ಕಳೆದು ಹೋಗಿದ್ದೇನೆ ನಾನು...!

ಕಳೆದು ಹೋಗಿದ್ದೇನೆ ನಾನು...!

ದೂರದೂರಿನಲ್ಲಿ ಅಪ್ಪ ಅಮ್ಮ,

ನಗರದಲ್ಲಿ ಹೆಂಡತಿ ಮಕ್ಕಳು,

ಪ್ರವಾಸೋದ್ಯಮ ಉದ್ಯೋಗದಲ್ಲಿ ನಾನು,

 

ಕಳೆದು ಹೋಗಿದ್ದೇನೆ ನಾನು..

ಗಾಂಧಿಗಿರಿ, ಬಸವ ಧರ್ಮ,

ಅಂಬೇಡ್ಕರ್ ವಾದ, ಮನುಸ್ಮೃತಿ, 

ಹಿಂದೂ ಧರ್ಮ, ಭಾರತೀಯತೆಯ ಗೊಂದಲದಲ್ಲಿ,

 

ಕಳೆದು ಹೋಗಿದ್ದೇನೆ ನಾನು...

ಪ್ರೀತಿಯಾವುದೋ, 

ದ್ವೇಷವಾವುದೋ,

ವಂಚನೆಯಾವುದೋ,

ಶಾಂತಿಯಾವುದೋ,

ಅಸಹನೆಯಾವುದೋ,

ಅರ್ಥವಾಗದೆ,

 

ಕಳೆದು ಹೋಗಿದ್ದೇನೆ ನಾನು...

ಅಣ್ಣನ ಹುಡುಕಾಟದಲ್ಲಿ,

ತಂಗಿಯ ನೆನಪಿನಲ್ಲಿ,

ಸ್ನೇಹಿತನ ವಂಚನೆಯಲ್ಲಿ,

ಸಂಬಂದಿಗಳ ಸಾರ್ಥದಲ್ಲಿ,

ನೆರೆಹೊರೆಯವರ ಕುಹುಕದಲ್ಲಿ,

 

ಕಳೆದು ಹೋಗಿದ್ದೇನೆ ನಾನು..

ವೇಗದ ಬದುಕಿನಲ್ಲಿ,

ಕೆಲಸದ ಒತ್ತಡದಲ್ಲಿ,

ನಿದ್ದೆಯ ಮಂಪರಿನಲ್ಲಿ,

ಊಟದ ಕಲಬೆರಕೆಯಲ್ಲಿ,

ಅನಾರೋಗ್ಯದ ಭಯದಲ್ಲಿ,

 

ಕಳೆದು ಹೋಗಿದ್ದೇನೆ ನಾನು...

ಬದುಕಿನ ಅಲೆದಾಟದಲ್ಲಿ,

ನೆಮ್ಮದಿಯ ಹಂಬಲದಲ್ಲಿ,

ಅಕ್ಷರಗಳ ನೆರಳಿನಲ್ಲಿ,

ಜೀವನದ ಅವಶ್ಯಕತೆಯಲ್ಲಿ,

 

ಕಳೆದೇ ಹೋಗಿದ್ದೇನೆ..

ಹುಡುಕಿಕೊಡುವವರಾರು ?

ಎಲ್ಲರೂ ನನ್ನಂತೆ ಕಳೆದು ಹೋದವರೇ !!

ಎಲ್ಲವನ್ನೂ ಪಡೆದೆ,

ನನ್ನನ್ನು ನಾನು ಕಳೆದುಕೊಂಡೆ,

ಈಗ ,

ಎಲ್ಲವನ್ನೂ ಕಳೆದುಕೊಂಡು,

ನನ್ನನ್ನು ಮತ್ತೆ ಪಡೆಯುವಾಸೆ......

ಎಂತಹ ವಿಪರ್ಯಾಸ,

ಎಂತಹ ಮರ್ಮ,

ಎಂತಹ ನಿಗೂಢ,

ಎಂತಹ ತಿರುವುಗಳು.

ಎಂತಹ ಕನವರಿಕೆಗಳು,...

 

ಎಲ್ಲೋ ಎಡವುತ್ತಿದ್ದೇವೆಯೇ ನಾವು ?

ಯಾವುದೋ ಸಿದ್ಧಾಂತಗಳಿಗೆ ದಾಸರಾಗುತ್ತಿದ್ದೇವೆಯೇ  ?

ಅಥವಾ,

ಬದಲಾವಣೆಗಳನ್ನು ತಪ್ಪಾಗಿ ಗ್ರಹಿಸುತ್ತಿದ್ದೇವೆಯೇ   ?

ಅಥವಾ,

ತಾಂತ್ರಿಕ ಪ್ರಗತಿಯಿಂದ ಗೊಂದಲಕ್ಕೊಳಗಾಗುತ್ತಿದ್ದೇವೆಯೇ  ?

ಅಥವಾ,

ಬದುಕಿನ ಅರ್ಥವೇ ಬದಲಾಗುತ್ತಿದೆಯೇ ?

ಅಥವಾ,

ನಾವೇ ಭ್ರಮೆಗೊಳಗಾಗುತ್ತಿದ್ದೇವೆಯೇ  ?

ಅಥವಾ,

ಅಭಿವೃದ್ಧಿ ಎಂದರೆ ಏನೆಂದೇ ತಿಳಿಯುತ್ತಿಲ್ಲವೇ  ?

ಅಥವಾ,

ನಿಜಕ್ಕೂ ಒಳ್ಳೆಯ ಮಾರ್ಗದಲ್ಲಿ ಸಾಗುತ್ತಿದ್ದೇವೆಯೇ  ?

ಅಥವಾ,

ಇದೇ ಬದುಕಿನ ಸಹಜ ಕ್ರಮವೇ  ?

ಅಥವಾ,

ಎಲ್ಲಾ ಕಾಲಘಟ್ಟಗಳಲ್ಲೂ ಈ ತಳಮಳ ಇದ್ದದ್ದೆಯೇ  ?

ಅಥವಾ,

ಸತ್ಯದ ಹುಡುಕಾಟವೇ ಅಂತಿಮ ಧ್ಯೆಯವೇ  ?

ಅಥವಾ,

ಇದೆಲ್ಲವನ್ನು ಮೀರಿದ ಇನ್ನೇನಾದರೂ ಇದೆಯೇ  ?

ಕಾಡುತ್ತಲೇ ಇರುವ ಗೊಂದಲದ ಕಾಡಿನಲಿ,

ಅಲೆಯುತ್ತಲೇ ಇರುವ ಮನದ ಸಾಗರದಲಿ,

ಉತ್ತರ ಹುಡುಕಿಕೊಳ್ಳಲು ಪ್ರಯತ್ನಿಸಿದರೆ,

ಬದುಕು ಒಂದಷ್ಟು ಸಹನೀಯವಾಗಬಹುದು,

ಜೀವನಮಟ್ಟ ಸುಧಾರಿಸಬಹುದು,

ಕ್ರಿಯಾತ್ಮಕ ಸಾಧನೆಗಳು ಸಾಧ್ಯವಾಗಬಹುದು,

ಆ ದಿನಗಳ ನಿರೀಕ್ಷೆಯಲ್ಲಿ ......

***

(ನಾಳೆ ದಿನಾಂಕ 28/05/2023 ರಿಂದ ಸುಮಾರು 10 ದಿನಗಳ ಕಾಲ ದೆಹಲಿ - ಜಮ್ಮು - ಕಾಶ್ಮೀರ - ಕಾರ್ಗಿಲ್ - ಲೆಹ್ - ಲಡಾಕ್ - ಮನಾಲಿ ಪ್ರವಾಸ ಕೈಗೊಂಡಿದ್ದೇನೆ. ಬೆಂಗಳೂರಿನ ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆಯ ಹವ್ಯಾಸಿ ಚಾರಣ ಗೆಳೆಯರೊಂದಿಗೆ ಈ ಪ್ರವಾಸ. ನೆಟ್ವರ್ಕ್ ಕಾರಣದಿಂದಾಗಿ ತಾಂತ್ರಿಕ ತೊಂದರೆಯಾದರೆ ಲೇಖನದಲ್ಲಿ ಸ್ವಲ್ಪ ಏರುಪೇರು ಆಗಬಹುದು. ಸಾಧ್ಯವಾದಷ್ಟು ಲೈವ್ ದೃಶ್ಯಗಳನ್ನು ಚಿತ್ರೀಕರಿಸಲು ಪ್ರಯತ್ನಿಸುತ್ತೇವೆ.)

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ