ಕಲ್ಲೇಟು ತಿಂದ ಮರವೂ ಹಣ್ಣು ಕೊಡುತ್ತದೆ ; ನಾವು?

ಕಲ್ಲೇಟು ತಿಂದ ಮರವೂ ಹಣ್ಣು ಕೊಡುತ್ತದೆ ; ನಾವು?

ಇಲ್ಲಿ ನೀಡಿರುವ ಘಟನೆ ನಮ್ಮ ಚರಿತ್ರೆಯ ಪುಟಗಳಲ್ಲಿ ನಿಜವಾಗಿಯೂ ನಡೆದದ್ದು. ಶತಮಾನಗಳ ಹಿಂದೆ ಅಂದರೆ ೧೮-೧೯ನೇ ಶತಮಾನದಲ್ಲಿ ರಣಜಿತ್ ಸಿಂಹ ಎಂಬ ಮಹಾನ್ ಪರಾಕ್ರಮಿ ಮಹಾರಾಜರು ಪಂಜಾಬ್ ರಾಜ್ಯವನ್ನು ಆಳುತ್ತಿದ್ದರು. ಇವರ ಶೌರ್ಯ ಮತ್ತು ಸಾಹಸಗಳನ್ನು ಗಮನಿಸಿದ ಬ್ರಿಟೀಷರು ಇವರನ್ನು ‘ ಪಂಜಾಬಿನ ಸಿಂಹ' ಎಂದೇ ಕರೆಯುತ್ತಿದ್ದರು. ಇವರು ಆ ಸಂದರ್ಭದಲ್ಲಿ ಅಫ್ಘಾನಿ ಹಾಗೂ ಮುಲ್ತಾನಿ ಸುಲ್ತಾನರನ್ನು ಯುದ್ಧದಲ್ಲಿ ಸೋಲಿಸಿ ಲಾಹೋರ್ ಹಾಗೂ ಪೇಶಾವರಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಸಣ್ಣ ವಯಸ್ಸಿನಲ್ಲಿ ಸಿಡುಬು ಕಾಯಿಲೆ ಬಂದ ಕಾರಣ ಇವರು ತಮ್ಮ ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದರು. ಆದರೂ ಇವರ ಪರಾಕ್ರಮಕ್ಕೆ ಈ ವೈಕಲ್ಯ ಕೊರತೆಯಾಗಲಿಲ್ಲ. ತಮ್ಮ ೨೧ನೇ ವಯಸ್ಸಿನಲ್ಲೇ ಇವರು ಪಂಜಾಬಿನ ಮಹಾರಾಜರಾಗಿದ್ದರು.

ಒಮ್ಮೆ ರಾಜಾ ರಣಜಿತ್ ಸಿಂಹರು ತಮ್ಮ ಅಪಾರ ಸೈನ್ಯದೊಂದಿಗೆ ಯುದ್ಧ ಭೂಮಿಗೆ ತೆರಳುತ್ತಿದ್ದರು. ಅನಿರೀಕ್ಷಿತವಾಗಿ ಕಲ್ಲೊಂದು ಬಂದು ಅವರ ಕಾಲಬುಡದಲ್ಲೇ ಬಿತ್ತು. ಸ್ವಲ್ಪ ಆಚೆ ಈಚೆ ಆಗಿರುತ್ತಿದ್ದರೆ ಮಹಾರಾಜರಿಗೇ ಕಲ್ಲು ತಗಲುತ್ತಿತ್ತು. ಮಹಾರಾಜರಿಗೆ ಕಲ್ಲು ಬಿಸಾಡಿದವರು ಯಾರು? ಎಂದು ಹುಡುಕಲು ಸೈನಿಕರು ಕೂಡಲೇ ಹೋದರು. ಕೆಲವೇ ನಿಮಿಷಗಳಲ್ಲಿ ಸೈನಿಕರು ಒಬ್ಬ ಹಣ್ಣು ಹಣ್ಣು ಮುದುಕಿಯನ್ನು ತಂದು ರಾಜನ ಎದುರು ನಿಲ್ಲಿಸಿದರು. ರಾಜನಿಗೆ ಆಶ್ಚರ್ಯ! ಕಲ್ಲು ಬಿಸಾಕಿದವರನ್ನು ಕರೆತನ್ನಿ ಎಂದರೆ ಮುದುಕಿಯನ್ನು ಕರೆತಂದಿದ್ದಾರಲ್ಲಾ. ಎಂದು. ಮುದುಕಿ ಪಾಪ ರಾಜನ ಎದುರು ನಿಂತು ಗಡಗಡನೇ ನಡುಗುತ್ತಿದ್ದಳು. ವಿಚಾರಿಸಲಾಗಿ ಆ ಮುದುಕಿ ಬಿಸಾಕಿದ ಕಲ್ಲೇ ಮಹಾರಾಜರ ಬಳಿ ಬಿದ್ದಿತು ಎಂದು ತಿಳಿದು ಬಂತು. ಈ ವಿಷಯ ಅರಿವಾಗಿ ಮುದುಕಿಯು ಪ್ರಾಣ ಭಯದಿಂದ ರಾಜನ ಕಾಲಿಗೆ ಬೀಳುತ್ತಾಳೆ. ರಣಜಿತ್ ಸಿಂಹರು ತಮ್ಮ ಕೋಪತಾಪಗಳಿಗೆ ಕುಖ್ಯಾತಿಯನ್ನು ಪಡೆದಿದ್ದರು. ಬಹುಬೇಗನೇ ಅವರಿಗೆ ಕೋಪ ಬರುತ್ತಿತ್ತು. ಆದರೂ ಮುದುಕಿಯ ಬಳಿ 'ಯಾವ ಕಾರಣಕ್ಕೆ ನೀನು ನನಗೆ ಕಲ್ಲು ಬಿಸಾಕಿದೆ?’ ಎಂದು ಕೇಳಿದರು.

ಅದಕ್ಕೆ ಮುದುಕಿ ‘ಮಹಾಸ್ವಾಮಿ, ಈ ಕಲ್ಲು ನಿಮಗೆ ಬಿಸಾಕಿದಲ್ಲ. ನಾನು ಓರ್ವ ಬಡವಿ. ನನ್ನ ಮಗ ಸೊಸೆ ಜೀವಂತವಾಗಿಲ್ಲ. ಸಣ್ಣ ಪ್ರಾಯದ ಮೊಮ್ಮಗ ಮಾತ್ರ ಇದ್ದಾನೆ. ನಾನು ಭಿಕ್ಷೆ ಬೇಡಿ ಅವನ, ನನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ. ಆದರೆ ಇವತ್ತು ಯಾವ ಭಿಕ್ಷೆಯೂ ಸಿಗಲಿಲ್ಲ. ಮೊಮ್ಮಗ ಹಸಿವು ಎಂದು ಅಳುತ್ತಿದ್ದ. ಹಾಗೇ ಈ ದಾರಿಯಲ್ಲಿ ಬರುವಾಗ ಹಣ್ಣು ಇದ್ದ ಮರ ಕಂಡಿತು. ಆ ಹಣ್ಣನ್ನು ಕೀಳಲು ನಾನು ಕಲ್ಲು ಬಿಸಾಕಿದೆ. ನನಗೆ ತ್ರಾಣವಿಲ್ಲದ ಕಾರಣ ನಾ ಬಿಸಾಕಿದ ಕಲ್ಲು ಹಣ್ಣು ಇರುವ ಎತ್ತರ ತಲುಪಿಲ್ಲ. ಅದು ನೇರ ಬಂದು ನಿಮ್ಮ ಬಳಿ ಬಿತ್ತು. ನಾನು ಮಾಡಿದ ತಪ್ಪು ಉದ್ದೇಶ ಪೂರ್ವಕವಾಗಿ ಅಲ್ಲ. ನನಗೆ ಶಿಕ್ಷೆ ನೀಡಬೇಡಿ, ದಯವಿಟ್ಟು ಕ್ಷಮಿಸಿ’ ಎಂದಳು.

ಮಹಾರಾಜರು ಒಂದು ಕ್ಷಣ ಕಣ್ಣು ಮುಚ್ಚಿ ಏನೋ ಆಲೋಚನೆ ಮಾಡಿ, ಮಂತ್ರಿಯನ್ನು ಕರೆದು ‘ ಈ ಬಡ ಮುದುಕಿಗೆ ಒಂದು ಸಾವಿರ ಬಂಗಾರದ ನಾಣ್ಯಗಳನ್ನು ಕೊಟ್ಟು, ಗೌರವಪೂರ್ವಕವಾಗಿ ಅವಳ ಮನೆಗೆ ಬಿಟ್ಟು ಬನ್ನಿ' ಎಂದು ಆಜ್ಞೆ ಮಾಡುತ್ತಾರೆ. ರಾಜನ ಕೋಪದ ಅರಿವು ಇದ್ದ ಎಲ್ಲರಿಗೂ ಆಶ್ಚರ್ಯ. ಮಂತ್ರಿ ಹೇಳುತ್ತಾರೆ, ಮಹಾರಾಜರೇ, ತಮ್ಮತ್ತ ಕಲ್ಲು ಬಿಸಾಕಿದವರಿಗೆ ನೀವು ಬಹುಮಾನ ಕೊಡುವುದೇ?’ ಅದಕ್ಕೆ ರಣಜಿತ್ ಸಿಂಹರು ಹೇಳುತ್ತಾರೆ ‘ ಆ ಮುದುಕಿ ತನ್ನ ಮೊಮ್ಮಗನ ಹಸಿವು ತಣಿಸಲು ಬಿಸಾಕಿದ ಕಲ್ಲು ಅದು. ಆ ಕಲ್ಲು ಆ ನಿರ್ಜೀವ ಮರಕ್ಕೆ ತಾಗಿದ್ದರೆ ಅದು ಸಿಹಿಯಾದ ಹಣ್ಣನ್ನು ಕೊಡುತ್ತಿತ್ತು. ಅದೇ ಕಲ್ಲು ಪಂಜಾಬಿನ ಮಹಾರಾಜನ ಬಳಿ ಬಿದ್ದಾಗ ನಾನು ಅವಳಿಗೆ ಶಿಕ್ಷೆ ಕೊಡುವುದೇ? ನಾನು ಕರುಣೆಯಿಲ್ಲದ ರಾಜನಾಗಬೇಕೇ? ಮಾತು ಬಾರದ, ಕಲ್ಲೇಟು ತಿಂದರೂ ಸಿಹಿಯಾದ ಹಣ್ಣುಗಳನ್ನು ನೀಡುವ ಮರಕ್ಕಿಂತ ನಾನು ಸಣ್ಣವನಾಗಲೇ?’ ಎಂದು ಹೇಳಿದರು. ರಾಜನ ಮಾತಿಗೆ ಎಲ್ಲರೂ ತಲೆಯಾಡಿಸಿದರು.

ರಣಜಿತ್ ಸಿಂಹರು ಮಹಾನ್ ದೈವ ಭಕ್ತರಾಗಿದ್ದರು. ಇವರು ಅಮೃತಸರದ ಖ್ಯಾತ ಸ್ವರ್ಣ ಮಂದಿರದ ಜೀರ್ಣೋದ್ಧಾರ ಹಾಗೂ ನಾಂದೇಡಿನ ಗುರುದ್ವಾರವನ್ನು ಕಟ್ಟಿಸಿದ ಮಹಾಪುರುಷರು. ರಣಜಿತ್ ಸಿಂಹರ ಜಾಗದಲ್ಲಿ ನಾವಿರುತ್ತಿದ್ದರೆ ಏನು ಮಾಡುತ್ತಿದ್ದೆವು? ಮುದುಕಿಗೆ ಶಿಕ್ಷೆ ನೀಡುತ್ತಿದ್ದೆವಾ ಅಥವಾ ಬಹುಮಾನವಾ? ಯೋಚಿಸಬೇಕಾದ ಸಂಗತಿ ಅಲ್ವಾ?

(ಆಧಾರ)