ಕಳಂಕಿತೆ - ಕಥೆ
ಪೋಲಿಸ್ ಸ್ಟೇಷನ್ ನ ಮುಂಭಾಗದಲ್ಲಿ ನಾಲ್ಕೈದು ಜನ ಹೆಂಗಸರು ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಕುಳಿತಿದ್ದಾರೆ. ಪಕ್ಕದಲ್ಲಿದ್ದ ಪೋಲಿಸ್ ಅಧಿಕಾರಿ ಮಾಧ್ಯಮದವರೊಂದಿಗೆ ಸಂದರ್ಶನದಲ್ಲಿ ನಿರತನಾಗಿದ್ದಾನೆ. ಇಂದು ಸಂಜೆ ನಮಗೆ ಬಂದ ಮಾಹಿತಿಯ ಮೇರೆಗೆ "ರೆಡ್ ಹೆವೆನ್" ಹೋಟೆಲ್ ಮೇಲೆ ದಾಳಿ ಮಾಡಿದಾಗ ಅಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಖಚಿತವಾಗಿ ಇವರನ್ನು ಬಂಧಿಸಿದ್ದೇವೆ. ಇವರೆಲ್ಲ ಮುಂಬೈ ಮೂಲದವರು. ಒಬ್ಬ ವ್ಯಕ್ತಿ ತಪ್ಪಿಸಿಕೊಂಡಿದ್ದಾನೆ. ಹೀಗೆ ಇನ್ನೂ ಏನೇನೋ ಹೇಳುತ್ತಿದ್ದ.
ಅಲ್ಲಿ ಕುಳಿತಿದ್ದ ಹೆಂಗಸರಲ್ಲಿ ಕೊನೆಯಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ "ಮಲ್ಲಿಗೆ". ಅವರಲ್ಲಿದ್ದ ಒಬ್ಬ ಹೆಂಗಸು ಮಲ್ಲಿಗೆಯನ್ನು ಕೇಳಿದಳು. ನೀನು ಯಾರು, ನಮ್ಮ ಗುಂಪಿನವಳಲ್ಲವಲ್ಲ ನೀನು ಇಲ್ಲಿಗೆ ಹೇಗೆ ಬಂದೆ. ಮಲ್ಲಿಗೆ ಏನೂ ಉತ್ತರಿಸದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಸ್ವಲ್ಪ ಸಮಯದ ನಂತರ ಅವರನ್ನೆಲ್ಲ ಒಳಗೆ ಸ್ಟೇಷನ್ ಒಳಗಡೆ ಕರೆದುಕೊಂಡು ಹೋದರು. ಪಕ್ಕದಲ್ಲಿದ್ದ ಮಹಿಳ ಪೇದೆ ಅವರನ್ನು ನೋಡಿ ಅವಾಚ್ಯ ಶಭ್ದಗಳಿಂದ ನಿಂದಿಸುತ್ತಿದ್ದಳು. ಆ ಮಾತುಗಳನ್ನು ಕೇಳಿ ಮಿಕ್ಕವರು ಸುಮ್ಮನೆ ತಲೆ ತಗ್ಗಿಸಿ ಕುಳಿತಿದ್ದರೆ ಮಲ್ಲಿಗೆ ಮಾತ್ರ ಇನ್ನೂ ಜೋರಾಗಿ ಅಳುತ್ತಿದ್ದಳು. ಅವಳ ಬಳಿ ಬಂದ ಮಹಿಳಾ ಪೇದೆ ಅವಳ ಜಡೆಯನ್ನು ಹಿಡಿದು ಮಾಡಿದ್ದು ಮಣ್ಣು ತಿನ್ನುವಂಥ ಕೆಲಸ ಈಗ ಅಳುತ್ತೀಯ ಮುಚ್ಚು ಬಾಯಿ ಎಂದಳು. ಅವಳ ಹಿಡಿತಕ್ಕೆ ನೋವಿನಿಂದ ಚೀರಿದ ಮಲ್ಲಿಗೆ ಆ ಮಹಿಳಾ ಪೇದೆಯ ಕಾಲು ಹಿಡಿದು ನನಗೂ ಇದಕ್ಕೂ ಏನೂ ಸಂಬಂಧವಿಲ್ಲ ಎಂದು ಜೋರಾಗಿ ಅಳಲು ಶುರು ಮಾಡಿದಳು. ಆ ಪೇದೆ ನೋಡಲೆಷ್ಟು ಕುರೂಪವಾಗಿದ್ದಳೋ ಅವಳ ನದತೆಯೂ ಹಾಗೆಯೇ ಇತ್ತು. ಅವಳ ಕಾಲು ಹಿಡಿದಿದ್ದ ಮಲ್ಲಿಗೆಯನ್ನು ಜೋರಾಗಿ ಹಿಂದಕ್ಕೆ ತಳ್ಳಿ ನಿನ್ನಂಥವರು ಹೇಳುವ ಮಾತೆ ಇದು ಸುಮ್ಮನೆ ಬಿದ್ದಿರು ಎಂದು ಗದರಿದಳು.
ಮಲ್ಲಿಗೆ ಗಡಗಡ ನಡುಗುತ್ತ ಮುದುಡಿಕೊಂಡು ಮೂಲೆಯಲ್ಲಿ ಅಳುತ್ತಾ ಕುಳಿತಿದ್ದಳು. ಅವಳ ಬಳಿ ಬಂದ ಒಬ್ಬಳು ಹೆಂಗಸು ಅವಳ ತಲೆ ಮೇಲೆ ಕೈ ಇಟ್ಟು ಸಮಾಧಾನ ಮಾಡುತ್ತಾ ಅವಳಿಗೆ ನೀರು ಕುಡಿಸುತ್ತ ಕೇಳಿದಳು. ನೋಡಮ್ಮ ಹುಡುಗಿ ನೀನು ನಮ್ಮ ಗುಂಪಿನವಳು ಅಲ್ಲ. ಆದರೂ ನೀನೇಕೆ ಇಲ್ಲಿಗೆ ಬಂದೆ ಏನು ನಿನ್ನ ಕಥೆ ಹೇಳು ನಾನು ನಿನ್ನನ್ನು ಬಿಡಿಸುತ್ತೇನೆ ಎಂದಳು. ಆ ಮಾತಿನಿಂದ ಸ್ವಲ್ಪ ಸಮಾಧಾನಗೊಂಡ ಮಲ್ಲಿಗೆ ತನ್ನ ಕಥೆಯನ್ನು ಹೇಳಿದಳು.
ನಾನು ಇಲ್ಲೇ ಪಕ್ಕದ ಹಳ್ಳಿಯ ಹುಡುಗಿ. ನಮ್ಮದು ತೀರ ಬಡ ಕುಟುಂಬ. ವ್ಯವಸಾಯ ಮಾಡಿಯೇ ಜೀವನ ಸಾಗಿಸಬೇಕು. ಚಿಕ್ಕಂದಿನಲ್ಲೇ ನಾನು ನನ್ನ ತಾಯಿಯನ್ನು ಕಳೆದುಕೊಂಡೆ. ನನ್ನ ತಂದೆಯೇ ನನಗೆ ಅಪ್ಪ ಅಮ್ಮ ಎಲ್ಲ ಆಗಿ ಬೆಳೆಸಿದರು. ನನಗೆ ಒಬ್ಬ ಅಣ್ಣ ಇದ್ದಾನೆ ಅವನಿಗೂ ನಾನೆಂದರೆ ಬಹಳ ಪ್ರೀತಿ. ಅಪ್ಪನ ಕೆಲಸದಲ್ಲಿ ನಾನು ಹಾಗೂ ಅಣ್ಣ ಇಬ್ಬರೂ ಸಹಾಯ ಮಾಡುತ್ತಿದ್ದೆವು. ನಮಗಿದ್ದ ಕಡಿಮೆ ಜಮೀನಿನಲ್ಲಿ ಎಷ್ಟು ಬೆಳೆದರೂ ಅದು ಒಂದು ಹೊತ್ತಿನ ಊಟಕ್ಕೆ ಸಾಕಾಗುತ್ತಿತ್ತು ಅಷ್ಟೇ. ಇನ್ನೊಂದು ಹೊತ್ತು ಗಂಜಿನೋ ಅಂಬಲಿನೋ ಕುಡಿದು ಬದುಕುತ್ತಿದ್ದೆವು. ಆದರೂ ನಾವು ಸಂತೋಷವಾಗೆ ಇದ್ದೆವು. ಆದರೆ ಮೂರು ವರ್ಷದ ಹಿಂದೆ ಬಂದ ಭಾರಿ ಮಳೆಯಿಂದ ನಮ್ಮ ಜೀವನ ನಡು ರಸ್ತೆಗೆ ಬಂದು ಬಿಟ್ಟಿತು. ಅಪ್ಪ ಸಾಲ ಮಾಡಿ ಬೆಳೆದಿದ್ದ ಬೆಳೆ ಇನ್ನೇನು ಕೊಯ್ಲಿಗೆ ಬರುವಷ್ಟರಲ್ಲಿ ಬಂದ ಭಾರಿ ಮಳೆಗೆ ಬೆಳೆಯಲ್ಲ ನಾಶವಾಗಿ ನಮಗೆ ದಿಕ್ಕೇ ತೋಚದಂತಾಗಿತ್ತು. ಸರ್ಕಾರ ಪರಿಹಾರ ಕೊಡುತ್ತೇವೆಂದು ಬರೀ ಹುಸಿ ಭರವಸೆ ಕೊಟ್ಟಿತು. ಸಾಲದ ಹೊರೆಯಿಂದ ಅಪ್ಪ ದಿನ ದಿನ ಕೊರಗುತ್ತ ಕ್ರುಶವಾಗುತ್ತಿದ್ದ. ಆ ಸಮಯದಲ್ಲಿ ನನ್ನ ಅಣ್ಣ ಬೆಂಗಳೂರಿಗೆ ಹೋಗಿ ಯಾವುದಾದರೂ ಕೆಲಸ ಹುಡುಕುತ್ತೇನೆ ಈ ಹಳ್ಳಿಯಲ್ಲೇ ಸಾಯಲು ನನಗೆ ಇಷ್ಟವಿಲ್ಲ ಎಂದು ಊರು ಬಿಟ್ಟ. ನಾನು ಅಪ್ಪ ಎಷ್ಟೇ ಕೇಳಿಕೊಂಡರು ನಮ್ಮ ಮಾತು ಕೇಳಲಿಲ್ಲ. ಹೊರಟೇಬಿಟ್ಟ.
ಆ ನಂತರ ಒಂದೆರಡು ಬಾರಿ ಹಳ್ಳಿಗೆ ಬಂದು ನನಗೆ ಕೆಲಸ ಸಿಕ್ಕಿದೆ ಎಂದು ಹೇಳಿ ಕೈಗೆ ಸ್ವಲ್ಪ ಕಾಸು ಕೊಟ್ಟು ಹೋಗಿದ್ದ, ಅದಾದ ನಂತರ ಎರಡು ವರ್ಷದಿಂದ ಅವನು ಆ ಕಡೆ ತಿರುಗಿಯೂ ನೋಡಿಲ್ಲ. ಅಪ್ಪ ಅದೇ ಕೊರಗಿನಲ್ಲಿ ಖಾಯಿಲೆಯ ತುತ್ತಾದ. ನಾನು ಅವರಿವರ ಹೊಲದಲ್ಲಿ ಕೂಲಿ ಮಾಡಿ ಬಂದಿದ್ದ ದುಡ್ಡಿನಲ್ಲಿ ಅಪ್ಪನಿಗೆ ಔಷಧಿ, ಊಟ ಎಲ್ಲ ನಿಭಾಯಿಸುತ್ತಿದ್ದೆ. ಆದರೆ ಈಗ ಕಳೆದೊಂದು ತಿಂಗಳಿನಿಂದ ಅಪ್ಪನ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ಡಾಕ್ಟರ ಬಳಿ ಹೋದರೆ ತುರ್ತಾಗಿ ಒಂದು ಆಪರೇಷನ್ ಮಾಡಿಸಬೇಕು ಇಲ್ಲವಾದಲ್ಲಿ ಉಳಿಯುವುದು ಕಷ್ಟ ಎಂದರು. ಅದೇ ಹೊತ್ತಿನಲ್ಲಿ ಬೆಂಗಳೂರಿಂದ ಬಂದ ಒಬ್ಬರು ನಿಮ್ಮ ಅಣ್ಣ ಬೆಂಗಳೂರಿನ "ರೆಡ್ ಹೆವೆನ್" ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದರು. ಅವನ್ನು ಹುಡುಕಿಕೊಂಡು ಹೋಟೆಲ್ ಬಳಿ ಬಂದೆ ಅಲ್ಲಿ ಯಾರನ್ನೋ ಕೇಳಿದ್ದಕ್ಕೆ ಇಲ್ಲೇ ಕುಳಿತಿರಿ ಬರುತ್ತಾರೆ ಎಂದರು. ಅಷ್ಟರಲ್ಲಿ ಅಲ್ಲಿದ್ದ toilet ಗೆ ಹೋಗೋಣ ಎಂದು ಹೋಗಿ ಆಚೆ ಬಂದ ತಕ್ಷಣ ಪೊಲೀಸರು ನನ್ನನ್ನು ಬಂಧಿಸಿ ನಿಮ್ಮ ಜೊತೆ ಕರೆದುಕೊಂಡು ಬಂದುಬಿಟ್ಟರು. ಎಂದು ಆಕೆಯ ಭುಜದ ಮೇಲೆ ತಲೆ ಇಟ್ಟು ಅಳಲು ಶುರುಮಾಡಿದಳು.
ಆ ಹೆಂಗಸು ನಿಮ್ಮ ಅಣ್ಣನ ಹೆಸರು ಏನೆಂದು ಕೇಳಿದಳು. ಅದಕ್ಕೆ ಮಲ್ಲಿಗೆ ರಮೇಶ ಎಂದಳು. ತಕ್ಷಣ ಆ ಹೆಂಗಸ ಮುಖದಲ್ಲಿ ಒಂದು ರೀತಿಯ ಆಶ್ಚರ್ಯ ಭಾವ ಉಂಟಾದರೂ ಅದನ್ನು ತೋರಗೊಡದೆ ತನ್ನ ಪಕ್ಕದಲ್ಲಿದ್ದ ಹೆಂಗಸಿಗೆ ಹಿಂದಿಯಲ್ಲಿ "ಇವರ ಅಣ್ಣನೆ ತಲೆ ಹಿಡುಕ, ಆದರೆ ಪಾಪ ಈ ಮುಗ್ಧ ಹುಡುಗಿಗೆ ಏನೂ ಗೊತ್ತಿಲ್ಲ ಹೇಗಾದರೂ ಮಾಡಿ ಈ ಹುಡುಗಿಯನ್ನು ಬಿಡಿಸಬೇಕು ಎಂದು ಹೇಳಿ" ಮಲ್ಲಿಗೆಯ ಕಡೆ ತಿರುಗಿ ಆ ಹೆಸರಿನವರು ಯಾರೂ ಆ ಹೋಟೆಲ್ ನಲ್ಲಿ ಇಲ್ಲ. ನಿನಗ್ಯಾರೋ ತಪ್ಪು ಮಾಹಿತಿ ಕೊಟ್ಟಿರಬೇಕು ನಿನ್ನನ್ನು ನಾವು ಹೇಗಾದರೂ ಬಿಡಿಸುತ್ತೇವೆ ನೀನು ಇಲ್ಲಿಂದ ಸೀದಾ ಊರಿಗೆ ಹೊರತುಬಿಡು ಎಂದಳು. ಅಷ್ಟರಲ್ಲಿ ಹಿರಿಯ ಅಧಿಕಾರಿ ಒಬ್ಬರು ಬಂದರು. ಅವರ ಬಳಿ ಹೋದ ಆ ಹೆಂಗಸು ಮಲ್ಲಿಗೆಯ ಎಲ್ಲ ವಿಷಯವನ್ನು ಅವರಿಗೆ ವಿವರಿಸಿ ಆ ಹುಡುಗಿಗೂ ಇದಕ್ಕೂ ಏನೂ ಸಂಬಂಧವಿಲ್ಲ ದಯವಿಟ್ಟು ಬಿಟ್ಟು ಬಿಡಿ ಎಂದಾಗ ಆ ಅಧಿಕಾರಿ ಮಲ್ಲಿಗೆಯನ್ನು ಕರೆದು ನೀನು ಹೊರಡು ಎಂದು ಕಳಿಸಿಕೊಟ್ಟ. ಆ ಹೆಂಗಸು ಮಲ್ಲಿಗೆಯನ್ನು ಕರೆದು ತನ್ನ ಬಳಿ ಹಾಗೂ ತನ್ನ ಜೊತೆಯಲ್ಲಿದ್ದ ಹೆಂಗಸರ ಬಳಿ ಇದ್ದ ಹಣವನ್ನೆಲ್ಲ ಮಲ್ಲಿಗೆಗೆ ಕೊಟ್ಟು ಇದನ್ನು ತೆಗೆದುಕೊಂಡು ಹೋಗಿ ನಿನ್ನ ತಂದೆಗೆ ಔಷಧ ಕೊಡಿಸು, ನಮ್ಮ ಕೈಲಾದದ್ದು ಇಷ್ಟೇ ಎಂದಳು. ಮಲ್ಲಿಗೆ ಕೃತಜ್ಞತಾ ಭಾವದಿಂದ ಆಕೆಗೆ ವಂದಿಸಿ ಅಲ್ಲಿಂದ ಹಳ್ಳಿಗೆ ಹೊರಟುಬಿಟ್ಟಳು
Comments
ಉ: ಕಳಂಕಿತೆ - ಕಥೆ
In reply to ಉ: ಕಳಂಕಿತೆ - ಕಥೆ by kavinagaraj
ಉ: ಕಳಂಕಿತೆ - ಕಥೆ
ಉ: ಕಳಂಕಿತೆ - ಕಥೆ
In reply to ಉ: ಕಳಂಕಿತೆ - ಕಥೆ by ಭಾಗ್ವತ
ಉ: ಕಳಂಕಿತೆ - ಕಥೆ
ಉ: ಕಳಂಕಿತೆ - ಕಥೆ
In reply to ಉ: ಕಳಂಕಿತೆ - ಕಥೆ by partha1059
ಉ: ಕಳಂಕಿತೆ - ಕಥೆ