ಕಳೆ ಎಂದು ಹೀಗಳೆಯಬೇಡಿ, ಕಳೆಗೂ ಬೆಲೆಯಿದೆ

ಕಳೆ ಎಂದು ಹೀಗಳೆಯಬೇಡಿ, ಕಳೆಗೂ ಬೆಲೆಯಿದೆ

ವಂದನಾ ಖೋಬ್ರಗಡೆ ಅವರ ಅರ್ಧ ಹೆಕ್ಟೇರ್ ಹೊಲದಲ್ಲಿ ಗೋಧಿ ಮತ್ತು ಕಿರು ಅವರೆ ಸಸಿಗಳು ಬೆಳೆಯುತ್ತಿದ್ದವು. ಹೊಲದಲ್ಲೆಲ್ಲ ಸೊಕ್ಕಿ ಬೆಳೆದಿದ್ದ ಕಳೆಗಿಡಗಳನ್ನು ಕಿತ್ತು ತೆಗೆಸಬೇಕಾಗಿತ್ತು. ಅವರ ಹಳ್ಳಿಯಲ್ಲಿ, ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಮಟ್ಕಜಾರಿಯಲ್ಲಿ, ಕೃಷಿ ಕೂಲಿಕಾರರ ದಿನಗೂಲಿ ಜಾಸ್ತಿ.

ವಂದನಾ ಕೃಷಿ ಕೂಲಿಕಾರರನ್ನು ವಿಚಾರಿಸಿದಾಗ ಅವರಿಗೆ ಅಚ್ಚರಿ ಕಾದಿತ್ತು. "ಕಳೆ ಕೀಳ್ತೇವೆ. ಮಜೂರಿ ಬೇಡ. ಆದರೆ ನಾವು ಕಿತ್ತ ಕಳೆ ಒಯ್ಯಲು ಬಿಡಿ” ಎಂದಿದ್ದರು ಕೃಷಿ ಕೂಲಿಕಾರರು!

ಕಾರಣವೇನು? ವಂದನಾ ಖೋಬ್ರಗಡೆ ಅವರ ಹೊಲದಲ್ಲಿ ತಮ್ಮ ಪಾಡಿಗೆ ತಾವು ಬೆಳೆಯುತ್ತಿದ್ದ “ಕಳೆಗಳು” ನಿಜಕ್ಕೂ ಔಷಧೀಯ ಸಸ್ಯಗಳು - ಭೃಂಗರಾಜ ಮತ್ತು ಗಂಧ ಪ್ರಸಾರಣಿ. ಇವನ್ನು ಒಣಗಿಸಿ ಮಾರಿದರೆ, ಕಳೆ ಕೀಳುವ ಮಹಿಳೆಯರಿಗೆ ಉತ್ತಮ ಆದಾಯ. ನಾಗಪುರದ ಶ್ರೀಶೈಲ ಮೆಡಿ ಫಾರಮ್ಸ್ ಇವನ್ನು ಖರೀದಿಸುತ್ತದೆ. ಒಂದು ಹೆಕ್ಟೇರಿನಲ್ಲಿ ತನ್ನಿಂತಾನೇ ಬೆಳೆಯುವ ಈ ಔಷಧೀಯ ಸಸ್ಯಗಳನ್ನು ಒಣಗಿಸಿ ಮಾರಿದರೆ ವರುಷಕ್ಕೆ ರೂ. 10,000ಕ್ಕಿಂತ ಅಧಿಕ ಆದಾಯ.

ಹಳ್ಳಿಗರಿಗೆ ಚೆನ್ನಾಗಿ ಗೊತ್ತಿದೆ: ತಮ್ಮ ಹೊಲಗಳಲ್ಲಿ ಮತ್ತು ಹಳ್ಳಿಯ ಸಮುದಾಯ ಜಮೀನಿನಲ್ಲಿ ಬೆಳೆಯುವ ಕಳೆಗಿಡಗಳಿಗೂ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಯಿದೆ ಎಂದು. ಆದ್ದರಿಂದ, "ಕಳೆ ಒಯ್ಯುವ" ಷರತ್ತಿಗೆ ಒಪ್ಪಿದರೆ ಕೃಷಿ ಕೂಲಿಕಾರರು ತಮ್ಮ ಮಜೂರಿಯನ್ನು ಕಡಿಮೆ ಮಾಡಲಿಕ್ಕೂ ತಯಾರು. ವಂದನಾರಂತಹ ಕಡಿಮೆ ಜಮೀನಿನ ರೈತರು ಮಜೂರಿ ಪಾವತಿಸುವ ಸ್ಥಿತಿಯಲ್ಲಿ ಇಲ್ಲ ಎಂದಾದರೆ, ಕೃಷಿ ಕೂಲಿಕಾರರು ಮಜೂರಿಯಿಲ್ಲದೆ ಕಳೆ ಕೀಳಲಿಕ್ಕೂ ತಯಾರು. ಯಾಕೆಂದರೆ, ಅವರು ಹೊಲದಿಂದ ಕಿತ್ತ ಕಳೆಗಿಡಗಳನ್ನು ಒಣಗಿಸಿ ಮಾರಿದರೆ ಕಿಲೋಗ್ರಾಮಿಗೆ ರೂ. 500ಕ್ಕಿಂತ ಅಧಿಕ ಆದಾಯ.

ಇದೆಲ್ಲ ಶುರುವಾದದ್ದು 1997ರಲ್ಲಿ, ನಾಗಪುರದ ಆಯುರ್ವೇದ ವೈದ್ಯೆ ವೃಂದಾ ಕಾಟೆ, ಶ್ರೀ ಶೈಲ ಮೆಡಿ ಫಾರಮ್ಸ್ ಆರಂಭಿಸಿದಾಗ. ಮಹಾರಾಷ್ಟ್ರದ ನಾಗಪುರ, ಅಮರಾವತಿ ಮತ್ತು ಅಕೋಲಾ ಜಿಲ್ಲೆಗಳಿಂದ ಹಾಗೂ ಮಧ್ಯಪ್ರದೇಶದ ಕೆಲವು ಜಿಲ್ಲೆಗಳಿಂದ ಶ್ರೀ ಶೈಲ ಮೆಡಿ ಫಾರಮ್ಸ್ ಸುಮಾರು 300 ಪ್ರತಿನಿಧಿಗಳ ಮೂಲಕ ವರುಷಕ್ಕೆ ಹಲವು ಟನ್ ಔಷಧೀಯ ಸಸ್ಯಗಳನ್ನು ಖರೀದಿಸುತ್ತಿದೆ. ಹಲವು ಸೇವಾ ಸಂಸ್ಥೆಗಳ ಆರೋಗ್ಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು, ಐದು ವರುಷಗಳ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ವೃಂದಾ ಕಾಟೆ ಗಮನಿಸಿದ ಒಂದು ವಿಷಯ: ಮಹಾರಾಷ್ಟ್ರದ ಅನೇಕ ಜಿಲ್ಲೆಗಳಲ್ಲಿ ಕನಿಷ್ಠ ಇಪ್ಪತ್ತೈದು ವಿವಿಧ ಔಷಧೀಯ ಸಸ್ಯಗಳು ತನ್ನಿಂತಾನೇ ಬೆಳೆಯುತ್ತಿವೆ. ಹಳ್ಳಿಗರು ಅವನ್ನು ಕಳೆಗಳೆಂದು ಹೊಲಗಳಿಂದ ಕಿತ್ತು ಸುಟ್ಟು ಹಾಕುತ್ತಿದ್ದರು. ವೃಂದಾ ಕಾಟೆ ಅವರಿಗೆ ಹೊಳೆದ ಐಡಿಯಾ: ಆಯುರ್ವೇದ ವೈದ್ಯರಿಗೆ ಔಷಧೀಯ ಸಸ್ಯಗಳು ಬೇಕು. ಅವರಿಗೂ ರೈತರಿಗೂ ಸಂಪರ್ಕ ಕಲ್ಪಿಸಿದರೆ ಕಳೆಗೂ ಬೆಲೆ ಬರುತ್ತದೆ.

ಈಗ ವೃಂದಾ ಕಾಟೆ ಶುರು ಮಾಡಿದ ಘಟಕ “ಶ್ರೀ ಶೈಲ ಹರ್ಬ್ಸ್” ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ. ಇದರ ಕಚೇರಿ ನಾಗಪುರದ ಪ್ರತಾಪ ನಗರದಲ್ಲಿದೆ. 19 ಔಷಧೀಯ ಸಸ್ಯಗಳನ್ನು ಬೆಳೆಸಿ ಮಾರಾಟ ಮಾಡುತ್ತಿದೆ: ಶತಾವರಿ, ಲೋಳೆಸರ, ಅಶ್ವಗಂಧ, ಬ್ರಾಹ್ಮಿ, ಚಂದಾಸುರ್ ಇತ್ಯಾದಿ. ಅದಲ್ಲದೆ, ಹಲವು ರೈತರಿಂದ ಮತ್ತು ಸ್ವಸಹಾಯ ಸಂಘಗಳಿಂದ ಔಷಧೀಯ ಸಸ್ಯಗಳನ್ನು ಖರೀದಿಸುತ್ತಿದೆ. ಅವುಗಳ ಬೀಜ, ಎಲೆ, ಬೇರುಗಳನ್ನು ಆಯುರ್ವೇದ ಔಷಧಿ ಕಂಪೆನಿಗಳಿಗೂ, ಆಯುರ್ವೇದ ವೈದ್ಯರಿಗೂ ಮಾರಾಟ ಮಾಡುತ್ತಿದೆ.

ಜೊತೆಗೆ, ಶ್ರೀ ಶೈಲ ಹರ್ಬ್ಸ್ 41 ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ: ತುಳಸಿ ಬೀಜ, ಶತಾವರಿ ಬೀಜ, ಆಯುಷ್ ಕಷಾಯ ಹುಡಿ ಇತ್ಯಾದಿ. ಹಲವಾರು ನಗರಗಳಿಗೆ ತನ್ನ ವಹಿವಾಟನ್ನು ವಿಸ್ತರಿಸಿದೆ; ಯುಎಇ, ಯೆಮೆನ್, ಓಮಾನ್ ದೇಶಗಳಿಗೂ ತನ್ನ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಅದರ ವೆಬ್ ಸೈಟಿನಲ್ಲಿ ಹೆಚ್ಚಿನ ಮಾಹಿತಿ ಲಭ್ಯ: www.shrishailherbs.com

ನಮ್ಮ ಪ್ರಾಕೃತಿಕ ಸಂಪತ್ತು ಮತ್ತು ಪಾರಂಪರಿಕ ಜ್ನಾನವನ್ನು ವ್ಯಾವಹಾರಿಕ ಕೌಶಲ್ಯದಿಂದ ಆದಾಯಮೂಲವಾಗಿ ಹೇಗೆ ಪರಿವರ್ತಿಸಬಹುದೆಂದು ವೃಂದಾ ಕಾಟೆ ತೋರಿಸಿಕೊಟ್ಟಿದ್ದಾರೆ. ಉದ್ಯಮಶೀಲರಿಗೆ ಇದೊಂದು ಪ್ರೇರಣೆ ಮತ್ತು ಮಾದರಿ.

ಫೋಟೋ ೧: ಲೋಳೆಸರ ಸಸ್ಯ ….. ಕೃಪೆ: ಡ್ರೀಮ್ಸ್ ಟೈಮ್.ಕೋಮ್
ಫೋಟೋ ೨: ಅಶ್ವಗಂಧ ಸಸ್ಯ ….. ಕೃಪೆ: ಬಾಲ್ಕನಿಗಾರ್ಡನ್ ವೆಬ್.ಕೋಮ್
ಫೋಟೋ ೩: ಶತಾವರಿ ಸಸ್ಯ ಮತ್ತು ಬೇರು ….. ಕೃಪೆ: ಹೋಮ್ ರೆಮೆಡೀಸ್.ಕೋಮ್
ಫೋಟೋ ೪: ಶತಾವರಿ ಎಲೆಗಳು ….. ಕೃಪೆ: ಇಂಡಿಯಾಮಾರ್ಟ್.ಕೋಮ್