ಕಳೆದುಹೋಗಿದ್ದಾನೆ.

ಕಳೆದುಹೋಗಿದ್ದಾನೆ.

ಕವನ

 

ಎಲ್ಲಿದ್ದಾನೆ ದೇವರು?

ಅಗೋ ಅಲ್ಲಿ, ಮಂದಿರಗಳ ಪೂಜೆಯಲ್ಲಿ,

ಚರ್ಚಿನ ಪ್ರಾರ್ಥನೆಯಲ್ಲಿ,

ಮಸೀದಿಯ ನಮಾಜಿನಲ್ಲಿ.

 

ಅಯ್ಯೋ ಅವನಿರುವುದು,

ಅಪ್ಪ ಅಮ್ಮನ ಆಶೀರ್ವಾದದಲ್ಲಿ,

ಹೆಂಡತಿಯ ಪ್ರೀತಿಯಲ್ಲಿ,

ಮಗನ ಮುದ್ದು ನಗುವಿನಲ್ಲಿ.

 

ಅದು ಹೇಗೆ ಸಾಧ್ಯ?

ಅಪ್ಪ ಅಮ್ಮನ ಆಶೀರ್ವಾದ

ಬೇಕಾದಾಗ ಪಡೆಯಬಹುದು!!

ಆದರೆ ಐಶ್ವರ್ಯ ವೃದ್ಧಿಗಾಗಿ ಮಾಡಿಸುವ

ಪೂಜೆಗೆ ಮತ್ತೆ ಮುಹೂರ್ತ ಸಿಕ್ಕುವುದಿಲ್ಲ...!!

 

ಸದ್ಯ ಪ್ರಮೋಶನ್ನು ದೊರಕಿತು,,,!!

ಬೇಡಿಕೊಂಡಂತೆ ಮುಂಜಾನೆ ಹಚ್ಚಿದರೆ

ಸಂಜೆಯವರೆಗೂ ಕರಗದಂತಹ 

ಕ್ಯಾಂಡಲ್ ಹುಡುಕಬೇಕು,,,,

ಈ ನಡುವೆ ಹೆಂಡತಿಯ ಕಿರಿಕಿರಿ

ರೀ ನನಗೆ ಒಂದು ಗುಲಾಬಿ

ತಂದು ಕೊಡಿ ಎಂದು,

ಯಾರಿಗಿದೇ ಸಮಯ?

 

ದಿನವೂ ಸ್ವಲ್ಪ ಸ್ವಲ್ಪ ಉಳಿಸಿ

ಖಾಜಿಗಳು ಹೇಳಿದಷ್ಟು ಪೈಸಾ

ಕೂಡಿಸಿಡಬೇಕು, ಹಜ್ ಯಾತ್ರೆ ಮಾಡಲು,

ದಿನವೂ ಮಗನದೋ ಒಂದೇ ಗೋಳು

ಅಬ್ಬಾ ಇಂದಾದರೂ ನನಗೆ ಹೈದರಾಬಾದ್ ಬಿರಿಯಾನಿ

ಕೊಡಿಸು ಎಂದು, ಹಣವೇನು ಮರದಲ್ಲಿ ಬೆಳೆಯುತ್ತಾ??

 

ಅನ್ನಿಸುವುದಿಲ್ಲವಾ? ಈ ಎಲ್ಲ ಕಿರಿಕಿರಿಯ

ನಡುವೆ ದೇವರು ಎಲ್ಲೋ ಕಳೆದುಹೋಗಿದ್ದಾನೆ,

ಸಂತೆಯಲ್ಲಿ ಕಳೆದುಕೊಂಡ ಮಗುವಿನ ಹಾಗೆ!!