವನಲ್ಲ. ಗೆದ್ದರೆ ಸಂಪತ್ತು, ಸತ್ತರೆ ಸ್ವರ್ಗ ಎಂದು ನಂಬಿದ ಎದೆಗಾರ. ಅವನಿಗೆ ಸ್ವರ್ಗವೆ ಸಿಕ್ಕಿರಬೇಕು. ಅಚ್ಚರಸಿಯರು ಬಂದು ಅವನ ನೆಚ್ಚಿನ ಶಿವನೆಡೆಗೆ ಕರೆದೊಯ್ದಿರಬೇಕು. ನಮಗೆ ನಮ್ಮ ಆಕಳು ಸಿಕ್ಕಿದವು. ಅವನು ಬಿಟ್ಟು ಹೋದ ಮನೆಮಂದಿಯ ಬಗ್ಗೆ ಚಿಂತೆ ಬೇಡ. ಊರವರು ನಾವು ಒಂದಾಗಿ ಅವರನ್ನು ನಡೆಸಿಕೊಳ್ಳುತ್ತೇವೆ. ಊರಿಗಾಗಿ ಪ್ರಾಣಕೊಟ್ಟವನಿಗೆ ಅಷ್ಟಾದರೂ ಸಲ್ಲಬೇಡವೆ? ಹಾಗೆಯೆ ನಮ್ಮ ಬಂಟನ ಕುರುಹಾಗಿ ಒಂದು ಕಲ್ಲನ್ನೂ ನಿಲ್ಲಿಸುತ್ತೇವೆ. ಆದರೆ ನಮ್ಮವನನ್ನು ಕೊಂದ ಸೇಡು ತೀರಲೆ ಬೇಕು. ನಮ್ಮ ಆಕಳನ್ನು ಹಿಡಿದರೆ ಅವರ ಹೆಂಗಳನ್ನು ಹಿಡಿಯುತ್ತೇವೆ. ನಮ್ಮ ಮೇಲೆ ಕೈಮಾಡಿದ ಅವರ ಮೇಲೆ ಕೈಮಾಡದೆ ಬಿಡೆವು. ನಮಗೂ ಅವರಿಗೂ ನಡೆಯುತ್ತಲೆ ಇರುತ್ತದೆ. ಇದು ಸರ್ವೇಸಾಮಾನ್ಯ.